ಬಳ್ಳಾರಿ: ನನ್ನ ಮೇಲಿನ ಆರೋಪ ಮತ್ತು ಟೀಕೆಗೆ ಉತ್ತರ ನೀಡುವುದಿಲ್ಲ. ಭ್ರಷ್ಟಾಚಾರ ಆಗಿದ್ದರೆ ಸಿಬಿಐ ತನಿಖೆಗೆ ಕೊಡಲಿ, ಸಿಎಂ ಕರೆದರೆ ನಾನು ಯಾವಾಗಲೂ ಬಹಿರಂಗ ಚರ್ಚೆಗೆ ಸಿದ್ಧ ಎಂದು ಸಿಎಂ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸವಾಲು ಹಾಕಿದರು.
ಶುಕ್ರವಾರ ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ದಸರಾ ಇದ್ದಿದ್ದರಿಂದ ಜನರಿಗೆ ತೊಂದರೆ ಕೊಡುವುದು ಬೇಡ ಎಂದು ಅಲ್ಲಿ ಸಮಾವೇಶ ಮಾಡಲಿಲ್ಲ. ಇನ್ನು ಯಾತ್ರೆಯ ದಾರಿಯಲ್ಲಿ ಸಮಾವೇಶ ಮಾಡಲು ಎಲ್ಲಿಯೂ ಸೂಕ್ತ ಸ್ಥಳ ಸಿಗದ ಹಿನ್ನಲೆಯಲ್ಲಿ ಬಳ್ಳಾರಿಯಲ್ಲಿಯೇ ಸಮಾವೇಶ ಮಾಡುತ್ತಿದ್ದೇವೆ. ಸೆಪ್ಟೆಂಬರ್ 7ರಿಂದ ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆ ಆರಂಭವಾಗಿ, ಬಳ್ಳಾರಿಗೆ ಮುಟ್ಟಿದಾಗ ೧೦೦೦ ಕಿ.ಮೀ ಆಗಿದೆ. ಕಾಂಗ್ರೆಸ್‌ಗೆ ಬಳ್ಳಾರಿ ಬಗ್ಗೆ ಅಪಾರ ನಂಬಿಕೆ ಇದೆ. ಈ ಎಲ್ಲ ಕಾರಣದಿಂದ ಇಲ್ಲಿ ಸಮಾವೇಶ ಮಾಡುತ್ತಿದ್ದೇವೆ ಎಂದರು.
ಯಾತ್ರೆಯು ಕೇವಲ ಕಾಂಗ್ರೆಸ್‌ಗೆ ಮಾತ್ರ ಶಕ್ತಿ ಕೊಡುತ್ತಿಲ್ಲ. ಬಿಜೆಪಿ ಆಡಳಿತದಿಂದ ಒಡೆದು ಹೋದ ಮನಸ್ಸನ್ನು ಕೂಡಿಸುವ ಕೆಲಸ ಮಾಡುತ್ತಿದೆ. ಐಕ್ಯತಾ ಯಾತ್ರೆಯಲ್ಲಿ ರಾಹುಲ್ ಗಾಂಧಿಯವರು ಎಲ್ಲ ವರ್ಗದ ಜನರನ್ನೂ ಭೇಟಿಯಾಗಲಿದ್ದಾರೆ. ರಾಜ್ಯ ಸರ್ಕಾರದಿಂದ ರೈತರಿಗೆ, ಜನರಿಗೆ ಏನಾದರೂ ಉಪಯೋಗವಾಗಿದೆಯೇ ಎಂಬುದನ್ನು ಜನರಿಂದಲೇ ತಿಳಿದುಕೊಳ್ಳಲಿದ್ದಾರೆ ಎಂದರು.
