ಬೆಂಗಳೂರು: ಈಗಾಗಲೆ ಚಿಲುಮೆ ಪ್ರಕರಣದಲ್ಲಿ (Voter Data) ಸಿಲುಕಿರುವ ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಚುನಾವಣಾ ಆಯೋಗವು ಸುಮಾರು 8 ಸಾವಿರ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲು ಮುಂದಾಗಿದೆ ಎಂದು ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಆರೋಪಿಸಿದ್ದಾರೆ. ಈ ಕುರಿತು ಚುನಾವಣಾ ಆಯೋಗಕ್ಕೆ ರಿಜ್ವಾನ್ ಅರ್ಷದ್ ಪತ್ರ ಬರೆದಿದ್ದಾರೆ.
ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ 193 ಮತಗಟ್ಟೆಗಳೆಂದು ಅಂತಿಮಗೊಳಿಸಲಾಗಿದೆ. ಅದರಲ್ಲಿ ಸುಮಾರು 17 ಸಾವಿರ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ 2023ರ ಜನವರಿ 15ರಂದು ಪ್ರಕಟವಾದ ಅಂತಿಮ ಮತದಾರರ ಪಟ್ಟಿಯಲ್ಲಿ ತೆಗೆದುಹಾಕಲಾಗಿದೆ. ಈಗ ಕ್ಷೇತ್ರದಲ್ಲಿ ಒಟ್ಟು 1,94,930 ಮತದಾರರಿದ್ದಾರೆಂದು ಹೇಳಲಾಗಿದೆ.
ಆದರೆ ಇದೀಗ ಅಂತಿಮ ಮತದಾರರ ಪಟ್ಟಿ ಘೋಷಿಸಿದ ನಂತರ ಮತ್ತೆ 9,195 ಮತದಾರರಿಗೆ ನೋಟೀಸ್ ಜಾರಿ
ಮಾಡಲಾಗಿದೆ ಎಂದು ತಿಳಿದು ಬಂದಿದೆ. ಕ್ಷೇತ್ರದ 193 ಮತಗಟ್ಟೆಗಳಲ್ಲಿ 91 ಮತಗಟ್ಟೆಗಳಲ್ಲಿ ಮಾತ್ರ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆಯುವ ಬಗ್ಗೆ ಗುರುತಿಸಲಾಗಿದೆ. ಹೀಗೆ ಗುರುತಿಸಿರುವ 9,195 ಮತದಾರರಲ್ಲಿ ಸುಮಾರು 8 ಸಾವಿರದಷ್ಟು ಮತದಾರರು ಮುಸ್ಲಿಂ ಮತ್ತು ಕಿಶ್ಚಿಯನ್ ಮತದಾರರೇ ಆಗಿರುತ್ತಾರೆ. 102 ಮತಗಟ್ಟೆಗಳನ್ನು ಹೊರತುಪಡಿಸಿ ಕೇವಲ 91 ಮತಗಟ್ಟಿಗಳಲ್ಲಿನ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮತದಾರರನ್ನು ಗುರುತಿಸಿ ಅವರನ್ನು ಗುರಿಯಾಗಿಸಿ ಹೆಸರನ್ನು ಉದೇಶಪೂರ್ವಕವಾಗಿ ತೆಗೆದುಹಾಕಲಾಗುತ್ತಿದೆ.
ಇದೀಗ ನೋಟಿಸ್ ನೀಡಿರುವ 9,195 ಮತದಾರರಲ್ಲಿ ಹೆಚ್ಚಿನ ಎಲ್ಲರೂ ಬಡಕುಟುಂಬದವರು ಹಾಗೂ
ಅನಕ್ಷರಸ್ಥರೇ ಆಗಿರುತ್ತಾರೆ. ಇವರುಗಳಿಗೆ ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮತ್ತು ತೆದುಹಾಕುವ ಬಗ್ಗೆಯಾಗಲಿ ಅಥವಾ ನೋಟಿಸ್‌ಗೆ ಉತ್ತಿಸರಬೇಕೆನ್ನುವ ಜ್ಞಾನವಾಗಲಿ ಇರುವುದಿಲ್ಲ. ಇದರಿಂದ ಅವರ ಮೂಲಭೂತ ಹಕ್ಕನ್ನು ಕಸಿದುಕೊಂಡಂತೆ ಆಗುತ್ತದೆ.
ಇದನ್ನೂ ಓದಿ : Voter Data | 6 ಲಕ್ಷ ಮತದಾರರ ಹೆಸರು ಡಿಲೀಟ್ ಹಿಂದೆ ʼಚಿಲುಮೆʼ ಕೈವಾಡ?: ಮೂಡಿದ ಅನುಮಾನ
ಚುನಾವಣಾ ಪ್ರಕ್ರಿಯೆಗೆ ಇನ್ನೂ 2ತಿಂಗಳ ಸಮಯವಿದ್ದು, ಭಾರತೀಯ ಚುನಾವಣಾ ಆಯೋಗವು
ಸ್ವಯಂಪ್ರೇರಿತವಾಗಿ ಪರಿಗಣಿಸಲು ನಿರ್ದೇಶನ ಇರುವುದಾಗಿ ತಿಳಿದಿದೆ. ಅದರಂತೆ ಸುಮೋಟೋ ಆಗಿ ಪರಿಗಣಿಸಿ 9,195 ಹೆಸರನ್ನು ತೆಗೆದುಹಾಕಲು ಕ್ರಮಕೈಗೊಳ್ಳುವುದರಿಂದ ಚುನಾವಣಾ ಪಲಿತಾಂಶದ ಮೇಲೆ ವ್ಯಕ್ತರಿಕ್ತ ಪರಿಣಾಮ ಬೀರಲಿದೆ. ಇದು ಚುನಾವಣಾ ತಂತ್ರಗಾರಿಕೆ ಮಾಡುವ ಪ್ರಯತ್ನವಾಗಿದೆ. ಪೈನಲ್ ಡ್ರಾಫ್ಟ್ ಬಂದನಂತರ ಈ ರೀತಿ ಮಾಡುವುದು ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಕೆಲಸವಾಗುತ್ತಿದ್ದು, ಇದು ದುರದೃಷ್ಟಕರ ಸಂಗತಿಯಾಗಿದೆ. ಆದುದರಿಂದ ಈ ಬಗ್ಗೆ ತಾವು ಸೂಕ್ತ ಕ್ರಮಕೈಗೊಂಡು ಪ್ರಕ್ರಿಯೆಯನ್ನು ಕೈಬಿಡುವಂತೆ ಕೋರುತ್ತೇನೆ ಎಂದು ಮುಖ್ಯ ಚುನಾವಣಾಧಿಕಾರಿಗೆ ಬರೆದ ಪತ್ರದಲ್ಲಿ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.