Site icon Vistara News

ಅಳುತ್ತಿದ್ದ ಮಗುವಿಗೆ ಹಾಲು ಕುಡಿಸ್ಬೇಡ ಎಂದಿದ್ದಕ್ಕೆ 4ನೇ ಮಹಡಿಯಿಂದ ಹಾರಿದಳು ಮುಂಗೋಪಿ

Women fall down in Building

ಬೆಂಗಳೂರು: ಕೋಪದ ಕೈಗೆ ಬುದ್ಧಿ ಕೊಟ್ಟು ಗೃಹಿಣಿಯೊಬ್ಬಳು ತನ್ನ ಸುಂದರ ಬದುಕಿಗೆ ಹಾಗೂ ಜೀವಕ್ಕೆ ಅಂತ್ಯವಾಡಿದ್ದಾಳೆ. ಅಳುತ್ತಿದ್ದ ಮಗುವಿಗೆ ಹಾಲು ಕುಡಿಸಬೇಡ ಎಂದು ಹೇಳಿದ್ದಕ್ಕೆ ಸಿಟ್ಟಾದವಳು 4ನೇ ಮಹಡಿಯಿಂದ ಹಾರಿ (Self Harming) ಮೃತಪಟ್ಟಿದ್ದಾಳೆ. ಶಾಲಿನಿ (26) ಮೃತ ದುರ್ದೈವಿ.

ಬೆಂಗಳೂರಿನ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಗಾರ್ವೇಬಾವಿಪಾಳ್ಯದ ಲಕ್ಷ್ಮೀ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ. ಮೂರು ವರ್ಷಗಳ ಹಿಂದೆ ಸುರೇಶ್‌ ಎಂಬವರ ಜತೆಗೆ ಶಾಲಿನಿ ಮದುವೆ ಆಗಿದ್ದರು. ಶಾಲಿನಿ ಹಾಗೂ ಸುರೇಶ್‌ ದಂಪತಿಗೆ ಮುದ್ದಾದ ಗಂಡು ಮಗ ಜನಿಸಿತ್ತು. ಶಾಲಿನಿ ಸಂಸಾರವು ಸ್ವರ್ಗದಂತಿತ್ತು, ಆದರೆ ಆಕೆಯ ಮುಂಗೋಪ ಹಾಗೂ ಹಠಮಾರಿತನ ಉಸಿರನ್ನೇ ನಿಲ್ಲಿಸಿದೆ.

ಡಿ.14ರ ಮಧ್ಯರಾತ್ರಿ 02:30ರ ಸುಮಾರಿಗೆ ಒಂದೂವರೆ ವರ್ಷದ ಮಗು ಒಂದೇ ಸಮನೇ ಅಳುತ್ತಿತ್ತು. ಈ ವೇಳೆ ಶಾಲಿನಿ ಮಗುವನ್ನು ಸಮಾಧಾನಪಡಿಸುತ್ತಾ, ಬಾಟಲ್‌ ಹಾಲು ಕುಡಿಸಲು ಮುಂದಾಗಿದ್ದಳು. ಆದರೆ ಮಗು ರಚ್ಚೆ ಹಿಡಿದು ಮತ್ತಷ್ಟು ಜೋರಾಗಿ ಅಳಲು ಶುರು ಮಾಡಿತ್ತು. ಮಗು ಅಳುವ ಶಬ್ಧ ಕೇಳಿ ಶಾಲಿನಿ ಅತ್ತೆ-ಮಾವ ರೂಮಿಗೆ ಬಂದಿದ್ದಾರೆ.

ಇದನ್ನೂ ಓದಿ: Student Death : ಅಮ್ಮನ ಎದುರೇ ಅವಮಾನ; ಕಾಲೇಜು ಡೀನ್‌ ಕಿರುಕುಳಕ್ಕೆ ಸ್ಟೂಡೆಂಟ್‌ ಸೂಸೈಡ್‌ ‌

ಬಳಿಕ ಶಾಲಿನಿಗೆ ಮಗುವನ್ನು ಕೊಡುವಂತೆ ಕೇಳಿದ್ದಾರೆ. ಆದರೆ ಮಗು ಕೊಡಲು ನಿರಾಕರಿಸಿದ್ದಾಳೆ. ಈ ವೇಳೆ ಪತಿ ಸುರೇಶ್‌ ಶಾಲಿನಿ ಕೈಯಿಂದ ಮಗುವನ್ನು ಎತ್ತುಕೊಂಡಿದ್ದಾರೆ. ಇದರಿಂದ ಕೋಪಗೊಂಡವಳೇ 4ನೇ ಮಹಡಿಯ ಮೇಲೆ ಹೋಗಿ ಕೆಳಗಡೆ ಬಿದ್ದಿದ್ದಾಳೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಶಾಲಿನಿಯನ್ನು ಕೂಡಲೇ ಪತಿ ಕುಟುಂಬಸ್ಥರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಡಿ. 27ರಂದು ಶಾಲಿನಿ ಬ್ರೆನ್‌ ಕೆಲಸ ಮಾಡುತ್ತಿಲ್ಲ, ಆಕೆ ಬದುಕುವುದು ಕಷ್ಟ ಎಂದು ವೈದ್ಯರು ಡಿಸ್ಜಾರ್ಜ್‌ ಮಾಡಿದ್ದಾರೆ. ಆದರೆ ಡಿ.28ರಂದು ಶಾಲಿನಿ ಮೃತಪಟ್ಟಿದ್ದಾಳೆ.

ಸದ್ಯ ಬೇಗೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರ ಮಾಡಿದ್ದಾರೆ. ಕೋಪದ ಕೈಗೆ ಬುದ್ಧಿಕೊಟ್ಟು ದುಡುಕಿನ ನಿರ್ಧಾರ ಕೈಗೊಂಡಿದ್ದರಿಂದ ಒಂದೂವರೇ ವರ್ಷದ ಮಗುವು ತಾಯಿಯಿಲ್ಲದೇ ಅನಾಥವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version