ಬೆಂಗಳೂರು: ರಾಜ್ಯದಲ್ಲಿ ವಿವಿಧ ಸಮುದಾಯಗಳು ಮೀಸಲಾತಿಗಾಗಿ ಆಗ್ರಹಿಸುತ್ತಿರುವಾಗಲೇ ಒಕ್ಕಲಿಗ ಸಮುದಾಯದ ಮುಖಂಡರು ಮೀಸಲಾತಿ ಹೋರಾಟಕ್ಕೆ ಚಾಲನೆ ನೀಡಿದ್ದು, ಸರ್ಕಾರಕ್ಕೆ ಜನವರಿ 23ರ ಗಡುವು ನೀಡಲಾಗಿದೆ.
ವಿಶ್ವೇಶ್ವರಪುರದಲ್ಲಿರುವ ಕುವೆಂಪು ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಒಕ್ಕಲಿಗ ಮಠಾಧೀಶರು, ವಿವಿಧ ಪಕ್ಷಗಳ ಒಕ್ಕಲಿಗ ಮುಖಂಡರು ಮಾತನಾಡಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ನೀಡಲು ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು ಎಂದು ಕರೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ನಂಜಾವಧೂತ ಸ್ವಾಮೀಜಿ, 1993ರಲ್ಲಿ ಧ್ವನಿ ಎತ್ತದೇ ಹೋಗಿದ್ದರೆ ಎಲ್ಲರೂ ಜನರಲ್ ಮೆರಿಟ್ ಗೆ ಸೇರಿಬಿಡುತ್ತಿದ್ದೆವು. ದೇವೇಗೌಡರು, ಬಾಲಗಂಗಾಧರನಾಥ ಸ್ವಾಮೀಜಿಯವರಿಂದ ಮೀಸಲಾತಿ ಉಳಿಯಿತು. ಒಕ್ಕಲಿಗ ಸಮಾಜ ಎಲ್ಲರಿಗೂ ಹಂಚಿ, ಉಳಿದಿದ್ದನ್ನ ಹಂಚಿಕೊಳ್ಳುವ ಸಮುದಾಯ.
ಯಾರಿಗೆ ಮೀಸಲಾತಿ ಅವಶ್ಯಕತೆಯಿದೆ, ಸಂವಿಧಾನದಲ್ಲಿ ಅವಕಾಶಯಿದೆ ಅದನ್ನ ಕೊಡಬೇಕು. 4 ಪರ್ಸೆಂಟ್ ನಲ್ಲೂ ನಮಗೆ ಸಿಗೋದು ಒಂದೂವರೆ ಪರ್ಸೆಂಟ್ ಮೀಸಲಾತಿ. ವೇದಿಕೆ ಮೇಲಿರುವವರನ್ನ ಇಲ್ಲಿ ಕೂರಿಸಿದ ಕಟ್ಟಕಡೆಯ ಒಕ್ಕಲಿಗರಿಗೆ ಮೀಸಲಾತಿ ಬೇಕಿದೆ. ದೇವೇಗೌಡರು ನಾವು ತಬ್ಬಲಿ ಮಕ್ಕಳು ಎನ್ನುತ್ತಿದ್ದರು. ಈಗ ಶೋಷಿತ ಸಮುದಾಯಗಳಿಗೆ ಮೀಸಲಾತಿ ಕೊಟ್ಟಿದ್ದೀರಿ ,ಕೊಡಿ. ಆದರೆ ನಮ್ಮ ಸಮುದಾಯಕ್ಕೂ ಸಿಗಬೇಕಾದ ಮೀಸಲಾತಿ ಕೊಡಿ ಎಂದರು.
ಒಕ್ಕಲಿಗರಿಗೆ ಎಲ್ಲವನ್ನೂ ದಾಟುವಂತಹ ಶಕ್ತಿ ಇದೆ. ಒಬಿಸಿ ಪಟ್ಟಿಗೆ ಸೇರಿಸುವುದು, ನಗರ ಪ್ರದೇಶದಲ್ಲಿರುವ ದುರ್ಬಲರನ್ನ ಒಬಿಸಿ ಪಟ್ಟಿಗೆ ಸೇರಿಸಬೇಕು, 4 ಪರ್ಸೆಂಟ್ ಇರೋ ಮೀಸಲಾತಿಯನ್ನ 12 ಪರ್ಸೆಂಟ್ ಗೆ ಹೆಚ್ಚಿಸಬೇಕು. ಜನವರಿ 23 ಕ್ಕೆ ಹೋರಾಟ ನಡೆಸಲು ನಿರ್ಧಾರ ಮಾಡಿದ್ದೇವೆ. ಸಿಕ್ಕಂತಹ ಕಡಿಮೆ ಅವಕಾಶದಲ್ಲಿ ಎಲ್ಲರೂ ಅವಕಾಶ ಬಳಸಿಕೊಂಡಿದ್ದಾರೆ.
ಅಶೋಕ್ ಹಲವು ಪ್ರಶಸ್ತಿಗಳನ್ನು ರಾಜ್ಯಕ್ಕೆ ತಂದಿದ್ದಾರೆ. ಡಿ.ಕೆ.ಶಿವಕುಮಾರ್ ಇಂಧನದ ಬೇಡಿಕೆ ನೀಗಿಸಿದ್ದಾರೆ. ಕುಮಾರಸ್ವಾಮಿ ಜನರ ಸಾಲವನ್ನ ಮನ್ನ ಮಾಡಿದ್ದಾರೆ. ಮೀಸಲಾತಿ ನಿಗದಿಗೆ ಜನವರಿ 23 ರವರೆಗೆ ಡೆಡ್ ಲೈನ್ ನೀಡುತ್ತಿದ್ದೇವೆ. ಒಳ್ಳೆಯ ನಿರ್ಧಾರ ತೆಗೆದುಕೊಂಡರೆ ವಿಜಯೋತ್ಸವ. ಇಲ್ಲದೇ ಹೋದರೆ ಹೋರಾಟ ಖಂಡಿತ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇದಕ್ಕೂ ಮುನ್ನ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಹಲವು ಸಭೆಗಳನ್ನು ನಡೆಸಿ ಈ ಸಭೆ ನಡೆಸಲು ಸೇರಿದ್ದೇವೆ. ಜತೆಗೂಡಿ ಚರ್ಚಿಸುವುದು ಯಶಸ್ಸು. ನಮ್ಮಲ್ಲಿರುವ ಪಕ್ಷಭೇದಗಳ ಮರೆತು ಹೋರಾಟ ಮಾಡಿದರೆ ಯಶಸ್ಸು ಸಾಧ್ಯ. ಯಾರ ಹಕ್ಕನ್ನೂ ಕಿತ್ತುಕೊಳ್ಳಲು ಸಭೆ ಸೇರಿಲ್ಲ. ಯಾರು ಯಾವ ಜಾತಿ ಎಂದು ಕೇಳಿಕೊಂಡು ಹುಟ್ಟಿಲ್ಲ. ಹುಟ್ಟಿದಾಗ ಉಸಿರು ಬಂತು, ಹೆಸರಿರಲಿಲ್ಲ. ಸಾಯುವಾಗ ಹೆಸರಿರುತ್ತೆ, ಉಸಿರಿರಲ್ಲ.
ವಿಶ್ವಮಾನವ ತತ್ವ ಅಳವಡಿಸಲು ಸಾಧ್ಯವಾಗಿಲ್ಲ. ಇಲ್ಲಿ ಯಾರಾಕು ಕೂತಿದ್ದೇವೆ ಅವರನ್ನ ಒಕ್ಕಲಿಗರು ಅಂತಾ ಕೂರಿಸಿದ್ದಾರೆ. ಇಲ್ಲಿ ಕೂತಿರುವ ನಾಯಕ, ಗಂಡಸು, ಲೀಡರ್ ಎಲ್ಲರೂ ಒಕ್ಕಲಿಗರ ಪ್ರತಿನಿಧಿಗಳು. ನಮ್ಮ ಸಮಾಜದ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಕೊಡಲಿ. ಉಳಿ ಪೆಟ್ಟು ಬೀಳದೆ ಶಿಲೆ ಕಲ್ಲಾಗಲ್ಲ, ನೇಗಿಲು ಉಳದೇ ಬೆಳೆ ಬೆಳೆಯಲ್ಲ. ಒಕ್ಕಲಿಗ ಅನ್ನೋ ಪಟ್ಟವನ್ನ ಹಿರಿಯರು ಕೊಟ್ಟಿದ್ದಾರೆ ಅದನ್ನ ಉಳಿಸಿಕೊಳ್ಳಬೇಕು.
