Site icon Vistara News

Mohandas Pai : ಐಟಿ ಸಿಟಿ ಗರಿ ಉದುರೀತು ಎಂದ ಮೋಹನ್‌ ದಾಸ್‌ ಪೈ, ಪ್ರಿಯಾಂಕ್‌ ತಿರುಗೇಟು

TV Mohandas Pai Priyank Kharge

ಬೆಂಗಳೂರು: ರಾಜ್ಯ ಸರ್ಕಾರ (State Government) ಹೀಗೇ ನಿರ್ಲಕ್ಷ್ಯ ಮಾಡುತ್ತಾ ಹೋದರೆ ಬೆಂಗಳೂರಿಗೆ ಇರುವ ಐಟಿ ನಗರಿ (IT City feather) ಎಂಬ ಗರಿಮೆಗೆ ಕುತ್ತು ಬಂದೀತು ಎಂದು ಹಿರಿಯ ಉದ್ಯಮಿ ಟಿ.ವಿ. ಮೋಹನ್‌ ದಾಸ್‌ ಪೈ (TV Mohandas Pai) ಅವರು ಚಾಟಿ ಏಟು ನೀಡಿದ್ದಾರೆ. ಆದರೆ, ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಐಟಿ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಅವರು ʻಗಾಳಿಯಲ್ಲಿ ಗುಂಡು ಹೊಡೆಯಬೇಡಿʼʼ ಎಂದಿದ್ದಾರೆ.

analyticsindiamag.com ಎಂಬ ವೆಬ್‌ಸೈಟ್‌ ಪ್ರಕಟಿಸಿದ Will Hyderabad Dethrone Bangalore in the IT Hub Race? (ಐಟಿ ಹಬ್‌ ಪೈಪೋಟಿಯಲ್ಲಿ ಹೈದರಾಬಾದ್‌ ಬೆಂಗಳೂರನ್ನು ಅಗ್ರಪಟ್ಟದಿಂದ ಕಿತ್ತೆಸೆಯಬಹುದೇ?) ಎಂಬ ವರದಿಯನ್ನು ಮುಂದಿಟ್ಟುಕೊಂಡು ಟಿ.ವಿ. ಮೋಹನ್‌ದಾಸ್‌ ಪೈ ಅವರು ಟ್ವೀಟ್‌ ಒಂದನ್ನು ಮಾಡಿದ್ದಾರೆ. ವೆಬ್‌ಸೈಟ್‌ ವರದಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಟ್ಯಾಗ್‌ ಮಾಡಿದ ಟ್ವೀಟ್‌ನಲ್ಲಿ Will Hyderabad Dethrone Bangalore’s IT Status? continued neglect of Bengaluru by successive govts over last 10 years has led to this. Hope govt shows more energy to improve city ಎಂದು ಬರೆದಿದ್ದಾರೆ. ಅಂದರೆ, ಐಟಿ ಕ್ಷೇತ್ರದ ಅಗ್ರಗಣ್ಯ ಎಂಬ ಬೆಂಗಳೂರಿನ ಸ್ಥಾನಮಾನವನ್ನು ಹೈದರಾಬಾದ್‌ ಕಿತ್ತು ಹಾಕಬಹುದೇ? ಇದಕ್ಕೆ ಕಾರಣವಾಗಿರುವುದು ಕಳೆದ ಹತ್ತು ವರ್ಷಗಳಲ್ಲಿ ಅಧಿಕಾರ ನಡೆಸಿದ ಸರ್ಕಾರಗಳು ವಹಿಸಿದ ದಿವ್ಯ ನಿರ್ಲಕ್ಷ್ಯ. ಸರ್ಕಾರ ನಗರದ ಅಭಿವೃದ್ಧಿಗಾಗಿ ಹೆಚ್ಚು ಶಕ್ತಿಯನ್ನು ವಿನಿಯೋಗಿಸುತ್ತದೆ ಎಂದು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಹಿರಿಯ ಉದ್ಯಮಿ ಆನಂದ ಮಹೇಂದ್ರ ಅವರು ಇತ್ತೀಚೆಗೆ ಒಂದು ಮಾತು ಹೇಳಿದ್ದರು: ಗೂಗಲ್‌ ಕಂಪನಿಯು ಹೈದರಾಬಾದ್‌ನಲ್ಲಿ ತನ್ನ ದೊಡ್ಡ ಕಚೇರಿಯನ್ನು ಸ್ಥಾಪಿಸಲಿದೆ. ಅಮೆರಿಕದ ಹೊರಗಡೆ ಅತಿ ದೊಡ್ಡ ಕಚೇರಿಯನ್ನು ನಿರ್ಮಿಸಲು ಮುಂದಾಗಿರುವುದು ಒಂದು ಗೂಗಲ್‌ ಭೌಗೋಳಿಕ ರಾಜಕೀಯ ಪ್ರಯತ್ನ. ಈ ಕ್ರಮವು ಭಾರತೀಯ ಟೆಕ್‌ ವಾತಾವರಣಕ್ಕೆ ಒಂದು ಗುಡ್‌ ನ್ಯೂಸ್‌. ಆದರೆ, ಗೂಗಲ್‌ ಸಿಲಿಕಾನ್‌ ವ್ಯಾಲಿ ಎಂದೇ ಹೆಸರಾಗಿರುವ ಭಾರತದ ನಿರ್ವಿವಾದಿತ ಐಟಿ ರಾಜಧಾನಿಯಾಗಿರುವ ಬೆಂಗಳೂರನ್ನು ಬಿಟ್ಟು ಹೈದರಾಬಾದ್‌ನ್ನು ಆಯ್ಕೆ ಮಾಡಿರುವುದು ಏನೋ ಅಸಂಬದ್ಧ ಅನಿಸುತ್ತದೆ.

