ಬೆಂಗಳೂರು: ಒಕ್ಕಲಿಗ ಮೀಸಲಾತಿ ಹೆಚ್ಚಳ ಮಾಡಬೇಕು ಎಂಬ ಹೋರಾಟಕ್ಕೆ ವೇಗ ದೊರೆತಿದ್ದು, ಸಚಿವ ಆರ್. ಅಶೋಕ್ ಮೂಲಕ ರಾಜ್ಯ ಸರ್ಕಾರಕ್ಕೆ ಸಮುದಾಯದ ಮನವಿಯನ್ನು ನೀಡಲಾಗಿದೆ. ವಿಶ್ವೇಶ್ವರ ಪುರದಲ್ಲಿರುವ ರಾಜ್ಯ ಒಕ್ಕಲಿಗರ ಸಂಘದ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿದರು.
ಈ ಸಭೆಗಿಂತ ಮೊದಲು ಕೂಡ ಹಲವು ಬಾರಿ ಸಭೆಗಳಾಗಿವೆ. ಸನ್ಯಾಸಿಗಳಿಗೆ ರಾಜಕೀಯ ಬೇಡ, ಜನಾಂಗ, ಸಮುದಾಯ ಬಿಟ್ಟು ಬದುಕಲು ಆಗುವುದಿಲ್ಲ. ವಿಶ್ವಮಾನ ಸಂದೇಶದ ಅವಶ್ಯಕತೆ ಇಲ್ಲ, ಅದನ್ನು ಹೇಳಿದ ಕುವೆಂಪು ಅವರು ಕೂಡ ಒಕ್ಕಲಿಗ ಸಮಾಜದವರೇ. ಗ್ರಾಮೀಣ ಭಾಗ ಮಾತ್ರವಲ್ಲ, ನಗರದ ಒಕ್ಕಲಿಗರಿಗೂ ಮೀಸಲಾತಿ ಬೇಕು. ಮುಂದಿನ 25 ವರ್ಷಗಳಲ್ಲಿ ಜಮೀನು ಕಳೆದುಕೊಂಡವರು ಎಲ್ಲಿ ಹೋಗಬೇಕು?
ಇದರ ಬಗ್ಗೆ ಸಮುದಾಯದ ಎಲ್ಲ ಜನರೂ ಎಚ್ಚೆತ್ತುಕೊಳ್ಳಬೇಕು. ಸಂವಿಧಾನದಲ್ಲಿರುವಂತೆಯೇ ನಮ್ಮ ಮೀಸಲಾತಿ ನಮಗೆ ಬೇಕಿದೆ. 19-20 ಪರ್ಸೆಂಟ್ ಜನಸಂಖ್ಯೆಗೆ ಕೇವಲ 4 ಪರ್ಸೆಂಟ್ ಮೀಸಲಾತಿ ಇದೆ. ಬಣಜಿಗ, ರೆಡ್ಡಿ ಹೀಗೆ ಹಲವು ಸಮುದಾಯ ಸೇರಿದರೆ ಜನಸಂಖ್ಯೆ ಹೆಚ್ಚಾಗುತ್ತದೆ ಎಂದರು.
ಮುಂದಿನ ದಿನಗಳ ರೂಪರೇಷೆಗಳ ಬಗ್ಗೆ ಈಗಾಗಲೇ ನಿರ್ಧಾರ ಮಾಡಿದ್ದೇವೆ ಎಂದರು.ಆರ್. ಅಶೋಕ್ ಮೂಲಕ ಸರ್ಕಾರಕ್ಕೆ ನಮ್ಮ ಮನವಿಗಳನ್ನು ಸಲ್ಲಿಸುತ್ತೇವೆ ಎಂದ ಸ್ವಾಮೀಜಿ, ಸರ್ಕಾರ ಆದಷ್ಟು ಬೇಗ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ಕುಮಾರಸ್ವಾಮಿಯವರು ಪಂಚರತ್ನ ಯಾತ್ರೆ ಮಾಡುತ್ತಿರುವುದರಿಂದ ಬಂದಿಲ್ಲ. ದೇವೇಗೌಡರಿಗೆ ಆರೋಗ್ಯ ಸಮಸ್ಯೆ ಇರೋದರಿಂದ ಸಭೆಗೆ ಬಂದಿಲ್ಲ. ಸಮುದಾಯದ ನಿರ್ಧಾರಗಳಿಗೆ ಒಪ್ಪಿಗೆ ಇದೆ ಎಂದು ದೇವೇಗೌಡರು ಹೇಳಿದ್ದಾರೆ. ಅಶೋಕ್ ಅವರು ಒಕ್ಕಲಿಗ ಸಮುದಾಯದ ಮನವಿಯನ್ನು ಸರ್ಕಾರಕ್ಕೆ ಮುಟ್ಟಿಸಬೇಕು ಎಂದರು.
