ಬೆಂಗಳೂರು: ಬಸವನಗುಡಿ ವಿಧಾನಸಭೆ ಕ್ಷೇತ್ರದ ಶ್ರೀನಗರ ವಾರ್ಡ್‌ನಲ್ಲಿರುವ ಮದ್ದೂರಮ್ಮ ಗ್ರೌಂಡ್‌ನಲ್ಲಿ ಕಾಲೇಜು ನಿರ್ಮಾಣ ಮಾಡಲು ಶಂಕು ಸ್ಥಾಪನೆಗೆ ಮುಂದಾದ ಸ್ಥಳೀಯ ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯ ಹಾಗೂ ರಾಜ್ಯ ಕಾಂಗ್ರೆಸ್ ವಕ್ತಾರ ಡಾ. ಶಂಕರ ಗುಹಾ ದ್ವಾರಕಾನಾಥ್ ನಡುವೆ ಮಾತಿನ ಚಕಮಕಿ ನಡೆಯಿತು.
ಮೈದಾನದಲ್ಲಿ ಸೋಮವಾರ ಬೆಳಗ್ಗೆ ಪೂಜೆ ನಡೆಸಲು ರವಿ ಸುಬ್ರಹ್ಮಣ್ಯ ಸಿದ್ಧತೆ ಮಾಡಿಕೊಂಡಿದ್ದರು. ಶಾಮಿಯಾನಾ ಅಳವಡಿಸಿ ಪೂಜೆಗೆ ಸಕಲ ತಯಾರಿ ನಡೆದಿತ್ತು. ಈ ವೇಳೆಗೆ ಆಗಮಿಸಿದ ಶಂಕರ ಗುಹಾ ದ್ವಾರಕಾನಾಥ್, ಯಾವ ಕಾರಣಕ್ಕೆ ಮೈದಾನದಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿದ್ದೀರ ಎಂದು ಪ್ರಶ್ನಿಸಿದರು.
ಇಡೀ ಕ್ಷೇತ್ರದಲ್ಲಿ ಒಂದೂ ಪಿಯು, ಪದವಿ ಕಾಲೇಜು ಇಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಹೀಗಾಗಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದರು.
ಇದಕ್ಕೆ ಉತ್ತರಿಸಿದ ಶಂಕರ ಗುಹಾ, ಮೈದಾನದಲ್ಲಿ ಏಕೆ ನಿರ್ಮಾಣ ಮಾಡಬೇಕು? ಎದುರುಗಡೆ ಸರ್ಕಾರಿ ಶಾಲೆಯಿದೆ, ಅಲ್ಲಿಯೇ ಜಾಗವನ್ನು ಬಳಸಿಕೊಂಡು ನಿರ್ಮಾಣ ಮಾಡಬಹುದಲ್ಲ? ಇಷ್ಟೊಂದು ಮಕ್ಕಳು ಆಟವಾಡುತ್ತಿರುವ ಮೈದಾನವನ್ನು ಏಕೆ ಹಾಳು ಮಾಡುತ್ತೀರಿ? ಎಂದು ಪ್ರಶ್ನಿಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ರವಿ ಸುಬ್ರಹ್ಮಣ್ಯ ಬೆಂಬಲಿಗರು, ಇಷ್ಟು ವರ್ಷದಿಂದ ಎಲ್ಲ ಅಭಿವೃದ್ಧಿಯನ್ನು ಮಾಡಿದ್ದೇವೆ. ಹತ್ತು ವರ್ಷದಿಂದ ಇಲ್ಲದಿರುವವರು ಈಗ ಬಂದಿದ್ದೀರಿ. ನಮಗೆ ರಾಜಕಾರಣ ಮಾಡುವುದನ್ನು ಹೇಳಿಕೊಡಬೇಡಿ ಎಂದು ಶಂಕರ ಗುಹಾ ವಿರುದ್ಧ ಹರಿಹಾಯ್ದರು.
