ಬೆಂಗಳೂರು: ನಗರದ ರಸ್ತೆಗಳಲ್ಲಿ ಅಪಾಯಕಾರಿ ರೀತಿಯಲ್ಲಿ ವ್ಹೀಲಿಂಗ್ ಮಾಡಿ ಇತರ ವಾಹನ ಚಾಲಕರ ನೆಮ್ಮದಿಗೆಡಿಸುವ ಪುಂಡರು ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇಗೂ ಲಗ್ಗೆ ಇಟ್ಟಿದ್ದಾರೆ. ಹೀಗೆ ಭಯಾನಕ ರೀತಿಯಲ್ಲಿ ವ್ಹೀಲಿಂಗ್ ಮಾಡಿದ (wheeling menace) ಇಬ್ಬರು ಪುಂಡರನ್ನು ಹೆಡೆಮುರಿ ಕಟ್ಟಲಾಗಿದೆ.
ಸಾರ್ವಜನಿಕರ ದೂರು ಗಮನಿಸಿ ವ್ಹೀಲಿಂಗ್ ಪುಂಡರಿಗೆ ಬಲೆ ಬೀಸಿದ ಪೊಲೀಸರು, ಬೈಕ್ ನಂಬರ್ ಪರಿಶೀಲನೆ ನಡೆಸಿ ಇಬ್ಬರು ಯುವಕರನ್ನು ಸೆರೆ ಹಿಡಿದಿದ್ದಾರೆ. ಪೊಲೀಸರ ಕಣ್ತಪ್ಪಿಸಲು ನಂಬರ್ ಪ್ಲೇಟ್‌ನಲ್ಲಿ ವಾಹನ ಸಂಖ್ಯೆಯನ್ನು ಈ ಪುಂಡರು ಅಳಿಸಿ ಹಾಕಿದ್ದರು. ಈ ಹಿನ್ನೆಲೆಯಲ್ಲಿ ನಗರದ ಶೋಯೆಬ್ ಮತ್ತು ಆತನ ಸ್ನೇಹಿತನನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ.
ಇವರು ಎಕ್ಸ್‌ಪ್ರೆಸ್ ವೇನಲ್ಲಿ ವ್ಹೀಲಿಂಗ್ ಮಾಡಿದ್ದಲ್ಲದೆ, ವಿರುದ್ಧ ದಿಕ್ಕಿನಲ್ಲಿಯೂ ವ್ಹೀಲಿಂಗ್ ಮಾಡಿದ್ದಾರೆ. ಒಂದು ದಿಕ್ಕಿನಿಂದ ವೇಗವಾಗಿ ಬರುವ ವಾಹನಗಳ ಎದುರಿಂದ ವ್ಹೀಲಿಂಗ್ ಮಾಡಿ ಪುಂಡಾಟ ಮೆರೆದಿದ್ದಾರೆ. ವ್ಹೀಲಿಂಗ್ ಮಾಡಿ ಅದರ ವಿಡಿಯೋ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿಯೂ ಅಪ್ಲೋಡ್ ಮಾಡುವ ಭಂಡತನ ತೋರಿದ್ದಾರೆ.
ಇನ್ನೊಬ್ಬ ಆಸಾಮಿ ಗರ್ಲ್‌ಫ್ರೆಂಡ್ ಅನ್ನು ಹಿಂಬದಿ ಕೂರಿಸಿಕೊಂಡು ವ್ಹೀಲಿಂಗ್ ಮಾಡಿದ್ದಾನೆ. ಇಬ್ಬರೂ ಹೆಲ್ಮೆಟ್ ಕೂಡ ಹಾಕಿಲ್ಲ. ಯುವಕನ ಈ ಡೆಡ್ಲಿ ವ್ಹೀಲಿಂಗ್‌ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಡಿಯೋ ನೋಡಿ ಕಿಡಿಗೇಡಿ ಯುವಕರ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರನ್ನು ಒತ್ತಾಯಿಸಿದ್ದಾರೆ. ಎಕ್ಸ್‌ಪ್ರೆಸ್ ವೇನಲ್ಲಿ ಇತರರಿಗೆ ತೊಂದರೆಯಾಗುವ ರೀತಿಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದು, ಇದು ಇತರ ವಾಹನ ಸವಾರರ ಜೀವಕ್ಕೆ ಕುತ್ತು ತರುವಂತಿದೆ ಎಂದಿದ್ದರು.
ಈಗಾಗಲೇ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಿದೆ. ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಾಗುತ್ತಿದ್ದಾರೆ. ಇಂಥ ಸನ್ನಿವೇಶದಲ್ಲಿ ವ್ಹೀಲಿಂಗ್ ಸಮಸ್ಯೆ ಕೂಡ ಜೋರಾದರೆ, ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂದು ಸಾರ್ವಜನಿಕರು ಆತಂಕಪಟ್ಟಿದ್ದಾರೆ.
ಇದನ್ನೂ ಓದಿ: Wheeling Menace: ಪುಂಡರ ವ್ಹೀಲಿಂಗ್ ಹುಚ್ಚಾಟದಿಂದ ಭೀಕರ ಅಪಘಾತ, ಸಾವು ಬದುಕಿನ ನಡುವೆ ಯುವತಿಯರು