Site icon Vistara News

ವಿಸ್ತಾರ ಸಂಪಾದಕೀಯ: ಟ್ರಾಫಿಕ್ ದಂಡ ವಿನಾಯಿತಿ ಕ್ರಾಂತಿಕಾರಕ ನಿರ್ಧಾರ

traffic fine

ಬೆಂಗಳೂರಿನಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ದಂಡ (traffic violations fine) ಉಪಕ್ರಮ ಭಾರಿ ಜನಪ್ರಿಯತೆ ಗಳಿಸಿದೆ. ದಂಡ ಪಾವತಿಗೆ 50% ಡಿಸ್ಕೌಂಟ್ ಘೋಷಣೆ ಮಾಡಿದ್ದೇ ತಡ, ವಾಹನ ಸವಾರರು ಫೈನ್‌ ಪಾವತಿಸುವುದಕ್ಕೆ ಮುಗಿಬಿದ್ದಿದ್ದರು. ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದಲ್ಲಿ, ಹತ್ತೇ ದಿನದಲ್ಲಿ 120 ಕೋಟಿ ರೂ. ದಂಡ ಸಂಗ್ರಹವಾಗಿದೆ. 41 ಲಕ್ಷ ಪ್ರಕರಣಗಳು ಇತ್ಯರ್ಥವಾಗಿವೆ. ಟ್ರಾಫಿಕ್‌ ಪೊಲೀಸರು ಕಂಡರೆ ಪರಾರಿಯಾಗುತ್ತಿದ್ದ ಸವಾರರೆಲ್ಲಾ ಕಳೆದ 10 ದಿನದಿಂದ ಪೊಲೀಸರನ್ನೇ ಹುಡುಕಿಕೊಂಡು ಹೋಗಿ ಸರದಿ ಸಾಲಿನಲ್ಲಿ ನಿಂತು ದಂಡ ಪಾವತಿಸಿದ್ದು ಸೋಜಿಗವೂ ಹೌದು. ಆನ್‌ಲೈನ್‌ನಲ್ಲಿ ಹಣ ಕಟ್ಟಿದ್ದಾರೆ. ಕೊನೆಯ ಹಂತದಲ್ಲಿ ನೆಟ್‌ವರ್ಕ್‌ ಒತ್ತಡದಿಂದ ಹಣ ಪಾವತಿ ಮಾಡಲಾಗದೆ ನಿರಾಸೆ ಅನುಭವಿಸಿದವರಿಗೆ ನಿರಾಳತೆ ತರುವಂತೆ, ಫೆಬ್ರವರಿ 28ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.

ನಿಜವಾಗಿಯೂ ಇದೊಂದು ಕುತೂಹಲಕಾರಿ ಮತ್ತು ಕ್ರಾಂತಿಕಾರಿ ಉಪಕ್ರಮ. ಜನೋಪಯೋಗಿಯಾದ, ಜನಸ್ನೇಹಿಯಾದ ಒಂದು ಸಣ್ಣ ಮತ್ತು ಸುಲಭದ ನಿರ್ಧಾರವೂ ಎಷ್ಟು ದೊಡ್ಡ ಪರಿಣಾಮ ಬೀರುತ್ತದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಇಂಥದೊಂದು ಅದ್ಭುತ ಪರಿಣಾಮಕಾರಿ ಸಲಹೆ ನೀಡಿದ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಕಾರ್ಯಾಧ್ಯಕ್ಷರೂ ಆಗಿರುವ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಬಿ. ವೀರಪ್ಪ ಮತ್ತು ಈ ಸಲಹೆಯನ್ನು ಜಾರಿ ಮಾಡಿದ ಸಂಚಾರ ಪೊಲೀಸ್ ಇಲಾಖೆಯ ಅಧಿಕಾರಿಗಳು ಅಭಿನಂದನಾರ್ಹರು. ವರ್ಷಗಟ್ಟಲೆ ಸಾವಿರಾರು ರೂ. ದಂಡ ಬಾಕಿ ಇರಿಸಿಕೊಂಡವರು ಈಗ ಸರದಿ ಸಾಲಿನಲ್ಲಿ ನಿಂತು ದಂಡ ಪಾವತಿಸುತ್ತಿದ್ದಾರೆ. ತಪ್ಪು ದಾಖಲು, ಭಾರಿ ದಂಡ, ಮುಂದೆ ಕಟ್ಟಿದರಾಯಿತು ಎಂಬ ಉದಾಸೀನತೆ ಇತ್ಯಾದಿ ಕಾರಣಗಳಿಂದ ಲಕ್ಷಾಂತರ ಜನ ದಂಡ ಬಾಕಿ ಉಳಿಸಿಕೊಂಡಿದ್ದರು.

