ಬೆಂಗಳೂರು: ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹ(Voter Data) ಪ್ರಕರಣದಲ್ಲಿ ಕೇಂದ್ರ ಚುನಾವಣಾ ಆಯೋಗ ಪರಿಶಿಲನೆ ನಡೆಸಿರುವಂತೆಯೇ ಎಸ್‌ಡಿಪಿಐ ಹಾಗೂ ಆಮ್ ಆದ್ಮಿ ಪಕ್ಷಗಳೂ ಚುನಾವಣಾ ಆಯೋಗಕ್ಕೆ ದೂರು ನೀಡಿ ತನಿಖೆಗೆ ಒತ್ತಾಯಿಸಿವೆ.
ಚುನಾವಣಾ ಆಯುಕ್ತರಿಗೆ ದೂರು ನೀಡಿದ ನಂತರ ಮಾತನಾಡಿದ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ಪ್ರಸಾದ್, ಹೆಚ್ಚಾಗಿ ದಲಿತ, ಅಲ್ಪಸಂಖ್ಯಾತ ಮತದಾರರ ಹೆಸರನ್ನು ಡಿಲೀಟ್ ಮಾಡಲಾಗಿದೆ. ಚಿಲುಮೆ ಸಂಸ್ಥೆಯೊಂದೇ ಈ ಕೃತ್ಯದಲ್ಲಿ ಭಾಗಿಯಾಗಿಲ್ಲ, ಸರ್ಕಾರದ ಹಲವರು ಭಾಗಿಯಾಗಿದ್ದಾರೆ.
ಸಚಿವ ಅಶ್ವತ್ಥನಾರಾಯಣ್, ಶಾಸಕ ಸತೀಶ್ ರೆಡ್ಡಿ ಕೈವಾಡ ಕೂಡ ಇದೆ. ಶಾಸಕ ಸತೀಶ್ ರೆಡ್ಡಿ ಕಚೇರಿಯಲ್ಲೇ ಮತದಾರರ ಪಟ್ಟಿ ಡಿಲೀಟ್‌ಗೆ ಟ್ರೈನಿಂಗ್ ನೀಡಲಾಗಿದೆ. ಮತದಾರರ ಪಟ್ಟಿ ಡಿಲೀಟ್ ಪ್ರಕರಣಕ್ಕೆ ಸರ್ಕಾರವೇ ನೇರ ಹೊಣೆ. ಎಲ್ಲರ ಬಗ್ಗೆಯೂ ಸಂಪೂರ್ಣವಾಗಿ ತನಿಖೆಯಾಗಬೇಕು. ಸಚಿವ ಅಶ್ವತ್ಥನಾರಾಯಣ್, ಶಾಸಕ ಸತೀಶ್ ರೆಡ್ಡಿ ಭಾಗಿಯಾಗಿರುವ ಬಗ್ಗೆ ನಮ್ಮ ಬಳಿ ದಾಖಲೆ ಇದೆ. ಸರಿಯಾಗಿ ತನಿಖೆ ನಡೆಸಿದರೆ ದಾಖಲೆಗಳನ್ನು ನೀಡಲು ಸಿದ್ಧರಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ | Voter Data | BBMPಯಿಂದ ಮೂವರು ಅಧಿಕಾರಿಗಳ ಸಸ್ಪೆಂಡ್; 28 ಅಧಿಕಾರಿಗಳಿಗೆ ಪೊಲೀಸ್ ನೋಟಿಸ್
ಚುನಾವಣಾ ಆಯುಕ್ತರನ್ನು ಭೇಟಿ ಮಾಡಿದ ಆಮ್ ಆದ್ಮಿ ಪಕ್ಷದ ಬ್ರಿಜೇಶ್ ಕಾಳಪ್ಪ, ಕೆ. ಮಥಾಯಿ ಹಾಗೂ ಆನೇಕಲ್ ದೊಡ್ಡಯ್ಯ ಅವರ ತಂಡ, ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹ ಮಾಡಿರುವುದರ ಕುರಿತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಸಮಿತಿಯಿಂದ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಇದು ಅತ್ಯಂತ ಗಂಭೀರ ಆರೋಪವಾಗಿದ್ದು, ಸಿಎಂ ಹಾಗೂ ಸಚಿವರ ಪಾತ್ರದ ಮಾತೂ ಕೇಳಿಬರುತ್ತಿದೆ. ಸಚಿವರ ಆದೇಶದಂತೆ ಕಾರ್ಯನಿರ್ವಹಿಸುತ್ತಿರುವ ಐಎಎಸ್ ಅಧಿಕಾರಿಯೇ ಮುಂದುವರಿಯುವುದೂ ಸರಿಯಲ್ಲ. ಮತದಾರರ ಪಟ್ಟಿಯ ಪಾವಿತ್ರ್ಯತೆಯನ್ನು ಎತ್ತಿಹಿಡಿಯುವ ಹೊಣೆ ಚುನಾವಣಾ ಆಯೋಗದ ಮೇಲಿದ್ದು, ಸರ್ಕಾರೇತರ ಸಂಸ್ಥೆಯು ಮತದಾರರ ಪಟ್ಟಿಯಲ್ಲಿ ಮಾಡಿರುವ ತಿದ್ದುಪಡಿಯನ್ನು ಚುನಾವಣಾ ಆಯೋಗ ಸರಿಪಡಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.