ಈ ಅಂಶಗಳನ್ನು ಉಲ್ಲೇಖಿಸಿ ಮಾಡಿರುವ ವರದಿಗೆ ಹೈದರಾಬಾದ್‌ ಬೆಂಗಳೂರನ್ನು ಅಗ್ರ ಪಟ್ಟದಿಂದ ಕಿತ್ತು ಹಾಕಬಹುದೇ ಎಂಬ ಪ್ರಶ್ನಾರ್ಥಕ ಚಿಹ್ನೆಯೊಂದಿಗೆ ವರದಿ ಮಾಡಿದೆ.

ಟಿ.ವಿ. ಮೋಹನ್‌ ದಾಸ್‌ ಪೈ ಅವರು ಈ ಅಂಶವನ್ನು ಇಟ್ಟುಕೊಂಡು ಟ್ವೀಟ್‌ ಮಾಡಿದ್ದಾರೆ. ರಾಜ್ಯ ಸರ್ಕಾರಕ್ಕೆ ಚಾಟಿ ಬೀಸುತ್ತಿರುವುದು ಇದು ಮೊದಲೇನಲ್ಲ. ಹಿಂದೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಅವರು ಬೆಂಗಳೂರು ನಗರದ ರಸ್ತೆಗಳ ವಿಚಾರದಲ್ಲಿ ಆಕ್ಷೇಪ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಗಮನವನ್ನು ಸೆಳೆದಿದ್ದರು.

ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯ ಸಂದರ್ಭದಲ್ಲಿ ಕೆಲವು ಐಟಿ ಕಂಪನಿಗೆ ನೀರು ನುಗ್ಗಿದಾಗಲೂ ಮೋಹನ್‌ ದಾಸ್‌ ಪೈ ಅವರು ಹೀಗೇ ಆದರೆ ಇಲ್ಲಿನ ಕಂಪನಿಗಳು ವಲಸೆ ಹೋಗುವ ಸಾಧ್ಯತೆಗಳಿವೆ ಎಂದಿದ್ದರು. ಈ ನಡುವೆ ಅವರ ಮಾತಿಗೆ ಪೂರಕವಾಗಿ ಬೆಂಗಳೂರಿನಲ್ಲಿ ಪ್ರಾರಂಭವಾಗಬೇಕಿದ್ದ ಕೆಲ ಐಟಿ ಕಂಪನಿ ಹೈದರಾಬಾದ್ ಗೆ ಶಿಫ್ಟ್ ಆಗುತ್ತಿವೆ ಎಂಬ ಮಾಹಿತಿಯೂ ಇದೆ. ಈ ಬಗ್ಗೆ ಐಟಿ ಕಂಪನಿಗಳು ಹಲವು ಬಾರಿ ಸರ್ಕಾರಕ್ಕೆ ಮಾಹಿತಿ ನೀಡಿವೆ ಎನ್ನಲಾಗಿದೆ. ಇದನ್ನು ಬಳಸಿಕೊಂಡು ಮೋಹನ್‌ ದಾಸ್‌ ಪೈ ಅವರು ಸರ್ಕಾರಕ್ಕೆ ಮಾರ್ಮಿಕವಾಗಿ ಕುಟುಕಿದ್ದಾರೆ.

