Site icon Vistara News

ವಿಸ್ತಾರ ಸಂಪಾದಕೀಯ: ದಿಲ್ಲಿಯ ಉಸಿರುಗಟ್ಟಿಸುತ್ತಿರುವ ವಾಯು ಮಾಲಿನ್ಯ; ಬೆಂಗಳೂರಿಗೂ ಇದು ಪಾಠ

Air Pollution

ರಾಷ್ಟ್ರ ರಾಜಧಾನಿ ದಿಲ್ಲಿ ದೇಶದಲ್ಲೇ ನಂ.1 ವಾಯು ಮಾಲಿನ್ಯದ ನಗರ. ದಿನೇದಿನೆ ದಿಲ್ಲಿಯಲ್ಲಿನ ವಾಯು ಮಾಲಿನ್ಯ ಪ್ರಮಾಣ ಏರುತ್ತಲೇ ಇದೆ. ಕಳೆದೊಂದು ವಾರದಿಂದ ಇದು ಇನ್ನಷ್ಟು ಮಿತಿ ಮೀರಿ ಹೋಗಿ ಶಾಲೆಗಳಿಗೆ ಅನಿರ್ದಿಷ್ಟಾವಧಿ ರಜೆ ಘೋಷಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಲಾರಿಗಳ ಓಡಾಟಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ಕಟ್ಟಡ ಕಾಮಗಾರಿಗಳನ್ನು ನಿಲ್ಲಿಸಲಾಗಿದೆ. ಇಡೀ ದಿಲ್ಲಿ ಗ್ಯಾಸ್‌ ಚೇಂಬರ್‌ನಲ್ಲಿ ಇರುವಂತೆ ಭಾಸವಾಗುತ್ತಿದೆ! ಕಡಿಮೆ ತಾಪಮಾನ, ಗಾಳಿಯ ಕೊರತೆ, ನೆರೆ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯ, ಕಸ ಸುಡುವುದು ಮುಂತಾದ ಕಾರಣಗಳಿಂದ ಗಾಳಿ ಕಲುಷಿತವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಸದ್ಯದಲ್ಲೇ ದೀಪಾವಳಿ ಹಬ್ಬ ಬರುವುದರಿಂದ ಪಟಾಕಿ ಬಳಕೆ ಹೆಚ್ಚಲಿದ್ದು, ಈ ಬಗ್ಗೆಯೂ ಆತಂಕ ಮೂಡಿದೆ. ದಿಲ್ಲಿಯ ಈ ಪರಿಸ್ಥಿತಿ ಇತರ ಮಹಾನಗರಗಳಿಗೂ ಎಚ್ಚರಿಕೆಯ ಗಂಟೆಯಾಗಿದೆ.

ಸ್ವಿಸ್ ಗ್ರೂಪ್ ಐಕ್ಯೂ ಎಐಆರ್ (IQAir)​​ ಪ್ರಕಾರ ಕಲುಷಿತ ನಗರಗಳ ಪೈಕಿ ವಿಶ್ವದಲ್ಲೇ ದೆಹಲಿ ನಂ. 1 ಸ್ಥಾನದಲ್ಲಿದ್ದು, ಕೋಲ್ಕೋತಾ, ಮತ್ತು ಮುಂಬೈ ಸಹ ಹೆಚ್ಚು ವಾಯುಮಾಲಿನ್ಯ ಎದುರಿಸುತ್ತಿರುವ ಭಾರತೀಯ ನಗರಗಳಾಗಿವೆ. ಭಾನುವಾರದ (ನ.5) ಬೆಳಗಿನ ಲೆಕ್ಕಾಚಾರದ ಪ್ರಕಾರ ಐಕ್ಯೂ ಎಐಆರ್ ಪಟ್ಟಿಯಲ್ಲಿ ದೆಹಲಿ 483 ಅಂಕ ದಾಖಲಿಸಿ ಅಗ್ರಸ್ಥಾನದಲ್ಲಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಅಂಕಿಅಂಶಗಳ ಪ್ರಕಾರ, ದೆಹಲಿ-ಎನ್‌ಸಿಆರ್‌ನಲ್ಲಿ ಭಾನುವಾರ ‘ತೀವ್ರ’ ವರ್ಗದ ವಾಯುಮಾಲಿನ್ಯ ಮತ್ತು ವಿಷಕಾರಿ ಮಬ್ಬು, ದಟ್ಟವಾದ ಹೊದಿಕೆ ಆವರಿಸಿಕೊಂಡಿತ್ತು. ಹೆಚ್ಚಿನ ಸ್ಥಳಗಳಲ್ಲಿ ಐಕ್ಯೂ ಎಐಆರ್ 400ಕ್ಕಿಂತ ಹೆಚ್ಚಾಗಿತ್ತು.

ಮಿತಿ ಮೀರಿದ ವಾಯು ಮಾಲಿನ್ಯದ ಕಾರಣ ದಿಲ್ಲಿಯ ಜನ ಆತಂಕಕಾರಿ ಪ್ರಮಾಣದಲ್ಲಿ ಅಸ್ತಮಾ, ಉಸಿರಾಟ ಸಮಸ್ಯೆ, ಹೃದ್ರೋಗ ಇತ್ಯಾದಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಮಕ್ಕಳು ಕಣ್ಣಿನ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ದಿಲ್ಲಿಯಲ್ಲಿ ವಾಸಿಸುವ ಜನರು ವಾಯುಮಾಲಿನ್ಯದಿಂದಾಗಿ ತಮ್ಮ ಜೀವನದ ಸುಮಾರು 12 ವರ್ಷಗಳನ್ನು ಕಳೆದುಕೊಳ್ಳುತ್ತಿದ್ದಾರೆ. ದಿಲ್ಲಿಯ ಉಪನಗರಗಳಾದ ನೋಯ್ಡಾ ಹಾಗೂ ಗುರುಗ್ರಾಮಗಳಲ್ಲಿ ವಾಸಿಸುವ ಜನರ ಆಯುಷ್ಯದಲ್ಲಿ ಸುಮಾರು 11 ವರ್ಷಗಳನ್ನು ಕಳೆದುಕೊಳ್ಳುತ್ತಿದ್ದಾರೆಂದು ಜಾಗತಿಕ ಅಧ್ಯಯನ ವರದಿಯು (EPIC Study Report) ತಿಳಿಸಿತ್ತು. ದೆಹಲಿ ನಿವಾಸಿಗಳು ಸರಾಸರಿ ತಮ್ಮ ಜೀವನದ ಸರಾಸರಿ 11.9 ವರ್ಷಗಳನ್ನು ವಾಯುಮಾಲಿನ್ಯದಿಂದ ಕಳೆದುಕೊಳ್ಳಬಹುದು ಎಂದು ಷಿಕಾಗೋ ವಿಶ್ವವಿದ್ಯಾಲಯದ ಎನರ್ಜಿ ಪಾಲಿಸಿ ಇನ್‌ಸ್ಟಿಟ್ಯೂಟ್‌ನ (EPIC)ಏರ್ ಕ್ವಾಲಿಟಿ ಲೈಫ್ ಇಂಡೆಕ್ಸ್ 2023 ವರದಿಯಲ್ಲಿ ಎಚ್ಚರಿಸಲಾಗಿತ್ತು.

