Site icon Vistara News

Water Crisis: ಕುಡಿಯುವ ನೀರಿನ ದಂಧೆಗೆ ಬ್ರೇಕ್; ಮುಂದಿನ ತಿಂಗಳೇ ಕಾವೇರಿ 5ನೇ ಹಂತ ಪೂರ್ಣವೆಂದ ಡಿಕೆಶಿ

DK Shivakumar

ಬೆಂಗಳೂರು: ಕರ್ನಾಟಕದಲ್ಲಿ ಭೀಕರ ಬರಗಾಲ ಬಂದಿದ್ದರಿಂದ ಕುಡಿಯುವ ನೀರಿಗೆ ಭಾರಿ ಅಭಾವವನ್ನು (Water Crisis) ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರು ಸಹ ಇದಕ್ಕೆ ಹೊರತಾಗಿಲ್ಲ. ಅಲ್ಲದೆ, ಕುಡಿಯುವ ನೀರಿಗೆ ಸಂಬಂಧಿಸಿ ಕೆಲವರು ಹೆಚ್ಚಿನ ಹಣ ವಸೂಲಿ ಮಾಡುವ ದಂಧೆಯನ್ನೇ ಶುರುವಿಟ್ಟಿದ್ದಾರೆ. ಈ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಪ್ರತಿಕ್ರಿಯೆ ನೀಡಿದ್ದು, “ಕುಡಿಯುವ ನೀರಿನ ದಂಧೆ ತಡೆಗಟ್ಟಿ ನೀರಿನ ಅಭಾವವನ್ನು ನೀಗಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಕೆಲವರು ರಾಜಕಾರಣಕ್ಕಾಗಿ ಟೀಕೆ ಮಾಡುತ್ತಿದ್ದು, ಅವರಿಗೆ ರಾಜಕಾರಣ ಮಾಡಬೇಡಿ ಎಂದು ಹೇಳುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ. ಶಿವಕುಮಾರ್, ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆಯಾಗುತ್ತಿರುವ ಪ್ರದೇಶಗಳಲ್ಲಿ ನೀರಿನ ಕೊರತೆ ಇಲ್ಲ, ಕೊಳವೆ ಬಾವಿಗಳ ಬತ್ತಿರುವುದರಿಂದ ಇವುಗಳನ್ನೇ ಅವಲಂಬಿಸಿದ್ದ ಪ್ರದೇಶಗಳಲ್ಲಿ ನೀರಿನ ಅಭಾವ ಎದುರಾಗಿದೆ. ಈ ನೀರಿನ ಅಭಾವ ನೀಗಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.

ಖಾಸಗಿ ನೀರಿನ ಟ್ಯಾಂಕರ್‌ಗಳು ಸರ್ಕಾರದ ಸುಪರ್ದಿಗೆ

ಕಳೆದ 30-40 ವರ್ಷಗಳಲ್ಲಿ ಇಂತಹ ಭೀಕರ ಬರಗಾಲವನ್ನು ನಾವು ನೋಡಿರಲಿಲ್ಲ. ಬೆಂಗಳೂರಿನಲ್ಲಿರುವ 13,900 ಕೊಳವೆ ಬಾವಿಗಳಲ್ಲಿ 6,900 ಕೊಳವೆ ಬಾವಿ ಬತ್ತಿರುವ ಹಿನ್ನೆಲೆಯಲ್ಲಿ ಇವುಗಳನ್ನೇ ಅವಲಂಬಿಸಿದ್ದ ಪ್ರದೇಶಗಳಲ್ಲಿ ನೀರಿನ ಅಭಾವ ಸೃಷ್ಟಿಯಾಗಿದೆ. ಹೀಗಾಗಿ ಖಾಸಗಿ ನೀರಿನ ಟ್ಯಾಂಕರ್‌ಗಳನ್ನು ಸರ್ಕಾರದ ಸುಪರ್ದಿಗೆ ಪಡೆದು ನೀರು ಪೂರೈಸಲು ಮುಂದಾಗಿದ್ದೇವೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಮೇ ಅಂತ್ಯದೊಳಗೆ ಕಾವೇರಿ 5ನೇ ಹಂತ ಪೂರ್ಣ

ನೀರಿನ ಪೂರೈಕೆಯಲ್ಲಿ ನಡೆಯುತ್ತಿದ್ದ ದಂಧೆಯನ್ನು ನಾವು ತಡೆದಿದ್ದೇವೆ. ಜನರಿಗೆ ಸೂಕ್ತ ದರದಲ್ಲಿ ನೀರು ಸಿಗುವಂತೆ ಮಾಡಿದ್ದೇವೆ. ಕೆಲವು ಕೊಳಗೇರಿ ಪ್ರದೇಶದಲ್ಲಿ ಉಚಿತವಾಗಿ ನೀರು ನೀಡುತ್ತಿದ್ದೇವೆ. ಉಳಿದಂತೆ ಅಪಾರ್ಟ್ಮೆಂಟ್‌ಗಳಿಗೆ ಪೂರೈಸುವ ನೀರಿಗೆ ದರ ನಿಗದಿ ಮಾಡಿದ್ದು, ಕೈಗಾರಿಕೆಗಳ ಬಳಕೆಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ. ಈಗಾಗಲೇ 1500ಕ್ಕೂ ಹೆಚ್ಚು ಟ್ಯಾಂಕರ್ ಗಳನ್ನು ನೋಂದಣಿ ಮಾಡಲಾಗಿದ್ದು, ಬೇರೆಯವರಿಗೆ ನೋಂದಣಿ ಮಾಡಿಕೊಳ್ಳಲು ಕಾಲಾವಕಾಶ ನೀಡಿದ್ದೇವೆ. ಪೊಲೀಸ್, ಆರ್‌ಟಿಒ, ಪಾಲಿಕೆ ಅವರಿಗೆ ಸೂಚನೆ ನೀಡಿ ನೋಂದಾಯಿತ ಟ್ಯಾಂಕರ್‌ಗಳ ಮೇಲೆ ಸರ್ಕಾರದ ನಾಮಫಲಕ ಅಳವಡಿಸುವಂತೆ ಮಾಡುತ್ತೇವೆ. ಆ ಮೂಲಕ ಸರ್ಕಾರದ ನಿಯಂತ್ರಿತ ಕಾನೂನುಬಾಹಿರವಾಗಿ ಜನರಿಂದ ವಸೂಲಿ ಮಾಡುವುದನ್ನು ತಡೆಗಟ್ಟಲು ಮುಂದಾಗಿದ್ದೇವೆ. ಬೆಂಗಳೂರಿನ ಸುತ್ತಮುತ್ತಲು ಇರುವ ನೀರಾವರಿ ಕೊಳವೆ ಬಾವಿಯನ್ನು ನಾವು ಗುರುತಿಸಿದ್ದು, ಅಗತ್ಯ ಬಿದ್ದರೆ ಅವುಗಳನ್ನು ಬಳಸಿಕೊಳ್ಳುತ್ತೇವೆ. ಇನ್ನು ಬೆಂಗಳೂರಿನ ಹೊರವಲಯದ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಕಾವೇರಿ 5ನೇ ಹಂತದ ಯೋಜನೆ ಮೇ ಅಂತ್ಯದೊಳಗೆ ಪೂರ್ಣಗೊಳಿಸುತ್ತೇವೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ತಮಿಳುನಾಡಿಗೆ ನೀರು ಬಿಟ್ಟಿಲ್ಲ

ತಮಿಳುನಾಡಿಗೆ ನೀರು ಬಿಡಲಾಗಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, “ತಮಿಳುನಾಡಿಗೆ ನೀರು ಬಿಟ್ಟಿರುವ ಆರೋಪ ಸುಳ್ಳು. ತಮಿಳುನಾಡಿಗೆ ಈ ಸಂದರ್ಭದಲ್ಲಿ ನೀರು ಬಿಡುವ ಪ್ರಶ್ನೆಯೇ ಇಲ್ಲ. ತಮಿಳುನಾಡಿಗೆ ನೀರು ಬಿಟ್ಟಿಲ್ಲ, ಬಿಡುವುದೂ ಇಲ್ಲ. ತಮಿಳುನಾಡಿಗೆ ಹೋಗುವ ಪ್ರತಿಯೊಂದು ನೀರಿನ ಲೆಕ್ಕ ದಾಖಲಾಗಿರುತ್ತದೆ. ನಾವು ಬಿಜೆಪಿಯವರಂತೆ ಮೂರ್ಖರಲ್ಲ. ನಾವು ನೀರಿನ ವಿಚಾರದಲ್ಲಿ ಜವಾಬ್ದಾರಿ ಹೊಂದಿದ್ದೇವೆ. ಕಾವೇರಿ ಭಾಗದ ರೈತರನ್ನು ನಾವು ಈ ಹಿಂದೆಯೂ ಕಾಪಾಡಿದಿದ್ದೇವೆ. ಈಗಲೂ ಕಾಪಾಡುತ್ತಿದ್ದೇವೆ. ತಮಿಳುನಾಡು ನೀರು ಕೇಳುತ್ತಿಲ್ಲದಿರುವಾಗ ನಾವು ಯಾಕೆ ಅವರಿಗೆ ನೀರನ್ನು ಬಿಡೋಣ? ಕುಡಿಯುವ ನೀರಿನ ಪೂರೈಕೆ ನಮ್ಮ ಸರ್ಕಾರದ ಮೊದಲ ಆದ್ಯತೆ. ಶಿವ ಡ್ಯಾಂನಲ್ಲಿ ನೀರಿನ ಮಟ್ಟ 2 ಅಡಿ ಕಡಿಮೆ ಇದ್ದ ಕಾರಣ ಬೆಂಗಳೂರಿಗೆ ಪೂರೈಸಲು ನೀರನ್ನು ಪಂಪ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈ ಕೊರತೆಯನ್ನು ತುಂಬಲು ಬಿಡಬ್ಲ್ಯೂಎಸ್ಎಸ್‌ಬಿ ಮನವಿ ಮೇರೆಗೆ ಕೆಆರ್‌ಎಸ್‌ನಿಂದ ನೀರು ಹರಿಸಿದ್ದೇವೆಯೇ ಹೊರತು, ತಮಿಳುನಾಡಿಗೆ ನೀರು ಹರಿಸಿಲ್ಲ ಎಂದು ಡಿ.ಕೆ. ಶಿವಕುಮಾರ್‌ ಸ್ಪಷ್ಟನೆ ನೀಡಿದರು.

ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಗೆ ಮೇಕೆದಾಟು ಯೊಜನೆಯೊಂದೇ ಶಾಶ್ವತ ಪರಿಹಾರವಾಗಿದೆ. ಆದರೆ ಸದ್ಯದ ಮಟ್ಟಿಗೆ ನೀರಿನ ಅಭಾವ ನೀಗಿಸಲು ಹಾಲಿ ಇರುವ ಕೊಳವೆ ಬಾವಿಗಳನ್ನು ಮತ್ತೆ ಕೊರೆಸುವುದು ಮತ್ತು ಹೊಸ ಕೊಳವೆ ಬಾವಿಯನ್ನು ಕೊರೆಸಲು ತೀರ್ಮಾನಿಸಿದ್ದೇವೆ. ಕೈಗಾರಿಕೆ, ಕಟ್ಟಡ ನಿರ್ಮಾಣ ಸೇರಿದಂತೆ ಎಲ್ಲರಿಗೂ ನೀರು ಪೂರೈಸುತ್ತೇವೆ. ಇದ್ಕಾಗಿ ಆನೇಕಲ್ ಹಾಗೂ ಬೆಂಗಳೂರು ದಕ್ಷಿಣ ಭಾಗದ ಹಳ್ಳಿಗಳ ರೈತರ ಜತೆಗೂ ಒಪ್ಪಂದ ಮಾಡಿಕೊಂಡು ಅವರ ಕೊಳವೆ ಬಾವಿ ನೀರನ್ನು ಬಳಸಿಕೊಳ್ಳಲಾಗುವುದು ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಸ್ನಾನಕ್ಕೂ ನೀರಿಲ್ಲ ಎನ್ನುವ ಬುದ್ಧಿವಂತರು!

ಕೆಲವು ಬುದ್ಧಿವಂತರು ಸ್ನಾನಕ್ಕೂ ನೀರಿಲ್ಲ ಎಂದು ಟ್ವೀಟ್ ಮಾಡುತ್ತಾರೆ. ಈ ಮಧ್ಯೆ ವಾರ್ಡ್, ವಲಯ ಮಟ್ಟದಲ್ಲಿ ಕಾಲ್ ಸೆಂಟರ್‌ಗಳನ್ನು ನಿರ್ಮಾಣ ಮಾಡಿದ್ದೇವೆ. ಬೆಂಗಳೂರಿನ ಇತಿಹಾಸದಲ್ಲೇ ಇಷ್ಟು ಪರಿಣಾಮಕಾರಿಯಾದ ವ್ಯವಸ್ಥೆಯನ್ನು ಯಾವ ಸರ್ಕಾರವೂ ಮಾಡಿರಲಿಲ್ಲ ಎಂದು ಡಿ.ಕೆ. ಶಿವಕುಮಾರ್‌ ಹೇಳಿಕೊಂಡರು.

ಬಿಜೆಪಿಗೆ ಸವಾಲು

ಮಾಧ್ಯಮಗಳು ತೋರಿಸುತ್ತಾರೆ ಎಂದು ಬಿಜೆಪಿಯವರು ನೀರಿನ ಹಾಹಾಕಾರ ಎಂದು ಸೃಷ್ಟಿಸುತ್ತಿದ್ದಾರೆ. ಮೇಕೆದಾಟು ಯೋಜನೆಗೆ 1 ಸಾವಿರ ಕೋಟಿ ರೂಪಾಯಿ ಅನುದಾನ ಇಟ್ಟಿದ್ದ ಬಿಜೆಪಿ ಸರ್ಕಾರ ಅದನ್ನು ಹಿಂಪಡೆದಿದ್ದು ಯಾಕೆ? ಕೇಂದ್ರ ಸರ್ಕಾರದ ಬಳಿ ಎಲ್ಲ ಸಂಸದರು ಹೋಗಿ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಿದರೆ ಸಮಸ್ಯೆ ಬಗೆಹರಿಯುತ್ತದೆ. ನಾವು ತಮಿಳುನಾಡಿಗೆ ಬಿಡುಗಡೆ ಮಾಡುವ ನೀರನ್ನು ಬಿಡುತ್ತೇವೆ. ಬಿಜೆಪಿಯವರು ಪ್ರತಿಭಟನೆ ಮಾಡಬೇಕಿರುವುದು ನಮ್ಮ ವಿರುದ್ಧವಲ್ಲ, ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕು. ಮಹದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುಮತಿ ಕೊಡಿಸಲಿ ಎಂದು ಡಿ.ಕೆ. ಶಿವಕುಮಾರ್‌ ಸವಾಲು ಹಾಕಿದರು.

ಇದನ್ನೂ ಓದಿ: Lok Sabha Election 2024: ಬೀದರ್‌, ಕೊಪ್ಪಳಕ್ಕೆ ಬಿಜೆಪಿಯಿಂದ ಅಚ್ಚರಿಯ ಅಭ್ಯರ್ಥಿ? ಬಳತೆ, ಮಲ್ಕಾಪುರೆಗೆ ಟಿಕೆಟ್?

ಮೇಕೆದಾಟು ಯೋಜನೆಗೆ ಸಮೀಕ್ಷೆ

ನಮ್ಮ ಸರ್ಕಾರಕ್ಕೆ ಬದ್ಧತೆ ಇರುವ ಕಾರಣ ಮೇಕೆದಾಟು ಯೋಜನೆ ಜಾರಿಗೆ ಅರಣ್ಯ ಪ್ರದೇಶದಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ. ಅರಣ್ಯ ಪ್ರದೇಶಕ್ಕೆ ಪರ್ಯಾಯ ಜಾಗ ಗುರುತಿಸಲಾಗಿದೆ. ಬದ್ಧತೆ ಇರುವ ಕಾರಣಕ್ಕೆ ನಾವು ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಈ ಯೋಜನೆಗಳನ್ನು ಮಾಡಲೇಬೇಕು ಅಂತಲೇ ನಾನು ನೀರಾವರಿ ಇಲಾಖೆಯ ಜವಾಬ್ದಾರಿ ತೆಗೆದುಕೊಂಡಿದ್ದೇನೆ ಡಿ.ಕೆ. ಶಿವಕುಮಾರ್‌ ಹೇಳಿದರು.

Exit mobile version