Site icon Vistara News

ಬಿಯಾಂಡ್‌ ಬೆಂಗಳೂರು ಸಮಾವೇಶಕ್ಕೆ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ರಾಜೀವ್‌ ಚಂದ್ರಶೇಖರ್‌ಗೆ ಆಹ್ವಾನ

Beyond Bangalore

ನವ ದೆಹಲಿ: ಬೆಂಗಳೂರಿನಂತೆ ರಾಜ್ಯದ ಉಳಿದ ನಗರಗಳಲ್ಲೂ ಕೈಗಾರಿಕೆಗಳು ನೆಲೆಯೂರುವಂತೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ʻಬಿಯಾಂಡ್‌ ಬೆಂಗಳೂರುʼ ಸಮಾವೇಶಗಳನ್ನು ಆಯೋಜಿಸಿದೆ. ಹುಬ್ಬಳ್ಳಿ, ಮೈಸೂರು ಮತ್ತು ಮಂಗಳೂರಿನಲ್ಲಿ ಈ ಸಮಾವೇಶಗಳು ನಡೆಯಲಿವೆ. ಈ ಪೈಕಿ ಹುಬ್ಬಳ್ಳಿ ಮತ್ತು ಮೈಸೂರು ಸಮಾವೇಶದ ದಿನಾಂಕ ಅಂತಿಮಗೊಂಡಿದೆ.

ಹುಬ್ಬಳ್ಳಿಯಲ್ಲಿ ಸೆಪ್ಟೆಂಬರ್‌ ೨೬ರಂದು ಮತ್ತು ಮೈಸೂರಿನಲ್ಲಿ ಅಕ್ಟೋಬರ್‌ ೧೯ ಮತ್ತು ೨೦ರಂದು ಸಮಾವೇಶ ನಡೆಯಲಿದೆ. ಹುಬ್ಬಳ್ಳಿ ಸಮಾವೇಶವನ್ನು ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಮತ್ತು ಮೈಸೂರು ಸಮಾವೇಶವನ್ನು ಕೇಂದ್ರ ಸಚಿವರಾದ ರಾಜೀವ್‌ ಚಂದ್ರಶೇಖರ್‌ ಅವರು ಉದ್ಘಾಟಿಸಲಿದ್ದಾರೆ. ಈ ಇಬ್ಬರು ಉದ್ಘಾಟಕರಿಗೆ ಆಹ್ವಾನ ಪತ್ರಿಕೆ ನೀಡುವ ಔಪಚಾರಿಕ ಕಾರ್ಯಕ್ರಮ ದಿಲ್ಲಿಯಲ್ಲಿ ಮಂಗಳವಾರ ನಡೆಯಿತ. ರಾಜ್ಯದ ಉನ್ನತ ಶಿಕ್ಷಣ ಹಾಗೂ ಐಟಿ-ಬಿಟಿ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಅವರು ರಾಜ್ಯ ಸರಕಾರದ ಪರವಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಅಹ್ವಾನ ನೀಡಿದರು. ಆಹ್ವಾನವನ್ನು ಸ್ವೀಕರಿಸಿದ ಕೇಂದ್ರ ಸಚಿವರು ಸಮಾವೇಶಕ್ಕೆ ಬರುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ತೋಟಗಾರಿಕೆ ಸಚಿವ ಮುನಿರತ್ನ ಕೂಡ ಇದ್ದರು.

ಬೆಂಗಳೂರು ನಗರದ ಆಚೆಗೂ ರಾಜ್ಯದ ವಿವಿಧ ಭಾಗಗಳಲ್ಲಿ ಕೈಗಾರಿಕೆಗಳು ನೆಲೆಯೂರುವಂತೆ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ. ಇದರ ಭಾಗವಾಗಿ, ನವೆಂಬರ್‌ನಲ್ಲಿ ನಡೆಯಲಿರುವ ಬೆಂಗಳೂರು ತಂತ್ರಜ್ಞಾನ ಸಮಾವೇಶಕ್ಕೂ (ಬಿಟಿಎಸ್) ಮುನ್ನ ಹುಬ್ಬಳ್ಳಿ, ಮೈಸೂರು ಮತ್ತು ಮಂಗಳೂರಿನಲ್ಲಿ ‘ಬಿಯಾಂಡ್ ಬೆಂಗಳೂರು’ ಸಮಾವೇಶಗಳನ್ನು ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಈ ಸಮಾವೇಶಗಳಲ್ಲಿ ಉದ್ಯಮಗಳ ಸ್ಥಾಪನೆ ಮತ್ತು ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ವಿಸ್ತೃತ ವಾಗಿ ಚರ್ಚಿಸಲಾಗುವುದು. ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಉದ್ಯಮಿಗಳು ಮತ್ತು ಹೂಡಿಕೆದಾರರು ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.

Exit mobile version