ಜನವರಿ 23ಕ್ಕೆ ಬಾಲಗಂಗಾಧರಸ್ವಾಮಿಗಳನ್ನು ಸ್ಮರಿಸಲಾಗುತ್ತದೆ, ಅಲ್ಲಿಯವರೆಗೆ ಸರ್ಕಾರ ಸಿಹಿ ಸುದ್ದಿ ಕೊಡಬೇಕು. ಮೀಸಲಾತಿ ಸಿಗದಿದ್ದರೆ ಹೋರಾಟ ನಡೆಯುವುದು ಖಂಡಿತ ಎಂದು ಎಚ್ಚರಿಕೆಯನ್ನೂ ನೀಡಿದರು.
ಮನವಿ ಸ್ವೀಕರಿಸಿದ ನಂತರ ಮಾತನಾಡಿದ ಸಚಿವ ಆರ್. ಅಶೋಕ್, ಒಕ್ಕಲಿಗ ಸಮುದಾಯಕ್ಕೆ 4 ಪರ್ಸೆಂಟ್ ಮೀಸಲಾತಿ ಇದೆ. ನಿಖರವಾಗಿ ಸಮುದಾಯದ ಜನಸಂಖ್ಯೆ ಜಾತಿ ಸಮೀಕ್ಷೆಯಿಂದ ತಿಳಿಯಬೇಕಿತ್ತು. ಕೆಲವು ಕಾರಣಗಳಿಂದ ಜಾತಿ ಸಮೀಕ್ಷೆ ನಿಂತು ಹೋಗಿದೆ.
ಕಲಬುರಗಿಯಲ್ಲಿ ಒಕ್ಕಲಿಗರು ನಮ್ಮನ್ನು ಸಮುದಾಯಕ್ಕೆ ಸೇರಿಸಿ ಎಂದು ಹೋರಾಟ ಮಾಡಿದ್ದಾರೆ. ಕೆಲವರು ಸಮುದಾಯ ಒಟ್ಟಾದರೆ ತೊಂದರೆ ಎಂದು ತುಳಿಯುವ ಕೆಲಸ ಮಾಡಿದ್ದಾರೆ. ಮೂವರು ಗುರುಗಳು ಹೋರಾಟಕ್ಕೆ ಬೆಂಬಲವಾಗಿದ್ದಾರೆ. ಬಾಲಗಂಗಾಧರನಾಥ ಸ್ವಾಮೀಜಿಗಳು ಇಲ್ಲದಿದ್ದರೆ ಸಮುದಾಯ ಹರಿದು ಹಂಚಿಹೋಗುತ್ತಿತ್ತು. ಯಾರೂ ಕೂಡ ಶ್ರೀಗಳ ಮೇಲೆ ಇಟ್ಟ ನಂಬಿಕೆ ಕಳೆದುಕೊಳ್ಳಬಾರದು.
ನಾನು ಇವತ್ತು ಎರಡು ಪಾತ್ರದಲ್ಲಿ ಈ ಸಭೆಗೆ ಬಂದಿದ್ದೇನೆ. ಜಾತಿ ಇಲ್ಲ ಎಂದು ಎಲ್ಲರೂ ಭಾಷಣದಲ್ಲಿ ಹೇಳುತ್ತಾರೆ. ಆದರೆ ಯಾರೂ ಕೂಡ ಜಾತಿ ಇಲ್ಲದೇ ಬದುಕಿಲ್ಲ. ನಮ್ಮವರು ಆಡಳಿತದಲ್ಲಿ ಇದ್ದಾಗಲೇ ಹೋರಾಟಕ್ಕೆ ಎದ್ದಿದ್ದೇವೆ. ನಾನು, ಸುಧಾಕರ್, ಗೋಪಾಲಯ್ಯ, ಡಿಕೆಶಿ, ಎಲ್ಲರೂ ಸಮುದಾಯದವರಾಗಿ ಇದ್ದೀವೆ. ಕುರುಬ ಮೀಸಲಾತಿ ಹೋರಾಟದಲ್ಲೂ ಎಲ್ಲರೂ ಸ್ವಾಮೀಜಿಗೆ ವಿರುದ್ಧವಾಗಿ ಮಾತಾಡಿರಲಿಲ್ಲ. ಪ್ರಪಂಚದಲ್ಲಿ ನಮ್ಮ ಸಮುದಾಯದ ಜನರು ಎಲ್ಲೆಡೆ ಬೆಳೆಯುತ್ತಿದ್ದೇವೆ. ಬ್ಯಾರಿಕೇಡ್ ದಾಟಿ ಆಚೆ ಹೋದರೆ ಮಾತ್ರ ಬೆಳೆಯಲು ಆಗುತ್ತದೆ.