ಈ ಸಂದರ್ಭದಲ್ಲಿ ಮಾತಿನ ಚಕಮಕಿ ಜೋರಾಗಿ ಕೈಕೈ ಮಿಲಾಯಿಸುವ ಹಂತ ತಲುಪಿತು. ಪೊಲೀಸರು ಮಧ್ಯಪ್ರವೇಶಿಸಿ ಶಂಕರ ಗುಹಾ ಅವರನ್ನು ಗ್ರೌಂಡ್‌ನಿಂದ ಹೊರಕ್ಕೆ ಕರೆದೊಯ್ದರು. ಶಾಸಕರಿಗೆ ಧಿಕ್ಕಾರ ಎಂದು ಘೋಷಣೆ ಕೂಗುತ್ತ ಶಂಕರ ಗುಹಾ ಪ್ರತಿಭಟನೆ ನಡೆಸಲು ಮುಂದಾದರು. ಇತ್ತ ರವಿಸುಬ್ರಹ್ಮಣ್ಯ ಪೂಜೆಯನ್ನು ನೆರವೇರಿಸಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ
ವಿವಾದದ ಕುರಿತು ಶಂಕರ ಗುಹಾ ದ್ವಾರಕಾನಾಥ್ ಅವರು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಬಸವನಗುಡಿ ಕ್ಷೇತ್ರದ ಶ್ರೀನಗರ ವಾರ್ಡ್ ನ ವ್ಯಾಪ್ತಿಯಲ್ಲಿ ಬರುವ ಮದ್ದೂರಮ್ಮ ಗ್ರೌಂಡ್ ಅಥವಾ ವಿಜಯ ಗ್ರೌಂಡ್ ಎಂದು ಕರೆಯಲ್ಪಡುವ ಆಟದ ಮೈದಾನವನ್ನು ಸ್ಥಳೀಯರ ಆಶಯಕ್ಕೆ ವಿರುದ್ಧವಾಗಿ ಶಾಲೆ ಅಥವಾ ಕಾಲೇಜು ಕಟ್ಟಡದ ನಿರ್ಮಾಣಕ್ಕಾಗಿ ಬಳಸಿಕೊಳ್ಳಲು ಸ್ಥಳೀಯ ಶಾಸಕ ರವಿಸುಬ್ರಹ್ಮಣ್ಯ ಹಾಗೂ ಸಂಸದ ತೇಜಸ್ವಿ ಸೂರ್ಯ ಹೊರಟಿದ್ದಾರೆ.
ಈ ಹಿಂದೆ ಮಾನ್ಯ ಶ್ರೀ ದೇವೇಗೌಡ ರವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಈ ಮೈದಾನವನ್ನು ಆಟದ ಮೈದಾನವಾಗಿಯೇ ಉಳಿಸಬೇಕೆಂದು ತೀರ್ಮಾನ ಕೈಗೊಂಡಿದ್ದರು. ಆದರೆ ಈಗ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಶಾಸಕರಾದ ರವಿಸುಬ್ರಮಣ್ಯ ರವರು ಮತ್ತು ಸಂಸದ ತೇಜಸ್ವಿ ಸೂರ್ಯರವರು ಇದ್ಯಾವುದನ್ನೂ ಲೆಕ್ಕಿಸದೇ, ಸ್ಥಳೀಯ ಸಾರ್ವಜನಿಕರ ಆಶಯಗಳನ್ನು ಗಣನೆಗೆ ತೆಗೆದುಕೊಳ್ಳದೆ, ಅಲ್ಲಿಯ ಅಗತ್ಯತೆಗಳನ್ನು ಕಡೆಗಣಿಸಿ ಏಕಾಏಕಿ ಈ ತೀರ್ಮಾನಕ್ಕೆ ಬಂದಿರುತ್ತಾರೆ.
ಈ ಮೈದಾನವು ಮುಂಚೆ ಪ್ರಳಯಕಾಲ ರುದ್ರಭೂಮಿಯವರಿಗೆ ಸೇರಿತ್ತು. ಆ ಕುರಿತು ನಾರಾಯಣಪ್ಪನವರು ಮತ್ತು ಮುಜರಾಯಿ ಇಲಾಖೆ ನಡುವೆ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದೆ. ಇದರ ನಡುವೆ ಬಿಬಿಎಂಪಿಯವರು 1991ರಲ್ಲಿ ಇದನ್ನು ವಶಪಡಿಸಿಕೊಂಡರು. ಅವತ್ತಿನ ದಿನಕ್ಕೆ ಅದಕ್ಕೊಂದು ಮೊತ್ತವನ್ನು ನಿಗದಿ ಮಾಡಿ ಸರ್ಕಾರಿ ಖಜಾನೆಯಲ್ಲಿ ಇರಿಸಿದ್ದಾರೆ. ಮುಂದೆ ನ್ಯಾಯಾಲಯದ ತೀರ್ಮಾನ ಬಂದ ಮೇಲೆ ತೀರ್ಪಿನ ಅನುಸಾರ ಆ ಹಣ ಅವರಿಗೆ ಸಿಗುತ್ತದೆ. ಹೀಗೆ ಅದು ಬಿಬಿಎಂಪಿ ಸುಪರ್ದಿಯಲ್ಲಿ ಇರುವುದರಿಂದ ಅದು ಹಾಗೆಯೇ ಆಟದ ಮೈದಾನವಾಗಿಯೇ ಇರಬೇಕಾಗಿದೆ.