ಬೇರೆ ಬೇರೆ ಸಮಾಜದವರು ಹೋರಾಟ ಮಾಡ್ತಿದ್ದಾರೆ. ಅದಕ್ಕೆ ನಮ್ಮ ತಕರಾರಿಲ್ಲ, ನಾವು ಹೋರಾಡೋಣ. ದೀಪವನ್ನ ಹಚ್ಚಿದ್ದೇವೆ.ಬೆಳಕು ಕಾಣ್ತಿದೆ. ಎಣ್ಣೆ, ಬತ್ತಿ ಕಾಣುತ್ತಿಲ್ಲ. ಆ ಎಣ್ಣೆ, ಬತ್ತಿ ನೀವುಗಳಾಗಬೇಕು. ಆ ಬೆಳಕನ್ನು , ಅಧಿಕಾರವನ್ನು ನೀವು ಸ್ವಾಗತಿಸಬೇಕು. ಅಧಿಕಾರ ಕೊಡೋದು, ಬಿಡೋದು ನಮ್ಮ ಜನಾಂಗದ ಕೈಲಿದೆ. ಜೈಲಿಗೆ ಹೋದಾಗ ನನ್ನ ಬೆಂಬಲಕ್ಕೆ ನಿಂತಿದ್ದೀರಾ..ನಿಮ್ಮ ಋಣವನ್ನು ತೀರಿಸಬೇಕು ಎಂದರು.
ಹಳ್ಳಿ ಹಳ್ಳಿಗೂ ತಿರುಗಿ ಜನರಿಗೆ ಜಾಗೃತಿ ಕೊಡಬೇಕು ಎಂದ ಶಿವಕುಮಾರ್, ನನ್ನನ್ನು ನಿಮ್ಮ ಮುಂದೆ ಆದರೂ ಸೇರಿಸಿ, ಹಿಂದೆ ಆದರೂ ಸೇರಿಸಿ, ಮಧ್ಯವಾದರೂ ಹಾಕಿಕೊಳ್ಳಿ. ಆದರೆ ಹೋರಾಟದ ದೀಪ ಉರಿಯುತ್ತಿರಬೇಕು. ಪೆನ್ನು, ಪೇಪರ್ ಕೊಡಿ, ಅವಕಾಶ ಸಿಕ್ಕಿದೆ ಬಳಸಿಕೊಳ್ಳಿ. ಎಲ್ಲರೂ ಒಂದಾಗಿ ಹೋರಾಟವನ್ನು ನಡೆಸೋಣ. ಎಲ್ಲ ರೀತಿಯ ಹೋರಾಟಕ್ಕೆ ಜತೆಯಾಗಿರುತ್ತೇನೆ ಎಂದರು.
ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಮಾತನಾಡಿ, ಆಡಿಟರ್ ನಾಗರಾಜು ಹೋರಾಟವನ್ನು ಮಾಡುತ್ತಿದ್ದಾರೆ. ದೇವೇಗೌಡರೇ ಮೊದಲ ಬಾರಿಗೆ ಮೀಸಲಾತಿ ತಂದವರು. ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಉತ್ತಮ. ನಮ್ಮ ಸಮುದಾಯದಲ್ಲೂ 80 ಪರ್ಸೆಂಟ್ ಜನರು ಬಡವರು. ಈಗಾಗಲೇ ಯಾರಿಗೂ ಗೊತ್ತಿಲ್ಲದಂತೆ ಬ್ರಾಹ್ಮಣರಿಗೆ 10 ಪರ್ಸೆಂಟ್ ಮೀಸಲಾತಿ ಮಾಡಿದ್ದಾರೆ. ಜನಸಂಖ್ಯೆ ಕಡಿಮೆ ಇರೋವರಿಗೆ ಮೀಸಲಾತಿ ಕೊಟ್ಟಿದ್ದಾರೆ. ನಾವು ಹೋರಾಟ ಮಾಡಿದರೆ ಮಾತ್ರ ಯಶಸ್ಸು ಸಾಧ್ಯ. ಎಲ್ಲ ರೀತಿಯ ಹೋರಾಟಕ್ಕೂ ನಾವು ಬೆಂಬಲ ನೀಡುತ್ತೇವೆ ಎಂದರು.
ಒಕ್ಕಲಿಗರ ಸಂಘದ ಅಧ್ಯಕ್ಷ ಬಾಲಕೃಷ್ಣ ಮಾತನಾಡಿ, ಈಗಾಗಲೇ ಸರ್ಕಾರಕ್ಕೆ ನಮ್ಮ ಮನವಿ ಬಗ್ಗೆ ಎಚ್ಚರಿಸಿದ್ದೇವೆ. ಎಸ್.ಟಿ ಸಮುದಾಯ ಮೀಸಲಾತಿ ಹೆಚ್ಚಳ ನಿರ್ಧಾರ ಸ್ವಾಗತಾರ್ಹ. ನಮ್ಮ ಮುಂದಿನ ಪೀಳಿಗೆಗಾಗಿ ನಾವು ತೆಗೆದುಕೊಳ್ಳುವ ನಿರ್ಧಾರ ಮಹತ್ವವಾದದ್ದು. ಜನಾಂಗದ ಹಿತದೃಷ್ಟಿಯಿಂದ ಮೀಸಲಾತಿ ಹೆಚ್ಚಳ ಅವಶ್ಯಕ ಎಂದರು.
ಕೇಂದ್ರದ ಮಾಜಿ ಸಚಿವ ಸದಾನಂದಗೌಡ ಮಾತನಾಡಿ, ನಾನು ಆಡಳಿತ ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿದ್ದೇನೆ. ಎಲ್ಲ ವಿಚಾರವನ್ನೂ ಎಲ್ಲಾ ಕಡೆ ಪ್ರಸ್ತಾಪ ಮಾಡಲ್ಲ, ಎಲ್ಲಿ ಮಾತಾಡಬೇಕು ಅಲ್ಲಿ ಮಾತನಾಡುತ್ತೇನೆ. ಬಾಲಗಂಗಾಧರ ಶ್ರೀಗಳ ಬಳಿಕ ನಮ್ಮ ಸಮುದಾಯ ಒಗ್ಗಟ್ಟು ಕಡಿಮೆ ಅನ್ನಿಸುತ್ತಿದೆ. ನಾವೆಲ್ಲರೂ ಒಗ್ಗಟ್ಟಾಗಬೇಕಿದೆ. 9ನೇ ತಾರೀಖಿಗೆ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವ ಪ್ರಯತ್ನ ಮಾಡುತ್ತೇನೆ. ಮೀಸಲಾತಿ ಪಟ್ಟಿಯಲ್ಲಿದ್ದ ನಾವು ಇದೀಗ ವಂಚಿತರಾಗಿದ್ದೇವೆ ಎಂದರು.
ಎಸ್ ಸಿ, ಎಸ್ ಟಿ ವಿಚಾರದಲ್ಲಿ ಜನಸಂಖ್ಯೆ ಆಧಾರದಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಇತ್ತೀಚಿಗೆ ಬಂದ ಕಾಂತರಾಜು ವರದಿಯನ್ನು ತಿರುಚುವ ಕೆಲಸವಾಗಿದೆ. ಸ್ವಾಮೀಜಿಗಳ ನಿರ್ದೇಶನದಂತೆ ಯಾವುದೇ ಕಾರ್ಯಕ್ರಮಕ್ಕೆ ಸಿದ್ಧ. ಚಿನ್ನಪ್ಪರೆಡ್ಡಿ ಆಯೋಗದ ಸಮಯದಲ್ಲಿ ಆದಂತ ಹೋರಾಟಕ್ಕೂ ತಯಾರಿದ್ದೇವೆ ಎಂದರು.
ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಗಾನ ಶ್ರೀಕಂಠಯ್ಯ ಮಾತನಾಡಿ, ನಮ್ಮ ಹೋರಾಟ ಇಂದು ನಿನ್ನೆಯ ಹೋರಾಟವಲ್ಲ. ಶಿಕ್ಷಣ, ಉದ್ಯೋಗ, ರಾಜಕೀಯ ಕ್ಷೇತ್ರಗಳಲ್ಲಿ ಮೀಸಲಾತಿ ಅವಶ್ಯಕ. ಒಕ್ಕಲಿಗರು 12 ಪರ್ಸೆಂಟ್‌ಗಿಂತ ಹೆಚ್ಚಾಗಿದ್ದೇವೆ. ವಿವಿಧ ಉಪಜಾತಿಗಳು ಸೇರೆ ಹೆಚ್ಚು ಜನರಾಗುತ್ತೇವೆ. 21 ಪರ್ಸೆಂಟ್ ಜನರಿಗೆ ಕೊಟ್ಟಿರುವ ಮೀಸಲಾತಿ ಸಾಕಾಗಲ್ಲ. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಅಗತ್ಯ. ನಮ್ಮದು ಪಕ್ಷಾತೀತವಾದ ಹೋರಾಟ. ಎಲ್ಲರೂ ಮೀಸಲಾತಿಯ ಹೋರಾಟಕ್ಕೆ ಮುಂದಾಗಬೇಕು ಎಂದರು.
