ಬೆಂಗಳೂರು: ವ್ಯಕ್ತಿಯೊಬ್ಬನನ್ನು ಅಪಹರಣ (Kidnap Case) ಮಾಡಿ ಬರೋಬ್ಬರಿ 1 ಕೋಟಿ ರೂಪಾಯಿ ಹಾಗೂ 15 ಕೆ.ಜಿ. ಚಿನ್ನಕ್ಕಾಗಿ ಬೇಡಿಕೆ ಇಟ್ಟಿದ್ದ ಇಬ್ಬರು ಆರೋಪಿಗಳು ಪೊಲೀಸರ ಅತಿಥಿಗಳಾಗಿದ್ದಾರೆ.
ಆರೋಪಿಗಳಾದ ಆನಂದ್ ಹಾಗೂ ಅಜರ್ ಪಾಷಾ ಬಂಧಿತರು. ಫರ್ನೀಚರ್ ಆರ್ಡರ್ ಕೊಡುವುದಾಗಿ ಅಪರಿಚಿತ ಗ್ಯಾಂಗ್ನಿಂದ ಕರೆ ಬಂದಿದ್ದಾಗ ಆರ್ಡರ್ ಪಡೆಯಲು ಮನೆಯಿಂದ ಹೊರಟಿದ್ದ ವಿಕಾಸ್ ಬೋರಾ ಎಂಬಾತನನ್ನು ಆರೋಪಿಗಳು ಭಾನುವಾರ ಅಪಹರಣ ಮಾಡಿದ್ದರು.
ಅರ್ಜಿತ್ ಹಾಗೂ ಆನಂದ್ ಎಂಬುವವರ ಫಾರ್ಮಾ ಕಂಪನಿಯ ಫರ್ನಿಚರ್ ಕೆಲಸವನ್ನು ವಿಕಾಸ್ ಬೋರಾ ಮಾಡಿದ್ದ. ಈತನ ಬಳಿ ಬಹಳ ದುಡ್ಡಿದೆ ಎಂದು ತಿಳಿದ ಈ ಇಬ್ಬರು ವಿಕಾಸ್ನನ್ನು ಅಪಹರಣ ಮಾಡಲು ಅರ್ಜಿತ್ ಹಾಗೂ ಆನಂದ್ ಸೇರಿ ಅಜರ್ ಪಾಷಾ ಹಾಗೂ ಆನಂದ್ ಎಂಬ ಇಬ್ಬರಿಗೆ ಸುಪಾರಿ ನೀಡಿದ್ದಾರೆ.
ಅಪಹರಣ ಮಾಡಿ ಕೆಲ ಸಮಯದ ನಂತರ ವಿಕಾಸ್ ತಂದೆಗೆ ಕರೆ ಮಾಡಿದ್ದ ಆರೋಪಿಗಳು, ನಿಮ್ಮ ಮಗನನ್ನು ಅಪಹರಣ ಮಾಡಲಾಗಿದೆ. 1 ಕೋಟಿ ರೂಪಾಯಿ ಮತ್ತು 15 ಕೆ.ಜಿ ಚಿನ್ನ ಕೊಡಬೇಕು, ಇಲ್ಲದಿದ್ದರೆ ನಿಮ್ಮ ಮಗನನ್ನು ವಾಪಸ್ ಕಳುಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿ ಕರೆ ಕಡಿತಗೊಳಿಸಿದ್ದರು.
ಈ ಬಗ್ಗೆ ಪೊಲೀಸರು ಮಾಹಿತಿ ಪಡೆದು, ವಿಕಾಸ್ ಬೋರಾ ತಂದೆಯಿಂದ 40 ಲಕ್ಷ ಹಣವನ್ನು ಪಡೆದು ಆರೋಪಿಗಳಾದ ಆನಂದ್ ಹಾಗೂ ಅಜರ್ ಪಾಷಾಗೆ ತಲುಪಿಸಿದ್ದರು. ಹಣ ತಲುಪಿದ ಬಳಿಕ ವಿಕಾಸ್ ಬೋರಾನನ್ನು ಬಿಟ್ಟು ಕಳುಹಿಸಲಾಗಿದೆ. ವಿಕಾಸ್ ಹೊರಗೆ ಬರುತ್ತಿದ್ದಂತೆ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ | Murder Case | ರೌಡಿಶೀಟರ್ ದಿವಾಕರ್ @ ಡಿಚ್ಚಿ ದಿವಾ ಭೀಕರ ಕೊಲೆ; ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದರು!