Site icon Vistara News

Voter Data | 6 ಲಕ್ಷ ಮತದಾರರ ಹೆಸರು ಡಿಲೀಟ್‌ ಹಿಂದೆ ʼಚಿಲುಮೆʼ ಕೈವಾಡ?: ಮೂಡಿದ ಅನುಮಾನ

voter data

ಬೆಂಗಳೂರು: ಅಕ್ರಮವಾಗಿ ಮತದಾರರ ಗೌಪ್ಯ ಮಾಹಿತಿ (Voter Data) ಸಂಗ್ರಹ ಆರೋಪದಲ್ಲಿ ಈಗಾಗಲೆ ಚಿಲುಮೆ ಸಂಸ್ಥೆ ವಿರುದ್ಧ ದೂರು ದಾಖಲಾಗಿದ್ದು, ಇದೀಗ ಚುನಾವಣಾ ಆಯೋಗದಿಂದ ಇತ್ತೀಚೆಗೆ ನಡೆಸಿದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲೂ ಈ ಸಂಸ್ಥೆಯ ಹಸ್ತಕ್ಷೇಪ ಇದೆಯೇ ಎಂಬ ಅನುಮಾನಗಳು ಮೂಡುತ್ತಿವೆ.

ಮತದಾರರ ಜಾಗೃತಿ ಅಭಿಯಾನ ನಡೆಸಲು ಅನುಮತಿ ಪಡೆದಿದ್ದ ಸಂಸ್ಥೆಯು ಅಕ್ರಮವಾಗಿ ಮಾಹಿತಿ ಸಂಗ್ರಹ ಮಾಡಿದ್ದಷ್ಟೇ ಅಲ್ಲದೆ ಬಿಜೆಪಿ ಮತದಾರರಲ್ಲ ಎಂದು ತೋರಿದವರನ್ನು, ಅಲ್ಪಸಂಖ್ಯಾತ ಮತದಾರರನ್ನು ಮತದಾರರ ಪಟ್ಟಿಯಿಂದ ಡಿಲೀಟ್‌ ಮಾಡಿಸುವ ಕೆಲಸ ಮಾಡುತ್ತಿತ್ತು ಎಂದು ಕಾಂಗ್ರೆಸ್‌ ಗುರುವಾರ ಆರೋಪ ಮಾಡಿತ್ತು.

ಇತ್ತೀಚೆಗಷ್ಟೆ ಬಿಬಿಎಂಪಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿದ್ದು, ಅದರಲ್ಲಿ 3.07 ಲಕ್ಷ ಮತದಾರರು ಹೊಸದಾಗಿ ಸೇರ್ಪಡೆ ಆಗಿದ್ದಾರೆ, 57,517 ಮತದಾರರ ವಿವರಗಳನ್ನು ಬದಲಾವಣೆ ಮಾಡಲಾಗಿದೆ ಹಾಗೂ 6.69 ಲಕ್ಷ ಮತದಾರರ ಹೆಸರುಗಳನ್ನು ಡಿಲೀಟ್‌ ಮಾಡಲಾಗಿದೆ ಎಂದು ಕಳೆದ ವಾರ ಚುನಾವಣಾ ಆಯೋಗ ಮಾಹಿತಿ ಬಿಡುಗಡೆ ಮಾಡಿತ್ತು.

ಮತದಾರರ ಹೆಸರುಗಳನ್ನು ಡಿಲೀಟ್‌ ಮಾಡುವಾಗ, ಜೀವಂತ ಇರುವವರ, ವಿಳಾಸದಲ್ಲೇ ಇರುವವರ, ಅನೇಕರ ಹೆಸರುಗಳು ಡಿಲೀಟ್‌ ಆಗಿದೆ ಎಂಬ ಆರೋಪಗಳು ಕೇಳಿಬಂದಿವೆ. ವಿಲ್ಸನ್‌ ಗಾರ್ಡನ್‌ನಲ್ಲಿ ಒಂದೇ ಮನೆಯ ಇಬ್ಬರ ಹೆಸರು ಡಿಲೀಟ್‌ ಆಗಿರುವುದು ಗಮನಕ್ಕೆ ಬಂದಿದೆ. ಉಳಿದಂತೆ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಅಗಾಧ ಪ್ರಮಾಣದ ಮತದಾರರ ಹೆಸರುಗಳು ಡಿಲೀಟ್‌ ಆಗಿವೆ.

ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ 21,968, ಕೆ.ಆರ್. ಪುರಂ ಕ್ಷೇತ್ರದಿಂದ 39,763, ಬ್ಯಾಟರಾಯನಪುರ ಕ್ಷೇತ್ರದಿಂದ 30,757, ಯಶವಂತಪುರ 35,829, ರಾಜರಾಜೇಶ್ವರಿ ನಗರ 33,009, ದಾಸರಹಳ್ಳಿ 35,086, ಮಹಾಲಕ್ಷ್ಮಿಲೇಔಟ್ 20,404, ಮಲ್ಲೇಶ್ವರ 11,788, ಹೆಬ್ಬಾಳ 20,039, ಪುಲಕೇಶಿ ನಗರ 22,196, ಸರ್ವಜ್ಞ ನಗರ – 28,691, ಸಿ.ವಿ. ರಾಮನ್ ನಗರ 21,457, ಶಿವಾಜಿನಗರ 14,679, ಶಾಂತಿನಗರ 20,386, ಗಾಂಧಿನಗರ 16,465, ರಾಜಾಜಿನಗರ 12,757, ಗೋವಿಂದರಾಜ್ ನಗರ 20,067, ವಿಜಯನಗರ 28,562, ಚಾಮರಾಜಪೇಟೆ 19,304, ಚಿಕ್ಕಪೇಟೆ 16,231, ಬಸವನಗುಡಿ 18,838, ಪದ್ಮನಾಭ ನಗರ 17,435, ಬಿಟಿಎಂ ಲೇಔಟ್ 16,141, ಜಯನಗರ 13,061, ಮಹಾದೇವಪುರ 33,376, ಬೊಮ್ಮನಹಳ್ಳಿ 31,157, ಬೆಂಗಳೂರು ದಕ್ಷಿಣ 45,927, ಆನೇಕಲ್ ವಿಧಾನಸಭಾ ಕ್ಷೇತ್ರದ 24,279 ಮತದಾರರ ಹೆಸರು ಡಿಲೀಟ್‌ ಆಗಿದೆ.

ಈ ಹೆಸರುಗಳು ಡಿಲೀಟ್‌ ಆಗುವುದರ ಹಿಂದೆ, ಚಿಲುಮೆ ಸಂಸ್ಥೆಯು ನೀಡಿದ ಮಾಹಿತಿಯ ಆಧಾರ ಇದೆಯೇ ಎಂದು ಅನೇಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ವಿಶೇಷ ಆಯುಕ್ತ ಎಸ್‌. ರಂಗಪ್ಪ, ನಮ್ಮ ಬಿಎಲ್‌ಒ ಅಧಿಕಾರಿಗಳು ಮನೆಮನೆಗೆ ತೆರಳಿ ಸಮೀಕ್ಷೆ ನಡೆಸಿ ಸಂಗ್ರಹಿಸಿದ ಮಾಹಿತಿ ಆಧಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಆಗುತ್ತದೆ. ಚಿಲುಮೆ ಸಂಸ್ಥೆಯವರು ನೀಡಿದ ಮಾಹಿತಿ ಆಧಾರದಲ್ಲಿ ಪರಿಷ್ಕರಣೆ ಆಗಿದೆ ಎನ್ನುವುದು ಸತ್ಯವಲ್ಲ ಎಂದಿದ್ದಾರೆ.

ಇದನ್ನೂ ಓದಿ | Voter data | ಚಿಲುಮೆ ಸಂಸ್ಥೆ ಕಾರ್ಯಾಚರಣೆ ಹೊಸತಲ್ಲ, ಕಾಂಗ್ರೆಸ್‌, ಜೆಡಿಎಸ್‌ ಆಡಳಿತವಿದ್ದಾಗಲೂ ಸಮೀಕ್ಷೆ ನಡೆಸಿತ್ತು!

Exit mobile version