ಬೆಂಗಳೂರು: ಕೋರ್ಟ್ ಆದೇಶದಂತೆ ಮುಟ್ಟುಗೋಲು ಹಾಕಲಾಗಿರುವ ಕರ್ನಾಟಕ ರಾಜ್ಯ ಕರಕುಶಲ ವಸ್ತುಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಬೇಳೂರು ರಾಘವೇಂದ್ರ ಶೆಟ್ಟಿ ಅವರ ಮನೆಗೆ ಶೆಟ್ಟಿ ಕುಟುಂಬಸ್ಥ ಮಹಿಳೆಯೊಬ್ಬರು ಅಕ್ರಮ ಪ್ರವೇಶ ಮಾಡಿ, ಹರಾಜು ಹಾಕದಂತೆ ತಡೆಯೊಡ್ಡಿರುವ ಘಟನೆ ನಡೆದಿದೆ.
ಕೋರ್ಟ್ ಆದೇಶದಂತೆ ಬಿ.ಅರ್. ಶೆಟ್ಟಿಯ ಮನೆಯನ್ನು ಬ್ಯಾಂಕ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರಲ್ಲದೆ, ವಶಕ್ಕೆ ಪಡೆದ ಮನೆಯನ್ನ ಇನ್ನು ಮೂರು ದಿನಗಳಲ್ಲಿ ಹರಾಜು ಹಾಕಲಿದ್ದರು. ಈ ಮನೆ ಸಂಜಯನಗರದ ಡಾಲರ್ಸ್ ಕಾಲೋನಿಯಲ್ಲಿದೆ. ಇಲ್ಲಿನ ಎಸ್ಎಂಸಿ ಬೆವೆರ್ಲಿ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲ್ಯಾಟ್ ಇದಾಗಿದೆ.
ಸೆಂಟ್ರಲ್ ಬ್ಯಾಂಕ್ ಅಫ್ ಇಂಡಿಯಾದಲ್ಲಿ ಐದು ಕೋಟಿ ರೂಪಾಯಿಗೂ ಅಧಿಕ ಸಾಲ ಪಡೆದಿದ್ದ ಬೇಳೂರು ರಾಘವೇಂದ್ರ ಶೆಟ್ಟಿ ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಬ್ಯಾಂಕ್ ವಶಕ್ಕೆ ಮನೆಯನ್ನು ಕೋರ್ಟ್ ನೀಡಿತ್ತು. ಕಳೆದ ಡಿಸೆಂಬರಿನಲ್ಲಿ ಆದೇಶ ನೀಡಿ ಮನೆಯನ್ನು ಬ್ಯಾಂಕ್ ವಶಕ್ಕೆ ಕೊಡಲಾಗಿತ್ತು. ಮನೆಯನ್ನು ಹರಾಜು ಹಾಕಲು ಬ್ಯಾಂಕ್ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದರು.
ಈ ಮಧ್ಯೆ ನಿನ್ನೆ ರಾತ್ರಿ ಬ್ಯಾಂಕ್ ಹಾಕಿದ್ದ ಸೀಲ್ ಹಾಗೂ ಬೀಗ ಒಡೆದು ಬೇಳೂರು ರಾಘವೇಂದ್ರ ಶೆಟ್ಟಿ ಕಡೆಯವರು ಮನೆಗೆ ಅಕ್ರಮ ಪ್ರವೇಶ ಮಾಡಿದ್ದಾರೆ. ಬಲವಂತವಾಗಿ ಹೊರಹಾಕಲು ಪ್ರಯತ್ನಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಬ್ಯಾಂಕಿನವರು ಫ್ಲ್ಯಾಟ್ ಬಳಿ ಇಟ್ಟಿದ್ದ ಸೆಕ್ಯುರಿಟಿ ಗಾರ್ಡ್ ಕಣ್ತಪ್ಪಿಸಿ ಅಕ್ರಮ ಪ್ರವೇಶ ಮಾಡಲಾಗಿದೆ. ಪೊಲೀಸರು ಹಾಗೂ ಬ್ಯಾಂಕ್ ಅಧಿಕಾರಿಗಳು ಬಾಗಿಲು ತೆರೆಯುವಂತೆ ಸೂಚಿಸಿದರೂ ಮಹಿಳೆ ಬಾಗಿಲು ತೆರೆದಿಲ್ಲ. ಅತಿಕ್ರಮ ಪ್ರವೇಶಕ್ಕೆ ಸಂಬಂಧಿಸಿದಂತೆ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ನಾನು ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡ್ರೆ ರೂಪಾ ಐಪಿಎಸ್ ಕಾರಣ: ಬೇಳೂರು ರಾಘವೇಂದ್ರ ಶೆಟ್ಟಿ ವಿಡಿಯೊ ವೈರಲ್