ಪ್ರತಿವರ್ಷ ಬೆಂಗಳೂರಿನಲ್ಲಿ ಸರಾಸರಿ 83 ಲಕ್ಷಕ್ಕೂ ಅಧಿಕ ಟ್ರಾಫಿಕ್‌ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತವೆ. ಹಲವು ವರ್ಷಗಳಿಂದ ಬಾಕಿ ಇರುವ ಪ್ರಕರಣಗಳೂ ಸೇರಿ ಬೆಟ್ಟದಷ್ಟು ಪ್ರಕರಣಗಳು ಬಾಕಿ ಇವೆ. ಪ್ರತಿಯೊಬ್ಬರಿಗೂ ನೋಟಿಸ್‌ ಕಳಿಸುವುದೂ ಇಲಾಖೆಗೆ ದುಸ್ತರವೇ. ಹೀಗಾಗಿ ಸ್ವಯಂಸ್ಫೂರ್ತಿಯಿಂದ ದಂಡ ಕಟ್ಟಲು ನೀಡಲಾಗಿರುವ ಈ ಅವಕಾಶಕ್ಕೆ ಜನ ಸ್ಪಂದನ ತೋರಿದ್ದಾರೆ. ಈಗ ಶೇ.50 ವಿನಾಯಿತಿಯೂ ಇರುವ ಕಾರಣ ಜನ ಭಾರಿ ಉತ್ಸಾಹದಿಂದ ದಂಡ ಪಾವತಿಸುತ್ತಿದ್ದಾರೆ. ಪರ್ವತದಂತಿದ್ದ ದಂಡ ಪ್ರಕರಣಗಳ ಸಂಖ್ಯೆ ನಿರೀಕ್ಷೆಗೂ ಮೀರಿದ ವೇಗದಲ್ಲಿ ಇಳಿಯಲಾರಂಭಿಸಿದೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಅಡಿಕೆ ಆರೋಗ್ಯಕ್ಕೆ ಹಾನಿಕರವಲ್ಲ ಎಂದಿದೆ ಸಂಶೋಧನಾ ವರದಿ, ಇನ್ನಾದರೂ ಕೇಂದ್ರ ಸ್ಪಷ್ಟ ನಿರ್ಧಾರಕ್ಕೆ ಬರಲಿ

ಇದೇ ವೇಳೆ ನಕಲಿ ಪ್ಲೇಟ್ ಬಳಕೆಯ ಹಾವಳಿ ಮತ್ತು ಯಾರದೋ ತಪ್ಪಿಗೆ ಇನ್ಯಾರದೋ ವಾಹನಕ್ಕೆ ದಂಡ ಹಾಕಿರುವ ಪ್ರಮಾದಗಳೂ ಬೆಳಕಿಗೆ ಬರತೊಡಗಿವೆ. ಇಂಥ ಪ್ರಕರಣಗಳು ಗಂಭೀರ ಪ್ರಮಾಣದಲ್ಲಿ ಕಂಡುಬಂದಿರುವುದರಿಂದ, ಈ ನಿಟ್ಟಿನಲ್ಲಿ ಇಲಾಖೆ ಹೆಚ್ಚಿನ ಗಮನ ಹರಿಸಬೇಕಿರುವುದಂತೂ ಖಂಡಿತ. ಹಾಗೆಯೇ ದಂಡ ವಿನಾಯಿತಿ ಉಪಕ್ರಮವನ್ನು ಸದಾ ಕಾಲಕ್ಕೆ ಮುಂದುವರಿಸಲು ಸಾಧ್ಯವಿಲ್ಲ. ಜನ ಮುಂದಿನ ವಿನಾಯಿತಿ ಘೋಷಣೆವರೆಗೆ ದಂಡ ಪಾವತಿಸದೇ ಇರುವ ಸಾಧ್ಯತೆಯೂ ಇದೆ. ಹಾಗಾಗಿ ಸಂಚಾರ ಇಲಾಖೆಯ ದಂಡ ದಾಖಲಿಸುವ ಪ್ರಕ್ರಿಯೆಯಲ್ಲಿ ಮತ್ತಷ್ಟು ಪಾರದರ್ಶಕತೆ ಅಳವಡಿಸಿಕೊಳ್ಳಬೇಕು. ತಪ್ಪು ದಂಡ ಪ್ರಯೋಗ ಆಗದಂತೆ ಎಚ್ಚರ ವಹಿಸಬೇಕು.

