ಬೆಂಗಳೂರು: ಬಿಜೆಪಿಯ ಚಾಣಕ್ಯ ಎಂದೇ ಖ್ಯಾತವಾದ ಗೃಹಸಚಿವ ಅಮಿತ್ ಶಾ, ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾತನಾಡಿಸಿದರೂ ವಸತಿ ಸಚಿವ ವಿ. ಸೋಮಣ್ಣ (V. Somanna) ಬಿಜೆಪಿ ತೊರೆಯುವುದನ್ನು ತಡೆಯುವುದು ಬಹುತೇಕ ಅಸಾಧ್ಯ ಎನ್ನುವಂತಾಗಿದೆ. ಸಾಮರ್ಥ್ಯ ಇದ್ದವರಿಗೆ ಕವಲು ದಾರಿಗಳು ಬರುತ್ತವೆ ಎನ್ನುವ ಮೂಲಕ, ಬಿಜೆಪಿಯಿಂದ ಹೊರನಡೆಯುವುದು ಬಹುತೇಕ ಖಚಿತ ಎಂಬ ಸಂದೇಶವನ್ನು ಸೋಮಣ್ಣ ನೀಡಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಸೋಮಣ್ಣ, ನನ್ನನ್ನು ಬೆಂಗಳೂರಿಗೆ ಮಾತ್ರ ಏಕೆ ಸೀಮಿತ ಮಾಡ್ತೀರಾ? ಎಂದ ಸೋಮಣ್ಣ, ನನಗೆ ಕೊಟ್ಟ ಜವಾಬ್ದಾರಿಗಳೆಲ್ಲವನ್ನೂ ನಿರ್ವಹಿಸಿದ್ದೇನೆ. ಉಪಚುನಾವಣೆಗಳ ಜವಾಬ್ದಾರಿ, ತುಮಕೂರು ಲೋಕಸಭೆಯಲ್ಲಿ ಗೆಲ್ಲಿಸಿಕೊಂಡು ಬಂದಿದ್ದೇನೆ. ನಾನು ಮೊದಲು ಕಾಂಗ್ರೆಸ್‌ನಲ್ಲೇ ಇದ್ದೆ, ಜನತಾಪಾರ್ಟಿ, ಜನತಾದಳದಲ್ಲೂ ಕೆಲಸ ಮಾಡಿದ್ದೇನೆ. ರಾಜಕಾರಣದಲ್ಲಿ ಹೀಗೆಲ್ಲ ಆಗುತ್ತಿರುತ್ತವೆ. ನನ್ನ ಮಗನಿಗೆ ಟಿಕೆಟ್ ಕೇಳಿದ್ದೀನಾ? ನಾಲ್ಕು ಗೋಡೆ ಮಧ್ಯೆ ಯಾರಿಗೆ ಏನ್ ಹೇಳಬೇಕು ಹೇಳಿದ್ದೀನಿ ಎಂದರು.
ಅಭಿಮಾನಿಗಳು ಸಭೆ ಮಾಡಿದ್ರೆ ನಾನು ಮಾಡಬೇಡ್ರಿ ಅಂತ ಹೇಳೋಕೆ ಆಗುತ್ತಾ? ರಾಜಕಾರಣ ಅಂದ್ರೆ ಬೆಂಗಳೂರಿಗೆ ಅಷ್ಟೆ ಸೀಮಿತ ಆಗಬೇಕಾ..? ಚುನಾವಣೆ ಬಂದಾಗ ಇಡೀ ರಾಜ್ಯಕ್ಕೆ ಕರೆಸುತ್ತಾರೆ ನನ್ನನ್ನು. ಎಲ್ಲಾ ಕ್ಷೇತ್ರ ಗೆಲ್ಲಿಸಿಕೊಂಡೇ ಬಂದಿದ್ದೀನಿ. ಪಕ್ಷ ಏನು ಹೇಳುತ್ತದೆಯೋ ಅದನ್ನು ಮಾಡ್ತೀನಿ ನಾನು. ರಾಜಕಾರಣ ಇದು ಖುಷಿ ಇದ್ಯೋ ಇಲ್ವೋ ಗೊತ್ತಿಲ್ಲ, ಅರ್ಹತೆ ಇರೋವ್ರಿಗೆ ಕೆಲವು ಸಲ ಕವಲು ದಾರಿ ಆಗ್ತಾವೆ.