ಅಕ್ರಮದ ಕುರಿತು ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಇದು ರಾಷ್ಟ್ರ ಮಟ್ಟದ ಗಂಭೀರ ವಿಚಾರ. ಅಕ್ರಮಗಳನ್ನು ತಡೆಗಟ್ಟಬೇಕು ಎಂದು ಮನವಿ ಮಾಡಿದ್ದೆವು. ಬುಧವಾರ ಕೇಂದ್ರ ಚುನಾವಣಾ ಆಯುಕ್ತರನ್ನು ದೆಹಲಿಯಲ್ಲಿ ಭೇಟಿ ಮಾಡಿ ದೂರು ಕೊಡಲಿದ್ದೇವೆ. ಇದು ಕರ್ನಾಟಕಕ್ಕೆ ಸಿಮೀತವಾದ ಪ್ರಕರಣವಲ್ಲ. ಬೇರೆ ಬೇರೆ ರಾಜ್ಯಗಳಲ್ಲೂ ಈ ಕೆಲಸ ಆಗಿರಬಹುದು. ಚುನಾವಣೆ ಗೆಲ್ಲಲು ಬಿಜೆಪಿ ಈ ದಾರಿ ತುಳಿದಿದೆ.
ಇವಿಎಂ ಮ್ಯಾನೇಜ್ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದು ಬಹಳ ಗಂಭೀರ ವಿಚಾರ. ಇವಿಎಂ ಸಹ ಮ್ಯಾನೇಜ್ ಮಾಡುತ್ತಾರೆ ಎನ್ನುವ ಅನುಮಾನ ಬಂದಿದೆ. ಇವಿಎಂ ಆಕ್ಸಿಸ್ ಮಾಡಲು ಅನುಮತಿ ಕೊಟ್ಟಿದ್ದಾರೆ ಎಂಬುದನ್ನು ನೋಡಿದರೆ, ಇವಿಎಂ ಸಹ ಮ್ಯಾನೇಜ್ ಮಾಡಿರುತ್ತಾರೆ ಎನ್ನುವ ಅನುಮಾನ ಮೂಡುತ್ತದೆ ಎಂದರು.
ಕೇಂದ್ರ ಚುನಾವಣಾ ಆಯೋಗದ ದೆಹಲಿ ಅಧಿಕಾರಿಗಳು ಬೆಂಗಳೂರಿಗೆ ಬಂದಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿ, ಅವರು ಬರಲೇ ಬೇಕಾಗುತ್ತದೆ. ಈ ಬಗ್ಗೆ ತನಿಖೆ ನಡೆಸಬೇಕಾಗತ್ತದೆ. ನಾವು ಈಗಾಗಲೇ ಈ ಬಗ್ಗೆ ದೂರು ಕೊಟ್ಟಿದ್ದೇವೆ ಎಂದರು.
ಇದನ್ನೂ ಓದಿ | Voter Data | ಮತದಾರರ ಪಟ್ಟಿ ಅಕ್ರಮ: ರಾಜ್ಯ ಚುನಾವಣಾ ಮುಖ್ಯಾಧಿಕಾರಿಯನ್ನು ಭೇಟಿ ಮಾಡಿದ ಕೇಂದ್ರ ಚುನಾವಣಾ ಆಯೋಗ ತಂಡ