ಬೆಂಗಳೂರು: ಬೆಂಗಳೂರಿನ ನೀರಿನ ಅಭಾವ (Water Crisis) ನೀಗಿಸಲು ಕೊಳವೆಬಾವಿ ನೀರು ಪೂರೈಸುವ (Borewell water supply) ಟ್ಯಾಂಕರ್‌ಗಳನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಮಾಹಿತಿ ನೀಡಿದರು.
ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಪ್ರತಿನಿತ್ಯ ಬಿಡಬ್ಲ್ಯೂಎಸ್ಎಸ್‌ಬಿ ಹಾಗೂ ಪಾಲಿಕೆ ಅಧಿಕಾರಿಗಳು ಸಭೆ ಮಾಡುತ್ತಿದ್ದಾರೆ. ಕುಡಿಯುವ ನೀರಿನ ದಂಧೆ ತಡೆಯಲು ಕೊಳವೆಬಾವಿ ಹಾಗೂ ಅವುಗಳಿಂದ ನೀರು ಪೂರೈಕೆ ಮಾಡುವ ಟ್ಯಾಂಕರ್‌ಗಳು ಮಾ. 7ರ ಒಳಗಾಗಿ ನೋಂದಣಿ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.
ಕೊಳವೆ ಬಾವಿಗಳ ಮೂಲಕ ಬೆಂಗಳೂರಿನ ಕುಡಿಯುವ ನೀರಿನ ಅಭಾವವನ್ನು ನೀಗಿಸುತ್ತೇವೆ. ಈ ವಿಚಾರವಾಗಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ಕರೆಯಲಾಗಿದೆ. ಇನ್ನು ನನ್ನ ಇಲಾಖೆ ಅನುದಾನದಿಂದ ಬೆಂಗಳೂರಿನ ಎಲ್ಲ ಕ್ಷೇತ್ರಗಳ ಕುಡಿಯುವ ನೀರಿನ ಪೂರೈಕೆಗೆ ತಲಾ 10 ಕೋಟಿ ರೂ. ನೀಡಲಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ರಾಜ್ಯಾದ್ಯಂತ 7108 ಬೋರ್‌ವೆಲ್‌ಗಳನ್ನು ಗುರುತಿಸಲಾಗಿದೆ: ಕೃಷ್ಣ ಬೈರೇಗೌಡ
ಪ್ರಸ್ತುತ ಬರ ಪರಿಸ್ಥಿತಿ ಹತೋಟಿಯಲ್ಲಿದ್ದು, ಮುಂದಿನ ಬೇಸಿಗೆಗೆ ರಾಜ್ಯದ ಯಾವ ಭಾಗದಲ್ಲೂ ಕುಡಿಯುವ ನೀರಿಗೆ ಸಮಸ್ಯೆ ಉದ್ಭವಿಸದಂತೆ ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ 7108 ಬಾಡಿಗೆ ಬೋರ್‌ವೆಲ್‌ಗಳನ್ನು ಗುರುತಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಶುಕ್ರವಾರ ವಿಕಾಸ ಸೌಧದಲ್ಲಿ ಮಾಹಿತಿಯನ್ನು ನೀಡಿದ್ದರು.
“ರಾಜ್ಯದಲ್ಲಿ ಪ್ರಸ್ತುತ ನೀರಿನ ಸಮಸ್ಯೆ ಕಂಡುಬಂದಿರುವ 116 ಗ್ರಾಮಗಳಿಗೆ 175 ಟ್ಯಾಂಕರ್ ಮೂಲಕ ಹಾಗೂ 382 ಗ್ರಾಮಗಳಿಗೆ 445 ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ಪ್ರತಿ ದಿನ ನೀರು ಪೂರೈಸಲಾಗುತ್ತಿದೆ. 09 ನಗರ ಸ್ಥಳೀಯ ಸಂಸ್ಥೆಗಳಲ್ಲಿನ 57 ವಾರ್ಡ್‌ಗಳಿಗೆ 24 ಟ್ಯಾಂಕರ್‌ಗಳ ಮೂಲಕ ಹಾಗೂ 29 ವಾರ್ಡ್‌ಗಳಿಗೆ 17 ಖಾಸಗಿ ಬೋರ್‌ವೆಲ್‌ಗಳ ಮೂಲಕ ತುರ್ತು ಕುಡಿಯುವ ನೀರು ಪೂರೈಸಲಾಗುತ್ತಿದೆ.
