ನವ ದೆಹಲಿ: ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ (ಬಿಎಂಟಿಸಿ) ಪ್ರಯಾಣಿಕರಿಗೆ ಚಿಲ್ಲರೆ ಸಮಸ್ಯೆಯಿಂದ ಮುಕ್ತ ನೀಡುವುದು ಎಂಬ ಪ್ರಶ್ನೆ ಇನ್ನೂ ಬಗೆಹರಿದಿಲ್ಲ. ಯುಪಿಐ ಆಧರಿತ ಟಿಕೆಟ್ ವಿತರಣೆ ಜಾರಿಯಾದರೆ, ಪ್ರಯಾಣಿಕರು ಜೇಬಿನಲ್ಲಿ ಚಿಲ್ಲರೆ ಇರದಿದ್ದರೂ, ನಿಶ್ಚಿಂತೆಯಿಂದ ಪ್ರಯಾಣ ಮಾಡಬಹುದು. ಬ್ಯಾಂಕ್ ಖಾತೆಯಲ್ಲಿ ಹಣ ಹಾಗೂ ಗೂಗಲ್ ಪೇ, ಫೋನ್‌ಪೇ ಇತ್ಯಾದಿ ಯುಪಿಐ ತಂತ್ರಜ್ಞಾನ ಇದ್ದರೆ ಸಾಕು. ಕ್ಯೂಆರ್ ಕೋಡ್ ಬಳಸಿ ಬಸ್ ಕಂಡಕ್ಟರ್‌ಗೆ ಟಿಕೆಟ್ ಹಣ ಪಾವತಿಸಬಹುದು.
ವಾಸ್ತವವಾಗಿ ಕಳೆದ ಡಿಸೆಂಬರ್‌ನಲ್ಲಿಯೇ ಯುಪಿಐ ಆಧರಿತ ಟಿಕೆಟ್ ವಿತರಣೆ ವ್ಯವಸ್ಥೆ ಜಾರಿಯಾಗಬೇಕಿತ್ತು. ಆದರೆ ಫೆಬ್ರವರಿ ಮುಗಿಯುತ್ತಾ ಬಂದಿದ್ದರೂ, ಇನ್ನೂ ಜಾರಿಯಾಗಿಲ್ಲ. ತಾಂತ್ರಿಕ ಅಡಚಣೆಯಿಂದಾಗಿ ಗಡುವು ಮೀರಿದೆ. ಹೀಗಿದ್ದರೂ, ಶೀಘ್ರದಲ್ಲಿ ಅನುಷ್ಠಾನವಾಗುವ ಭರವಸೆಯನ್ನು ಬಿಎಂಟಿಸಿ ನೀಡಿದೆ. ಈ ಬಗ್ಗೆ ವಿಸ್ತಾರನ್ಯೂಸ್ ಜತೆಗೆ ಮಾತನಾಡಿದ ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ಅವರು, ಯುಪಿಐ ಆಧರಿತ ಟಿಕೆಟ್ ವ್ಯವಸ್ಥೆ ತಾಂತ್ರಿಕ ಅಡಚಣೆಗಳಿಂದ ವಿಳಂಬವಾಗಿದ್ದು, ಶೀಘ್ರದಲ್ಲಿಯೇ ಜಾರಿಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.
ಯುಪಿಐನಲ್ಲಿ ಹಣ ಪಾವತಿ ಹೇಗೆ?
ಪ್ರಯಾಣಿಕರು ತಾವು ಹೋಗಬೇಕಿರುವ ಸ್ಥಳದ ಮಾಹಿತಿಯನ್ನು ಬಿಎಂಟಿಸಿ ಬಸ್ ಕಂಡಕ್ಟರ್‌ಗೆ ಹೇಳಿದಾಗ, ಎಲೆಕ್ಟ್ರಾನಿಕ್ ಟಿಕೆಟಿಂಗ್ ಮೆಶೀನ್‌ನಲ್ಲಿ ಡೇಟಾ ಎಂಟ್ರಿ ಮಾಡುತ್ತಾರೆ. ಬಳಿಕ ಮೆಶೀನ್‌ನಲ್ಲಿ ಕ್ಯೂ ಆರ್ ಕೋಡ್ ಕಾಣಿಸುತ್ತದೆ. ಅದನ್ನು ಪ್ರಯಾಣಿಕ ಸ್ಕ್ಯಾನ್ ಮಾಡಿ ಹಣ ಪಾವತಿಸಬಹುದು. ಒಂದು ವೇಳೆ ಪ್ರಯಾಣಿಕರು ನೀಡಿದ ಹಣ ಸ್ವೀಕೃತಿ ವಿಫಲವಾದರೆ, ನಿರ್ದಿಷ್ಟ ದಿನದೊಳಗೆ ಹಣವು ಪ್ರಯಾಣಿಕರ ಖಾತೆಗೆ ರಿಫಂಡ್ ಆಗಲಿದೆ.
ಪ್ರತಿ ಬಸ್‌ನಲ್ಲೂ ಪ್ರತಿ ದಿನ ನೂರಾರು ಪ್ರಯಾಣಿಕರು ಪ್ರಯಾಣ ಮಾಡುವುದರಿಂದ ಎಲ್ಲರಿಗೂ ಚಿಲ್ಲರೆ ಕೊಡುವುದು ಬಸ್ ಕಂಡಕ್ಟರ್‌ಗೆ ಸಮಸ್ಯೆ ಆಗಬಹುದು. ಆದರೆ ಜನರ ಬಳಿಯೂ ಎಷ್ಟೊ ಸಲ ಚಿಕ್ಕರೆ ಇರುವುದಿಲ್ಲ ಎಂಬುದನ್ನು ಗಮನಿಸಬಹುದು ಎನ್ನುತ್ತಾರೆ ಪ್ರಯಾಣಿಕರು. ಈ ಸಮಸ್ಯೆಗೆ ಯುಪಿಐ ಆಧರಿತ ಟಿಕೆಟ್ ವಿತರಣೆ ಪರಿಹಾರವಾಗುವ ನಿರೀಕ್ಷೆ ಇದೆ.