ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿರುವ ಚಿನ್ನದ ಅಂಗಡಿಯಲ್ಲಿ (Jewellery Shop) ದರೋಡೆಗೆ ಯತ್ನಿಸಿದ ಆರೋಪಿಗಳನ್ನು ಬಂಧಿಸುವಲ್ಲಿ ಕೊಡಿಗೆಹಳ್ಳಿ ಪೊಲೀಸರು (Kodigehalli Police) ಯಶಸ್ವಿಯಾಗಿದ್ದಾರೆ. ಬೆಂಗಳೂರಿನಲ್ಲಿ ಗುಂಡು ಹಾರಿಸಿ, ಚಿನ್ನದ ಅಂಗಡಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ ಮೂವರು ಆರೋಪಿಗಳನ್ನು ಕೊಡಿಗೆಹಳ್ಳಿ ಪೊಲೀಸರು ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್‌ನಲ್ಲಿ ಶೂಟೌಟ್ ನಡೆಸಿ ಬಂಧಿಸಿದ್ದಾರೆ.
ನಾಲ್ಕು ದಿನಗಳ ಹಿಂದಷ್ಟೇ ಕೊಡಿಗೆಹಳ್ಳಿ ಸಮೀಪದ ದೇವಿನಗರದಲ್ಲಿ ಕಳ್ಳತನಕ್ಕೆ ಯತ್ನಿಸಿದ ಖಾನಾ ಪಂಡಿತ್, ಆಶು ಪಂಡಿತ್ ಹಾಗೂ ಮೋಸೆ ಅಲಿಯಾಸ್ ಬಂಡಿ ಹಾಗೂ ಸೂರಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಕೊಡಿಗೆಹಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಲು ಹೋದಾಗ ಅವರು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಹಾಗಾಗಿ, ಪೊಲೀಸರು ಶೂಟೌಟ್ ಮಾಡಿದ್ದು, ಸೂರಜ್ ಕಾಲಿಗೆ ಗಾಯವಾಗಿದೆ. ಸೂರಜ್‌ಗೆ ಗ್ವಾಲಿಯರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮೂವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇವರು ಅಂತಾರಾಜ್ಯ ಕಳ್ಳರು
ನಾಲ್ವರು ಆರೋಪಿಗಳು ಕೂಡ ಅಂತಾರಾಜ್ಯ ಕಳ್ಳರು ಎಂಬ ಮಾಹಿತಿ ಲಭ್ಯವಾಗಿದೆ. ದೇಶದ ಪ್ರಮುಖ ನಗರಗಳಲ್ಲಿರುವ ಸಣ್ಣ ಪುಟ್ಟ ಚಿನ್ನದ ಮಳಿಗೆಗಳೇ ಇವರ ಟಾರ್ಗೆಟ್ ಆಗಿದ್ದು, ಮಳಿಗೆಗಳಿಗೆ ನುಗ್ಗಿ, ಬಂದೂಕು ತೋರಿಸಿ, ಗುಂಡು ಹಾರಿಸಿ ದರೋಡೆ ಮಾಡುತ್ತಿದ್ದರು. ಇವರು ಕಳೆದ ವಾರವಷ್ಟೇ ಮುಂಬೈನಲ್ಲಿ ದರೋಡೆ ಮಾಡಿ ಬೆಂಗಳೂರಿಗೆ ಬಂದಿದ್ದರು. ಮುಂಬೈನಲ್ಲೂ ಚಿನ್ನದ ಅಂಗಡಿಯಲ್ಲಿ ದರೋಡೆ ಮಾಡಿ ಬೆಂಗಳೂರಿಗೆ ಬಂದಿದ್ದರು. ಇಲ್ಲೂ ಚಿನ್ನದ ಅಂಗಡಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದರು.
ಇದನ್ನೂ ಓದಿ: ಚುನಾವಣೆ ಘೋಷಣೆ ಬೆನ್ನಲ್ಲೇ ಕುರುಡು ಕಾಂಚಾಣದ ಕುಣಿತ; ಬೆಂಗಳೂರಲ್ಲಿ 13 ಲಕ್ಷ ರೂ. ಜಪ್ತಿ
ಖಾನಾ ಪಂಡಿತ್ ಹಾಗೂ ಆಶು ಪಂಡಿತ್ ವಿರುದ್ಧ ದೇಶದ ಹಲವೆಡೆ 20ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಹಲವು ರಾಜ್ಯಗಳಲ್ಲಿ ಇವರು ಕಳ್ಳತನ ಮಾಡಿದ್ದರೂ ಪೊಲೀಸರಿಗೆ ಬಂಧಿಸಲು ಸಾಧ್ಯವಾಗಿರಲಿಲ್ಲ. ಆದರೆ, ಕೊಡಿಗೆಹಳ್ಳಿ ಪೊಲೀಸರು ಮಧ್ಯಪ್ರದೇಶದಲ್ಲಿ ಇವರನ್ನು ಬಂಧಿಸುವ ಮೂಲಕ ದಕ್ಷತೆ ಮೆರೆದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಕೊಡಿಗೆಹಳ್ಳಿಯ ಲಕ್ಷ್ಮೀ ಬ್ಯಾಂಕರ್ಸ್ ಜ್ಯುವೆಲ್ಲರ್ಸ್ ಮಳಿಗೆಗೆ ನುಗ್ಗಿದ್ದ ದರೋಡೆಕೋರರು, ಗುಂಡಿನ ದಾಳಿ ಮೂಲಕ ದರೋಡೆಗೆ ಯತ್ನಿಸಿದ್ದರು. ಆದರೆ, ಕಳ್ಳತನ ಮಾಡಲು ಆಗದೆ ಅವರು ಅಲ್ಲಿಂದ ಕಾಲ್ಕಿತ್ತಿದ್ದರು. ಗುಂಡಿನ ದಾಳಿಯಲ್ಲಿ ಮಳಿಗೆಯ ಮಾಲೀಕ ಗಾಯಗೊಂಡಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