ಬೆಂಗಳೂರು: ಬೆಂಗಳೂರಿನ ಹಲವೆಡೆ ಮಳೆ ಅವಾಂತರದಿಂದ ನಗರದ ಖ್ಯಾತಿಗೆ ಧಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಎಸ್.ಎಂ. ಕೃಷ್ಣ, ಬೆಂಗಳೂರಿಗೆ ಇರುವ ಬ್ರ್ಯಾಂಡ್ ಅನ್ನು ಉಳಿಸಿಕೊಳ್ಳುವ ಕುರಿತು ಕೆಲವು ಸಲಹೆಗಳನ್ನು ನೀಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಿರಂತರ ಮುಂಗಾರ ಪೂರ್ವ ಮಳೆಯಾಗುತ್ತಿದ್ದು ಇದರಿಂದ ಹಲವು ಅವಾಂತರಗಳು ಘಟಿಸಿ ಜನಜೀವನಕ್ಕೆ ತೀವ್ರ ತೊಂದರೆಯನ್ನು ಉಂಟುಮಾಡಿದೆ. ಅದರಲ್ಲೂ ವಿಶ್ವದಲ್ಲಿನ ವೇಗದ ಬೆಳವಣಿಗೆಗಳ ನಗರಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ಇರುವ ಬೆಂಗಳೂರು ನಗರದಲ್ಲಿನ ಮಳೆ ಅನಾಹುತಗಳು ಆತಂಕ ಹುಟ್ಟಿಸಿದೆ. ಇದು ‘ಬ್ರಾಂಡ್ ಬೆಂಗಳೂರು’ ಹೆಸರಿಗೆ ಆತಂಕ ಸೃಷ್ಟಿಸಿದ್ದು, ಭವಿಷ್ಯತ್ತಿನಲ್ಲಿ ಇದರಿಂದ ಕೈಗಾರಿಕೆಗಳ ಸ್ತಾಪನೆ ಮತ್ತು ರಾಜ್ಯಕ್ಕೆ ಬಂಡವಾಳ ಹೂಡುವ ಹೂಡಿಕೆದಾರರಿಗೆ ತಪ್ಪು ಸಂದೇಶ ರವಾನೆಯಾಗಲಿದೆ. ಅದರಿಂದ ಇಲ್ಲಿ ಪ್ರತಿಷ್ಟಾಪನೆಗೊಳ್ಳಬಹುದಾದ ಕೈಗಾರಿಕಾ ವಸಹಾತುಗಳು ಬೇರೆ ರಾಜ್ಯಗಳ ಪಾಲಗಿ ನಮ್ಮ ರಾಜ್ಯದ ಅಭಿವೃದ್ಧಿಗೆ ತೊಡಕಾಗಲಿದೆ ಎಂದು ಎಸ್.ಎಂ. ಕೃಷ್ಣ ಅವರು ಪತ್ರದಲ್ಲಿ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಎಸ್.ಎಂ.ಕೃಷ್ಣ ಅವರ ಪತ್ರದ ಸಾರಾಂಶ
ನಾನು ಮುಖ್ಯಮಂತ್ರಿಯಾಗಿದ್ದಾಗ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಆದ್ಯತೆ ನೀಡಿ ವಿಪುಲ ಅವಕಾಶಗಳನ್ನು ನೀಡಿದ್ದರಿಂದ ಅಮೆರಿಕದ ಕ್ಯಾಲಿಫೋರ್ನಿಯಾ ನಗರದ ಸಿಲಿಕಾನ್ ವ್ಯಾಲಿಗೆ ಪರ್ಯಾಯವಾಗಿ ಬೆಂಗಳೂರು ನಗರ ಬೆಳೆದು ಯುವ ಜನಾಂಗಕ್ಕೆ ಲಕ್ಷಾಂತರ ಉದ್ಯೋಗ ಸೃಷ್ಟಿಗೆ ಕಾರಣವಾಯಿತು. ಇದರ ಪರಿಣಾಮವಾಗಿ ಬೆಂಗಳೂರು ಇಂದು ಬೃಹದಾಕಾರವಾಗಿ ಬೆಳೆದು ನಗರದ ವಿಸ್ತೀರ್ಣ ನಾಲ್ಕು ಪಟ್ಟು ಹೆಚ್ಚಾಗಿದೆ. ಬೆಂಗಳೂರು ನಗರ ಪಾಲಿಕೆ ಇಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಿ ಬದಲಾಗಿ ಬೆಂಗಳೂರು ಸುತ್ತಮುತ್ತಲಿನ ಹಲವು ಬಡಾವಣೆಗಳನ್ನು ತನ್ನ ಒಡಲಲ್ಲಿ ಸೇರಿಸಿಕೊಂಡಿದೆ. ಇದರಿಂದ ಬೆಂಗಳೂರಿನ ಆದಾಯ ನಿರೀಕ್ಷೆಗೂ ಮೀರಿ ಹೆಚ್ಚಾಗಿ ಅದು ಇಂದು ರಾಜ್ಯದ ಬಜೆಟ್ ಗಾತ್ರದಲ್ಲಿ ಅರ್ಧದಷ್ಟು ಭಾಗ ಬೆಂಗಳೂರು ನಗರದಿಂದ ಹರಿದು ಬರುವಂತಾಗಿದೆ.