2013ರಿಂದೀಚೆಗೆ ವಿಶ್ವದ ಮಾಲಿನ್ಯದಲ್ಲಿ ಸುಮಾರು 59%ನಷ್ಟು ಹೆಚ್ಚಳಕ್ಕೆ ಭಾರತ ಕಾರಣವಾಗಿದೆ ಎಂದು ಷಿಕಾಗೋ ವಿಶ್ವವಿದ್ಯಾಲಯದ ಇಂಧನ ನೀತಿ ಸಂಸ್ಥೆ (EPIC) ನೀಡಿರುವ ವರದಿಯಲ್ಲಿ ಹೇಳಿತ್ತು. ಇತ್ತೀಚೆಗೆ ಸ್ವಿಡ್ಜರ್‌ಲ್ಯಾಂಡ್‌ನ ಐಕ್ಯೂ ಏರ್ ಸಂಸ್ಥೆ ಬಿಡುಗಡೆ ಮಾಡಿರುವ ವಿಶ್ವ ವಾಯು ಗುಣಮಟ್ಟ ವರದಿಯಲ್ಲಿಯೂ ಭಾರತದ ಕಳಪೆ ವಾಯು ಗುಣಮಟ್ಟವನ್ನು ಎತ್ತಿ ಹೇಳಿತ್ತು. ಅದು 2022ರ ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿ ಮಾಡಿದ್ದು, ಅದರಲ್ಲಿರುವ ವಿಶ್ವದ 50 ನಗರಗಳ ಪಟ್ಟಿಯಲ್ಲಿ ಭಾರತದ 39 ನಗರಗಳು ಇದ್ದವು. ಭಾರತ 2022ರಲ್ಲಿ ಅತಿ ಹೆಚ್ಚು ಮಾಲಿನ್ಯ ಹೊಂದಿರುವ ವಿಶ್ವದ 8ನೇ ದೇಶವೆಂದು ಗುರುತಿಸಿಕೊಂಡಿತ್ತು. ಈ ಅಂಕಿ ಸಂಖ್ಯೆಗಳು ಆಘಾತಕಾರಿಯಾಗಿವೆ.

ಇದನ್ನೂ ಓದಿ | Air Pollution: ವಾಯು ಮಾಲಿನ್ಯ ಉಲ್ಬಣ; ದೆಹಲಿಯಲ್ಲಿ ಟ್ರಕ್‌ ಸಂಚಾರಕ್ಕೆ ಬ್ರೇಕ್, ನಿರ್ಮಾಣ ಕಾಮಗಾರಿ ನಡೆಸುವಂತಿಲ್ಲ

ಬೆಂಗಳೂರು ಕೂಡ ವಾಯು ಮಾಲಿನ್ಯಕ್ಕೆ ಹೊರತಲ್ಲ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ನೀಡಿರುವ ಮಾರ್ಗಸೂಚಿಗಳಲ್ಲಿ ಇರುವುದಕ್ಕಿಂತಲೂ ಐದು ಪಟ್ಟು ಕೆಟ್ಟದಾದ ಗಾಳಿಯನ್ನು ಬೆಂಗಳೂರಿನವರು ಉಸಿರಾಡುತ್ತಿದ್ದಾರೆ ಎಂದು ಗ್ರೀನ್‌ಪೀಸ್ ಇಂಡಿಯಾ ಸಂಸ್ಥೆ ತನ್ನ ಇತ್ತೀಚಿನ ವಾಯು ಮಾಲಿನ್ಯದ ವರದಿಯಲ್ಲಿ ಹೇಳಿತ್ತು. ಅಂದರೆ ನಿಗದಿತ ಮಾನದಂಡಕ್ಕಿಂತ ಐದು ಪಟ್ಟು ವಿಷ ಗಾಳಿಯನ್ನು ಜನ ಸೇವಿಸುತ್ತಿದ್ದಾರೆ ಎಂದಾಯಿತು. ಒತ್ತುವರಿಯಾಗಿರುವ ಕೆರೆಗಳನ್ನು ತೆರವುಗೊಳಿಸದಿದ್ದರೆ, ವಾಹನಗಳು ಉಗುಳುವ ಹೊಗೆಗೆ ಕಡಿವಾಣ ಹಾಕದಿದ್ದರೆ, ಬೆಂಗಳೂರು ಸುತ್ತಮುತ್ತ ಇರುವ ಕಿರು ಅರಣ್ಯ ಉಳಿಸಿಕೊಳ್ಳದಿದ್ದರೆ, ಗಿಡ ಮರಗಳನ್ನು ಬೆಳೆಸದೆ ಹೋದರೆ ಬೆಂಗಳೂರಿಗೂ ದಿಲ್ಲಿಯ ಗತಿ ಬರುವ ಕಾಲ ದೂರವಿಲ್ಲ.

Exit mobile version