ಬೆಂಗಳೂರು: ಕಾಂಗ್ರೆಸ್‌ನಿಂದ ಆಯೋಜಿಸಿರುವ ನಾ-ನಾಯಕಿ ಅಭಿಯಾನದ ಅಂಗವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ಕಾರ್ಯಕ್ರಮದಲ್ಲಿ, ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು. ಕಾಂಗ್ರೆಸ್ ನಾಯಕಿ ಸೌಮ್ಯ ರೆಡ್ಡಿ ಪ್ರತಿಜ್ಞೆಯನ್ನು ಓದಿದರು. ಎಲ್ಲರೂ ಕೈ ಮುಂದೆ ಚಾಚಿ ಪ್ರತಿಜ್ಞೆ ಸ್ವೀಕರಿಸಿದರು.
“ನಾ ನಾಯಕಿ ಪ್ರತಿಮೆ ಕಾರ್ಯಕ್ರಮದ ಪ್ರತಿಜ್ಞೆ, ನಿಷ್ಠಾವಂತ ಕಾರ್ಯಕರ್ತರಾಗಿದ್ದು, ನಮ್ಮ ದೇಶದ ಸಂವಿಧಾನಕ್ಕೆ ಸದಾ ಬದ್ಧರಾಗಿರುತ್ತೇವೆಂದು ಪ್ರಮಾಣ ಮಾಡುತ್ತೇವೆ. ಸಮಾಜದಲ್ಲಿ ಸೌಹಾರ್ದತೆ, ಸಮಾನತೆ ಮೂಡಿಸಲು ಪಕ್ಷದ ಸಂವಿಧಾನ, ತತ್ವ ಸಿದ್ಧಾಂತ, ಜಾತ್ಯಾತೀತ ನಿಲುವು ಮತ್ತು ಸಾಮಾಜಿಕ ನ್ಯಾಯಗಳನ್ನು ಜಾರಿಗೆ ತರಲು ಸತತವಾಗಿ ಶ್ರಮಿಸುತ್ತೇವೆ. ಮಹಿಳಾ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳನ್ನು ಪ್ರತಿ ಮನೆಯ ಹೆಣ್ಣಿಗೂ ತಲುಪಿಸುವ ಜವಾಬ್ದಾರಿ ನಮ್ಮದು. ಧ್ವೇಷ ಬಿತ್ತಿ, ಧ್ವೇಷವನ್ನೇ ಬೆಳೆಯುತ್ತಿರುವ ಸಮಾಜಘಾತುಕ ಶಖ್ತಿಗಳ ವಿರುದ್ಧ ನಮ್ಮ ಹೋರಾಟ. ಈ ಸಮರಕ್ಕೆ ನಾವು ಸಿದ್ಧ. ರಾಜಕೀಯವಾಗಿ ಮಹಿಳಾ ಮೀಸಲಾತಿಗೆ ಧ್ವನಿಯೆತ್ತಿದ ಸೋನಿಯಾ ಗಾಂಧಿಯವರ ಕನಸು ನನಸಾಗಿಸುತ್ತೇವೆ. ಮಹಿಳೆಯರಲ್ಲಿ ಸ್ವಮೌಲ್ಯದ ಬಗ್ಗೆ ಜಾಗೃತಿ ಮೂಡಿಸಿ ಸಬಲೀಕರಣಗೊಳಿಸುವ ಕಾಂಗ್ರೆಸ್ ಸಿದ್ಧಾಂತಕ್ಕೆ ನಾವು ಬದ್ಧ. ಶಕ್ತಿಯುತ ಸ್ತ್ರೀ ಸಮಾಜ ನಿರ್ಮಾಣ, ಇದೇ ನಮ್ಮ ವಾಗ್ದಾನ. ಸಶಕ್ತ ಮಹಿಳೆ, ಸಶಕ್ತ ಭಾರತ. ಇದೇ ನಮ್ಮ ಧ್ಯೇಯ. ಇದೇ ನಮ್ಮ ಪ್ರತಿಜ್ಞೆ. ಜೈ ಹಿಂದ್, ಜೈ ಕರ್ನಾಟಕ, ಜೈ ಕಾಂಗ್ರೆಸ್, ಜೈ ಸ್ತ್ರೀ ಶಕ್ತಿ.”
