ರಾಜಧಾನಿ ಬೆಂಗಳೂರಿನಲ್ಲಿ (Bengaluru) ಕಸ ವಿಲೇವಾರಿ (waste disposal) ಸಮಸ್ಯೆ ಬೃಹತ್ ಆಗಿ ಬೆಳೆದು ನಿಂತಿದೆ. ಬಿಬಿಎಂಪಿಯಲ್ಲಿ (BBMP) ಸಾಕಷ್ಟು ಎಂಜಿನಿಯರ್‌ಗಳು (Engineers) ಇದಕ್ಕಾಗಿಯೇ ಇದ್ದರೂ ಇದನ್ನು ನಿರ್ವಹಿಸುವುದು ಸವಾಲೇ ಆಗಿದೆ. ಹೀಗಾಗಿ, ರಾಜ್ಯ ಸರ್ಕಾರದಿಂದ ಕಸ ವಿಲೇವಾರಿಗೆ ಇದೇ ಜೂನ್ 1ರಿಂದ ಹೊಸ ಯೋಜನೆ ಜಾರಿಯಾಗುತ್ತಿದೆ. ಘನ ತ್ಯಾಜ್ಯ ವಿಲೇವಾರಿಗಾಗಿಯೇ (garbage disposal) ಒಂದು ಕಂಪನಿಯನ್ನು ರಾಜ್ಯ ಸರ್ಕಾರ ಸ್ಥಾಪಿಸಿದೆ. “ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ ನಿಯಮಿತ” ಹೆಸರಿನ ಈ ಕಂಪನಿ ಘನತ್ಯಾಜ್ಯ ನಿರ್ವಹಣೆಯನ್ನು ಕೈಗೆತ್ತಿಕೊಳ್ಳಲಿದ್ದು, ಇನ್ನು ಮುಂದೆ ನಗರದಲ್ಲಿ ಕಸದ ಸಮಸ್ಯೆ ಕಂಡುಬಂದರೆ ಅದನ್ನು ಈ ಕಂಪನಿಯ ಮುಂದೆ ಪ್ರಶ್ನಿಸಬೇಕಾಗಲಿದೆ. ಒಂದು ರೀತಿಯಿಂದ ಇದಕ್ಕೊಂದು ಪ್ರತ್ಯೇಕ ವ್ಯವಸ್ಥೆ ಇರುವುದು ಒಳ್ಳೆಯದು.
ರಾಜ್ಯ ಸರ್ಕಾರ ಹಾಗೂ ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಜಂಟಿಯಾಗಿ ಈ ಸಂಸ್ಥೆಯನ್ನು ನಿರ್ಮಾಣ ಮಾಡಿವೆ. ಇನ್ನು ಮುಂದೆ ಈ ಕಂಪನಿಯಿಂದಲೇ ಕಸ ಸಂಗ್ರಹಣೆ, ಸಾಗಾಣಿಕೆ ಹಾಗೂ ಹಾಗೂ ವಿಲೇವಾರಿ ಕಾರ್ಯ ನಡೆಯಲಿದೆ. ಜೂನ್ 1ರಿಂದ ಮನೆಮನೆಯಿಂದ ಅಟೋದಲ್ಲಿ ಕಸ ಸಂಗ್ರಹಣೆ, ಸಂಗ್ರಹಿಸಿದ ಕಸವನ್ನು ಟಿಪ್ಪರ್ ಲಾರಿಗಳ ಮೂಲಕ ಕಸದ ಸಂಸ್ಕರಣಾ ಘಟಕ ಅಥವಾ ಕ್ಯಾರಿಗಳಿಗೆ ಸಾಗಿಸುವುದು ಈ ಸಂಸ್ಥೆಯ ಹೊಣೆ. ಬಿಬಿಎಂಪಿ ಅಡಿಯಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯ ನಿರ್ವಹಿಸುತ್ತಿರುವ ಅಟೋ, ಟಿಪ್ಪರ್, ಕಾಂಪ್ಯಾಕ್ಟರ್ ಚಾಲಕರು, ಸಹಾಯಕರು ಕಂಪನಿ ವ್ಯಾಪ್ತಿಗೆ ಬರಲಿದ್ದಾರೆ. ಘನತ್ಯಾಜ್ಯ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ವಾರ್ಡ್ ಮಟ್ಟದ ಎಂಜಿನಿಯರ್‌ಗಳು, ಸಿಬ್ಬಂದಿಗಳು ಹಾಗೂ ಮಾರ್ಷಲ್‌ಗಳು ಕಂಪನಿ ಅಧೀನಕ್ಕೆ ಬರಲಿದ್ದಾರೆ. ಈ ಅಧಿಕಾರಿಗಳ, ಸಿಬ್ಬಂದಿಗಳ ವೇತನವನ್ನು ಕಂಪನಿಯೇ ಪಾವತಿ ಮಾಡಲಿದೆ. ನಗರದಲ್ಲಿ ಇರುವ 7 ಕಸ ಸಂಸ್ಕರಣಾ ಘಟಕಗಳು ಕಂಪನಿ ವ್ಯಾಪ್ತಿಗೆ ಬರಲಿವೆ. ಪೌರ ಕಾರ್ಮಿಕರು, ಗುತ್ತಿಗೆ ಪೌರಕಾರ್ಮಿಕರು ಬಿಬಿಎಂಪಿ ಅಧೀನದಲ್ಲಿ ಕಾರ್ಯ ನಿರ್ವಹಿಸಲಿದ್ದು, ಇವರಿಗೆ ಬಿಬಿಎಂಪಿಯಿಂದ ವೇತನ ದೊರೆಯಲಿದೆ. ಪೌರಕಾರ್ಮಿಕರು ಕೇವಲ ಕಸ ಗುಡಿಸುವುದು, ಸಾರ್ವಜನಿಕ ಸ್ಥಳಗಳನ್ನು ಕ್ಲೀನ್ ಮಾಡುವುದು ಮಾಡಲಿದ್ದಾರೆ. ಘನತ್ಯಾಜ್ಯ ಇಲಾಖೆಯನ್ನು ಆರೋಗ್ಯ ಇಲಾಖೆ ಜೊತೆ ವಿಲೀನ ಮಾಡಿ ಅದೇಶ ಹೊರಡಿಸಲಾಗಿದ್ದು, ಇನ್ನು ಮುಂದೆ ಆರೋಗ್ಯ ಮತ್ತು ನೈರ್ಮಲ್ಯ ಇಲಾಖೆ ಎಂದು ಕರೆಯಲಾಗುತ್ತದೆ.
2012ರಿಂದಲೇ ಘನತ್ಯಾಜ್ಯ ನಿರ್ವಹಣೆ ಬಗ್ಗೆ ಹೈಕೋರ್ಟ್, ಬಿಬಿಎಂಪಿಯ ಕಿವಿ ಹಿಂಡುತ್ತ ಬಂದಿದೆ. ಬೆಂಗಳೂರಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ 2012ರಲ್ಲಿ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ನ್ಯಾಯಪೀಠ ವಿಚಾರಣೆ ನಡೆಸಿತ್ತು. ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ವ್ಯವಸ್ಥೆಯ ಸಾಮರ್ಥ್ಯ ವೃದ್ಧಿಸಲು ಮತ್ತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಸೂಕ್ತ ನಿರ್ಣಯಗಳನ್ನು ಕೈಗೊಳ್ಳುವಂತೆ ಸರ್ಕಾರ ಮತ್ತು ಪಾಲಿಕೆಗೆ ಹೈಕೋರ್ಟ್ ಇತ್ತೀಚೆಗೆ ಸೂಚನೆ ನೀಡಿತ್ತು. ಅದರನ್ವಯ ಕ್ರಮ ಕೈಗೊಳ್ಳಲಾಗುತ್ತಿದೆ.
ಭಾರತದಲ್ಲಿ ಇಂದೋರ್ ಅತ್ಯಂತ ಸ್ವಚ್ಛ ನಗರ ಎಂಬ ಹೆಗ್ಗಳಿಕೆ ಗಳಿಸಿದೆ. ನಮ್ಮ ಹಲವು ಹಿಂದಿನ ಸಚಿವರು ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಿಯೂ ಇದ್ದಾರೆ. ಏನೇನು ಕಲಿತುಕೊಂಡು ಬಂದಿದ್ದಾರೆ, ಕಲಿತದ್ದನ್ನು ಅನ್ವಯಿಸಲಾಗಿದೆಯೇ ಇಲ್ಲವೇ ಎಂಬುದು ತಿಳಿಯದು. ಹಾಗೆ ನೋಡಿದರೆ ಉತ್ತರ ಭಾರತದ ಹೆಚ್ಚಿನ ನಗರಗಳಿಗಿಂತ ಬೆಂಗಳೂರಿನ ತ್ಯಾಜ್ಯ ನಿರ್ವಹಣೆ ಉತ್ತಮವಾಗಿದೆ. ಇನ್ನಷ್ಟು ಉತ್ತಮ ಆಗಬೇಕಿದೆ. ಆದರೆ ಸಂಸ್ಥೆ ಬದಲಾಯಿಸಿದ ಮಾತ್ರಕ್ಕೆ ನಿರ್ವಹಣೆ ಉತ್ತಮಗೊಳ್ಳುತ್ತದೆ ಎಂದೇನಿಲ್ಲ. ಕಂಪನಿಗೂ ಬಿಬಿಎಂಪಿಗೂ ಹಂಚಿಕೊಳ್ಳಲಾದ ಕಾರ್ಯಗಳಲ್ಲಿ ಭಿನ್ನಮತ ತಲೆದೋರಬಾರದು. ಕಸದ ಸಮಸ್ಯೆಯಿಂದ ಬಿಬಿಎಂಪಿ ಜಾರಿಕೊಳ್ಳಲು ಇದು ನೆಪ ಆಗಬಾರದು. ಈ ಬದಲಾವಣೆಗಳಿಂದ ಮುಂದಿನ ದಿನಗಳಲ್ಲಿ ಸಿಲಿಕಾನ್ ಸಿಟಿಯಲ್ಲಿ ಕಸದ ಸಮಸ್ಯೆ ಇರವುದಿಲ್ಲವೇ, ಗಾರ್ಬೆಜ್ ಸಿಟಿ ಗಾರ್ಡನ್ ಸಿಟಿ ಆಗಲಿದೆಯೇ ಎಂಬ ಪ್ರಶ್ನೆಗಳಿಗೆ ಉತ್ತರ ಕಾದು ನೋಡಬೇಕಿದೆ.
ಇದನ್ನೂ ಓದಿ: Waste Disposal: ಕಸ ವಿಲೇವಾರಿ ಇನ್ನು ಬಿಬಿಎಂಪಿ ಕೆಲಸ ಅಲ್ಲ! ಅದಕ್ಕಾಗಿಯೇ ಬರುತ್ತಿದೆ ಹೊಸ ಸಂಸ್ಥೆ