ರಾಜ್ಯ ವಿರೋಧಿ ಹೇಳಿಕೆ ಸಲ್ಲ: ಮೋಹನ್‌ದಾಸ್‌ ಪೈಗೆ ಪ್ರಿಯಾಂಕ್‌ ತಿರುಗೇಟು

ಮೋಹನ್ ದಾಸ್ ಪೈ ಅವರು ಮಾಡಿರುವ ಟ್ವೀಟ್‌ಗೆ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸಚಿವ ಪ್ರಿಯಾಂಕ್‌ ಖರ್ಗೆ ಅವರು ತಿರುಗೇಟು ನೀಡಿದ್ದಾರೆ.

ʻʻಮೋಹನ್ ದಾಸ್ ಪೈ ಅವರಿಗೆ ಮಾಹಿತಿ ಕೊರತೆ ಇದೆ. ಒಂದೇ ಒಂದು ಸಿಂಗಲ್ ಕಂಪನಿ ಕರ್ನಾಟಕ ಬಿಟ್ಟು ಹೋಗಿಲ್ಲ. ಕೆಲವರಿಗೆ ಕರ್ನಾಟಕ ವಿರೋಧಿ ಹೇಳಿಕೆ ಕೊಡೋದು ಹ್ಯಾಬಿಟ್ ಆಗಿದೆ. ಇದನ್ನು ಪದೇಪದೆ ಮಾಡುವುದು ಸರಿಯಲ್ಲ. ಅವರು ಒಂದೇ ಒಂದು ಕಂಪನಿಯ ಉದಾಹರಣೆ ನೀಡಲಿ ನೋಡೋಣ. ಸುಮ್ಮನೆ ಗಾಳಿಯಲ್ಲಿ ಗುಂಡು ಹಾಕುವುದು ಬೇಡʼʼ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ʻʻಇದೇ ಮೋಹನ್ ದಾಸ್ ಪೈ ಬೇರೆ ಬೇರೆ ರಾಜ್ಯಗಳ ಕಂಪನಿಗಳಿಗೆ ಬಂಡವಾಳ ಹಾಕುವುದಿಲ್ವಾ? ಅವರು ಡೈವರ್ಸಿಫಿಕೇಷನ್ ಮಾಡಿದ್ರೆ ಸರಿ, ಬೇರೆಯವರು ಮಾಡಿದ್ರೆ ತಪ್ಪಾ? ಅವರು ಕನ್ನಡಿಗರ ಪರವಾಗಿ ಮಾತನಾಡಬೇಕೇ ಹೊರತು ಈ ರೀತಿ ಮಾತನಾಡಬಾರದುʼʼ ಎಂದು ಹೇಳಿದ್ದಾರೆ ಪ್ರಿಯಾಂಕ್‌ ಖರ್ಗೆ.

ಇವರೇ ಅಲ್ವಾ ಎಲ್ಲ ವಿಷನ್ ಗ್ರೂಪ್‌ಗಳಲ್ಲಿ ಇದ್ದವರು? ಎಂದು ಕೇಳಿರುವ ಪ್ರಿಯಾಂಕ್‌ ಖರ್ಗೆ, ಫಿಲಿಪ್ಸ್ ಇನೊವೇಶನ್ ರಾಜ್ಯಕ್ಕೆ ಬಂದಾಗ ಇವರು ಬೆನ್ನು ತಟ್ಟಿದ್ರಾ ಎಂದು ಪ್ರಶ್ನೆ ಮಾಡಿದ್ದಾರೆ.

