Site icon Vistara News

ಕರ್ನಾಟಕದಲ್ಲಿ ಕ್ಯಾಂಪಸ್‌ ತೆರೆಯಲು ವಿದೇಶಿ ವಿವಿಗಳ ಆಸಕ್ತಿ: ಸಚಿವ ಅಶ್ವತ್ಥನಾರಾಯಣ

NEP

ಬೆಂಗಳೂರು: ಯುನೈಟೆಡ್ ಕಿಂಗ್‌ಡಮ್‌ನ 22 ವಿಶ್ವವಿದ್ಯಾಲಯಗಳನ್ನು ಪ್ರತಿನಿಧಿಸುವ ಉಪ ಕುಲಪತಿಗಳ ನಿಯೋಗವು ಎರಡು ದಿನಗಳ ಭೇಟಿಗಾಗಿ ಬೆಂಗಳೂರು ನಗರಕ್ಕೆ ಗುರುವಾರ ಆಗಮಿಸಿದೆ. ಇದು, ದೇಶಕ್ಕೆ ಇದುವರೆಗೆ ಭೇಟಿ ಕೊಟ್ಟಿರುವ ಯುಕೆ ಉಪ ಕುಲಪತಿಗಳ ಅತ್ಯಂತ ದೊಡ್ಡ ನಿಯೋಗ ಎನ್ನಲಾಗಿದೆ.

ರಾಜ್ಯದಲ್ಲಿ, ಉನ್ನತ ಶಿಕ್ಷಣ ಕ್ರಮದಲ್ಲಿ ಅನುಷ್ಠಾನಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯು ಅಂತಾರಾಷ್ಟ್ರೀಕರಣಕ್ಕೆ ಒತ್ತು ನೀಡುವ ಆಶಯ ಹೊಂದಿದ್ದು, ಅದಕ್ಕನುಗುಣವಾಗಿ ಸಹಭಾಗಿತ್ವ ಪಾಲುದಾರಿಕೆ ಸಾಧ್ಯತೆಗಳನ್ನು ಗುರುತಿಸಲು ಈ ನಿಯೋಗ ಗಮನ ಕೇಂದ್ರೀಕರಿಸಲಿದೆ.

ಇದರಲ್ಲಿ ಪಾಲ್ಗೊಂಡು ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, “ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಗಳು ಭಾರತ- ಯುನೈಟೆಡ್ ಕಿಂಗ್ಡಮ್ ನಡುವಿನ ಸಂಬಂಧದ ಆಧಾರಸ್ತಂಭಗಳಾಗಿವೆ. ಎನ್ಇಪಿಗೆ ತಕ್ಕಂತೆ ಎರಡೂ ಕಡೆಯ ವಿ.ವಿ.ಗಳ ನಡುವೆ ಸಹಕಾರ ಬಲವರ್ಧನೆಯ ಉದ್ದೇಶದೊಂದಿಗೆ ಹೋದ ವರ್ಷವೇ ಭಾರತ-ಯುಕೆ ನೀಲನಕ್ಷೆ-2030’ ಕಾರ್ಯಕ್ರಮವನ್ನು ಘೋಷಿಸಲಾಗಿದೆ.

ಇದಕ್ಕೆ ಪೂರಕವಾಗಿ ವಿಶ್ವದ ಪ್ರತಿಷ್ಠಿತ ವಿ.ವಿ.ಗಳು ಕರ್ನಾಟಕದಲ್ಲಿ ತಮ್ಮ ಕ್ಯಾಂಪಸ್‌ಗಳನ್ನು ತೆರೆಯಲು ಉತ್ಸುಕವಾಗಿವೆ. ಎನ್ಇಪಿ ಜಾರಿಯಲ್ಲಿ ರಾಜ್ಯವು ಮುಂಚೂಣಿಯಲ್ಲಿರುವುದು ವರದಾನವಾಗಿ ಪರಿಣಮಿಸಿದ್ದು, ಇದರಿಂದ ಆತ್ಮನಿರ್ಭರ ಭಾರತ ನಿರ್ಮಾಣ ಕೂಡ ಸಾಕಾರಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯದ ಉನ್ನತ ಶಿಕ್ಷಣ ಸಚಿವರ ನಿಯೋಗವು ಮೇನಲ್ಲಿ ಲಂಡನ್‌ಗೆ ಭೇಟಿ ಕೊಟ್ಟು ವಿಶ್ವ ಶಿಕ್ಷಣ ಸಮಾವೇಶದಲ್ಲಿ (EWF) ಪಾಲ್ಗೊಂಡಿತ್ತು. ಈ ಸಂದರ್ಭದಲ್ಲಿ ಸಚಿವರ ನಿಯೋಗವು ಯು.ಕೆ.ಯ ಹಲವು ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಿತ್ತು. ಜತೆಗೆ, ಕೆಲವು ವಿಶ್ವವಿದ್ಯಾಲಯಗಳಿಗೆ ಭೇಟಿ ಕೊಟ್ಟಿತ್ತು. ಅದರ ಬೆನ್ನಲ್ಲೇ ಯು.ಕೆ. ಉಪ-ಕುಲಪತಿಗಳ ನಿಯೋಗವು ರಾಜ್ಯಕ್ಕೆ ಬೇಟಿ ಕೊಟ್ಟಿದೆ.

ಇದನ್ನೂ ಓದಿ: ಕ್ರಾಂತಿಕಾರಕ ಬದಲಾವಣೆಗಾಗಿಯೇ ನೂತನ ಶಿಕ್ಷಣ ನೀತಿ: ನೃಪತುಂಗ ವಿವಿ ಉದ್ಘಾಟಿಸಿದ ಅಮಿತ್‌ ಷಾ

Exit mobile version