ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಬಹು ನಿರೀಕ್ಷೆಯ ಐದನೇ ಗ್ಯಾರಂಟಿ (Congress Guarantee) ಯೋಜನೆಯಾದ ಯುವ ನಿಧಿಗೆ (Yuva Nidhi Scheme) ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಂಗಳವಾರ ಚಾಲನೆ ನೀಡಿದರು. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ʻʻಯುವ ಜನತೆಯ ಉಜ್ವಲ ಭವಿಷ್ಯಕ್ಕಾಗಿʼʼ ಎಂಬ ಘೋಷವಾಕ್ಯದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಅವರು, ನಿರುದ್ಯೋಗಿ ಯುವಜನರು ನೋಂದಣಿ ಮಾಡಿಕೊಳ್ಳಬಹುದು, ನೋಂದಣಿ ಮಾಡಿಸಿಕೊಂಡವರಿಗೆ ಜನವರಿ 12ರ ವಿವೇಕಾನಂದ ಜಯಂತಿಯಂದು (Vivekananda Jayanti) ಹಣ ಜಮಾವಣೆ ಮಾಡಲಾಗುತ್ತದೆ. ಯೋಜನೆಯ ಉದ್ಘಾಟನಾ ಕಾರ್ಯಕ್ರಮ ಶಿವಮೊಗ್ಗದಲ್ಲಿ ಜನವರಿ 12ರಂದು ನಡೆಯಲಿದೆ ಎಂದು ಹೇಳಿದರು.
ಕಳೆದ ಸಾಲಿನಲ್ಲಿ ಡಿಪ್ಲೊಮಾ ಇಲ್ಲವೇ ಪದವಿಯನ್ನು ಪೂರೈಸಿದ್ದು, ಇನ್ನೂ ಯಾವುದೇ ಉದ್ಯೋಗ ಸಿಗದವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಡಿಪ್ಲೋಮಾ ಹೋಲ್ಡರ್‌ಗಳಿಗೆ ಮುಂದಿನ ಎರಡು ವರ್ಷಗಳ ಕಾಲ ತಿಂಗಳಿಗೆ 1500 ರೂ. ಹಾಗೂ ಪದವೀಧರರಿಗೆ 3000 ರೂಪಾಯಿ ನೀಡುವ ನಿರುದ್ಯೋಗ ಭತ್ಯೆ ನೀಡುವ ಯೋಜನೆ ಇದಾಗಿದೆ. ಯಾವುದೇ ಉದ್ಯೋಗ ಸಿಕ್ಕರೆ ತಕ್ಷಣ ಯೋಜನೆಯನ್ನು ಸ್ಥಗಿತಗೊಳಿಸಲು ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
5.29 ಲಕ್ಷ ಯುವಜನರಿಗೆ ಲಾಭ, ಈ ವರ್ಷ 250 ಕೋಟಿ ರೂ.
ʻʻಇವತ್ತು ಐದನೇ ಗ್ಯಾರಂಟಿ ಯುವ ನಿಧಿಗೆ ಚಾಲನೆ ಕೊಡ್ತಿದ್ದೇವೆ. 2024ರ ಜನವರಿಯಲ್ಲಿ ಈ ಯೋಜನೆ ಪ್ರಾರಂಭ ಆಗುತ್ತಿದೆ. ನರೇಂದ್ರ ಮೋದಿಯವರು ಗ್ಯಾರಂಟಿ ಜಾರಿ ಮಾಡೋಕ್ಕಾಗಲ್ಲ ಅಂದ್ರು. ಇದನ್ನು ಜಾರಿ ಮಾಡಿದ್ರೆ ಕರ್ನಾಟಕ ದಿವಾಳಿಯಾಗುತ್ತೆ ಎಂದು ಈ ದೇಶದ ಪ್ರಧಾನಿಗಳು ರಾಜಸ್ಥಾನದಲ್ಲಿ ಹೇಳಿದರು. ಹೀಗೆ ಹೇಳಿದ್ದು ಒಬ್ಬ ಪ್ರಧಾನ ಮಂತ್ರಿ, ಅವರು 12 ವರ್ಷ ಮುಖ್ಯಮಂತ್ರಿಯಾಗಿ, ಹತ್ತು ವರ್ಷ ಪ್ರಧಾನ ಮಂತ್ರಿ ಆದವರು. ನಾವು ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ರಾಜ್ಯ ದಿವಾಳಿ ಆಗಿಲ್ಲ ಎಂದು ಹೇಳಬಯಸುತ್ತೇನೆʼʼ ಎಂದು ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಹೇಳಿದರು. ಇಷ್ಟೆಲ್ಲ ಮಾತನಾಡಿದ ಪ್ರಧಾನಿ ಅವರು ಬಳಿಕ ತಾವೇ ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದಾರೆ ಎಂದು ನೆನಪಿಸಿದರು.
ʻʻನಾವು ಈ ವರ್ಷ ಗ್ಯಾರಂಟಿಗಳಿಗಾಗಿ 39 ಸಾವಿರ ಕೋಟಿ ರೂ. ನೀಡಿದ್ದೇವೆ. ಆರ್ಥಿಕವಾಗಿ ಗ್ಯಾರಂಟಿ ಜಾರಿ ಮಾಡಿದ ಮೇಲೂ ರಾಜ್ಯ ಸದೃಢವಾಗಿದೆʼʼ ಎಂದು ಸಿದ್ದರಾಮಯ್ಯ ಹೇಳಿದರು.