ಅಲ್ಲದೆ, ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸಬಹುದಾದ 7377 ಗ್ರಾಮಗಳನ್ನು ಹಾಗೂ 1272 ವಾರ್ಡ್‌ಗಳನ್ನು ಗುರುತಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಒಟ್ಟು 7080 ಖಾಸಗಿ ಬೋರ್‌ವೆಲ್‌ಗಳನ್ನು ಗುರುತಿಸಲಾಗಿದೆ. ಬಹುತೇಕ ಬೋರ್‌ವೆಲ್ ಮಾಲೀಕರ ಜೊತೆಗೆ ಈಗಾಗಲೇ ಒಪ್ಪಂದ ಮಾಡಿಕೊಂಡಿಕೊಳ್ಳಲಾಗಿದೆ. ಗ್ರಾಮಪಂಚಾಯತ್ ಮಟ್ಟದಲ್ಲಿ ಟ್ಯಾಂಕರ್ ಗಳ ಟೆಂಡರ್ ಮಾಡಿ ಇಟ್ಟುಕೊಳ್ಳಲು ಸೂಚಿಸಲಾಗಿದೆ. ಸಮಸ್ಯೆ ಕಂಡುಬಂದ ಕೂಡಲೇ ಕುಡಿಯುವ ನೀರನ್ನು ಪೂರೈಸಲಾಗುವುದು.
ನೀರಿನ ಪೂರೈಕೆ ಸರ್ಕಾರದ ಆದ್ಯತೆ. ಹೀಗಾಗಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಬಾರದು ಎಂಬ ನಿಟ್ಟಿನಲ್ಲಿ ಬಾಡಿಗೆ ಟ್ಯಾಂಕರ್ ಹಾಗೂ ಖಾಸಗಿ ಬೋರ್‌ವೆಲ್, ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುವವರಿಗೆ ಯಾವುದೇ ನೆಪ ಇಲ್ಲದೆ 15 ದಿನಗಳಲ್ಲಿ ಬಿಲ್ಲು ಪಾವತಿಗೆ ಕ್ರಮವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಜೊತೆಗೆ ವಾಟರ್ ಟ್ಯಾಂಕರ್ ಗಳಿಗೆ ನ್ಯಾಯಯುತ ದರ ನಿಗದಿಗೊಳಿಸುವ ಬಗ್ಗೆಯೂ ಸಿದ್ದತೆ ಆಗುತ್ತಿದೆ.
ಎಲ್ಲ ತಾಲೂಕುಗಳಲ್ಲೂ ಟಾಸ್ಕ್‌ಫೋರ್ಸ್ ಸಭೆ
ಬರ ಘೋಷಿತ ತಾಲ್ಲೂಕುಗಳಲ್ಲಿ ಕುಡಿಯುವ ನೀರು ಮತ್ತು ಮೇವು ಒದಗಿಸಲು ಶಾಸಕರ ಅಧ್ಯಕ್ಷತೆಯಲ್ಲಿ 15 ದಿನಗಳಿಗೊಮ್ಮೆ ಟಾಸ್ಕ್‌ಫೋರ್ಸ್ ಸಭೆ ನಡೆಸಲಾಗುತ್ತಿದ್ದು, ಡಿಸೆಂಬರ್‌ನಿಂದ ಈವರೆಗೆ ತಾಲೂಕು ಮಟ್ಟದ 600 ಸಭೆಗಳನ್ನು ನಡೆಸಲಾಗಿದೆ. ಫೆಬ್ರವರಿ ಒಂದೇ ತಿಂಗಳಲ್ಲಿ 154 ಟಾಸ್ಕ್ ಫೋರ್ಸ್ ಸಭೆ ನಡೆಸಲಾಗಿದೆ. ಬರ ನಿರ್ವಹಣೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಬರ ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ರೂ. 725.92 ಕೋಟಿ ಹಾಗೂ ತಹಶೀಲ್ದಾರ್ ಖಾತೆಯಲ್ಲಿ ರೂ.135.40 ಕೋಟಿ ಸೇರಿದಂತೆ ಒಟ್ಟು ರೂ. 861.32 ಕೋಟಿ ಅನುದಾನವು ಬರ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲು ಲಭ್ಯವಿದೆ.