ಜೋಡೋಗೆ ಬಿಜೆಪಿ ಕಂಗಾಲು:
ಯಾತ್ರೆಯಿಂದ ಪಕ್ಷಕ್ಕೆ ಲಾಭ ಆಗುವುದಿಲ್ಲ ಎಂದು ಹೇಳುವುದಿಲ್ಲ, ಪಕ್ಷಕ್ಕೆ ಲಾಭ ಆಗುತ್ತದೆ. ಈ ಶತಮಾನದಲ್ಲಿ ಇಂತಹ ದೊಡ್ಡ ಸಾಹಸಕ್ಕೆ ಯಾರೂ ಕೈ ಹಾಕಿಲ್ಲ. ಅಂದು ಉಪ್ಪಿನ ಸತ್ಯಾಗ್ರಹ, ಇಂದು ಭಾರತ ಐಕ್ಯತಾ ಯಾತ್ರೆ ಮಾಡುತ್ತಿದ್ದಾರೆ. ಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಹರಿದು ಬರುತ್ತಿರುವುದರಿಂದ ಬೇರೆ ಪಕ್ಷದವರು ಕೈ ಮತ್ತು ಮೈ ಪರಚಿಕೊಂಡಿದ್ದಾರೆ. ಬೇರೆ ಪಾರ್ಟಿಯವರು ತಮ್ಮ ಸಾಧನೆ ಜಾಹೀರಾತು ಕೊಟ್ಟಿಲ್ಲ, ನಮ್ಮ ಬಗೆಗಿನ ಕುರಿತು ಜಾಹಿರಾತು ಕೊಡುತ್ತಾರೆ. ಭಾರತ ಜೋಡೋ ಯಾತ್ರೆ ಬಿಜೆಪಿಗೆ ಆತಂಕ ಉಂಟು ಮಾಡಿದೆ ಎಂದರು.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ವಿತ್ವದಲ್ಲಿದೆ
ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಯಿಂದ ರಾಜ್ಯದ ವಿವಿಧ ಭಾಗದ ಜನರು ಸಮಾವೇಶಕ್ಕೆ ಅಗಮಿಸಲಿದ್ದಾರೆ. ಸಮಾವೇಶಕ್ಕೆ ಬರಲು ೬-೭ ಕಿ.ಮೀ.ನಡೆಯಬೇಕಾಗುತ್ತದೆ. ಅದಕ್ಕಾಗಿ ಸಮಾವೇಶಕ್ಕೆ ಬರುವವರು ಬೆಳಗ್ಗೆ ೧೦ ಗಂಟೆಯೊಳಗೆ ಬನ್ನಿ ಎಂದು ಕರೆ ನೀಡಿದ ಡಿಕೆಶಿ, ಬಿಜೆಪಿ ಟೀಕೆಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಉತ್ತರ ಕೊಡಲ್ಲ. ಜನರೇ ಉತ್ತರ ಕೊಡುತ್ತಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಲ್ಲ, ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದೆ ಎಂದರು.
ಅ.೧೭ರಂದು ಮತದಾನಕ್ಕೆ ಯಾತ್ರೆ ಬ್ರೆಕ್
ಎಐಸಿಸಿ ಚುನಾವಣೆಯ ಹಿನ್ನಲೆಯಲ್ಲಿ ಅ.೧೭ರಂದು ಪಾದಯಾತ್ರೆ ಇರುವುದಿಲ್ಲ. ಬೆಂಗಳೂರಿನಲ್ಲಿ ಮತದಾನ ಮಾಡಲು ವ್ಯವಸ್ಥೆ ಮಾಡಲಾಗಿದೆ. ನಂತರ ಅ.೧೮ರಂದು ಯಾತ್ರೆ ಆರಂಭವಾಗಲಿದೆ. ಗೆಲ್ಲಬೇಕೆಂದು ಚುನಾವಣೆಗೆ ಸ್ಪರ್ಧಿಸಿಲ್ಲ. ಸಂವಿಧಾನ ಮತ್ತು ಸಿದ್ಧಾಂತ ಯಾವುದೇ ಕಾರಣಕ್ಕೆ ಬದಲಾವಣೆ ಮಾಡುವುದಿಲ್ಲ, ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.
ತಡವಾಗಿ ಎಚ್ಚತ್ತುಕೊಂಡ ಸಿಎಂ:
ಶೇ.೮೫ ಪರ್ಸೆಂಟ್ ಸರ್ಕಾರ ಎಂಬ ಸಿಎಂ ಟೀಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಅಂದು ರಾಜೀವ ಗಾಂಧಿ ಹೇಳಿರುವ ಬಗ್ಗೆ ಮುಖ್ಯಮಂತ್ರಿಗಳು ಇಷ್ಟು ಬೇಗ ಎಚ್ಚೆತ್ತುಕೊಂಡಿದ್ದಾರೆ. ರೈಲು ಹೋದ ಮೇಲೆ ಟಿಕೆಟ್ ತೆಗೆದುಕೊಂಡಿದ್ದಾರೆ ಎಂದರು. ಗ್ಯಾಸ್ ದುರಂತದಲ್ಲಿ ಮೃತಪಟ್ಟವರ ನೆನೆದು ಕಣ್ಣೀರು ಹಾಕಿದ್ದೇನೆ, ಜನರ ನೋವಿಗೆ ನೊಂದಿದ್ದೇನೆ ಎಂದರು.
ಬಳ್ಳಾರಿ ಕಾಂಗ್ರೆಸ್‌ಗೆ ದೊಡ್ಡ ಶಕ್ತಿ:
ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ೨೪ ದಿನಗಳ ಕಾಲ ನಡೆಯುವ ಯಾತ್ರೆಯಲ್ಲಿ ಬಳ್ಳಾರಿಯಲ್ಲಿ ಮಾತ್ರ ಸಮಾವೇಶ ಮಾಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ಬಳ್ಳಾರಿ ದೊಡ್ಡ ಶಕ್ತಿ ಇದ್ದಂತೆ. ರಾಹುಲ್ ಗಾಂಧಿ ಸಮಾವೇಶ ಉದ್ಘಾಟನೆ ಮಾಡಲಿದ್ದಾರೆ ಎಂದರು.
