Site icon Vistara News

ವಿಸ್ತಾರ Interview | ನಮಗಿಂತ ದಡ್ಡರ ಜತೆ ಕೆಲಸ ಮಾಡಬಾರದು ಎಂದು AAP ಸೇರಿದ್ದೇನೆ!: ನಿವೃತ್ತ IPS ಅಧಿಕಾರಿ ಭಾಸ್ಕರ ರಾವ್‌

Bhaskar rao interview

ಮಾರುತಿ ಪಾವಗಡ, ಬೆಂಗಳೂರು
ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಪರ್ಯಾಯ ಎಂಬ ಘೋಷಣೆಯಲ್ಲಿ ಕರ್ನಾಟಕ ಚುನಾವಣೆಗೂ ಕಾಲಿಟ್ಟಿದೆ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ರ ಆಮ್‌ ಆದ್ಮಿ ಪಕ್ಷ(AAP). ದೆಹಲಿ ನಂತರ ಪಂಜಾಬ್‌ನಲ್ಲಿ ಜಯಿಸಿರುವ ಆಪ್‌, ಮೂರನೇ ರಾಜ್ಯದಲ್ಲಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಕರ್ನಾಟಕದಲ್ಲೂ ಪ್ರಯತ್ನ ನಡೆಸಿದೆ. ಕಾಂಗ್ರೆಸ್‌ನಲ್ಲಿದ್ದ ಬ್ರಿಜೇಶ್‌ ಕಾಳಪ್ಪ ಆಪ್‌ ಸೇರಿದ್ದಾರೆ. ಜನತಾ ಪರಿವಾರದಿಂದ ರಾಜಕಾರಣ ಆರಂಭಿಸಿ ನಂತರ ಬಿಜೆಪಿ-ಕಾಂಗ್ರೆಸ್‌ನಲ್ಲಿಯೂ ಇದ್ದ ಚಿತ್ರನಟ ಮುಖ್ಯಮಂತ್ರಿ ಚಂದ್ರು ಆಪ್‌ ಸೇರಿಕೊಂಡಿದ್ದಾರೆ. ಬೆಂಗಳೂರಿನಲ್ಲೇ ಜನಿಸಿದ, ಭಾಸ್ಕರ್‌ ರಾವ್‌ ಅವರು ಬೆಂಗಳೂರಿನ ಪೊಲೀಸ್‌ ಕಮಿಷನರ್‌ ಸಹ ಆಗಿದ್ದವರು. IPS ಹುದ್ದೆಗೆ ರಾಜೀನಾಮೆ ನೀಡಿ ಆಪ್‌ ಸೇರಿರುವ ಭಾಸ್ಕರ ರಾವ್‌ ಇದೀಗ ಕರ್ನಾಟಕ ಆಪ್‌ನ ಉಪಾಧ್ಯಕ್ಷರು. ಆಮ್‌ ಆದ್ಮಿ ಪಕ್ಷದ ನಿಲುವು, ಮುಂದಿನ ಚುನಾವಣೆಗಳ ಕುರಿತು ಅವರ ಸ್ಪಷ್ಟತೆಗಳ ಕುರಿತು ʼವಿಸ್ತಾರ ನ್ಯೂಸ್‌ʼ ಸಂದರ್ಶನದಲ್ಲಿ ಮಾತನಾಡಿದ ಸಂಕ್ಷಿಪ್ತ ರೂಪ ಇಲ್ಲಿದೆ.