56 ವರ್ಷ ಆಯಿತು ನಾನು ಬೆಂಗಳೂರಿಗೆ ಬಂದು. ಅನೇಕ ತೊಡರುಗಳನ್ನೂ ನೋಡಿದ್ದೇವೆ. ಕೆಲಸ ಮಾಡೋವ್ರನ್ನ ಜನ ಗೌರವಿಸ್ತಾರೆ ಅಂದರೆ ಅದಕ್ಕೆ ಉದಾಹರಣೆ ಅಂದರೆ ಸೋಮಣ್ಣ. ಬೇರೆ ರಾಜಕಾರಣಿ ಮಕ್ಕಳು ರಾಜಕಾರಣದಲ್ಲಿ ಇರಬಹುದು, ಎಲ್ಲರಿಗೂ ಮಕ್ಕಳ ಮೇಲೆ ಪ್ರೀತಿ ಅನ್ನೋದು ಇರುತ್ತೆ. ನನಗೆ ಇರುವ ನಿಯಮ ಎಲ್ಲರಿಗೂ ಅನ್ವಯಿಸಬೇಲ್ಲವೇ? ನಾನು ಯಾವತ್ತೂ ಮಕ್ಕಳನ್ನು ರಾಜಕಾರಣಕ್ಕೆ ತಂದವನಲ್ಲ.
ಬೇರೆ ರಾಜಕಾರಣಿ ಮಕ್ಕಳಿಗೆ ಟಿಕೆಟ್ ಇಲ್ಲ ಅನ್ನೋದಾದ್ರೆ ನಮಗೂ ಬೇಡ. ಅವಕಾಶ, ಹಣೆಬರಹ ಇದ್ದರೆ ಮಗನಿಗೆ ಟಿಕೆಟ್ ಸಿಗುತ್ತದೆ. ನನಗೆ ಅಸಮಾಧಾನ ಇದೆ ಅಂತ ಎಲ್ಲಾದ್ರೂ ಹೇಳಿದ್ದೀನಾ..? ರಾಜಕಾರಣಿಗಳಿಗೆ ಬದ್ದತೆ ಇರಬೇಕು ಎಂದರು. ಕಾಂಗ್ರೆಸ್‌ಗೆ ಬರುತ್ತಾರೆ ಎನ್ನುವುದು ಅವರ ಭಾವನೆ. ಅದಕ್ಕ ನಾನು ಬೇಡ ಅನ್ನಲಾ..? ಅವರಿಗೆಲ್ಲಾ ಒಳ್ಳೆಯದಾಗಲಿ ಎಂದರು.
ಇದನ್ನೂ ಓದಿ: Karnataka Election 2023: ನಾರಾಯಣಗೌಡ, ವಿ. ಸೋಮಣ್ಣ ಕಾಂಗ್ರೆಸ್ ಸೇರ್ಪಡೆ ನನಗೆ ಗೊತ್ತಿಲ್ಲ: ಸಿದ್ದರಾಮಯ್ಯ
ಮುಖ್ಯವಾಗಿ ಬಿಜೆಪಿಯಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಬಿ.ಎಸ್. ಯಡಿಯೂರಪ್ಪ ವಿರುದ್ಧ ಸೋಮಣ್ಣ ಸಿಟ್ಟಾಗಿದ್ದಾರೆ ಎನ್ನಲಾಗಿದೆ. ಅವರ ಪುತ್ರನಿಗೆ ಟಿಕೆಟ್ ನೀಡುವುದಾದರೆ ತಮ್ಮ ಪುತ್ರನಿಗೆ ಏಕಿಲ್ಲ ಎಂದು ಪಕ್ಷದಲ್ಲಿ ಸಿಟ್ಟು ತೋಡಿಕೊಂಡಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ.
ಕಳೆದ ಬಾರಿ ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಸೋಮಣ್ಣ ಮನೆಗೆ ತೆರಳಿ ಅರ್ಧ ಗಂಟೆ ಮಾತುಕತೆ ನಡೆಸಿದ್ದರು. ಭಾನುವಾರ ಧಾರವಾಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಜತೆಗೆ ಸೋಮಣ್ಣ ವೇದಿಕೆ ಹಂಚಿಕೊಂಡಿದ್ದರು. ಬಿಜೆಪಿ ನಾಯಕರು ಒಟ್ಟಿಗೆ ಊಟಕ್ಕೆ ಕರೆದೊಯ್ದು ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದರೆ ಸೋಮಣ್ಣ ಪಕ್ಷ ಬಿಡುವುದು ಬಹುತೇಕ ಖಚಿತ ಎನ್ನುವಂತಾಗಿದೆ.