ಬೆಂಗಳೂರು: ವೈಯಕ್ತಿಕ ಮತ್ತು ಪಕ್ಷಕ್ಕಾಗಿ ಮತ ಕೇಳುತ್ತಿಲ್ಲ. ಕರ್ನಾಟಕದ ಉಜ್ವಲ ಭವಿಷ್ಯಕ್ಕಾಗಿ ಬಿಜೆಪಿ ಬೆಂಬಲಿಸಿ ಎಂದು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮನವಿ ಮಾಡಿದರು. ಶಿವಾಜಿನಗರದಲ್ಲಿ ಇಂದು ಜನೋತ್ಸಾಹದ ವಿಜಯ ಸಂಕಲ್ಪ ಯಾತ್ರೆ ನಡೆಯಿತು.
ಮಾರ್ಚ್ 12ರಂದು ಪ್ರಧಾನಿಯವರು ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯನ್ನು ಉದ್ಘಾಟಿಸಲಿದ್ದಾರೆ. ಇದು ಬದಲಾವಣೆಯ ಸಂಕೇತ. ಕೆಂಪೇಗೌಡ ವಿಮಾನನಿಲ್ದಾಣದಲ್ಲಿ ಟರ್ಮಿನಲ್ 2 ಅನ್ನು 5 ಸಾವಿರ ಕೋಟಿ ರೂ. ಹೂಡಿಕೆ ಮಾಡಿ ಉದ್ಘಾಟನೆ ಮಾಡಲಾಗಿದೆ. ಕೆಂಪೇಗೌಡರ ಬೃಹತ್ ಮೂರ್ತಿ ಅನಾವರಣ ಮಾಡಲಾಗಿದೆ. ಬೆಂಗಳೂರು ಹೊರ ವರ್ತುಲ ರಸ್ತೆ ನಿರ್ಮಾಣ ನಡೆದಿದೆ. ರಾಜ್ಯದ ವಿಕಾಸ ಆಗಿದೆಯಲ್ಲವೇ ಎಂದು ಪ್ರಶ್ನಿಸಿದರು.
ಕರ್ನಾಟಕವು ದೇಶದಲ್ಲಿ ಇಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನೆಯಲ್ಲಿ ನಂಬರ್ ಒನ್ ರಾಜ್ಯವಾಗಿದೆ. ಕರ್ನಾಟಕವು ಇನೊವೇಶನ್ ಇಂಡೆಕ್ಸ್‍ನಲ್ಲಿ ನಂಬರ್ ವನ್ ರಾಜ್ಯವಾಗಿ ಹೊರಹೊಮ್ಮಿದೆ. ಮೋದಿಜಿ ಅವರು ತುಮಕೂರಿನಲ್ಲಿ ಎಚ್‍ಎಎಲ್ ಹೆಲಿಕಾಪ್ಟರ್ ಉತ್ಪಾದನೆಗೆ ಕ್ರಮ ಕೈಗೊಂಡದ್ದು ತಿಳಿದಿದೆಯಲ್ಲವೇ? ಶಿವಮೊಗ್ಗದಲ್ಲಿ ವಿಮಾನನಿಲ್ದಾಣ ಆಗಿರುವುದು, 13 ವಿಮಾನನಿಲ್ದಾಣದ ಕಾಮಗಾರಿ ನಡೆಯುತ್ತಿರುವುದು, 9 ರೈಲ್ವೆ ಸ್ಟೇಶನ್‍ಗಳ ಪುನರ್ ಅಭಿವೃದ್ಧಿ ಆಗುತ್ತಿರುವುದನ್ನು ತಿಳಿಸಿದ ಅವರು, ಕರ್ನಾಟಕದ ವಿಕಾಸ ಹೀಗೇ ಮುಂದುವರಿಯಲು ಬಿಜೆಪಿಗೆ ಮತ ಕೊಡಿ ಎಂದು ವಿನಂತಿಸಿದರು.
ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಆಗಬೇಕಲ್ಲವೇ ಎಂದು ಕೇಳಿದ ನಡ್ಡಾ, ಮೋದಿಜಿ ಅವರ ಕಾರ್ಯಗಳನ್ನು ಬೆಂಬಲಿಸಿ. ಶಿವಾಜಿನಗರದಲ್ಲಿ ಭವ್ಯ ಯಾತ್ರೆ ನಡೆದಿದೆ. ನಿಮ್ಮ ಉತ್ಸಾಹ ಗಮನಿಸಿದರೆ ಮತ್ತೊಮ್ಮೆ ಭಾಜಪ, ಭಾಜಪ ಎಂಬುದು ಸ್ಪಷ್ಟಗೊಂಡಿದೆ. ಶಿವಾಜಿನಗರದಲ್ಲೂ ಪಕ್ಷ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವ ಎಲ್. ಮುರುಗನ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣ, ಕರ್ನಾಟಕದ ಚುನಾವಣಾ ಸಹ ಉಸ್ತುವಾರಿ ಮತ್ತು ತಮಿಳುನಾಡು ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ, ರಾಜ್ಯದ ಸಚಿವರು ಮತ್ತು ಯಾತ್ರೆ-4ರ ಉಸ್ತುವಾರಿ ಆರ್ ಅಶೋಕ್, ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್, ಶಾಸಕ ಎಸ್.ರಘು, ವಿಧಾನಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ, ಅ.ದೇವೇಗೌಡ, ಕೇಂದ್ರ ಜಿಲ್ಲಾಧ್ಯಕ್ಷ ಮಂಜುನಾಥ್ ಅವರು ರೋಡ್ ಷೋದಲ್ಲಿ ಭಾಗವಹಿಸಿದ್ದರು.
ಕನ್ನಡದಲ್ಲೆ ಮಾತನಾಡಿದ ಅಣ್ಣಾಮಲೈ
ರಥಯಾತ್ರೆಯ ಅಂತ್ಯಕ್ಕೆ ರೋಡ್ ಮೀಟಿಂಗ್ ಮಾಡಿ ಜನರನ್ನುದ್ದೇಶಿಸಿ ಜೆ.ಪಿ. ನಡ್ಡಾ ಭಾಷಣ ಮುಗಿಸಿದರು. ಭಾಷಣ ಮುಗಿಸಿ ನಾಯಕರು ಹೊರಡುತ್ತಿದ್ದಂತೆ ಅಣ್ಣಾಮಲೈ ಎಂದು ಸ್ಥಳೀಯರು ಕೂಗಿದರು. ಪುನಃ ಅಣ್ಣಾಮಲೈ ಕರೆದು ಕೈಗೆ ಮೈಕ್ ಕೊಟ್ಟು ಮಾತನಾಡುವಂತೆ ಆರ್.ಅಶೋಕ್ ಸೂಚಿಸಿದರು. ತಮಿಳು ಮಾತನಾಡುವವರ ಸಂಖ್ಯೆ ಹೆಚ್ಚಿದ್ದರಿಂದ ವಣಕ್ಕಮ್ ಎಂದು ತಮಿಳಿನಲ್ಲಿ ಹೇಳಿದ ಅಣ್ಣಾಮಲೈ, ನಂತರ ಕನ್ನಡದಲ್ಲಿ ಮಾತನಾಡಿದರು. ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಕೊಟ್ಟ ಬೆಂಬಲವನ್ನೆ ರಾಜ್ಯ ಬಿಜೆಪಿಗೆ ಕೊಟ್ಟು ಬೆಂಬಲಿಸಿ ಎಂದು ಮತಯಾಚನೆ ಮಾಡಿದರು.