ಬೆಂಗಳೂರು: ಚಾಮರಾಜನಗರದಲ್ಲಿ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸದೆ, ಕಾಂಗ್ರೆಸ್‌ಗೆ ತೆರಳುತ್ತಾರೆ ಎಂಬ ಸಂದೇಶ ರವಾನಿಸಿದ್ದ ಸಚಿವ ವಿ. ಸೋಮಣ್ಣ ಕೊನೆಗೂ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಗೋವಿಂದರಾಜನಗರದಲ್ಲಿ ಸೋಮವಾರ ನಡೆದ ವಿಜಯ ಸಂಕಲ್ಪ ಯಾತ್ರೆ ( Vijay Sankalpa Yatre) ಕಾರ್ಯಕ್ರಮದಲ್ಲಿ ಭಾಗಿಯಾದರು.
ವಿಜಯಸಂಕಲ್ಪ ಯಾತ್ರೆಗೂ ಮುನ್ನ ಈ ಕುರಿತು ಸುದ್ದಿಗಾರರೊಂದಿಗೆ ಸಚಿವ ಆರ್. ಅಶೊಕ್ ಮಾತನಾಡಿದರು. ಸಚಿವ ಆರ್ ಅಶೋಕ್, ಅಶ್ವಥ್ ನಾರಾಯಣ್, ಕೇಂದ್ರ ಸಚಿವ ಭೂಪೇಂದ್ರ ಯಾದವ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ವಿಜಯನಗರದ ಟೋಲ್ ಗೇಟ್ ನಿಂದ ರಥಯಾತ್ರೆ ಪ್ರಾರಂಭವಾಗಿದ್ದು, ಈವರೆಗೆ ಅನೇಖ ಕಾರ್ಯಕ್ರಮಗಳಲ್ಲಿ ಗೈರಾಗಿದ್ದ ಸಚಿವ ವಿ. ಸೋಮಣ್ಣ ಸಹ ಭಾಗವಹಿಸಿದ್ದಾರೆ.
ಸೋಮಣ್ಣ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿಯ ಕುರಿತು ಪ್ರತಿಕ್ರಿಯಿಸಿದ ಆರ್. ಅಶೋಕ್, ಸೋಮಣ್ಣ ನಮ್ಮ ನಾಯಕ. ಅವರನ್ನು ವಿಜಯನಗರ ಚಾಮರಾಜನಗರಕ್ಕೆ ಸೀಮಿತ ಮಾಡಬೇಡಿ. ಅವರು ಕರ್ನಾಟಕದ ಫಿಗರ್. ಕಾಂಗ್ರೆಸ್ ಗೆ ಹೋಗ್ತಾರೆ ಎನ್ನುವ ಇಲ್ಲ ಸಲ್ಲದ ಆರೋಪ ಬೇಡ. ಅವರು ದಿನ ಬೆಳಗಾದ್ರೆ ನನಗೆ ಕಾಲ್ ಮಾಡ್ತಾರೆ.
ನಾನು ಅಷ್ಟೇ, ದಿನ ಬೆಳಗಾದರೆ ಅವರ ಜೊತೆ ಮಾತಾಡ್ತೇನೆ. ಹೀಗಾಗಿ ಸೋಮಣ್ಣ ಎಲ್ಲಿಗೂ ಹೋಗಲ್ಲ. ಚಾಮರಾಜನಗರದಲ್ಲಿ 4-5 ಸೀಟ್ ಗೆಲ್ಲಿಸುವ ತಾಕತ್ತು ಸೋಮಣ್ಣಗೆ ಇದೆ.
ಯಾವುದೇ ಮಠ ಇದ್ರೂ ಬಾಗಿಲು ತೆಗೆಸಿ ಹೋಗೋ ಶಕ್ತಿ ಇರೋ ಪ್ರಭಾವಿ ನಾಯಕ ಸೋಮಣ್ಣ. ಸೋಮಣ್ಣಗೆ ಯಾವುದೇ ಅಸಮಧಾನ ಇಲ್ಲ. ನಮ್ಮಲಿ ಯಾವುದೇ ಸಮಸ್ಯೆ ಇಲ್ಲ. ನಾವೆಲ್ಲ ಒಟ್ಟಾಗಿ ಇದೀವಿ ಎಂದರು.
ಕರ್ನಾಟಕ ದಕ್ಷಿಣ ಭಾರತಕ್ಕೆ ಹೆಬ್ಬಾಗಿಲು. ಕರ್ನಾಟಕವನ್ನು ಗೆಲ್ಲಿಸುತ್ತೇವೆ, ನಮ್ಮ ವರಿಷ್ಠರು ಬರ್ತಿದಾರೆ. ಮತ್ತೆ ನಾವೇ ಗೆದ್ದು ಅಧಿಕಾರ ಹಿಡೀತೇವೆ. ಕಾಂಗ್ರೆಸ್ ಧೂಳೀಪಟ ಆಗಲಿದೆ ಎಂದರು.
ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣವನ್ನು ಮುಂದಿಟ್ಟುಕೊಂಡು ಕರ್ನಾಟಕ ಬಂದ್‌ಗೆ ಕಾಂಗ್ರೆಸ್ ಕರೆ ಕೊಟ್ಟಿರುವ ಕುರಿತು ಪ್ರತಿಕ್ರಿಯಿಸಿ, ಡಿಕೆಶಿಗೆ ಸೋಲೋ ಭಯ ಕಾಡ್ತಿದೆ. ಸಿದ್ದರಾಮಯ್ಯ ಓಡಿ ಹೋಗುವ ಹಂತದಲ್ಲಿದ್ದಾರೆ. ಎಸಿಬಿ ರಚಿಸಿ ಅವರ ವಿರುದ್ಧ ಇರೋ ಎಲ್ಲ ಕೇಸ್ ಮುಚ್ಚಿ ಹಾಕಿದ್ರು. ಒಂದೇ ಒಂದು ಕೇಸ್ ನಲ್ಲಿ ಬಂಧನ ಮಾಡಲಿಲ್ಲ. ಎಲ್ಲ ಕೇಸ್ ಮುಚ್ಚಿ ಹಾಕಿದ್ರು. ನಾವು ಪಾರದರ್ಶಕವಾಗಿದೀವಿ. ನಮ್ಮ ಪಕ್ಷದವರೇ ತಪ್ಪು ಮಾಡಿದ್ರೂ ಜೈಲಿಗೆ ಹಾಕ್ತೀವಿ, ಶಿಕ್ಷೆ ಆಗುತ್ತೆ. ನಾವು ಯಾವುದೆ ಕೇಸ್ ಮುಚ್ಚಿ ಹಾಕಿಲ್ಲ ಎಂದು ಸಮರ್ಥನೆ ಮಾಡಿಕೊಂಡರು.