ಬೆಂಗಳೂರು: ಚಿಲುಮೆ ಸಂಸ್ಥೆ ವತಿಯಿಂದ ಮತದಾರರ ಮಾಹಿತಿಯನ್ನು (Voter Data) ಅಕ್ರಮವಾಗಿ ಸಂಗ್ರಹಿಸಿದ ಆರೋಪ ಎದುರಿಸುತ್ತಿರುವ ಚಿಲುಮೆ ಸಂಸ್ಥೆಗೆ ಮೊಬೈಲ್ ಆ್ಯಪ್ ಡೆವಲಪ್ ಮಾಡಿಕೊಟ್ಟಿದ್ದವರನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದರು.
ಡೆವಲಪರ್ ಸಂಜೀವ್ ಶೆಟ್ಟಿಯನ್ನು ಭಾನುವಾರ ವಶಕ್ಕೆ ಪಡೆದ ಹಲಸೂರು ಗೇಟ್ ಪೊಲೀಸರು ವಿಚಾರಣೆ ನಡೆಸಿದ್ದು, ಯಾವ ಉದ್ಧೇಶಕ್ಕೆ ಆ್ಯಪ್ ಕೇಳಿದ್ದರು? ಎಷ್ಟು ಆ್ಯಪ್ ತಯಾರು ಮಾಡಿಕೊಡಲಾಗಿದೆ? ಮತದಾರರ ಬಗ್ಗೆ ಆ್ಯಪ್ ನಲ್ಲಿ ಡೀಟೇಲ್ಸ್ ಅಪ್ಲೋಡ್ ಮಾಡಲಾಗಿದ್ಯಾ? ಹೀಗೆ ಅನೇಕ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಪೊಲೀಸರು ಕೇಳಿದ್ದಾರೆ. ಖುದ್ದು ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡರಿಂದ ನಾಲ್ಕೈದು ಗಂಟೆ ವಿಚಾರಣೆ ನಡೆಸಲಾಗಿದೆ.
ಚಿಲುಮೆ ಸಂಸ್ಥೆಯ ರವಿಕುಮಾರ್ ಕುಟುಂಬಸ್ಥರು, ಸ್ನೇಹಿತರನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ. ರವಿಕುಮಾರ್ ಫೋನ್ ಸ್ವಿಚ್ಡ್ ಆಫ್ ಆಗಿದ್ದು, ಆತನೊಂದಿಗೆ ಸಂಪರ್ಕ ಇರಬಹುದಾದವರನ್ನು ವಿಚಾರಣೆ ನಡೆಸಲಾಗುತ್ತಿದೆ.
ಮೂರು ವಿಶೇಷ ತಂಡಗಳ ಮೂಲಕ ರವಿಕುಮಾರ್ ಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ಕೆಂಪೇಗೌಡ ನ ಮೂಲಕ ಹಣಕಾಸಿನ ವ್ಯವಹಾರದ ಬಗ್ಗೆಯೂ ಸಂಪೂರ್ಣ ಮಾಹಿತಿ ಕಲೆ ಹಾಕಲಾಗುತ್ತಿದೆ.