ʻʻಸಕಾರಾತ್ಮಕವಾಗಿ ಎಲ್ಲರ ಅಭಿಪ್ರಾಯ ಸಂಗ್ರಹ ಮಾಡ್ತೇವೆ. ಅವರ ಮಾತುಗಳಿಂದ ನಮಗೆ ರಾಜ್ಯಕ್ಕೆ ಬಂಡವಾಳ ಬರುತ್ತದೆ ಎಂದು ಭಾವಿಸುತ್ತೇವೆ. ಆದರೆ, ಪದೇಪದೆ ಯಾಕೆ ಹೀಗೆ ನೆಗೆಟಿವ್ ಆಗಿ ಮಾತನಾಡ್ತಾರೆ ಗೊತ್ತಿಲ್ಲʼʼ ಎಂದು ಹೇಳಿರುವ ಪ್ರಿಯಾಂಕ್‌ ಖರ್ಗೆ, ಯಾವ ಬಂಡವಾಳ ಕೂಡ ರಾಜ್ಯದಿಂದ ವಾಪಸ್ ಹೊರಗಡೆ ಹೋಗಿಲ್ಲ ಎಂದಿದ್ದಾರೆ.

ʻʻಸರ್ಕಾರಕ್ಕೆ ಬ್ಲ್ಯಾಕ್ ಮೇಲ್ ಮಾಡುವಂತ ವ್ಯಕ್ತಿ ಅವರಲ್ಲ. ಆದರೆ ಪದೇ ಪದೇ ಕರ್ನಾಟಕ ವಿರೋಧಿ ನಿಲುವು ತಾಳಬಾರದುʼʼ ಎಂದು ಎಚ್ಚರಿಕೆಯ ಧ್ವನಿಯಲ್ಲಿ ಹೇಳಿದ್ದಾರೆ.

ಮೂಲಸೌಕರ್ಯ ಕೊಡಲು ಸರ್ಕಾರ ವಿಫಲ ಎಂದ ಅಶ್ವತ್ಥನಾರಾಯಣ

ಈ ನಡುವೆ, ಮೋಹನ್ ದಾಸ್ ಪೈ ಟ್ವೀಟ್‌ ಅನ್ನು ಸಮರ್ಥಿಸಿ ಮಾತನಾಡಿರುವ ಮಾಜಿ ಐಟಿಬಿಟಿ ಸಚಿವ ಅಶ್ವಥ್ ನಾರಾಯಣ್ ಅವರು, ಎಲ್ಲಾ ಆವಿಷ್ಕಾರವಂತರು, ತಂತ್ರಜ್ಞಾನದವರು ಮತ್ತು ಉದ್ಯಮಶೀಲ ಇವರೆಲ್ಲರಿಗೂ ಬೆಂಗಳೂರು ಬೇಕು. ಆದರೆ, ಮೂಲಭೂತ ಸೌಕರ್ಯಗಳ ಕೊಡುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದರು.

ʻʻಭ್ರಷ್ಟಾಚಾರ ಹೆಚ್ಚುತ್ತಿದೆ. ಬಿಲ್ಡರ್ ಗಳು ಬಿಲ್ಡಿಂಗ್ ಕಟ್ಟಲು ತಯಾರಿಲ್ಲ. ಅವರಿಗೆ ಸಿಗುವ ಮಾರ್ಜಿನ್‌ ಹಣವನ್ನೂ ಸೇರಿಸಿ ಲಂಚ ಕೊಡುವ ಪರಿಸ್ಥಿತಿ ಇದೆ. ಹಾಗಾಗಿ ಎಲ್ಲರಿಗೂ ಹೈದರಾಬಾದ್ ಆಟ್ರಾಕ್ಷನ್ ಆಗುತ್ತದೆ. ಹೈದರಾಬಾದ್ ನಮ್ಮ ವ್ಯಾಪಾರಕ್ಕೆ ಉತ್ತಮವಾಗಿರುವ ಸ್ಥಳ ಎಂದು ಅವರಿಗೆ ಅನಿಸುತ್ತದೆʼʼ ಎಂದಿದ್ದಾರೆ ಅಶ್ವತ್ಥ್‌ ನಾರಾಯಣ್‌.

ʻʻಏನೂ ಮಾಡಲಿಲ್ಲ ಅಂದ್ರೂ ಬೆಂಗಳೂರಿಗೆ ಬರ್ತಾರೆ ಎಂಬ ಧೋರಣೆ ಬೆಂಗಳೂರಿಗೆ ಕಂಟಕವಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ , ಅವರು ಸರ್ಕಾರ ಸಚಿವರು ಎಚ್ಚೆತ್ತುಕೊಳ್ಳಬೇಕಾಗಿದೆʼʼ ಎಂದು ಅವರು ಹೇಳಿದರು.

Exit mobile version