ವಿಸ್ತಾರ: ಸರ್ಕಾರಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ರಾಜಕಾರಣಕ್ಕೆ ಬಂದಿದ್ದು ಯಾಕೆ?
ನನಗೆ ರಾಜಕಾರಣ ಹೊಸದಲ್ಲ. ವಿದ್ಯಾರ್ಥಿಯಾಗಿರುವಾಗ ಜೀವರಾಜ್​ ಆಳ್ವಾ ಶಿಷ್ಯನಾಗಿದ್ದೆ. ವಿದ್ಯಾರ್ಥಿ ಜೀವನದ ಚುನಾವಣೆಗಳನ್ನು ಎದುರಿಸಿದ್ದೇನೆ. ರಾಜಕೀಯ ಮೊದಲಿಂದಲೂ ಇಷ್ಟವಾದ ಕ್ಷೇತ್ರ. ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅವರ ಕೆಲಸಗಳನ್ನು ಹತ್ತಿರದಿಂದ ನೋಡಿದ್ದೇನೆ. ಸಮಾಜಕ್ಕೆ ಇನ್ನಷ್ಟು ಸೇವೆ ಮಾಡಬೇಕೆಂದು ರಾಜಕಾರಣಕ್ಕೆ ಬಂದಿದ್ದೇನೆ.

ವಿಸ್ತಾರ: ರಾಜಕೀಯ ಆಸಕ್ತಿ ಇದ್ದವರು ಆ ಕ್ಷೇತ್ರದಲ್ಲಿ ಮುಂದುವರಿಯದೆ ಐಪಿಎಸ್​ ಹೇಗಾದ್ರಿ?
ಇಂದಿರಾಗಾಂಧಿ ಸತ್ತ ವರ್ಷದಲ್ಲಿ ಗಲಾಟೆಗಳು ಆದವು. ರಾಜಕೀಯ ಬಿಟ್ಟು ಓದಿನ ಕಡೆ ಗಮನ ಕೊಡು ಎಂದು ನಮ್ಮ ತಂದೆ ಗದರಿದ್ರು. ಹೀಗಾಗಿ ನಾನು ಪಿಜಿ ಮಾಡಬೇಕಾದರೆ ಆರ್ಮಿಗೆ ಸೇರಿಕೊಂಡೆ. ಶ್ರೀಲಂಕಾ ಆಪರೇಷನ್​ಲ್ಲಿ ಕೆಲಸ ಮಾಡಿದೆ. ಅದಕ್ಕಿಂತಲೂ ಉನ್ನತ ಹುದ್ದೆಗೆ ಹೋಗಬೇಕೆಂದು ನಾಗರಿಕ ಸೇವಾ ಪರೀಕ್ಷೆ ಬರೆದು ಐಪಿಎಸ್​ ಹುದ್ದೆ ಗಳಿಸಿದೆ.

ವಿಸ್ತಾರ: ಡಿಜಿಪಿ ಆಗಬೇಕಿದ್ದವರು ರಾಜೀನಾಮೆ ಕೊಟ್ಟಿದ್ದು ಯಾಕೆ?
ಡಿಜಿಪಿ ಪಾಡು ನೋಡಿದ್ದೇನೆ. ಹೀಗಾಗಿ ಪೊಲೀಸ್​ ಕೆಲಸ ಸಾಕು ಅನ್ನಿಸ್ತು. ವಿಷನ್​ ಇಲ್ಲದ ಅಧಿಕಾರಿಗಳು ಮತ್ತು ರಾಜಕಾರಣಿಗಳ ನಡುವೆ ಕೆಲಸ ಮುಂದುವರಿಸಬಾರದು ಎಂದು ನಿರ್ಧಾರ ಮಾಡಿ ಹೊರ ಬಂದೆ. ನಮಗಿಂತಲೂ ದಡ್ಡರ ಕೆಳಗೆ ಕೆಲಸ ಮಾಡಬಾರದು!

ವಿಸ್ತಾರ: ನಿಮಗೆ ಸರ್ಕಾರ ಪ್ರೀ ಹ್ಯಾಂಡ್​ ಕೊಟ್ಟಿರಲಿಲ್ಲವೇ?
ಸರ್ಕಾರದವರ ಸಾಮರ್ಥ್ಯ ನೋಡಿ ಬೇಗ ಜಾಗ ಖಾಲಿ ಮಾಡೋದು ಬೆಟರ್​ ಅಂತ ನಿರ್ಧಾರ ಮಾಡಿ ಹೊರ ಬಂದೆ. ಸಂಬಳ ಮತ್ತು ಗೂಟದ ಕಾರಿಗಾಗಿ ಉಳಿಯಬೇಕು ಅಂತ ನನಗೆ ಅನ್ನಿಸಲಿಲ್ಲ.

