Site icon Vistara News

Bharat Jodo | ಗಾಂಧಿ ಕುಟುಂಬ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದೆ; ಮೋದಿ, ಷಾ ಯಾವ ತ್ಯಾಗ ಮಾಡಿದ್ದಾರೆ: ಸಿದ್ದರಾಮಯ್ಯ ಪ್ರಶ್ನೆ

karnataka-election-bjp-doesnt-give-representation-to-dalit-women-and-backward

ಬಳ್ಳಾರಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಐತಿಹಾಸಿಕ ಪಾದಯಾತ್ರೆ (Bharat Jodo) ಕೈಗೊಂಡಿದ್ದಾರೆ. ಆದರೆ, ಈ ಪಾದಯಾತ್ರೆ ಬಗ್ಗೆ ಬಿಜೆಪಿಯವರು ಲಘುವಾಗಿ ಮಾತನಾಡುತ್ತಿದ್ದಾರೆ. ಗಾಂಧಿ ಕುಟುಂಬದವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಹಾಗಾದರೆ, ಪ್ರಧಾನಿ ನರೇಂದ್ರ ಮೋದಿ, ಗೃಹ ಮಂತ್ರಿ ಅಮಿತ್‌ ಷಾ ಈ ದೇಶಕ್ಕಾಗಿ ಮಾಡಿದ ತ್ಯಾಗ ಏನು? ಎಂಬುದನ್ನು ಬಹಿರಂಗಪಡಿಸಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗವಾಗಿ ಸವಾಲು ಹಾಕಿದರು.

ಕಾಂಗ್ರೆಸ್‌ನ ಭಾರತ್‌ ಜೋಡೋ ಯಾತ್ರೆಯ ಭಾಗವಾಗಿ ಬಳ್ಳಾರಿಯಲ್ಲಿ ಆಯೋಜಿಸಿದ್ದ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ತಂದು ಕೊಟ್ಟ ಸ್ವಾತಂತ್ರ್ಯವನ್ನು ಈಗ ಅನುಭವಿಸಲಾಗುತ್ತಿದೆ. ಮಹಾತ್ಮ ಗಾಂಧೀಜಿ ಸಹಿತ ನಮ್ಮ ಕಾಂಗ್ರೆಸ್‌ನ ಅನೇಕ ನಾಯಕರು ಆಸ್ತಿಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ. ಪ್ರಾಣ ತ್ಯಾಗವನ್ನು ಮಾಡಿದ್ದಾರೆ. ಆದರೆ, ಭಾರತೀಯ ಜನತಾ ಪಕ್ಷದವರಲ್ಲಿ ಯಾರಾದರೂ ಒಬ್ಬ ಬಲಿದಾನ ಮಾಡಿದ್ದಾರೆಯೇ? ೧೯೨೫ರಲ್ಲಿ ಆರ್‌ಎಸ್‌ಎಸ್‌ ಪ್ರಾರಂಭವಾಯಿತು. ಸ್ವಾತಂತ್ರ್ಯ ಹೋರಾಟದಲ್ಲಿ ಯಾರಾದರೂ ಒಬ್ಬರು ಪ್ರಾಣ ತ್ಯಾಗ ಮಾಡಿದಂತಹ, ಹುತಾತ್ಮರಾದಂಥವರು ಇದ್ದರೆ ಹೇಳಬೇಕು ಎಂದು ಹೇಳಿದರು.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಭಾರತ್‌ ಜೋಡೋ ಪಾದಯಾತ್ರೆಯನ್ನು ಮುಂದಿನ ಲೋಕಸಭೆ ಚುನಾವಣೆಯನ್ನು ಗೆಲ್ಲಬೇಕು ಅಥವಾ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯನ್ನು ಗೆಲ್ಲಬೇಕು ಎಂದು ಮಾಡುತ್ತಿರುವ ಪಾದಯಾತ್ರೆ ಇದಲ್ಲ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೊಂದು ಐತಿಹಾಸಿಕವಾದ ಪಾದಯಾತ್ರೆ. ಹಾಗಂತ ಈ ಹಿಂದೆ ಪಾದಯಾತ್ರೆಗಳು ನಡೆದಿಲ್ಲ ಎಂದು ನಾನು ಹೇಳುತ್ತಿಲ್ಲ. ಮಹಾತ್ಮಾ ಗಾಂಧಿ, ವಿನೋಬಾ ಭಾವೆಯವರು ಸೇರಿದಂತೆ ಇನ್ನೂ ಹಲವರು ಪಾದಯಾತ್ರೆ ಮಾಡಿದ್ದಾರೆ. ಆದರೆ, ಏಕಕಾಲದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು 3572 ಕಿಮೀ ಕೈಗೊಂಡಿರುವುದೇ ಇದಕ್ಕೆ ಕಾರಣ ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ | Bharat Jodo | ಪಾದಯಾತ್ರೆಯಿಂದ ರಾಜ್ಯದಲ್ಲಿ 150 ಸೀಟು ಗೆಲ್ಲುವ ಅವಕಾಶ ಸೃಷ್ಟಿ: ಡಿಕೆಶಿ ವಿಶ್ವಾಸ

ಈಗಾಗಲೇ ರಾಹುಲ್‌ ಗಾಂಧಿ ಅವರು 1000 ಕಿ.ಮೀ. ಪಾದಯಾತ್ರೆಯನ್ನು ಮುಗಿಸಿದ್ದಾರೆ. ಕರ್ನಾಟಕದ ಬಳಿಕ ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಹೀಗೆ ದೇಶದ ೨ ಕೇಂದ್ರಾಡಳಿತ ಪ್ರದೇಶ ಸೇರಿದಂತೆ ೧೨ ರಾಜ್ಯಗಳಲ್ಲಿ ರಾಹುಲ್‌ ಪಾದಯಾತ್ರೆ ಮಾಡುತ್ತಿದ್ದಾರೆ. ಈ ವೇಳೆ ಮಾತನಾಡುವಾಗ ರಾಹುಲ್‌ ಪಾದಯಾತ್ರೆಯ ಉದ್ದೇಶವನ್ನು ಸ್ಪಷ್ಟಪಡಿಸುತ್ತಾ ಬಂದಿದ್ದಾರೆ. ದೇಶವು ಇಂದು ಜಾತಿ, ಧರ್ಮ, ವರ್ಗಗಳು ಹಾಗೂ ಭಾಷೆಗಳ ಆಧಾರದ ಮೇಲೆ ಜನರ ಮನಸ್ಸನ್ನು ಒಡೆಯುವ ಕೆಲಸವನ್ನು ಮಾಡಲಾಗುತ್ತಿದೆ. ಎಲ್ಲರ ಮನಸ್ಸಿನಲ್ಲಿ ವಿಷ ಹಿಂಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಆದ ಮೇಲೆ ಈ ಮಾನವ ವಿರೋಧಿ ಕೆಲಸವು ಹೆಚ್ಚು ಹೆಚ್ಚು ಘಟಿಸುತ್ತಾ ಇದೆ. ಎಲ್ಲ ಕಡೆ ದ್ವೇಷದ ರಾಜಕಾರಣ, ಹಿಂಸೆಯ ರಾಜಕಾರಣ ನಡೆಯುತ್ತಿದೆ. ಎಲ್ಲ ಕಡೆ ಜನ ಭಯದ ವಾತಾವಾರಣದಲ್ಲೇ ಬದುಕುವ ವಾತಾವರಣ ನಿರ್ಮಾಣವಾಗಿದೆ. ಹಿಂದುಳಿದವರು, ಬಡವರು, ದಲಿತರು, ರೈತರು ಸೇರಿದಂತೆ ಇನ್ನಿತರರು ನೆಮ್ಮದಿಯಿಂದ, ಶಾಂತಿಯಿಂದ ಬದುಕುವಂತಹ ವಾತಾವರಣ ಇಲ್ಲಿಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಸಂಘಪರಿವಾರದವರು ಧರ್ಮದ ರಾಜಕಾರಣ ಮಾಡುತ್ತಿದ್ದಾರೆ. ಕರ್ನಾಟಕದಲ್ಲಷ್ಟೇ ಅಲ್ಲದೆ ಇಡೀ ದೇಶದಲ್ಲಿ ನೀಚ ಕೆಲಸವನ್ನು ಆರ್‌ಎಸ್‌ಎಸ್‌, ಬಜರಂಗದಳ, ಹಿಂದು ಮಹಾಸಭಾ, ಹಿಂದು ಜಾಗರಣಾ ವೇದಿಕೆಯವರು ಮಾಡುತ್ತಾ ಬರುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪ ಮಾಡಿದರು.