ಪೊಲೀಸರಿಂದ ಕಂಪ್ಯೂಟರ್ ಪರಿಶೀಲನೆ
ಅಕ್ರಮವಾಗಿ ಮತದಾರರ ಖಾಸಗಿ ಮಾಹಿತಿ ಸಂಗ್ರಹ ಕೇಸ್ ಹಿನ್ನೆಲೆಯಲ್ಲಿ ಕಚೇರಿಯಿಂದ ವಶಪಡಿಸಿಕೊಂಡ ಕಂಪ್ಯೂಟರ್ ಸೇರಿ ಹಲವು ದಾಖಲೆಗಳನ್ನು ಪೊಲೀಸರು ಪರಿಶೀಲನೆ ನಡೆಸಿದರು. ಹಲಸೂರು ಗೇಟ್ ಇನ್ಸ್ಪೆಕ್ಟರ್ ಸೇರಿ 10 ಕ್ಕೂ ಹೆಚ್ಚು ಸಿಬ್ಬಂದಿಯಿಂದ ಪರಿಶೀಲನೆ ನಡೆಸಲಾಯಿತು. ಈಗಾಗಲೇ ಟೆಕ್ನಿಕಲ್ ಟೀಂನಿಂದಲೂ ಕಚೇರಿ ಪರಿಶೀಲನೆ ಮಾಡಿದ್ದಾರೆ. ಚಿಲುಮೆ ಕಚೇರಿಯನ್ನು ೩ ಗಂಟೆಗಳ ಕಾಲ ಟೆಕ್ನಿಕಲ್ ಟಿಮ್ ಪರಿಶೀಲನೆ ಮಾಡಿದ್ದು, ಅವಶ್ಯಕತೆ ಇದ್ದರೆ ಮತ್ತೆ ಪರಿಶೀಲಿಸುವ ಸಾಧ್ಯತೆಯಿದೆ.
ಕಾಂಗ್ರೆಸ್ ಕಾರ್ಯಕರ್ತರಿಗೆ ಡಿಕೆಶಿ ಎಚ್ಚರಿಕೆ
ಚಿಲುಮೆ ಸಂಸ್ಥೆಯಿಂದ ಮತದಾರ ಮಾಹಿತಿ ಸಂಗ್ರಹದ ವಿಚಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಡಿ.ಕೆ. ಶಿವಕುಮಾರ್ ಎಚ್ಚರವಿರುವಂತೆ ತಿಳಿಸಿದ್ದಾರೆ. ಎಸ್‌ಸಿ, ಎಸ್ಟಿ ಐಕ್ಯತಾ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಡಿಕೆಶಿ ಮಾತನಾಡಿದ್ದು, ಮತಪಟ್ಟಿಯಿಂದ ಕಾಂಗ್ರೆಸ್ ಮತದಾರರನ್ನು ತೆಗೆದು ಹಾಕುವ ಕೆಲಸ ನಡೆಯುತ್ತಿದೆ. ಅದು ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದಿರುವ ಬಗ್ಗೆ ಅನುಮಾನವಿದೆ. ಹಾಗಾಗಿ ಪ್ರತಿ ಬೂತಿನ ಮತಪಟ್ಟಿ ನಿಮ್ಮ ಬಳಿ ಇರಬೇಕು. ಹಾಲಿ ಶಾಸಕರು ಇರಬಹುದು, ಅಥವಾ ಟಿಕೆಟ್ ಆಕಾಂಕ್ಷಿಗಳು ಇರಬಹುದು. ಯಾರೇ ಆದರೂ ಪ್ರತಿಬೂತಿನ ಮತಪಟ್ಟಿ ಸಂಗ್ರಹ ಮಾಡಬೇಕು. ಬೂತ್‌ನಲ್ಲಿ ಬಿಎಎಲ್‌ಎ ಗಳನ್ನು ನೇಮಕ ಮಾಡಬೇಕು. ಒಂದು ವೇಳೆ ನೀವು ಮಾಡಿಲ್ಲ ಎಂದರೆ, ಜನರಲ್ ಸೆಕ್ರೆಟರಿಗಳು ಈ ಕೆಲಸ ಮಾಡುತ್ತಾರೆ. ಈಗಾಗಲೇ ಎಚ್ಚರ ವಹಿಸದೇ ಹೋದರೆ ಎಲೆಕ್ಷನ್ ಟೈಮ್‌ನಲ್ಲಿ ಕಷ್ಟ ಎಂದು ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ | Voter data | ಚಿಲುಮೆಯ ಕೆಂಪೇಗೌಡ ಸಿಕ್ಕಿದ, ರವಿ ಕುಮಾರ್ ಎಲ್ಲಿ? ಆಪ್ತರು, ಸಂಬಂಧಿಗಳ ಮೇಲೆ ನಿಗಾ ಇಟ್ಟು ಶೋಧ