ವಿಸ್ತಾರ: ನಿಮ್ಮ ಅಸಮಾಧಾನ ಸರ್ಕಾರ ನಡೆಸುತ್ತಿರುವ ರಾಜಕಾಣಿಗಳ ವಿರುದ್ಧವೋ? ನಿಮ್ಮ ಮೇಲಿನ ಅಧಿಕಾರಗಳ ವಿರುದ್ಧವೋ?
ಅಧಿಕಾರಿಯಾಗಿ ಕೆಲಸ ಮಾಡಲು ಆಗದನ್ನು ಜನಪ್ರತಿನಿಧಿಯಾಗಿ ಮಾಡಬೇಕು. ಟ್ರಾಫಿಕ್, ಬೆಂಗಳೂರಿನ ಕಸದ ಸಮಸ್ಯೆ, ಮಳೆ ಬಂದಾಗ ಆಗುವ ಅವಾಂತರಗಳನ್ನು ನೋಡಿದ್ದೀರಿ. ಇದಕ್ಕೆ ಪರಿಹಾರ ಕೊಡಬೇಕು. ಇವರು ಕೆಲಸ ಮಾಡಲ್ಲ ಗೆದ್ದು ಬಂದ ಮೇಲೆ ದುಡ್ಡು ಹೊಡೆಯುವುದು ಅಷ್ಟೇ ಇವರ ಕೆಲಸವಾಗಿದೆ.

ವಿಸ್ತಾರ: ನಿಮ್ಮ ಆಯ್ಕೆ ಆಪ್ ಆಗಿದ್ದು ಯಾಕೆ? ರಾಜ್ಯದಲ್ಲಿ ಆ ಪಕ್ಷಕ್ಕೆ ಸದ್ಯ ಅಸ್ತಿತ್ವವೇ ಇಲ್ಲವಲ್ಲ?
ಕಷ್ಟಪಟ್ಟು ಎಲ್ಲವನ್ನೂ ಪಡೆಯಬೇಕು ಅನ್ನೋದು ನನ್ನ ಆಸೆ. ಬಿಜೆಪಿ, ಕಾಂಗ್ರೆಸ್,​​ ಜೆಡಿಎಸ್ ಭ್ರಷ್ಟಾಚಾರದ ಪಕ್ಷಗಳು. ನಾನು ಹೋಗಿ ಅಲ್ಲಿ ಮಾಡುವಂತಹದು ಏನೂ ಇಲ್ಲ. ಹೀಗಾಗಿ ನನ್ನ ಆಯ್ಕೆ ಆಪ್ ಆಯಿತು.

ವಿಸ್ತಾರ: ಆಪ್ ನಾಯಕರ ಮೇಲೂ ಭ್ರಷ್ಟಾಚಾರದ ಆರೋಪಗಳು ಇವೆಯಲ್ಲ?
ಆರೋಪಗಳಿಂದ ಯಾರೂ ಮುಕ್ತರಲ್ಲ. ಆದರೆ ಬಿಜೆಪಿಯವರಿಗೆ ಸ್ವಚ್ಛ ಮನಸ್ಸು ಇಲ್ಲ. ಮೋದಿ ಮೋದಿ ಅಂತ 2014ರಲ್ಲಿ ವೋಟ್​ ಹಾಕಿದ್ರು. ಆದರೆ ಇವರು ಏನ್​ ಮಾಡಿದ್ರು? ದೇಶದ ಪರಿಸ್ಥಿತಿ ಏನಾಗಿದೆ? ಆಪ್ ನ ಸತ್ಯೇಂದ್ರ ಜೈನ್​ ಮೇಲಿನ ಆರೋಪಕ್ಕೆ ಯಾವುದೇ ದಾಖಲೆ ಇಲ್ಲ. ಆದರೂ ಅವರನ್ನು ಟಾರ್ಗೆಟ್ ಮಾಡಿದ್ದಾರೆ.

ವಿಸ್ತಾರ: ಸಿದ್ಧಾಂತದ ವಿಚಾರದಲ್ಲಿ ಆಪ್ ನ ಅಜೆಂಡಾ ಏನು?
ಬಿಜೆಪಿ ರೈಟ್​, ಕಾಂಗ್ರೆಸ್​ ಲೆಫ್ಟ್​​. ಆದರೆ ಆಪ್ ಸೆಂಟ್ರಿಸ್ಟ್​​ ಪಾರ್ಟಿ. ನಾವು ಎಲ್ಲರ ಜತೆ ಇರುತ್ತೇವೆ. ಕಾಂಗ್ರೆಸ್​​ ಸರ್ಕಾರ ಇರುವ ಸಂದರ್ಭದಲ್ಲಿ, ನಾನು ಆರ್​ ಎಸ್​ ಎಸ್​ ಕಚೇರಿಗೆ ಯಾರನ್ನೋ ಭೇಟಿ ಮಾಡಲು ಹೋದಾಗ ನನ್ನ ಮೇಲೆ ಗೂಬೆ ಕೂರಿಸಿದ್ರು. ನನಗೆ ಎಲ್ಲ ಸಮುದಾಯದವರೂ ಸ್ನೇಹಿತರಿದ್ದಾರೆ.
ನಾನು ಎಲ್ಲಿ ಹೋಗಬೇಕು ಎಲ್ಲಿ ಬರಬೇಕು ಅನ್ನೋದನ್ನ ನಿರ್ಧಾರ ಮಾಡೋದಕ್ಕೆ ಇವರು ಯಾರು? ನಾನು ಓದಿದ್ದು ಕ್ರಿಶ್ಚಿಯನ್​​ ಶಾಲೆಯಲ್ಲಿ. ಮುಸ್ಲಿಂ ಸ್ನೇಹಿತರ ಜತೆ ಶಾಲೆಗೆ ಹೋಗಿದ್ದೇನೆ. ಮನೆಯಲ್ಲಿ ನನ್ನ ತಾಯಿ ಪೂಜೆ ಪುನಸ್ಕಾರ ಮಾಡ್ತಿದ್ರು. ನಮ್ಮ ಜಾತಿ ಮೇಲೆ ನನಗೆ ಗೌರವವಿದೆ. ಇತರ ಜಾತಿಗಳ ಮೇಲೆ ಪ್ರೀತಿಯಿದೆ.

ವಿಸ್ತಾರ: ಹಿಂದುತ್ವ ವಿಚಾರದಲ್ಲಿ ನಿಮ್ಮ ಮತ್ತು ಆಪ್ ಬದ್ಧತೆ ಏನು?
ಹಿಂದುತ್ವ ನಿನ್ನೆ ಮೊನ್ನೆ ಹುಟ್ಟಿದಲ್ಲ. ಇವರು ನಾವಿದ್ರೆ ಹಿಂದುತ್ವ ಅಂತ ಹೇಳ್ತಾರೆ. ಇನ್ನೆಷ್ಟು ದಿನಗಳ ಕಾಲ ಜನರನ್ನು ಭಾವನಾತ್ಮಕ ವಿಚಾರಗಳಿಂದಲೇ ಚುನಾವಣೆ ಗೆಲ್ತೀರಾ? ಗೆದ್ದ ಮೇಲೆ ರಾಮ ಮತ್ತು ಗಣೇಶ ದೇವಸ್ಥಾನದಲ್ಲಿ ಗಂಟೆ ಹೊಡೆದ್ರೆ ನೋಟೀಸ್​ ಕೊಡ್ತೀರಾ! ನೀವು ರಾಮನ ಪರವಾಗಿಯೂ ಇಲ್ಲ, ಗಣೇಶನ ಪರವಾಗಿಯೂ ಇಲ್ಲ.

