ಮಂಡ್ಯ: ದೇವರು, ಧರ್ಮದ ವಿಚಾರದಲ್ಲಿ ಆಗಾಗ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೈಸೂರಿನ ಪ್ರೊ. ಕೆ.ಎಸ್. ಭಗವಾನ್ ಇನ್ನೊಂದು ವಿವಾದಿತ ಹೇಳಿಕೆ ನೀಡಿದ್ದಾರೆ. ರಾಮ ರಾಜ್ಯ ಎನ್ನುವುದೊಂದು ಕಥೆ. ರಾಮ ಬರೀ ಪುರೋಹಿತರ ಕಥೆ ಕೇಳಿಕೊಂಡು ಕೂತಿರುತ್ತಿದ್ದ. ಮಧ್ಯಾಹ್ನ ಆಯ್ತು ಅಂದ ಕೂಡಲೇ ಸೀತೆಗೆ ಹೆಂಡ ಕುಡಿಸಿ ತಾನೂ ಕುಡಿತಿದ್ದ ಎಂದೆಲ್ಲ ನಾಲಿಗೆ ಹರಿಬಿಟ್ಟಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಬೇಕಾಬಿಟ್ಟಿ ಮಾತನಾಡಿದ್ದಾರೆ.
ರಾಮರಾಜ್ಯ ಅನ್ನೋದೇ ಕಟ್ಟುಕಥೆ!
ʻʻದೇಶದಲ್ಲಿ ರಾಮರಾಜ್ಯ ಅನ್ನೋ ಪದವನ್ನ ಕಥೆ ಕಟ್ಟಿಬಿಟ್ಟಿದ್ದಾರೆ. ರಾಮರಾಜ್ಯ ಅನ್ನೋ ಮಾತು ಹೆಚ್ಚು ಹರಡಲು ಕಾರಣರಾದವ್ರು ಮಹಾತ್ಮ ಗಾಂಧಿ! ಆದರೆ ವಾಲ್ಮೀಕಿ ರಾಮಾಯಣ, ಉತ್ತರಖಾಂಡ ಓದಿದರೆ ಈ ಮಾತಿಗೆ ಯಾವುದೇ ಆಧಾರವಿಲ್ಲ. ರಾಮ 14 ವರ್ಷ ಕಾಡಿನಲ್ಲಿ ವನವಾಸವಿದ್ದ. ವನವಾಸ ಮುಗಿಸಿ ವಾಪಸ್ ಬಂದು 11 ವರ್ಷ ರಾಜ್ಯಭಾರ ಮಾಡಿದ. ಆದರೆ, ಅವನು ಆಡಳಿತ ಮಾಡಲೇ ಇಲ್ಲ. ಕೇವಲ ಕೆಲವು ಪುರೋಹಿತರ ಜೊತೆ ಆ ಕಥೆ ಈ ಕಥೆ ಹೇಳಿಕೊಂಡು ರಾಮ ಕಾಲ ಕಳೆಯುತ್ತಿದ್ದʼʼ ಎಂದಿದ್ದಾರೆ ಕೆ.ಎಸ್. ಭಗವಾನ್.
ಹೆಂಡತಿ ಜತೆ ಕುಳಿತು ಹೆಂಡ ಕುಡಿಯುತ್ತಿದ್ದ!
ಜಗತ್ತು ಶ್ರೀರಾಮ-ಸೀತೆಯರ ಸಂಬಂಧದ ಬಗ್ಗೆ ದೈವಿಕವಾದ ಕಥೆಗಳನ್ನು ಹೇಳುತ್ತಿದ್ದರೆ ಭಗವಾನ್ ಅವರ ಪ್ರಕಾರ, ಮಧ್ಯಾಹ್ನದ ಬಳಿಕ ರಾಮ ಸೀತೆಗೆ ಹೆಂಡವನ್ನು ಕುಡಿಸಿ ಅವನೂ ಕುಡಿಯುತ್ತಿದ್ದ! ಇದಕ್ಕೆಲ್ಲ ದಾಖಲೆಗಳಿವೆ. ಇವೆಲ್ಲ ನನ್ನ ಮಾತುಗಳಲ್ಲ, ವಾಲ್ಮೀಕಿ ರಾಮಾಯಣ, ಉತ್ತರಖಾಂಡದಲ್ಲಿ ಇರುವ ಮಾತುಗಳು ಎಂದಿದ್ದಾರೆ.
೧೧ ವರ್ಷದ ಆಡಳಿತದಲ್ಲಿ ಮೂರು ಪ್ರಮುಖ ಘಟನೆ
ʻʻರಾಮನ 11 ವರ್ಷದ ಆಡಳಿತದಲ್ಲಿ ಮೂರು ಪ್ರಮುಖ ಘಟನೆಗಳು ನಡೆದವುʼʼ ಎನ್ನುತ್ತಾರೆ ಭಗವಾನ್.