ಯುವ ನಿಧಿಯಲ್ಲಿ 5 ಲಕ್ಷದ 29 ಸಾವಿರ ಪದವೀಧರರು ಹಾಗೂ ಡಿಪ್ಲೊಮಾ ಹೋಲ್ಡರ್‌ಗಳಿಗೆ ಅವಕಾಶವಿದೆ. ಮಾರ್ಚ್ ಕೊನೆಗೆ ವರೆಗೆ 250 ಕೋಟಿ ಖರ್ಚು ಮಾಡಲಿದ್ದೇವೆ ಎಂದು ವಿವರಿಸಿದರು.
ವಿದ್ಯಾರ್ಥಿಗಳನ್ನು ವೇದಿಕೆಗೆ ಆಹ್ವಾನಿಸಿದ ಸಿದ್ದರಾಮಯ್ಯ
ದೀಪ ಬೆಳಗಿ ಯೋಜನೆಯನ್ನು ಉದ್ಘಾಟನೆ ಮಾಡುವ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಒಬ್ಬ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಯನ್ನು ವೇದಿಕೆಗೆ ಆಹ್ವಾನಿಸುವಂತೆ ಸೂಚಿಸಿದರು. ಅವರ ಸೂಚನೆಯ ಮೇರೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಇಬ್ಬರನ್ನು ವೇದಿಕೆಗೆ ಆಹ್ವಾನಿಸಿದರು.
ಯೋಜನೆ ವಿಳಂಬ ಆಗಿಲ್ಲ: ಕೌಶಲ್ಯಾಭಿವೃದ್ಧಿ ಸಚಿವ ಶರಣ್ ಪ್ರಕಾಶ್ ಪಾಟೀಲ್
ʻʻಈ ರಾಜ್ಯದ ಜನರಿಗೆ ಮಾತು ಕೊಟ್ಟಂತೆ ನಡೆದುಕೊಂಡಿದ್ದೇವೆ. ಈ ಯೋಜನೆ ವಿಳಂಬ ಆಗಿಲ್ಲ, ನಾವು 2022-23ರಲ್ಲಿ ಪಾಸ್ ಆಗಿ ಆರು ತಿಂಗಳು ಉದ್ಯೋಗ ಸಿಗದವರಿಗೆ ನಿರುದ್ಯೋಗ ಭತ್ಯೆ ಕೊಡುವ ವಾಗ್ದಾನ ಮಾಡಿದ್ದೆವು. ಫಲಿತಾಂಶಗಳು ಬಂದು ಡಿಸೆಂಬರ್ ಗೆ ತಿಂಗಳು ಆಗುತ್ತಿದೆ. ಹೀಗಾಗಿಯೇ ಈಗ ಜಾರಿ ಮಾಡುತ್ತಿದ್ದೇವೆʼʼ ಎಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಶರಣಪ್ರಕಾಶ್ ಪಾಟೀಲ್ ಹೇಳಿದರು.
ʻʻನೀವು ರಿಜಿಸ್ಟರ್ ರನ್ನು ಉಚಿತವಾಗಿ ಮಾಡಿಸಬಹುದುʼʼ ಎಂದು ಹೇಳಿದ ಅವರು, ಪ್ರತಿ ವರ್ಷ 10 ಲಕ್ಷ ವಿದ್ಯಾರ್ಥಿಗಳಿಗೆ ಯುವ ನಿಧಿ ಭತ್ಯೆ ಕೊಡ್ತಿದ್ದೇವೆ. ನಿರುದ್ಯೋಗ ಭತ್ಯೆಯ ಜೊತೆ ಹೆಚ್ಚುವರಿ ಸ್ಕಿಲ್ ಕೊಡಿಸುವ ಕೆಲಸ ಮಾಡ್ತಿದ್ದೇವೆ. ಬೇರೆ ಬೇರೆ ಕಂಪನಿ ಗಳಲ್ಲಿ ಉದ್ಯೋಗಕ್ಕೆ ಹೋಗಲು ಟ್ರೈನಿಂಗ್ ತರುವ ಯೋಜನೆ ಮಾಡ್ತಿದ್ದೇವೆ. ಸ್ಕಿಲ್ ಅಥಾರಿಟಿ ಸ್ಥಾಪನೆ ಮಾಡೋದಲ್ಲದೇ, ನಮ್ಮ ಮಕ್ಕಳಿಗೆ ಹೆಚ್ಚು ಉದ್ಯೋಗ ಕೊಡಿಸಲು ಯೋಜನೆ ರೂಪಿಸುತ್ತಿದ್ದೇವೆ ಎಂದು ವಿವರಿಸಿದರು.
ಜನವರಿ 12ರಂದು ಶಿವಮೊಗ್ಗದಲ್ಲಿ ಇದರ ಅಧಿಕೃತ ಲಾಂಚ್ ಮಾಡುತ್ತಿದ್ದೇವೆ. ಯಾರು ಯಾರು ರಿಜಿಸ್ಟರ್ ಮಾಡಿಸ್ತಾರೋ ಅವರ ಅಕೌಂಟ್ ಗೆ ಅಂದು ಹಣ ಜಮಾವಣೆ ಮಾಡಲಿದ್ದೇವೆ ಎಂದು ಹೇಳಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ನಸೀರ್ ಅಹ್ಮದ್ ಘನ ಉಪಸ್ಥಿತರಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ವಹಿಸಿದ್ದರು.