ವಿಸ್ತಾರ: ಅಯೋಧ್ಯೆ ಸಮಸ್ಯೆ ಬಗೆಹರಿಸಿದ್ದು ಬಿಜೆಪಿ ಅಲ್ಲವೇ? ಹಾಗಾಗಿ ಹಿಂದುತ್ವ ಉಳಿಸುತ್ತಿರುವುದು ನಾವೇ ಎಂದು ಬಿಜೆಪಿ ಹೇಳುವುದರಲ್ಲಿ ತಪ್ಪೇನಿದೆ?
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ. ದೇಶದಲ್ಲಿ 90ರಷ್ಟು ಹಿಂದುಗಳು ಇದ್ದಾರೆ. ದೇಶದಲ್ಲಿ ಹಿಂದುತ್ವ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ.

ವಿಸ್ತಾರ: 2014ರಿಂದ ಮೋದಿ ನಾಗಾಲೋಟ ತಡೆಯಲು ಯಾಕೆ ಸಾಧ್ಯವಾಗಿಲ್ಲ?
ರಾಹುಲ್​ ಗಾಂಧಿಯಂತಹ ನಾಯಕರು ಇರೋವರೆಗೂ ಮೋದಿ ಮತ್ತು ಬಿಜೆಪಿಗೆ ಸೋಲು ಇಲ್ಲ. ರಾಹುಲ್​ ಗೆ ತಮ್ಮದೇ ಆದ ಸಮಸ್ಯೆಗಳಿವೆ. ಅವರಿಗೆ ರಾಜಕೀಯ ಪ್ರಬುದ್ಧತೆ ಇಲ್ಲ. ಬಿಜೆಪಿಗೆ ಇರುವ ಏಕೈಕ ಪರ್ಯಾಯ ಶಕ್ತಿ ಆಪ್​​. ಹಾಗಾಗಿ ಕೇಜಿವ್ರಾಲ್​ ಅಂದ್ರೆ ಬಿಜೆಪಿಗೆ ಭಯ.

ವಿಸ್ತಾರ: ಜನರು ದುಡಿದು ತಿನ್ನೋದು ಬೇಡ್ವಾ? ಎಲ್ಲ ಫ್ರೀಯಾಗಿ ಕೊಟ್ಟರೆ ದೇಶದ ಆರ್ಥಿಕ ಪರಿಸ್ಥಿತಿ ಏನಾಗಬೇಕು?
ನಾವು ದೆಹಲಿ ಮತ್ತು ಪಂಜಾಬ್​ಲ್ಲಿ ಯಶಸ್ವಿಯಾಗಿಲ್ಲವೇ. ನಾವು ಕೊರತೆ ಬಜೆಟ್​ ಮಂಡನೆ ಮಾಡಿಲ್ಲ. ಜನರಿಗೆ ಶಿಕ್ಷಣ ಮತ್ತು ಆರೋಗ್ಯ ಉಚಿತವಾಗಿ ಕೊಡಬೇಕು. ಅದು ಒಂದು ಜನಪರ ಸರ್ಕಾರದ ಆಧ್ಯತೆ. ಜನರ ಹಣ ಜನರಿಗೆ ಖರ್ಚು ಮಾಡುವುದರಲ್ಲಿ ತಪ್ಪೇನಿದೆ? ಆ ವಿಚಾರದಲ್ಲಿ ರಾಜಕಾರಣಿಗಳಿಗೆ ನಿಯತ್ತು ಇರಬೇಕು.

ವಿಸ್ತಾರ: ಕಾಂಗ್ರೆಸ್​​, ಬಿಜೆಪಿ, ಜೆಡಿಎಸ್​ಗೆ ನಿಯತ್ತು ಇಲ್ವಾ?
ಇವರ್ಯಾರಿಗೂ ನಿಯತ್ತು ಇಲ್ಲ. ಡಾಲರ್ಸ್​ ಕಾಲೋನಿ, ಜೆ ಪಿ ನಗರಕ್ಕೆ ಹೋದ್ರೆ ಇವರದ್ದೇ ಆಸ್ತಿ. ಎಲ್ಲಿದೆ ನಿಯತ್ತು? ದುಡ್ಡು ಹೊಡೆಯುವುದೇ ಇವರ ಕೆಲಸ. ಆ ಕೆಲಸದಲ್ಲಿ ಮಾತ್ರ ಇವರಿಗೆ ನಿಯತ್ತು!