ʻʻಯಾರೋ ಸೀತೆ ಮೇಲೆ ಅಪವಾದ ಮಾಡಿದ ಅನ್ನೋ ಕಾರಣ ಇಟ್ಟುಕೊಂಡು ಗರ್ಭಿಣಿ ಸೀತೆಯನ್ನು ರಾಮ ಕಾಡಿಗೆ ಓಡಿಸಿಬಿಟ್ಟ. ಸೀತೆಗೆ ತನ್ನ ಬಗ್ಗೆ ಸಮರ್ಥಿಸಿಕೊಳ್ಳಲು ಒಂದು ಅವಕಾಶವನ್ನೂ ಕೊಡಲಿಲ್ಲ. ಯಾರಾದರೂ ಕೊಲೆ ಮಾಡಿದರೂ ಅವರ ಅಭಿಪ್ರಾಯ ಕೇಳಲು ಅವಕಾಶವಿರುತ್ತದೆʼʼ ಎಂದರು ಭಗವಾನ್.
ʻʻಒಂದು ವೇಳೆ ಕಾಡಿನಲ್ಲಿ ವಾಲ್ಮೀಕಿ ಸಿಗದೇ ಇದ್ದಿದ್ದರೆ ಗರ್ಭಿಣಿ ಸೀತೆ ಕಥೆ ಏನಾಗ್ತಿತ್ತು? ಮುಂದೆ 16-17 ವರ್ಷ ಸೀತೆ ಏನಾದಳು ಅನ್ನೋದನ್ನೇ ರಾಮ ಕೇಳಲಿಲ್ಲʼʼ ಎನ್ನುವುದು ಭಗವಾನ್ ಅವರ ಮತ್ತೊಂದು ಆರೋಪ.
ʻʻದುರ್ವಾಸ ಮುನಿಗಳಿಗೆ ಊಟ ಕೊಟ್ಟು ಗೌಪ್ಯ ಸಭೆ ವೇಳೆ ಒಳಗೆ ಬಿಟ್ಟಿದ್ದಕ್ಕೆ ಲಕ್ಷಣನನ್ನೇ ರಾಮ ಗಡಿಪಾರು ಮಾಡಿದ. ಕೊನೆಗೆ ಲಕ್ಷಣ, ನದಿ ದಡದ ಮೇಲೆ ಅತ್ಕೊಂಡು ಸತ್ತೋದಾʼʼ ಎನ್ನುವುದು ಭಗವಾನ್ ವಿವರಣೆ.
ರಾಮ ಆದರ್ಶ ಹೇಗಾಗುತ್ತಾನೆ?
ಇದಷ್ಟೇ ಅಲ್ಲ ತಪಸ್ಸು ಮಾಡ್ತಿದ್ದ ಶೂದ್ರ ಶಂಭುಕನನ್ನು ರಾಮ ಕತ್ತಿಯಲ್ಲೆ ಕಡಿದು ಹಾಕಿದ್ದಾನೆ. ಇವೆಲ್ಲವೂ ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖವಾಗಿದೆ. ಇದನ್ನು ಮುಂದಿಟ್ಟುಕೊಂಡು ನೀವು ಹೇಗೆ ರಾಮನನ್ನು ಆದರ್ಶ ವ್ಯಕ್ತಿ ಅಂತ ಕರೆಯುತ್ತೀರಿ? ನಿಮಗೆ ರಾಮನ ಬಗ್ಗೆ ಗೊತ್ತಿಲ್ಲದೆ ಮಕ್ಕಳಿಗೆಲ್ಲ ರಾಮ ಅಂತ ಹೆಸರಿಟ್ಟಿದ್ದೀರಿ. ಜಯರಾಮ, ಅಭಿರಾಮ ಅಂತೆಲ್ಲ ಹೆಸರಿಟ್ಟಿದ್ದೀರಿ. ಹೆಂಗಸರು ಅಯ್ಯೋ ರಾಮ ರಾಮ ಅಂತೆಲ್ಲ ಬೈಯುತ್ತಾರೆʼʼ ಎಂದು ಹೇಳಿದರು ಭಗವಾನ್.
ಇದನ್ನೂ ಓದಿ | Grant of bail | ರಾಮಮಂದಿರ ಏಕೆ ಬೇಡ ಕೃತಿ ವಿವಾದ; ಸಾಹಿತಿ ಕೆ.ಎಸ್. ಭಗವಾನ್‌ಗೆ ಜಾಮೀನು ಮಂಜೂರು