ಮೇವು ಕೊರತೆ ಇಲ್ಲ
ಪ್ರಸ್ತುತ ರಾಜ್ಯದಲ್ಲಿ 144 ಲಕ್ಷ ಟನ್ ಮೇವು ಲಭ್ಯವಿದ್ದು, ಮುಂದಿನ 27 ವಾರಗಳ ಬಳಕೆಗೆ ಸಾಕಾಗುತ್ತದೆ. ಅಲ್ಲದೆ, 25 ಜಿಲ್ಲೆಗಳಲ್ಲಿ ಮೇವು ಖರೀದಿಗೆ ಟೆಂಡರ್ ಕರೆಯಲಾಗಿದೆ. ಅವಶ್ಯಕತೆ ಬಂದ ಕೂಡಲೇ ಮೇವಿನ ದಾಸ್ತಾನನ್ನು ಪೂರೈಸಲಾಗುವುದು.
ಮೇವಿನ ಕಿಟ್ ಖರೀದಿಗೆ ಎಸ್‌ಡಿಆರ್‌ಎಫ್ ಅಡಿ ಪಶುಸಂಗೋಪನೆ ಇಲಾಖೆಗೆ 20 ಕೋಟಿ ನೀಡಲಾಗಿದ್ದು, ಆ ಹಣದಲ್ಲಿ 7.62 ಲಕ್ಷ ಮಿನಿ ಕಿಟ್‌ಗಳನ್ನು ಖರೀದಿಸಲಾಗಿದೆ. ಈ ಕಿಟ್‌ಗಳನ್ನು 4.19 ಲಕ್ಷ ರೈತರಿಗೆ ಉಚಿತವಾಗಿ ನೀಡಲಾಗಿದೆ. ಈ ಮೂಲಕ ಅಲ್ಪ ನೀರಾವರಿ ಜಮೀನಿನ ಲಭ್ಯತೆ ಇರುವ ರೈತರ ಮೂಲಕ ಮೇವು ಬೆಳೆದು ದಾಸ್ತಾನು ಮಾಡಲಾಗಿದೆ. ಅಲ್ಲದೆ, ಅಂತರರಾಜ್ಯ ಮೇವು ಸಾಗಾಣಿಕೆಯನ್ನು ನಿರ್ಬಂಧಿಸಿ 22/11/2023 ರಂದು ಆದೇಶ ಹೊರಡಿಸಲಾಗಿದ್ದು, ಪ್ರಸ್ತುತ ರಾಜ್ಯದಲ್ಲಿ ಮೇವಿನ ಕೊರತೆ ಇಲ್ಲ.
ಇದನ್ನೂ ಓದಿ: Blast in Bengaluru: ರಾಮೇಶ್ವರಂ ಕೆಫೆ ಸ್ಫೋಟ; ಇವನೇ ನೋಡಿ ಬಾಂಬ್ ಇಟ್ಟವನು!
ಈಗಾಗಲೇ ಪ್ರತಿ ತಾಲೂಕಿನಲ್ಲೂ ಗೋಶಾಲೆ ಇವೆ. ಅಗತ್ಯವಿದ್ದರೆ ಎಸ್‌ಡಿಆರ್‌ಎಫ್ ಮಾರ್ಗಸೂಚಿಯ ಪ್ರಕಾರ ಅರ್ಹತೆಯಂತೆ ಹೋಬಳಿ ಮಟ್ಟದಲ್ಲೂ ಸಹ ಹೆಚ್ಚುವರಿ ಗೋಶಾಲೆ ತೆರೆಯಲು ಹಾಗೂ ಮೇವಿನ ಬ್ಯಾಂಕ್ ಸ್ಥಾಪಿಸಲು 4/12/2023 ರಂದು ಸುತ್ತೋಲೆ ಹೊರಡಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದರು.