ಮಡಿಕೇರಿ: ʻʻನಾನು ಆ ಭಾಗ್ಯ ಕೊಟ್ಟೆ, ಈ ಭಾಗ್ಯ ಕೊಟ್ಟೆ ಎಂದು ಹೇಳಿಕೊಂಡು ತಿರುಗುವ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಭಾಗ್ಯವೇ ಇಲ್ಲʼʼ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ (MP Pratapasimha) ವ್ಯಂಗ್ಯವಾಡಿದ್ದಾರೆ.
ಮಡಿಕೇರಿಯಲ್ಲಿ ಮಾತನಾಡಿದ ಅವರು, ಅನ್ನ ಭಾಗ್ಯ ಕೊಟ್ಟೆ, ಕ್ಷೀರ ಭಾಗ್ಯ ಕೊಟ್ಟೆ ಎನ್ನುತ್ತಿರುವ ಸಿದ್ದರಾಮಯ್ಯ ಅವರಿಗೆ ಒಂದು ಕ್ಷೇತ್ರವನ್ನು ಹುಡುಕಿಕೊಳ್ಳಲಾಗದ ದಯನೀಯ ಸ್ಥಿತಿ ಬಂದಿದೆ. ಇದರಿಂದಲೇ ಗೊತ್ತಾಗುತ್ತದೆ. ಸಿದ್ದರಾಮಯ್ಯ ಅವರ ಯಾವ ಭಾಗ್ಯಗಳಿಗೂ ಜನತೆ ಬೆಲೆ ಕೊಟ್ಟಿಲ್ಲ ಅಂತʼʼ ಎಂದು ಹೇಳಿದರು.
ʻʻಒಂದು ಕೇತ್ರವನ್ನು ಹುಡುಕುವ ಸ್ಥಿತಿ ಇದೆ ಅಂದಮೇಲೆ ಜನರಿಗೆ ಇವರ ಮೇಲೆ ಯಾವ ವಿಶ್ವಾಸ ಕೂಡಾ ಇಲ್ಲʼʼ ಎಂದು ಹೇಳಿದ ಅವರು, ಎಲ್ಲೂ ಕ್ಷೇತ್ರ ಸಿಗದೆ ಕೊನೆಗೆ ಸಿದ್ದರಾಮಯ್ಯ ಅವರು ಮೈಸೂರಿನ ವರುಣಕ್ಕೆ ಬರುತ್ತಾರೆ ಎಂದರು.
ʻʻಸಿದ್ದರಾಮಯ್ಯ ಅವರ ಈ ನಾಟಕ ನೋಡಿ ದಕ್ಷಿಣ ಕರ್ನಾಟಕದ ಜನತೆ ಮಂಗಗಳಾಗಬೇಡಿ. ಉತ್ತರ ಕರ್ನಾಟಕ ಜನತೆ ಮಂಗ್ಯಗಳಾಗಬೇಡಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಂಬಿ ಮಂಗ ಮಂಗ್ಯಗಳಾಗಬೇಡಿʼʼ ಎಂದು ಹೇಳಿದರು ಪ್ರತಾಪ್ ಸಿಂಹ.
ಎಲ್ಲರಿಗೂ ಮಕ್ಕಳ ಚಿಂತೆ ಎಂದರು ಪ್ರತಾಪ್ ಸಿಂಹ
ʻʻಮಾರ್ಚ್ 22ರಂದು ಕಾಂಗ್ರೆಸ್ ಟಿಕೇಟ್ ಘೋಷಣೆಯಾಗಬೇಕಿತ್ತು. ಯಾಕೆ ಆಗಿಲ್ಲ?ʼʼ ಎಂದು ಪ್ರಶ್ನಿಸಿದ ಅವರು ಉತ್ತರವನ್ನೂ ಕೊಟ್ಟರು. ʻʻಸಿದ್ದರಾಮಯ್ಯಗೆ ಕ್ಷೇತ್ರದ ಚಿಂತೆ, ಅವರ ಪತ್ನಿಗೆ ಮಗನ ಭವಿಷ್ಯದ ಚಿಂತೆ, ರೇವಣ್ಣಗೆ ಭವಾನಿ ಚಿಂತೆ, ಕುಮಾರ ಸ್ವಾಮಿಗೆ ನಿಖಿಲ್ ಚಿಂತೆ. ಕುಟುಂಬದ ಚಿಂತೆ ಮಾಡೋ ಇವರಿಗೆ ರಾಜ್ಯದ ಜನತೆಯ ಬಗ್ಗೆ ಕಾಳಜಿ ಇಲ್ಲʼʼ ಎಂದರು.
ಯಾವುದನ್ನೂ ನಂಬಬೇಡಿ, ಎಲ್ಲವೂ ಮಕ್ಮಲ್ ಟೋಪಿ
ʻʻಕಾಂಗ್ರೆಸ್ ನೀಡುವ ಯಾವುದೇ ಭರವಸೆಯನ್ನು ನಂಬಬೇಡಿ. ಪಂಜಾಬ್‌ನಲ್ಲಿ ಅವರು ನೀಡಿದ ಯಾವ ಭರವಸೆಯನ್ನೂ ಈಡೇರಿಸಿಲ್ಲ. ಆದ್ಮಿ ಪಕ್ಷ ಘೋಷಣೆ ಮಾಡಿ ಜನತೆಗೆ ಟೋಪಿ ಹಾಕಿದೆ. ಕರ್ನಾಟಕದಲ್ಲೂ ಟೋಪಿ ಹಾಕುವ ಕೆಲಸ ಮಾಡ್ತಾರೆ, ಜನರು ಇದನ್ನು ನಂಬಬೇಡಿ. ಉಚಿತವಾಗಿ ಏನೇ ಕೊಡುತ್ತೇವೆ ಅಂತ ಹೇಳಿದ್ರೆ ನೀವು ಬಿಜೆಪಿಯನ್ನೂ ನಂಬಬೇಡಿʼʼ ಎಂದು ಪ್ರತಾಪ್ ಸಿಂಹ ಹೇಳಿದರು.
ಮೇ 24ರ ನಂತರ ಅವರದ್ದು ಫುಲ್ ಟೈಮ್ ಹೋರಾಟ!
ಉರಿಗೌಡ, ನಂಜೇಗೌಡ ವಿಷಯ ಕೈಬಿಡದಿದ್ದರೆ ಹೋರಾಟ ಮಾಡಲಾಗುವುದು ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ʻʻಮೇ 24ರ ನಂತರ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಮತ್ತು ಜೆಡಿಎಸ್ ನವರಿಗೆ ಜನರು ಹೋರಾಟದ ಕೆಲಸವನ್ನೇ ಕೊಡುತ್ತಾರೆ. ಆಡಳಿತ ನಡೆಸುವ ಕೆಲಸವನ್ನು ಬಿಜೆಪಿಯವರಿಗೆ ಕೊಡುತ್ತಾರೆ. ಅವರ ಹೋರಾಟಕ್ಕೆ ಸದಾ ನಮ್ಮ ಸ್ವಾಗತವಿರುತ್ತದೆ. ಮೇ 24ರ ನಂತರ ನಿಮ್ಮ ಹೋರಾಟವನ್ನು ಮುಂದುವರಿಸಿ. ನಿಮ್ಮನ್ನು ವಿರೋಧ ಪಕ್ಷದ ಸ್ಥಾನದಲ್ಲಿಯೇ ಕೂರಿಸಲು ಜನ ನಿರ್ಧರಿಸಿದ್ದಾರೆʼʼ ಎಂದು ಹೇಳಿದರು.
ಇದನ್ನೂ ಓದಿ : Siddaramaiah : ಕುಟುಂಬದ ಜತೆ ಮಾತನಾಡಿದ್ದೇನೆ; ಬಾದಾಮಿ, ಕೋಲಾರ, ವರುಣ ಮೂರರಲ್ಲಿ ಒಂದು ನನ್ನ ಆಯ್ಕೆ ಎಂದ ಸಿದ್ದರಾಮಯ್ಯ