ಅಧಿಕೃತ ಅಂಕಿಅಂಶಗಳ ಪ್ರಕಾರ ಬೆಂಗಳೂರಿನಲ್ಲಿ 2022ರಲ್ಲಿ ಆಗಿರುವ ರಸ್ತೆ ಅಪಘಾತಗಳ ಸಂಖ್ಯೆ 2807 ಹಾಗೂ ಇವುಗಳಲ್ಲಿ ಸಂಭವಿಸಿರುವ ಸಾವುಗಳ ಸಂಖ್ಯೆ 577. ಪ್ರತಿವರ್ಷದ ಸರಾಸರಿಯೂ ಹೆಚ್ಚುಕಡಿಮೆ ಇಷ್ಟೇ ಇದೆ. ಬಹಳಷ್ಟು ಅಪಘಾತಗಳು ಮತ್ತು ಸಾವು-ನೋವುಗಳು ಸಂಚಾರ ನಿಯಮ ಉಲ್ಲಂಘನೆಯಿಂದ ಆಗುತ್ತಿವೆ. ಹಾಗಾಗಿ ವಾಹನ ಸವಾರರು ದಂಡ ಪಾವತಿ, ಇದರಿಂದ ತಪ್ಪಿಸಿಕೊಳ್ಳುವುದು ಅಥವಾ ವಿನಾಯಿತಿಗೆ ಕಾಯುವುದಕ್ಕಿಂತ ಹೆಚ್ಚಾಗಿ ಸ್ವಯಂಪ್ರೇರಿತರಾಗಿ ಸಂಚಾರ ನಿಯಮ ಪಾಲಿಸಬೇಕು. ಈ ಮೂಲಕ ಸುಗಮ ಸಂಚಾರಕ್ಕೆ ಅವಕಾಶ ಮಾಡಿ ಕೊಡುವುದು ಮಾತ್ರವಲ್ಲ, ಸಾವು ನೋವನ್ನೂ ತಪ್ಪಿಸುವಲ್ಲಿ ತಮ್ಮ ಕೊಡುಗೆ ನೀಡಬೇಕು. ದಂಡ ಹೇರುವುದು ಅಥವಾ ವಿನಾಯಿತಿ ನೀಡುವುದು ಅಂತಿಮ ಪರಿಹಾರವಲ್ಲ, ಇದು ತಾತ್ಕಾಲಿಕ. ಸುರಕ್ಷಿತ ನಗರ ಸಂಚಾರಕ್ಕೆ ರಸ್ತೆ ನಿಯಮಗಳನ್ನು ಪಾಲಿಸುವ ಪೌರ ಪ್ರಜ್ಞೆ, ಸಂಚಾರ ನಿಯಮಗಳ ಪಾಲನೆಯೇ ಅಂತಿಮ ಪರಿಹಾರ. ಇದನ್ನು ಎಲ್ಲರೂ ಅರ್ಥ ಮಾಡಿಕೊಂಡರೆ ಇನ್ನೊಮ್ಮೆ ಇಂಥ ವಿನಾಯಿತಿಯ ಅಗತ್ಯ ಬೀಳಲಾರದು.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಏರೋ ಇಂಡಿಯಾ ಪ್ರದರ್ಶನ, ಆತ್ಮ ನಿರ್ಭರತೆಯ ದರ್ಶನ

Exit mobile version