ಶ್ರೀರಾಮುಲುನಂತರಹ ಪೆದ್ದನ ಜತೆ ಚರ್ಚಿಸಲ್ಲ
ಕಾಂಗ್ರೆಸ್‌ನವರು ಈ ದೇಶಕ್ಕೆ ಯಾವುದೇ ಕೊಡುಗೆ ನೀಡಿಲ್ಲ ಎಂದು ಸಚಿವ ಶ್ರೀರಾಮುಲು ನೀಡಿರುವ ಹೇಳಿಕೆಯನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, ರಾಮುಲುಗೆ ಇತಿಹಾಸ ಗೊತ್ತಿಲ್ಲ. ನೆಹರೂ, ಗಾಂಧಿ ಕುಟುಂಬ ಸೇರಿದಂತೆ ಕಾಂಗ್ರೆಸ್ ಬಗ್ಗೆ ಮಾತನಾಡುವುದಕ್ಕೆ ನೈತಿಕತೆ ಇಲ್ಲ. ೧೯೮೨ರಲ್ಲಿ ವಿಜಯನಗರ ಉಕ್ಕಿನ ಕಾರ್ಖಾನೆ ನೀಡಿದವರು ಯಾರು? ಇಂದು ಲಕ್ಷಾಂತರ ಜನಕ್ಕೆ ಅನುಕೂಲವಾಗಿದ್ದರೆ ಅದಕ್ಕೆ ಇಂದಿರಾಗಾಂಧಿ ಅವರೇ ಕಾರಣ. ವಿದ್ಯುತ್ ಶಕ್ತಿ ಯೋಜನೆ ತಂದವರು ಸೋನಿಯಾ ಗಾಂಧಿ ಎಂದು ಶ್ರೀರಾಮುಲು ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಬಳ್ಳಾರಿ ಜಿಲ್ಲೆಗೆ ರಾಮುಲು ಕೊಡುಗೆ ಏನು? ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ | Bharat Jodo | ಸೋನಿಯಾ, ರಾಹುಲ್ ಪ್ರಯತ್ನದಿಂದ ಕಲ್ಯಾಣ ಕರ್ನಾಟಕಕ್ಕೆ 371ಜೆ ಸ್ಥಾನಮಾನ: ಖರ್ಗೆ

ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ೮ ವರ್ಷ ಕಳೆದರೂ ಬಳ್ಳಾರಿಗೆ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ. ಆದರೆ, ಸಚಿವ ಶ್ರೀರಾಮುಲು ಚರ್ಚೆ ಮಾಡಲು ಮುಂದಾಗಿದ್ದಾರೆ. ರಾಮುಲುನಂತಹ ಪೆದ್ದನೊಂದಿಗೆ ಚರ್ಚೆ ಮಾಡಲು ಸಾಧ್ಯವಿಲ್ಲ. ಲೂಟಿ ಹೊಡೆದಿರುವುದು ನಿಮ್ಮೆಲ್ಲರ ಸಾಧನೆ, ಬಳ್ಳಾರಿಯಲ್ಲಿ ಗಣಿ ಹೆಸರಲ್ಲಿ ಲೂಟಿ ಮಾಡಲಾಯಿತು. ಇದಕ್ಕೆ ಹಲವರು ಕುಮ್ಮಕ್ಕು ಕೊಟ್ಟರು. ಬೆಂಗಳೂರಿನಿಂದ ಬಳ್ಳಾರಿಗೆ ಕಾಂಗ್ರೆಸ್‌ ಪಾದಯಾತ್ರೆ ಮಾಡಿತು. ಜನಾರ್ದನ ರೆಡ್ಡಿ ಜೈಲಿಗೆ ಹೋದರು ಎಂದು ಸಿದ್ದರಾಮಯ್ಯ ಹೇಳಿದರು.

೪೦% ಸರ್ಕಾರ ಎಂದು ಕಿಡಿ
ಬಿಜೆಪಿಯು ೪೦% ಸರ್ಕಾರವಾಗಿದೆ. ಇದು ನಾನು ಹೇಳುತ್ತಿರುವುದಲ್ಲ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡುತ್ತಿರುವ ಆರೋಪವಾಗಿದೆ. ಯಾವುದೇ ಯೋಜನೆ ಬರಲಿ, ಅದಕ್ಕೆ ೪೦% ಕೇಳುತ್ತಿದ್ದಾರೆ. ಈ ಸಂಬಂಧ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೂ ಕೆಂಪಣ್ಣ ಪತ್ರ ಬರೆದಿದ್ದಾರೆ. ಆದರೂ ಕ್ರಮ ಕೈಗೊಳ್ಳದ ಪ್ರಧಾನಿ, “ನಾ ಖಾವೂಂಗಾ, ನಾ ಖಾನೇದೂಂಗ” ಎಂದು ಹೇಳುತ್ತಾರೆ. ಇದಾಗಿ ಒಂದು ವರ್ಷವಾದರೂ ಕ್ರಮ ಕೈಗೊಳ್ಳದ ಪ್ರಧಾನಿ ಮೋದಿ ಅವರೇ ನೀವೆಲ್ಲಿದ್ದೀರಿ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