ನಮ್ಮ ಜನಾಂಗ ಒಗ್ಗಟ್ಟಾಗಿ ಇದೆ, ಲೀಡರ್ ಗಳು ಸಮುದಾಯಕ್ಕಾಗಿ ಒಂದಾಗಬೇಕು.ಪಕ್ಷ, ರಾಜಕೀಯ ಬಂದಾಗ ಬೇರೆಯಾಗೋಣ. ಆದರೆ ಸಮುದಾಯದ ವಿಚಾರದಲ್ಲಿ ಎಲ್ಲ ಒಗ್ಗೂಡಬೇಕು. ಮೀಸಲಾತಿಯ ಅಡೆತಡೆಗಳ ಬಗ್ಗೆ ತಜ್ಞರ ಜತೆ ಚರ್ಚಿಸುತ್ತೇವೆ. ಸರ್ಕಾರದ ಪರವಾಗಿ ಈ ಹಕ್ಕೊತ್ತಾಯವನ್ನು ಸರ್ಕಾರದ ಗಮನಕ್ಕೆ ತರುತ್ತೇನೆ. ಮೀಸಲಾತಿಗೆ ಸಮುದಾಯದ ಪರ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಕೆಂಪೇಗೌಡರ ಜಯಂತಿ ಬೀದಿ ಬೀದಿಯಲ್ಲೂ ಆಗುವಂತೆ ಮಾಡಬೇಕು. ವಿಧಾನಸೌಧದ ಮುಂದೆ ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೂ ಚಿಂತಿಸುತ್ತಿದ್ದೇವೆ ಎಂದರು.
ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮಾತನಾಡಿ, ಅಶೋಕಣ್ಣ ಮಾತಾಡಿದ ಮೇಲೆ ಅದು ಸರ್ಕಾರದ ಮಾತಾಗಿರುತ್ತದೆ. ತಡವಾಗಿಯಾದರೂ ಹೋರಾಟಕ್ಕೆ ಬಂದಿರುವುದಕ್ಕೆ ಅಭಿನಂದನೆಗಳು. ನಮ್ಮ ಸಿಎಂ ಬೊಮ್ಮಾಯಿಯವರು, ನಮ್ಮ ಸರ್ಕಾರ ನ್ಯಾಯಯುತವಾದ ಮೀಸಲಾತಿ ಕೊಡುತ್ತೇವೆ. ಅನ್ನದಾತನಿಗೆ ಅನ್ಯಾಯವಾದರೆ ಯಾರೂ ಉಳಿಯಲು ಸಾಧ್ಯವಿಲ್ಲ. ಈ ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು.
ನ್ಯಾಯಸಮ್ಮತವಾದ ಮೀಸಲಾತಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ. ಗಡುವು ನೀಡಿರುವ ಬಗ್ಗೆ ಧಾರಾಳತನ, ಹೃದಯ ಶ್ರೀಮಂತಿಕೆ ಇರಲಿ. ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಿ ಶಕ್ತಿ ಪಡೆಯೋಣ. ಒಕ್ಕಲಿಗರು ನಾಟಿಕೋಳಿ ಮಾಡಿದಾಗ ಮಾತ್ರ ನೆಂಟರಾಗುತ್ತೇವೆ. ಹಾಗೆ ಆಗುವುದು ಬೇಡ, ಎಲ್ಲರೂ ಒಂದಾಗೋಣ ಎಂದರು.
ಇದನ್ನೂ ಓದಿ | ಒಕ್ಕಲಿಗ ಮೀಸಲಾತಿ: ಸರ್ಕಾರಕ್ಕೆ ಜನವರಿ 23 ಗಡುವು: ಚುನಾವಣೆ ಹೊಸ್ತಿಲಲ್ಲಿ ಮತ್ತೊಂದು ಸವಾಲು