Site icon Vistara News

World Culture Festival: ಸೆ.29ರಿಂದ ವಾಷಿಂಗ್ಟನ್‌ನಲ್ಲಿ ಸಾಂಸ್ಕೃತಿಕ ಒಲಿಂಪಿಕ್ಸ್; ಶ್ರೀ ರವಿಶಂಕರ್ ಗುರೂಜಿ ಮುಂದಾಳತ್ವ

World culture fest

ಬೆಂಗಳೂರು: ಆರ್ಟ್‌ ಆಫ್‌ ಲಿವಿಂಗ್‌ನ 4ನೇ ಆವೃತ್ತಿಯ ʼವಿಶ್ವ ಸಾಂಸ್ಕೃತಿಕ ಉತ್ಸವʼ ವನ್ನು (World Culture Festival) ಸೆ.29ರಿಂದ ಅ.1ರವರೆಗೆ ಅಮೆರಿಕದ ರಾಜಧಾನಿ ವಾಷಿಂಗ್ಟನ್‌ ಡಿ.ಸಿ.ಯಲ್ಲಿ ಆಯೋಜಿಸಲಾಗಿದೆ. 17,000 ಕಲಾವಿದರು ಭಾಗವಹಿಸುವ ಈ ʼಸಾಂಸ್ಕೃತಿಕ ಒಲಿಂಪಿಕ್ಸ್ʼನ ಮುಂದಾಳತ್ವವನ್ನು ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರು ವಹಿಸಲಿದ್ದಾರೆ.

ಆರ್ಟ್‌ ಆಫ್‌ ಲಿವಿಂಗ್‌ನ ಅವಿಸ್ಮರಣೀಯವಾದಂತಹ ವೈವಿಧ್ಯತೆಯ ಹಾಗೂ ಏಕತೆಯ ಉತ್ಸವಕ್ಕೆ ಅಮೆರಿಕದ ರಾಜಧಾನಿ ವಾಷಿಂಗ್ಟನ್‌ ಡಿ.ಸಿ. ಆತಿಥ್ಯ ವಹಿಸಿದೆ. ವಿಶ್ವ ವಿಖ್ಯಾತ ಯುಎಸ್ ಕ್ಯಾಪಿಟಲ್‌ನ ಹಿನ್ನೆಲೆಯನ್ನು ಹೊಂದಿರುವ ವೇದಿಕೆಯೇ ಒಂದು ಫುಟ್ಬಾಲ್‌ ಆಟದ ಮೈದಾನದಷ್ಟಿದೆ. ಈ ಉತ್ಸವದಲ್ಲಿ 17,000 ಕಲಾವಿದರು, ಅನೇಕ ರಾಜ್ಯಗಳ ಮುಖ್ಯಸ್ಥರು, 100ಕ್ಕಿಂತಲೂ ಹೆಚ್ಚು ದೇಶಗಳ ಚಿಂತಕರು ಭಾಗವಹಿಸಲಿದ್ದು, ಎಲ್ಲರೂ ನ್ಯಾಷನಲ್ ಮಾಲ್‌ನಲ್ಲಿ ಸೇರಲಿದ್ದಾರೆ.

ಅರ್ಧ ಮಿಲಿಯನ್ ಜನರು ಈ ಉತ್ಸವದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಇದರಿಂದಾಗಿ ಈ ಉತ್ಸವವು ವ್ಯಾಪಕವಾದ ಜಾಗತಿಕ ಉತ್ಸವವಾಗಲಿದೆ. ಈ ಉತ್ಸವದಲ್ಲಿ 50 ಪ್ರದರ್ಶನಗಳು ನಡೆಯಲಿವೆ.

ಇದನ್ನೂ ಓದಿ | Raja Marga Column : ಸೆ. 27, ವಿಶ್ವ ಪ್ರವಾಸೋದ್ಯಮ ದಿನ; ನೀವು ಹೋಗಲೇಬೇಕಾದ ಭಾರತದ TOP 10 ತಾಣ