ಈಗಾಗಲೇ ಈ ಮೈದಾನದಲ್ಲಿ ಉಚಿತ ಕ್ರಿಕೆಟ್ ತರಬೇತಿ ಹಾಗೂ ಕ್ರೀಡೆಗಳ ಅಭ್ಯಾಸ ನಡೆಯುತ್ತಿದೆ. ಅಲ್ಲದೇ ಅಲ್ಲಿನ ಸ್ಥಳೀಯರಿಗೆ ಸುತ್ತಮುತ್ತಲೂ ಮತ್ಯಾವ ಮೈದಾನವೂ ಸರಿಯಾಗಿ ಇಲ್ಲದಿರುವುದರಿಂದ ಅಲ್ಲಿನ ಕ್ರೀಡಾಪಟುಗಳು, ಸ್ಥಳೀಯರು ಇದೇ ಆಟದ ಮೈದಾನವನ್ನೇ ಅವಲಂಬಿಸಿದ್ದಾರೆ. ಆದರೆ ಇತ್ತೀಚಿಗೆ ಸಾರ್ವಜನಿಕರಿಂದ ಈ ಮೈದಾನವನ್ನು ದೂರ ಮಾಡಬೇಕು ಎಂಬ ಉದ್ದೇಶದಿಂದಲೋ ಎಂಬಂತೆ ಅಲ್ಲಿ ಯಾವುದೇ ನಿರ್ವಹಣೆಗಳು ಆಗುತ್ತಿಲ್ಲ, ಅಲ್ಲಲ್ಲಿ ಕಸದ ರಾಶಿಗಳು, ಅನುಪಯುಕ್ತ ವಸ್ತುಗಳನ್ನು ತುಂಬಲಾಗಿದೆ. ಹೀಗೆ ಮಾಡಿ ಸಾರ್ವಜನಿಕರು ಈ ಮೈದಾನ ಬಳಸಲಾಗದೆ ತಾವಾಗಿಯೇ ಬಿಟ್ಟು ಹೋಗಲಿ ಎಂಬ ದುರುದ್ದೇಶ ಹೊಂದಿದಂತೆ ಕಾಣುತ್ತದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಶಾಸಕರಾಗಲೀ, ಸಂಸದರಾಗಲೀ ಅಲ್ಲಿ ಏನೇ ಮಾಡುವ ಮೊದಲು, ಸ್ಥಳೀಯರ ಅವಶ್ಯಕತೆ ಏನು? ಅವರ ಆಶಯಗಳು ಏನು? ಎಂಬುದರ ಕುರಿತು ಸಾರ್ವಜನಿಕರ ಬಳಿ ಚರ್ಚಿಸಬೇಕಿತ್ತು. ಶಾಲೆ ಅಥವಾ ಕಾಲೇಜು ಕಟ್ಟಲು ನಮ್ಮ ಅಭ್ಯಂತರವಿಲ್ಲ.ಆ ಕೆಲಸಕ್ಕೆ ನಾವು ಯಾವುದೇ ರೀತಿಯಲ್ಲಿ ಅಡ್ಡಿಯನ್ನು ಪಡಿಸುವುದಿಲ್ಲ. ಆದರೆ ಹೊಸದಾಗಿ ಶಾಲೆಯನ್ನು ನಿರ್ಮಾಣ ಮಾಡುವ ಮೊದಲು ಬಸವನಗುಡಿ ವ್ಯಾಪ್ತಿಯಲ್ಲಿ ಈಗಾಗಲೇ ಇರುವ ಶಾಲೆಗಳ ಗುಣಮಟ್ಟವನ್ನು ಸುಧಾರಿಸಬೇಕಾಗಿದೆ. ಶಾಲೆಗಳಿಗೆ ಸರಿಯಾದ ಮೂಲ ಸೌಕರ್ಯಗಳನ್ನು ಒದಗಿಸಬೇಕಾಗಿದೆ ಹಾಗೆಯೇ ಅಲ್ಲಿ ಇರುವ ಮಕ್ಕಳ ದಾಖಲಾತಿಯನ್ನು ಗಮನಿಸಬೇಕು ಮತ್ತು ಶಾಲೆಯನ್ನು ಮಕ್ಕಳು ಬಿಟ್ಟು ಬೇರೆಡೆಗೆ ಹೋಗದಂತೆ ತಡೆಯಬೇಕು. ಹೀಗೆ ಈಗಾಗಲೇ ಇರುವ ಶಾಲೆಗಳನ್ನು ಸರಿಪಡಿಸಬೇಕು. ಅದಲ್ಲದೇ ಹೊಸದಾಗಿ ಶಾಲೆಯನ್ನು ನಿರ್ಮಾಣ ಮಾಡಲೇಬೇಕೆಂದರೆ ಅದಕ್ಕಾಗಿ ಜಾಗವನ್ನು ಖರೀದಿಸಿ ಶಾಲೆಯನ್ನು ನಿರ್ಮಾಣ ಮಾಡಬಹುದು. ಆದರೆ ನಗರದ ಮಧ್ಯ ಭಾಗದಲ್ಲಿ ಆಟದ ಮೈದಾನವನ್ನು ನಿರ್ಮಿಸುವುದು ತುಂಬಾ ಕಷ್ಟ. ಆದ್ದರಿಂದ ಇರುವ ಈ ಆಟದ ಮೈದಾನವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. 40% ನ ಆಸೆಗಾಗಿ ಎಲ್ಲಾದರೂ ಒಂದು ಕಡೆ ಕಾಮಗಾರಿ ಪ್ರಾರಂಭಿಸಲೇಬೇಕು ಎಂಬ ದುರುದ್ದೇಶ ಸಲ್ಲದು. ಅದಾಗಲೇ ಬಸವಗುಡಿಯಲ್ಲಿ ಒಂದೊಂದೇ ಆಟದ ಮೈದಾನಗಳು ಮಾಯವಾಗಿ ಕಟ್ಟಡಗಳ ನಿರ್ಮಾಣವಾಗುತ್ತಿದೆ. ಇದು ಹೀಗೆ ಮುಂದುವರೆಯಲು ನಾವು ಬಿಡುವುದಿಲ್ಲ. ಸಾರ್ವಜನಿಕರಿಗೆ ತೊಂದರೆ ಆದರೆ, ಅವರಿಗೆ ಸಿಗಬೇಕಾದ ಸೌಕರ್ಯಗಳು ಸಿಗದೇ ಹೋದಲ್ಲಿ ಅವರ ಜೊತೆ ನಿಲ್ಲಲು ನಾವು ಸದಾ ಸಿದ್ಧ. ಈ ಕುರಿತು ಶಾಸಕರು, ಸಂಸದರು ಮತ್ತು ಸರ್ಕಾರ ಎಚ್ಚೆತ್ತುಕೊಳ್ಳದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಲು ಸಿದ್ಧ. ಎಂಬುದಾಗಿ ಕೆಪಿಸಿಸಿ ವಕ್ತಾರರಾದ ಡಾ ಶಂಕರ್ ಗುಹಾ ದ್ವಾರಕನಾಥ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಲು ಶಾಸಕ ರವಿಸುಬ್ರಹ್ಮಣ್ಯ ಅವರು ಸಂಪರ್ಕಕ್ಕೆ ಲಭ್ಯವಾಗಿಲ್ಲ.
ಇದನ್ನೂ ಓದಿ | Playground | ಬಸವನಗುಡಿ ಮದ್ದೂರಮ್ಮ ಮೈದಾನದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಿದ್ಧತೆ; ಶಾಸಕ, ಸಂಸದರ ವಿರುದ್ಧ ಜನಾಕ್ರೋಶ