ನಂತರ ಮಾತನಾಡಿದ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೆಟ್ಟಾ ಡಿಸೋಜಾ ಮಾತನಾಡಿ, ಇಂದು ನಾವೆಲ್ಲರೂ ಮಹಿಳಾ ಸಮಾವೇಶ ನಡೆಸುತ್ತಿದ್ದೇವೆ, ಅಲ್ಲಿ ರಾಹುಲ್ ಗಾಂಧಿಯವರು ಮಹಿಳೆಯರ ನಡಿಗೆ ಆಯೋಜಿಸಿದ್ದಾರೆ. ಇದೇ ಮೈದಾನದಲ್ಲಿ ಮಹಿಳಾ ಕಾಂಗ್ರೆಸ್ ರಚನೆಯಾಗಿತ್ತು ಎನ್ನುವುದು ಮತ್ತಷ್ಟು ಭಾವನಾತ್ಮಕತೆಯನ್ನು ಮೂಡಿಸುತ್ತದೆ. ರಾಜೀವ್ ಗಾಂಧಿಯವರ ಕಾರಣಕ್ಕೆ ಇಂದು ಅನೇಕ ಮಹಿಳೆಯರು ಜನಪ್ರತಿನಿಧಿಗಳಾಗಿದ್ದಾರೆ. ಪ್ರಿಯಾಂಕಾ ಗಾಂಧಿಯವರು ನೀಡುವ ಸಂದೇಶವನ್ನು ಪ್ರತಿ ಗ್ರಾಮಕ್ಕೂ ಕೊಂಡೊಯ್ಯಬೇಕು ಎಂದರು.
ಇದಕ್ಕೂ ಮೊದಲು ಮಾತನಾಡಿದ ಮಾಜಿ ಸಚಿವೆ ಉಮಾಶ್ರೀ, ದೇಶದಲ್ಲೆ ಇಂತಹ ಮೊಟ್ಟಮೊದಲ ಕಾರ್ಯಕ್ರಮವನ್ನು ಡಿ.ಕೆ. ಶಿವಕುಮಾರ್ ಅವರ ಪರಿಕಲ್ಪನೆಯಲ್ಲಿ ರೂಪಿಸಲಾಗಿದೆ. ಮಹಿಳಾ ಶಕ್ತಿಯನ್ನು ಸದುಪಯೋಗಪಡಿಸಿಕೊಳ್ಳಲು ಈ ಕಾರ್ಯಕ್ರಮ ರೂಪಿಸಲಾಗಿದೆ. ಭಾರತದಲ್ಲಿರುವ ಭ್ರಷ್ಟ ಸರ್ಕಾರ, ಕರ್ನಾಟಕದಲ್ಲಿರುವ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಲು ಈ ಕಾರ್ಯಕ್ರಮ ಮುಖ್ಯ. ನಮ್ಮೆಲ್ಲರ ಬದುಕಿಗೆ ಬೆಲೆಯೇರಿಕೆ, ನಿರುದ್ಯೋಗ, ಮಹಿಳಾ ದೌರ್ಜನ್ಯ ಹೆಚ್ಚಾಗಿರುವಾಗ, ಈ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ನಮಗೆ ಹೊಣೆ ನೀಡಿದ್ದಾರೆ. ಗ್ರಾಮ ಮಟ್ಟದಲ್ಲಿ ಈ ಕೆಲಸವನ್ನೊ ಕೊಂಡೊಯ್ಯಬೇಕು ಎಂದರು.
ಇದನ್ನೂ ಓದಿ | ನಾ ನಾಯಕಿ | ಉಚಿತ ವಿದ್ಯುತ್ ಘೋಷಣೆಯಿಂದ ಬಿಜೆಪಿ ಹೆದರಿದೆ ಎಂದ ಸಲೀಂ ಆಹ್ಮದ್: ನಾ ನಾಯಕಿ ವೇದಿಕೆಯಲ್ಲಿ ಗಂಡಸರಿಗಿಲ್ಲ ಜಾಗ