ಇಂದು ಸಂಜೆ ಆರು ಗಂಟೆಗೆ ಯಾತ್ರೆ ಬಳ್ಳಾರಿಗೆ ಪ್ರವೇಶ ಪಡೆಯಲಿದೆ. ಸಮಾವೇಶದಲ್ಲಿ ನಾಲ್ಕೈದು ಲಕ್ಷ ಜನರು ಸೇರುವ ನಿರೀಕ್ಷೆ ಇದೆ, ರಾಜಸ್ಥಾನ ಮತ್ತು ಜಾರ್ಖಂಡ್ ಸಿಎಂ, ಮುಖಂಡರಾದ ದಿಗ್ವಜಯ್ ಸಿಂಗ್, ಕಮಲನಾಥ್, ಕೆ.ಸಿ. ವೇಣುಗೋಪಾಲ, ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲ, ಸೇರಿದಂತೆ ಪ್ರಮುಖ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ರಾಹುಲ್ ಗಾಂಧಿ ಅವರಿಗೆ ಹಂಪಿಯ ಕಲ್ಲಿನ ರಥದ ಮಾದರಿಯನ್ನು ನೆನಪಿನ ಕಾಣಿಕೆಯಾಗಿ ನೀಡಲಾಗುತ್ತದೆ. ರಾಹುಲ್‌ಗಾಂಧಿ ಭಾಷಣವನ್ನು ಈಶ್ವರ ಖಂಡ್ರೆಯವರು ಭಾಷಾಂತರ ಮಾಡಲಿದ್ದಾರೆ. ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಮತ್ತು ಮಾಜಿ ಸಚಿವ ಸಂತೋಷ್ ಲಾಡ್ ಅವರು ಊಟದ ವ್ಯವಸ್ಥೆಯನ್ನು ಮಾಡಿದ್ದಾರೆ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರಖಂಡ್ರೆ ಮಾತನಾಡಿ, ಇಂದು ಸಂಜೆ ೬.೩೦ಕ್ಕೆ ಕಲ್ಯಾಣ ಕರ್ನಾಟಕಕ್ಕೆ ರಾಹುಲ್ಗಾಂಧಿಯವರ ಭಾರತ ಐಕ್ಯತಾ ಯಾತ್ರೆ ಎಂಟ್ರಿಯಾಗಲಿದೆ. ಇಂದು ಸಂಜೆ ಹಲಕುಂದಿ ಮಠದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಯಾತ್ರೆಯು ೩೮ ದಿನಕ್ಕೆ, ರಾಜ್ಯದಲ್ಲಿ ೧೫ ದಿನಕ್ಕೆ ಕಾಲಿಟ್ಟಿದೆ. ೨೨೪ ಕ್ಷೇತ್ರದ ಪಕ್ಷದ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಬಿಜೆಪಿಯಿಂದ ಜಾತಿ ಮತ್ತು ಧರ್ಮದ ಮಧ್ಯೆ ರಾಜಕೀಯ ನಡೆಯುತ್ತಿದೆ, ರಾಜ್ಯದ ಎಲ್ಲಾ ಕಡೆ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ, ದೇಶದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಖಂಡತೆ, ಏಕತೆ ಅಪಾಯ ಮಟ್ಟದಲ್ಲಿದೆ ಎಂದರು.
ಭಾರತ ಐಕ್ಯತಾ ಯಾತ್ರೆಯು 12 ರಾಜ್ಯ ಮತ್ತು 2 ಕೇಂದ್ರಾಡಳಿತ ಪ್ರದೇಶದಲ್ಲಿ ಯಾತ್ರೆ ಹಾದು ಹೋಗಲಿದೆ, ಯಾವುದೇ ಅವಘಡಗಳು ಆಗದಂತೆ ಜನರು ಭಾಗವಹಿಸಬೇಕು. ಸಾಹಿತಿ, ಪ್ರಗತಿಪರ ಚಿಂತಕರು, ರೈತರು, ಹೋರಾಟಗಾರರು ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಶೇಖರ್ ಬಾಬು, ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಮುಖಂಡರಾದ ಬಿ.ನಾಗೇಂದ್ರ, ಹನುಮಂತಯ್ಯ, ಉಗ್ರಪ್ಪ, ಅಲ್ಲಂ ವೀರಭದ್ರಪ್ಪ, ಎಂ.ದಿವಾಕರಬಾಬು, ಬೋಸರಾಜು, ರೇವಣ್ಣ, ಅನಿಲ್ ಲಾಡ್, ವಹಾಬ್ ಸೇರಿದಂತೆ ಇತರರು ಇದ್ದರು.
ಇದನ್ನೂ ಓದಿ 40 ಪರ್ಸೆಂಟ್ | ರಾಜ್ಯ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಆಧಾರ ರಹಿತ ಆರೋಪ: ಎನ್.ರವಿಕುಮಾರ್