೨೦೨೩ಕ್ಕೆ ಮತ್ತೆ ಕಾಂಗ್ರೆಸ್‌ ಸರ್ಕಾರ
ರಾಹುಲ್‌ ಗಾಂಧಿ ಭಾರತ್‌ ಜೋಡೋ ಯಾತ್ರೆ ಪ್ರಾರಂಭಿಸಿದ ಮೇಲೆ ರಾಜ್ಯ ಬಿಜೆಪಿ ಸರ್ಕಾರ ಈಗ ಜನ ಸಂಕಲ್ಪ ಯಾತ್ರೆಯನ್ನು ಕೈಗೊಂಡಿದ್ದಾರೆ. ಜನರೂ ಸಹ ಈಗಾಗಲೇ ಸಂಕಲ್ಪ ಮಾಡಿದ್ದು, ೨೦೨೩ಕ್ಕೆ ಈಗಿನ ಸರ್ಕಾರವನ್ನು ಕಿತ್ತೆಸೆದು ಕಾಂಗ್ರೆಸ್‌ ಸರ್ಕಾರವನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ರಾಹುಲ್‌ ಗಾಂಧಿಯವರು ನನಗೆ ೫ ವರ್ಷ ಮುಖ್ಯಮಂತ್ರಿಯಾಗಲು ಅವಕಾಶ ಮಾಡಿಕೊಟ್ಟರು. ಆ ೫ ವರ್ಷದಲ್ಲಿ ನುಡಿದಂತೆ ನಡೆದಿದ್ದೇವೆ. ಅದರ ಜತೆಗೆ ಇನ್ನೂ ೩೦ ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಅಲ್ಲದೆ, ೧೬೫ ಭರವಸೆಗಳಲ್ಲಿ ೧೫೮ ಭರವಸೆಗಳನ್ನು ಈಡೇರಿಸಿದ್ದೇವೆ. ಈಗ ನೀವು ೨೦೧೮ರಲ್ಲಿ ಕೊಟ್ಟ ಪ್ರಣಾಳಿಕೆಯಲ್ಲಿ ಯಾವುದನ್ನು ಈಡೇರಿಸಿದ್ದೀರಿ? ನೀವು ಏನೂ ಮಾಡದೇ ರಾಜ್ಯವನ್ನು ಹಾಳು ಮಾಡುತ್ತಿದ್ದೀರಿ ಎಂದು ಕಿಡಿಕಾರಿದರು.

ರೈತರಿಗೆ ದುಪ್ಪಟ್ಟಾದ ಹಣ!
೨೦೨೩ಕ್ಕೆ ರೈತರ ಆದಾಯವನ್ನು ದುಪ್ಪಟ್ಟು ಮಾಡುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ ಏನು ಮಾಡಿತು? ರೈತರ ಆದಾಯ ದುಪ್ಪಟ್ಟು ಆಗಲಿಲ್ಲ. ಬದಲಾಗಿ ರೈತರು ವ್ಯವಸಾಯಕ್ಕೆ ಖರ್ಚು ಮಾಡುವ ಹಣ ದುಪ್ಪಟ್ಟಾಯಿತು. ರೈತರಿಗೆ ಎಂಎಸ್‌ಪಿ ಕೊಡಲಿಲ್ಲ. ರೈತರ ಮನೆ ಹಾಳು ಮಾಡಿದರು.

ಇದನ್ನೂ ಓದಿ | Bharat Jodo | RSS, BJPಯದ್ದು ದೇಶಭಕ್ತಿ ಅಲ್ಲ, ದೇಶದ ಮೇಲಿನ ದಾಳಿ: ಬಳ್ಳಾರಿಯಲ್ಲಿ ರಾಹುಲ್‌ ವಾಗ್ದಾಳಿ

Exit mobile version