ವಿಸ್ತಾರ: ಸರ್ಕಾರಕ್ಕೆ ದಾಖಲೆ ಕೊಡಿ ಹಾಗಿದರೆ. ತನಿಖೆ ಮಾಡ್ತಾರೆ
ನಾನು ಯಾಕೆ ದಾಖಲೆ ಕೊಡಬೇಕು? ನಿಮ್ಮದೇ ಸರ್ಕಾರ ಇದೆ. ಎಲ್ಲ ದಾಖಲೆ ನಿಮಗೆ ಸಿಗುತ್ತೆ. ನಾವು ಆರ್​ಟಿಐ ಹಾಕಿದ್ರೆ ಮೂರು ತಿಂಗಳ ಬಳಿಕ ನಿಮ್ಮ ಪ್ರಶ್ನೆ ನಮಗೆ ಅರ್ಥ ಆಗಿಲ್ಲ ಅಂತ ಬೋಗಸ್​ ಉತ್ತರ ಕೊಡ್ತಾರೆ!

ವಿಸ್ತಾರ: ಅಧಿಕಾರಿಗಳು ರಾಜಕಾರಣಿಗಳಿಗೆ ಕಲೆಕ್ಷನ್ ಮಾಡಿ ಕೊಡಬೇಕು ಅಂತಾರೆ. ನೀವು ಅಧಿಕಾರಿಯಾಗಿದ್ದಗಲೂ ಕಲೆಕ್ಷನ್​​ ಮಾಡಿಕೊಟ್ಟಿದ್ರಾ?
ಎಲ್ಲ ಎಲೆಕ್ಷನ್​​ ಹಾಗೂ ಇನ್ನಿತರ ಸಂದರ್ಭಗಳಲ್ಲಿ ದುಡ್ಡು ಕಲೆಕ್ಷನ್​​ ಮಾಡಲು ಇಲಾಖೆಗಳಿಗೆ ಟಾಸ್ಕ್​ ಕೊಡ್ತಾರೆ. ಎಲ್ಲ ಅಧಿಕಾರಿಗಳೂ ಅದನ್ನು ಮಾಡಲೇಬೇಕು. ಇವರನ್ನು ನೋಡಿ ಸಾಕಾಗಿದೆ. ಬದಲಾವಣೆಗಾಗಿ ನಮಗೆ ವೋಟ್​ ಕೊಡಿ ಎಂದು ಕೇಳುತ್ತೇವೆ.

ವಿಸ್ತಾರ: ನಿಮ್ಮ ಪ್ರಣಾಳಿಕೆ ಏನು?
ರಾಜಕಾಲುವೆ ತೆರವು ಮಾಡಲು ಇವರಿಗೆ ತಾಕತ್ತು ಇಲ್ಲ. ಸರ್ಕಾರದ ಸ್ವತ್ತು ಇವರ ಸಪೋರ್ಟ್​ ಇಲ್ಲದೇ ಹೇಗೆ ಒತ್ತುವರಿ ಮಾಡಲು ಸಾಧ್ಯ? ನಾವು ಪಂಜಾಬ್​, ದೆಹಲಿಯಲ್ಲಿ ಸಾಬೀತು ಮಾಡಿದ್ದೇವೆ. ನಮಗೆ ಇಲ್ಲಿ ಅವಕಾಶ ಕೊಡಿ. ನಮ್ಮ ಗಟ್ಸ್​ ತೋರಿಸುತ್ತೇವೆ.

