Site icon Vistara News

Medical Negligence: ಆಪರೇಶನ್‌ ಸಕ್ಸಸ್‌ ಆಗಿದೆ ಎಂದ ಮಹಿಳೆ ಸಾವು, ವೈದ್ಯರ ನಿರ್ಲಕ್ಷ್ಯ ಆರೋಪ, ಪ್ರತಿಭಟನೆ

najni death Medical Negligence

ಬೆಂಗಳೂರು: ಮಹಿಳೆಯೊಬ್ಬರು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯದಿಂದ (Medical Negligence) ಆಕೆ ಮೃತಪಟ್ಟಿದ್ದಾರೆ ಎಂದು ಮಹಿಳೆಯ ಕುಟುಂಬದವರು ಆರೋಪಿಸಿದ್ದಾರೆ.

ಅಂಬೇಡ್ಕರ್ ಮೆಡಿಕಲ್ ಕಾಲೇಜು & ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. 34 ವರ್ಷದ ನಾಜ್ನಿ‌ ಮೃತಪಟ್ಟ ಮಹಿಳೆ. ಮೂರು ದಿನಗಳ ಹಿಂದೆ ಹೊಟ್ಟೆ ನೋವು ಎಂದು ನಾಜ್ನಿ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನವಾದರೂ ವೈದ್ಯರು ಚಿಕಿತ್ಸೆ ನೀಡಲಿಲ್ಲ ಎಂದು ಆರೋಪಿಸಲಾಗಿದೆ. ಮೂರನೇಯ ದಿನ‌ ಹೊಟ್ಟೆಯಲ್ಲಿ ಗಡ್ಡೆ ಆಗಿದೆ ಎಂದು ಮಾಹಿತಿ ನೀಡಿದ್ದು, ಕೂಡಲೇ ಆಪರೇಷನ್ ಮಾಡಬೇಕೆಂದು ಡಾಕ್ಟರ್ ಹೇಳಿದ್ದರು.

ಬೆಳಗ್ಗೆ ಆಪರೇಷನ್ ಮಾಡಿದ್ದ ವೈದ್ಯರು, ಆಪರೇಷನ್ ಸಕ್ಸಸ್ ಆಗಿದೆ, ಎರಡು ದಿನ ನಿಗಾ ಇರಬೇಕು ಎಂದು ಐಸಿಯುವಿಗೆ ಶಿಫ್ಟ್‌ ಮಾಡಿದ್ದರು. ನಂತರ ಸಂಜೆಯವರೆಗೆ ತುರ್ತು ನಿಗಾ ಘಟಕದಲ್ಲಿ ಇರಿಸಿಕೊಂಡು ಚಿಕಿತ್ಸೆ ನೀಡಿದ್ದರು. ನಂತರ ‌ನರದ ಸಮಸ್ಯೆ ಇದೆ ಬೇರೆ ಕಡೆ ಕರೆದುಕೊಂಡು ಹೋಗಿ ಎಂದು ವೈದ್ಯರು ಹೇಳಿದ್ದರು. ಬೇರೆ ಆಸ್ಪತ್ರೆಗೆ ತೆರಳುವ ವೇಳೆ ಆಂಬ್ಯುಲೆನ್ಸ್‌ನಲ್ಲಿ ಮಹಿಳೆ ಸಾವಿಗೀಡಾಗಿದ್ದರು. ಕೂಡಲೇ ಮೃತ ಮಹಿಳೆಯ ಶವವನ್ನು ಅಂಬೇಡ್ಕರ್ ಆಸ್ಪತ್ರೆಗೆ ಸಂಬಂಧಿಕರು ತೆಗೆದುಕೊಂಡು ಬಂದಿದ್ದಾರೆ.

ವೈದ್ಯರು ಸರಿಯಾಗಿ ಚಿಕಿತ್ಸೆ ನೀಡದಿರುವುದೇ ಮಹಿಳೆ ಸಾವಿಗೆ ಕಾರಣ ಎಂದು ಆರೋಪಿಸಿ ಆಸ್ಪತ್ರೆಯ ಮುಂದೆ ಆಂಬ್ಯುಲೆನ್ಸ್‌ನಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಆಪರೇಶನ್‌ ಸಕ್ಸಸ್‌ ಎಂದು ಸುಳ್ಳು ಹೇಳಿದ್ದು ಯಾಕೆ, ಅನಗತ್ಯವಾಗಿ ಐಸಿಯುವಿನಲ್ಲಿ ಇಟ್ಟುಕೊಂಡು ಹಣ ಸುಲಿಯಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಚಿಕಿತ್ಸೆ ನೀಡಿದ ಡಾಕ್ಟರ್‌ ಸ್ಥಳಕ್ಕೆ ಬರಬೇಕು, ನ್ಯಾಯ ಸಿಗುವವರೆಗೂ ಇಲ್ಲಿಂದ ಮೃತದೇಹ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಸದ್ಯ ಆಸ್ಪತ್ರೆಯ ಮುಂಭಾಗ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಿಗಿ ಭದ್ರತೆ ಹಾಕಲಾಗಿದೆ.

ಇದನ್ನೂ ಓದಿ: Medical Negligence : ಒಡಲಿನಲ್ಲೇ ಜೀವ ಬಿಟ್ಟ ಕೂಸು! ವೈದ್ಯರ ನಿರ್ಲಕ್ಷ್ಯಕ್ಕೆ ಪೋಷಕರ ಆಕ್ರಂದನ

Exit mobile version