ಚಾಮರಾಜನಗರ: ಭಾರತ್ ಜೋಡೊ ಯಾತ್ರೆಯ ನೇತೃತ್ವ ವಹಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮಿಳುನಾಡಿನ ಗುಡಲೂರು ಮೂಲಕ ರಾಜ್ಯ ಪ್ರವೇಶ ಮಾಡಿದ್ದಾರೆ. ರಾಜ್ಯದಲ್ಲಿ ಮುಂದಿನ ೨೨ ದಿನಗಳ ಕಾಲ ಭಾರತ್ ಜೋಡೊ ಯಾತ್ರೆ ನಡೆಯಲಿದ್ದು, ಚಾಮರಾಜ ನಗರದ ಗುಂಡ್ಲುಪೇಟೆಯಲ್ಲಿ ಯಾತ್ರೆಗೆ ಚಾಲನೆ ದೊರೆಯಲಿದೆ.
ಕೆಕ್ಕನಹಳ್ಳ ಚೆಕ್ ಪೋಸ್ಟ್ ಮೂಲಕ ರಾಜ್ಯಕ್ಕೆ ಎಂಟ್ರಿ ಪಡೆದ ರಾಹುಲ್ ಗಾಂಧಿ ಅವರು ರಸ್ತೆ ಮಾರ್ಗವಾಗಿ ತಮಿಳುನಾಡು ಗಡಿಯಿಂದ 45 ಕಿಮೀ ಅರಣ್ಯ ಪ್ರದೇಶದಲ್ಲಿ ಸಂಚರಿಸಿ ಗುಂಡ್ಲುಪೇಟೆಗೆ ತಲುಪಿದರು.
ಜಿಂಕೆ, ನವಿಲುಗಳ ವೀಕ್ಷಣೆ
ಬಂಡೀಪುರ ಅರಣ್ಯ ಪ್ರದೇಶದ ರಸ್ತೆ ಮೂಲಕ ಗುಂಡ್ಲುಪೇಟೆಗೆ ಬರುವ ದಾರಿಯಲ್ಲಿ ಅವರು ಕಾರಿನಲ್ಲಿ ಕುಳಿತು ಅರಣ್ಯ ವೀಕ್ಷಣೆ ಮಾಡಿದ ರಾಹುಲ್ ಜಿಂಕೆ, ನವೀಲುಗಳನ್ನು ನೋಡಿ ಆನಂದಿಸಿದರು. ಜಿಂಕೆಗಳು ಕಂಡ ಕಡೆ ವಾಹನಗಳ ಸಂಚಾರ ನಿಧಾನ ಮಾಡಿ ವೀಕ್ಷಣೆ ಮಾಡಿದರು.
ಸ್ವಾಗತಕ್ಕೆ ಯಾರು ಇಲ್ಲ!
ರಾಹುಲ್ ಗಾಂಧಿ ಅವರು ರಾಜ್ಯ ಪ್ರವೇಶಿಸುವಾಗ ಯಾರು ಸ್ವಾಗತ ಮಾಡಬೇಕು ಎನ್ನುವ ಬಗ್ಗೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಮಧ್ಯೆ ಸ್ಪಷ್ಟತೆ ಇಲ್ಲದೆ ಇದ್ದುದರಿಂದ ಯಾರೂ ಇಲ್ಲದೆ ಏಕಾಂಗಿಯಾಗಿ ಪ್ರವೇಶ ಮಾಡಿದರು ರಾಹುಲ್ ಗಾಂಧಿ.
ಸಿದ್ದರಾಮಯ್ಯ ಅವರು ಕೆಕ್ಕನಹಳ್ಳಿ ಚೆಕ್‌ಪೋಸ್ಟ್‌ಗೆ ಬಂದು ಸ್ವಾಗತಿಸಲು ಮುಂದಾದರೂ ಆಗಲೇ ತಡವಾಗಿತ್ತು. ಹೀಗಾಗಿ ರಾಹುಲ್ ರಾಜ್ಯ ಪ್ರವೇಶಿಸಿ ಗುಂಡ್ಲುಪೇಟೆಯ ಕಡೆಗೆ ವಾಹನದಲ್ಲಿ ಹೊರಟಿದ್ದರು.
ನಡುವೆ ಸಿದ್ದರಾಮಯ್ಯ ಸ್ವಾಗತ
ಈ ನಡುವೆ, ಬಂಡಿಪುರ ನೇಚರ್ ಕ್ಯಾಂಪ್ ಸಮೀಪ ಸಿದ್ದರಾಮಯ್ಯ ಅವರು ಎದುರಾಗಿ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಿದರು. ರೇಷ್ಮೆ ಹಾರ ಹಾಕಿ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಿದ ಸಿದ್ದರಾಮಯ್ಯ ಬಳಿಕ ರಾಹುಲ್ ಅವರನ್ನು ಸಮೀಪದ ವನಸಿರಿ ಹೋಟೆಲ್‌ಗೆ ಕರೆದುಕೊಂಡು ಹೋದರು.
ವಡೆ, ಕಾಫಿ ಸೇವಿಸಿದ ರಾಹುಲ್
ವನಸಿರಿ ಹೋಟೆಲ್‌ನಲ್ಲಿ ರಾಹುಲ್ ಗಾಂಧಿ ಉದ್ದಿನ ವಡೆ ಮತ್ತು ಕಾಫಿ ಸೇವಿಸಿದರು. ಸಿದ್ದರಾಮಯ್ಯ, ಕೆ.ಜೆ ಜಾರ್ಜ್, ಮಹದೇವಪ್ಪ, ಎಂ.ಬಿ ಪಾಟೀಲ್, ವೀರಪ್ಪ ಮೊಯ್ಲಿ, ಪ್ರಕಾಶ್ ರಾಥೋಡ್, ಆರ್.ವಿ ದೇಶಪಾಂಡೆ ಜತೆಗಿದ್ದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಉಪಾಹಾರ ಸೇವನೆ ಜೊತೆಗೆ ಚರ್ಚೆ ನಡೆಸಿದರು.
ಈ ಕಡೆ ಬೇಡ ಆ ಕಡೆ ಬನ್ನಿ
ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾಹುಲ್ ಗಾಂಧಿಗೆ ಸ್ವಾಗತ ಕೋರಿದ ಸಿದ್ದರಾಮಯ್ಯ ಅವರು ಕಾರಿನ ಎಡಬದಿಯಿಂದ ಹತ್ತಲು ಮುಂದಾದಾಗ ರಾಹುಲ್ ಅವರು, ʻಇಲ್ಲಿ ಬೇಡ, ಆ ಕಡೆಯಿಂದ ಹತ್ತಿʼ ಎಂದು ಹೇಳಿದರು. ಆಗ ಕಾರಿನ ಬಲಬದಿಯಿಂದ ಬಂದು ಕಾರು ಹತ್ತಿದರು ಸಿದ್ದರಾಮಯ್ಯ.