ವಿಶ್ವ ಸಾಂಸ್ಕೃತಿಕ ಉತ್ಸವದ ವಿಶೇಷತೆ

ನ್ಯಾಷನಲ್ ಮಾಲ್‌ನಲ್ಲಿ 1963ಯಲ್ಲಿ, ಮಾರ್ಟಿನ್ ಲೂಥರ್ ಕಿಂಗ್ ತಮ್ಮ ಖ್ಯಾತ ” ಐ ಹ್ಯಾವ್‌ ಎ ಡ್ರೀಮ್” ಭಾಷಣವನ್ನು ನೀಡಿ, ಜಗತ್ತಿಗೆ ಸಮನ್ವಯತೆಯ, ಏಕತೆಯ ಸಂದೇಶವನ್ನು ಸಾರಿದರು. ಅದಕ್ಕಿಂತಲೂ ನೂರು ವರ್ಷಗಳ ಹಿಂದೆ (1893) ಚಿಕಾಗೋನಲ್ಲಿ ನಡೆದ ಪ್ರಥಮ ವಿಶ್ವ ಧಾರ್ಮಿಕ ಸಂಸತ್‌ನಲ್ಲಿ ಸ್ವಾಮಿ ವಿವೇಕಾನಂದರು ತಮ್ಮ ಮಿಂಚಿನ ಭಾಷಣವನ್ನು ನೀಡಿ, ಸಭಿಕರನ್ನು ತಮ್ಮ ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದರು. ಜಗತ್ತಿನ ದೊಡ್ಡ ಧರ್ಮಗಳ ಪ್ರತಿನಿಧಿಗಳನ್ನು ಸಹೋದರ, ಸಹೋದರಿಯರೇ ಎಂದು ಕರೆದು, ಧಾರ್ಮಿಕ ದ್ವಂದ್ವತೆ ಅಸಹಿಷ್ಣುತೆಯನ್ನು ಕೊನೆಗಾಣಿಸಬೇಕೆಂಬ ಕರೆಯನ್ನು ನೀಡಿದರು.

ಅದೇ ರೀತಿ 2023ರ ಸೆ.29ರಂದು ನ್ಯಾಷನಲ್ ಮಾಲ್‌ನಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರರು ” ಒಂದೇ ಜಾಗತಿಕ ಕುಟುಂಬ” ದ ಫಲಕದಡಿ ಎಲ್ಲಾ ಗಡಿಗಳ, ಧರ್ಮಗಳ, ಪಂಥಗಳ, 180 ದೇಶಗಳ ಜನರನ್ನು ಒಗ್ಗೂಡಿಸಿ, ಎಲ್ಲರ ನಡುವೆಯೂ ಇರುವ ವಿಭನೆಗಳನ್ನು ಜೋಡಿಸುವ ಸೇತುವೆಯಾಗಲಿದ್ದಾರೆ.

ಆಹಾರದಂತಹ ಒಗ್ಗೂಡಿಸುವ ವಿಷಯ ಮತ್ತೊಂದಿಲ್ಲ. ಈ ಉತ್ಸವದಲ್ಲಿ ಜಗತ್ತಿನ ಎಲ್ಲೆಡೆಯ ಆಹಾರಗಳ ಮೇಳವೂ ನಡೆಯಲಿದೆ. ಈ ಉತ್ಸವದ ವಿಶೇಷತೆಯೆಂದರೆ, ಚಿಗುರುತ್ತಿರುವ ಕಲಾವಿದರಿಗೆ, ಪ್ರದರ್ಶಕರಿಗೆ, ಅವರ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ನೀಡುತ್ತಿರುವುದು.

ಇದನ್ನೂ ಓದಿ | UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!

ಉತ್ಸವದಲ್ಲಿ ಭಾಗವಹಿಸಲಿರುವ ಗಣ್ಯ ಭಾಷಣಕಾರರು

ವಿಶ್ವ ಸಂಸ್ಥೆಯ 8ನೇ ಪ್ರಧಾನ ಕಾರ್ಯದರ್ಶಿ ಎಚ್. ಇ. ಬಾನ್ ಕೀ ಮೂನ್, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್, ಅಮೆರಿಕದ ಸರ್ಜನ್ ಜನರಲ್ ಡಾ. ವಿವೇಕ್ ಮೂರ್ತಿ, ಯುಎಸ್‌ ಸಂಸದರಾದ ರಿಕ್ ಸ್ಕಾಟ್, ನಾನ್ಸಿ ಪೆಲೋಸಿ, ಭಾರತದ ಮಾಜಿ ರಾಷ್ಟ್ರಪತಿಗಳಾದ ರಾಮನಾಥ್ ಕೋವಿಂದ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.

Exit mobile version