ಇದನ್ನೂ ಓದಿ | Detailed Story | ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಿ ಎಂದ ಸುಪ್ರೀಂ ತೀರ್ಪಿನಿಂದ ಗೊಂದಲದಲ್ಲಿ ಸರಕಾರ
ಭವಿಷ್ಯದ ಬೆಂಗಳೂರು ಹಾಗೂ ರಾಜ್ಯದ ಅಭಿವೃದ್ಧಿ ಗಮನದಲ್ಲಿ ಇಟ್ಟಕೊಂಡು ದೂರಗಾಮಿ ದೃಷ್ಟಿಯಿಂದ ಶಾಶ್ವತ ಕಾರ್ಯ ಕ್ರಮಗಳನ್ನು ರೂಪಿಸಿ “ಬ್ರಾಂಡ್ ಬೆಂಗಳೂರು” ಹೆಸರನ್ನು ಉಳಿಸಿಕೊಳ್ಳಲು ದಿಟ್ಟ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯವಾಗಿದ್ದು, ಆ ನಿಟ್ಟಿನಲ್ಲಿ ಕೆಳಕಂಡ ಸಲಹೆಗಳನ್ನು ತಮ್ಮ ಅವಗಾಹನೆಗೆ ತರಬಯಸುತ್ತೆನೆ.
1. ನಾನು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನ ಅಭಿವೃದ್ಧಿಗೆ ರಚಿಸಿದ್ದ ಬೆಂಗಳೂರು ಅಜೆಂಡಾ ಟಾಸ್ಕ್ ಫೋರ್ಸ್ ಸಮಿತಿಯನ್ನು ಪುನರ್ ರಚಿಸಿ ವಿವಿಧ ವಿಭಾಗಗಳ ತಜ್ಞರನ್ನು ಸೇರಿಸಿ ಅವರ ಸಲಹೆಗಳನ್ನು ಪಡೆದು ದೂರಗಾಮಿ ನೆಲೆಯಲ್ಲಿ ಬೆಂಗಳೂರಿನ ಅಭಿವೃದ್ಧಿ ಗೆ ನೀಲಿನಕ್ಷೆ ತಯಾರಿಸುವುದು.
2. ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಸುಧಾರಿಸಿ ಹೊಸದಾಗಿ ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಗೊಂಡಿರುವ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ತಜ್ಞ ಅಧಿಕಾರಿಗಳ ತಂಡ ರಚಿಸುವುದು ಹಾಗೂ ರಾಜಕಾಲುವೆಗಳ ನಿರ್ವಾಹಣೆಗೆ ಆದ್ಯತೆ ಮೇಲೆ ಕ್ರಮ ವಹಿಸಿ ಮುಂಗಾರ ಮಳೆಯ ಆಗಮನಕ್ಕೂ ಮುನ್ನ ಸಮರೋಪದಿಯ ಕಾರ್ಯ ಕೈಗೊಳ್ಳುವುದು.
3. ಬೆಂಗಳೂರಿಗೆ ಪರ್ಯಾಯವಾಗಿ ಮೈಸೂರು, ತುಮಕೂರು ಮತ್ತು ಹುಬ್ಬಳ್ಳಿಯಂತಹ ನಗರಗಳನ್ನು ಗುರುತಿಸಿ ನೂತನ ಕೈಗಾರಿಕಾ ವಸಹಾತುಗಳ ಸ್ಥಾಪನೆಗೆ ಅವಕಾಶ ಕಲ್ಪಿಸಿ ಬೆಂಗಳೂರಿ ನಗರದ ಮೇಲಿನ ಒತ್ತಡ ಕಡಿಮೆ ಮಾಡುವುದು. ನನ್ನ ಅಧಿಕಾರಾವಧಿಯಲ್ಲಿ ನಿರ್ಮಾಣಗೊಂಡಿದ್ದ ಮೈಸೂರು ಬೆಂಗಳೂರು ಹೆದ್ದಾರಿ ಇಂದು ಹತ್ತು ಪಥಗಳ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿದ್ದು ಇದು ಮೈಸೂರು ನಗರ ಬೆಂಗಳೂರಿಗೆ ಪರ್ಯಾಯವಾಗಿ ಬೆಳವಣಿಗೆ ಹೊಂದಲು ಬಹಳ ಅವಕಾಶ ಕಲ್ಪಿಸುತ್ತದೆ.
4. ಬೆಂಗಳೂರು ವ್ಯಾಪ್ತಿಯ ಶಾಸಕರು ಸಂಸದರು ಹಾಗೂ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆದು ವಲಯವಾರು ಸಮಸ್ಯೆಗಳನ್ನು ಪತ್ತೆ ಹಚ್ಚಿ ಅವುಗಳ ಶಾಶ್ವತ ಪರಿಹಾರಕ್ಕೆ ಕಾಲ ಮೀತಿಯಲ್ಲಿ ಕಾರ್ಯಕ್ರಮ ರೂಪಿಸಿ ಅದಕ್ಕೆ ತಕ್ಕ ಅನುದಾನ ಒದಗಿಸುವುದು.
ಮೇಲ್ಕಂಡ ಅಂಶಗಳ ಜೊತೆಗೆ ರಾಜ್ಯದ ಸರ್ವಪಕ್ಷಗಳ ನಾಯಕರ ಸಲಹೆ ಪಡೆದು ರಾಜ್ಯದ ಅಭಿವೃದ್ಧಿ ಮತ್ತು ಭವಿಷ್ಯದ ಜನಾಂಗದ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಲು ಕೋರಿದೆ.
ಇದನ್ನೂ ಓದಿ | ʼಬೊಮ್ಮಾಯಿ ಸಿಎಂ ಆಗಿದ್ದಾರೆ ಎಂದರೆ ನಾನು ಆಗೋದ್ರಲ್ಲಿ ತಪ್ಪೇನಿದೆ?’; ಎಸ್.ಎಸ್ ಮಲ್ಲಿಕಾರ್ಜುನ್ ಹೇಳಿಕೆ