ಚಾಮರಾಜನಗರ: ವಿವಾದಾತ್ಮಕ Pay CM ಚಿತ್ರವಿರುವ ಟಿ-ಶರ್ಟ್ ಧರಿಸಿದ ಕಾರಣಕ್ಕೆ ಎಫ್‌ಐಆರ್ ದಾಖಲಾದರೂ ಎರಡನೇ ದಿನದ ಭಾರತ್ ಜೋಡೋ ಯಾತ್ರೆಯಲ್ಲಿ ಮತ್ತೆ ಕಾಣಿಸಿಕೊಂಡ ವಿಜಯಪುರ ಮೂಲದ ಅಕ್ಷಯ್ ಕಮಾರ್ ಎಂಬಾತನನ್ನು ಪೊಲೀಸರು ಹಿಡಿದು ಥಳಿಸಿದ್ದಾರೆ. ಜತೆಗೆ ಟಿ-ಶರ್ಟ್ ಬಿಚ್ಚಿಸಿದ್ದಾರೆ. ವಿವಾದಾತ್ಮಕ Pay CM ಚಿತ್ರವಿರುವ ಟಿ-ಶರ್ಟ್ ಧರಿಸಿದ್ದ ಸಿಂಧಗಿಯ ಅಕ್ಷಯ್ ಕುಮಾರ್ ಮೇಲೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ವಿಜಯಪುರ ಜಿಲ್ಲೆ ಕಾಂಗ್ರೆಸ್ ಕಾರ್ಯಕರ್ತ ಅಕ್ಷಯ್ ಕುಮಾರ್ ಎಂಬಾತ ಪೇ ಸಿಎಂ ಚಿತ್ರವಿರುವ ಟಿ ಶರ್ಟ್ ಧರಿಸಿದ್ದಲ್ಲದೆ, ಕಾಂಗ್ರೆಸ್ ಬಾವುಟ ಹಿಡಿದು ಎಲ್ಲರಿಗೂ ಕಾಣುವಂತೆ ಮೆರವಣಿಗೆಯಲ್ಲಿ ಭಾಗವಹಿಸಿದ್ದ.
ಸಾರ್ವಜನಿಕ ಜಾಗದಲ್ಲಿ ಈ ರೀತಿಯಾಗಿ Pay CM ಎಂಬ ಪ್ರದರ್ಶನ ಮಾಡಿದ್ದರಿಂದ ರಾಜ್ಯದ ಮುಖ್ಯಮಂತ್ರಿಗೆ ಅಪಮಾನವಾಗಿದೆ. ಹುದ್ದೆಯ ಗೌರವಕ್ಕೆ ಧಕ್ಕೆಯಾಗಿದೆ. ಹೀಗಾಗಿ ಮುಖ್ಯಮಂತ್ರಿ ಗೆ ಅವಮಾನ ಮಾಡಿರುವವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಗುಂಡ್ಲುಪೇಟೆ ಪುರಸಭಾ ಸದಸ್ಯರಾದ ಕಿರಣ್‌ಗೌಡ ಹಾಗು ಸುರೇಶ್ ಅವರು ಪೊಲೀಸರಿಗೆ ದೂರು ನೀಡಿದ್ದರು.
ಹೀಗಾಗಿ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 1860 (us505(1)(B), 507 ಹಾಗು ಐಟಿ ಆಕ್ಟ್ 2008 (us 66(D) ಅಡಿ ಎಫ್ಐಆರ್ ದಾಖಲಿಸಿದ್ದರು.
ಈತ ಶನಿವಾರ ಮತ್ತೆ ಮೆರವಣಿಗೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಆತನನ್ನು ಹಿಡಿಯಲಾಯಿತು. ಚಾಮರಾಜನಗರ ಎಸ್‌ಪಿ ಟಿ.ಪಿ ಶಿವಕುಮಾರ್ ಮುಂದಾಳತ್ವದಲ್ಲಿ ಆತನನ್ನು ವಶಕ್ಕೆ ಪಡೆದ ಪೊಲೀಸರು ಟಿ-ಶರ್ಟ್ ಬಿಚ್ಚಿಸಿದರು. ಇಷ್ಟೆಲ್ಲ ನಡೆದರೂ ಕಾಂಗ್ರೆಸ್ ಕಾರ್ಯಕರ್ತರು ಯಾರೂ ಪ್ರತಿಭಟನೆ ನಡೆಸಲಿಲ್ಲ. ಆತನ ಪರವಾಗಿ ನಿಲ್ಲಲಿಲ್ಲ. ಆದರೂ ಪೊಲೀಸರು ಆತನನ್ನು ಬೇಗ ಬೇಗನೆ ಕರೆದುಕೊಂಡು ಪಕ್ಕಕ್ಕೆ ಹೋಗಿ ನಿಲ್ಲಿಸಿದರು.
ಇದನ್ನೂ ಓದಿ | Pay CM | ಡಿಕೆಶಿ ಗಮ್ ಹಾಕಿದರು, ಸಿದ್ದರಾಮಯ್ಯ ಪೋಸ್ಟರ್ ಅಂಟಿಸಿದರು, ಪೊಲೀಸರು ಕರೆದೊಯ್ದರು