ವಿಸ್ತಾರ: ಭಾಸ್ಕರ್​ ರಾವ್​ ಅಷ್ಟೊಂದು ಶುದ್ಧರಾ?
ನಾನು 100ರಷ್ಟು ಶುದ್ಧ. ಇದರಲ್ಲಿ ಯಾವುದೇ ಸಂಶಯ ಬೇಡ. ನಮ್ಮ ಪಕ್ಷವೂ ಶುದ್ಧ. ಭ್ರಷ್ಟಾಚಾರ ಸಹಿಸುವುದಿಲ್ಲ. ಸರಿಯಾಗಿ ಕೆಲಸ ಮಾಡಿದ್ರೆ ನಮ್ಮ ರಾಜ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ರಾಜ್ಯವಾಗುತ್ತದೆ. ನಾನು ಕಮಿಷನ್​ ಮುಕ್ತ ಅಧಿಕಾರಿಯಾಗಿದ್ದೆ.

ವಿಸ್ತಾರ: ಆಪ್ ಯಾವ ಫೇಸ್​ ಇಟ್ಕೊಂಡು ಚುನಾವಣೆ ಎದುರಿಸುತ್ತದೆ?
ರಾಜ್ಯಕ್ಕೆ ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಕೊಡುಗೆ ಏನು? ಜೈಲಿಗೆ ಹೋಗಿ ಬಂದವರು, ಜೈಲಿಗೆ ಹೋಗಬೇಕಾದವರ ಜತೆ ನಮ್ಮನ್ನು ಹೋಲಿಸಬೇಡಿ. ನಾವು ದುಡ್ಡು, ತೋಳ್ಬಲದ ಮೇಲೆ ರಾಜಕೀಯ ಮಾಡಲ್ಲ. ಈಗಲೂ ಕಾಂಗ್ರೆಸ್​, ಬಿಜೆಪಿಯವರು ನನ್ನನ್ನು ಕರೆಯುತ್ತಿದ್ದಾರೆ. ನೀನೊಬ್ಬ ಮುರ್ಖ ಯಾಕೆ ಆ ಪಾರ್ಟಿಗೆ ಹೋಗ್ತೀಯಾ? ಬಾ ನಾವು ಮಂತ್ರಿ ಮಾಡ್ತೀವಿ ಅಂತ ಕರೆಯುತ್ತಿದ್ದಾರೆ. ಸಿದ್ದರಾಮಯ್ಯ ಸ್ವಚ್ಛ ಆಡಳಿತ ಕೊಡಲಿಲ್ಲ. ಯಡಿಯೂರಪ್ಪ ಬ್ರಾಂಡ್​ ಬೆಂಗಳೂರು ಮಾಡಲಿಲ್ಲ. ದೇವೇಗೌಡರ ಕೊಡುಗೆ ಏನೂ ಇಲ್ಲ. ಸಿಂಗಾಪುರ ಮತ್ತು ದುಬೈ ನೋಡಿ ಕಲಿಯಬೇಕು. ಇಂತಹ ರಾಜಕಾರಣಿಗಳು ಇನ್ನೂ ಮುಂದೆ ರಾಜಕಾರಣದಲ್ಲಿ ಇರಬಾರದು

ವಿಸ್ತಾರ: ಆಪ್ ಪಕ್ಷವು ಬಿಜೆಪಿಯ ಬಿ ಟೀಮ್​​ ಎಂಬ ಮಾತಿದೆ
ನಾವು ಯಾವ ಟೀಮೂ ಅಲ್ಲ. ನಮಗೆ ಇಬ್ಬರೂ ರಾಜಕೀಯ ವಿರೋಧಿಗಳೇ. ಆಡಳಿತದಲ್ಲಿ ವಿಶ್ವಾಸ ಗಳಿಸಿದ ರೀತಿಯಲ್ಲಿ ರಾಜಕೀಯವಾಗಿಯೂ ವಿಶ್ವಾಸ ಗಳಿಸುತ್ತೇವೆ. ಜನರು ಬದಲಾವಣೆ ಬಯಸಿದ್ದಾರೆ.

Exit mobile version