ಸಭೆಯಲ್ಲಿ ಗದ್ದಲದ ವಾತಾವರಣ
ಆದಿಚುಂಚನಗಿರಿ ಮಠದ ಕುರಿತು ನಿವೃತ್ತ ಉಪನ್ಯಾಸಕ ಜಯರಾಂ ಕಿಲಾರ ಅವರ ಮಾತಿನ ನಂತರ ಕೆಲಕಾಲ ಸಭೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ದೇವರಾಜು ಅರಸು ಅವರ ಮೀಸಲಾತಿಯ ಫಲಾನುಭವಿ ನಾನು. ಆಗ ಹಾವನೂರು ಆಯೋಗದಲ್ಲಿ 18 ಪರ್ಸೆಂಟ್ ಮೀಸಲಾತಿ ಇತ್ತು. ವೆಂಕಟಸ್ವಾಮಿ ಆಯೋಗದಲ್ಲಿ ಒಕ್ಕಲಿಗರೂ, ಮುಂದುವರಿದವರು ಮೀಸಲಾತಿ ಬೇಡ ಎಂದರು. ಚಿನ್ನಪ್ಪರೆಡ್ಡಿ ಆಯೋಗದಲ್ಲಿ, ವೆಂಕಟಸ್ವಾಮಿ ಆಯೋಗದ ಬಗ್ಗೆ ಚರ್ಚೆ ನಡೀತು. ಆಗಿನ ಹೋರಾಟದಲ್ಲಿ ಸರ್ಕಾರ ಹೆದರಲಿಲ್ಲ.
73 ಪರ್ಸೆಂಟ್ ಮೀಸಲಾತಿ ನೀಡಿ, ಒಕ್ಕಲಿಗರಿಗೆ 11 ಪರ್ಸೆಂಟ್ ನೀಡಿದರು. ಸುಪ್ರೀಂಕೋರ್ಟ್ 50 ಪರ್ಸೆಂಟ್ ಮೀರಬಾರದು ಅಂತಾ ಆದೇಶ ನೀಡಿತ್ತು. ಆಗ ಯಾವ ಮಹಾತ್ಮರೂ ಪ್ರಶ್ನೆ ಮಾಡಲಿಲ್ಲ. ಆದಿಚುಂಚನಗಿರಿ, ಒಕ್ಕಲಿಗರು, ಯಾವ ಸಮುದಾಯವೂ ಮಾತಾಡಲಿಲ್ಲ ಎಂದರು.
ಈ ಸಂದರ್ಭದಲ್ಲಿ ಸಭೆಯಲ್ಲಿದ್ದವರು ಆಕ್ಷೇಪ ವ್ಯಕ್ತಪಡಿಸಿದರು. ಮಠದ ಕುರಿತು ಮಾಥನಾಡಬಾರದು ಎಂದರು. ಒಕ್ಕಲಿಗರ ಸಂಘದ ಅಧ್ಯಕ್ಷ ಬಾಲಕೃಷ್ಣ ಮಧ್ಯಪ್ರವೇಶಿಸಿ, ಆ ರೀತಿ ಮಾತನಾಡಬಾರದು ಎಂದರು. ನಂತರ ಜಯರಾಂ ಮಾತು ಮುಂದುವರಿಸಿದರು.
ಇದನ್ನೂ ಓದಿ | Panchamasali Reservation | ಬೊಮ್ಮಾಯಿ ಸರ್ಕಾರ 2A ಮೀಸಲಾತಿ ನೀಡುತ್ತದೆ ಎಂಬ ವಿಶ್ವಾಸವಿದೆ: ವಚನಾನಂದ ಸ್ವಾಮೀಜಿ