ಬೆಂಗಳೂರು: ಮತದಾರರ ಪಟ್ಟಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿ ಕುಮಾರ್ ಬಂಧನದ ಬಳಿಕ, ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಹೇಳಿಕೆ ನೀಡಿದ್ದಾರೆ. (Voter data) ಇದುವರೆಗೆ ಒಟ್ಟು ಐವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಮುಖ ಆರೋಪಿ ರವಿಕುಮಾರ್, ತುಮಕೂರು, ಉತ್ತರ ಕನ್ನಡ, ಶಿರಸಿ ಭಾಗದಲ್ಲಿ ಓಡಾಡುತ್ತಿದ್ದ. ಅಂತಿಮವಾಗಿ ಬೆಂಗಳೂರಿನಲ್ಲೇ ಆರೋಪಿಯನ್ನು ಬಂಧಿಸಲಾಗಿದೆ.
ಈಗಾಗಲೇ ಬಂಧನವಾದವರ ಜೊತೆಗೆ ರವಿಕುಮಾರ್ ವಿಚಾರಣೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ. ಉಳಿದಂತೆ ಬಿಬಿಎಂಪಿ ಆರ್.ಓಗಳು, ಸಿಬ್ಬಂದಿ ಸಹಿತ ಸುಮಾರು 15 ಜನರಿಗೆ ನೋಟಿಸ್ ನೀಡಲಾಗಿದೆ.
ವಕೀಲರ ಭೇಟಿಗೆ ಬಂದಿದ್ದ ರವಿ ಕುಮಾರ್:
ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದ ಪ್ರಮುಖ ಆರೋಪಿ ರವಿಕುಮಾರ್ ಪತ್ತೆಗೆ ವಿಶೇಷ ತಂಡ ಹುಡುಕಾಟ ನಡೆಸುತ್ತಿತ್ತು. ವಕೀಲರ ಭೇಟಿಗೆ ಬಂದಾಗ ಆರೋಪಿಯ ಬಂಧನವಾಗಿದೆ. ಲಾಲ್ ಬಾಗ್ ಬಳಿ ರವಿ ಕುಮಾರ್‌ನನ್ನು ಹಲಸೂರು ಗೇಟ್ ಠಾಣಾ ಪೊಲೀಸರು ಚೇಸ್ ಮಾಡಿ ಬಂಧಿಸಿದರು.
ಇದುವರೆಗೂ ಬಂಧಿತರ ವಿವರ ಇಂತಿದೆ. ಚಿಲುಮೆ ಸಂಸ್ಥೆಯ ಸಿಬ್ಬಂದಿ ಧರ್ಮೇಶ್, ರೇಣುಕಾ ಪ್ರಸಾದ್. ರವಿ ಕುಮಾರ್ ಸಹೋದರ ಮತ್ತು ಚಿಲುಮೆಯ ಮೇಲ್ವಿಚಾರಕ ಕೆಂಪೇಗೌಡ. ಇ-ಪ್ರಕ್ಯೂರ್ಮೆಂಟ್ ಮೇಲ್ವಿಚಾರಕ ಪ್ರಜ್ವಲ್ ಹಾಗೂ ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿ ಕುಮಾರ್, ಇಲ್ಲಿಯವರೆಗೆ ಮೂರು ಅಕೌಂಟ್‌ಗಳನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ. …