ಶಶಿಧರ್ ಮೇಟಿ, ಬಳ್ಳಾರಿ
ಗಣಿನಾಡು ಬಳ್ಳಾರಿಯಲ್ಲಿ ಎರಡು ದಿನಗಳ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆ (Bharat Jodo) ಮತ್ತು ಮೂರು ದಿನಗಳ ವಾಸ್ತವ್ಯವು ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಸಾಕಷ್ಟು ಸಂಚಲನ ಮಾಡಿದೆ. ಇದಲ್ಲದೆ, ಸುತ್ತಮುತ್ತಲ ಕೆಲವು ಜಿಲ್ಲೆಗಳಲ್ಲೂ ಪರಿಣಾಮ ಬೀರಿದೆ ಎಂದೇ ಹೇಳಲಾಗುತ್ತಿದೆ.
ಯಾತ್ರೆಯು 1000 ಕಿ.ಮೀ ಕ್ರಮಿಸಿರುವುದರಿಂದ ಅ.15ರಂದು ಬಳ್ಳಾರಿಯಲ್ಲಿ ದೊಡ್ಡ ಸಮಾವೇಶ ಮಾಡಿ, ಮುಂದಿನ ಚುನಾವಣೆಗೆ ರಣಕಹಳೆ ಊದಿದರು. ಅ.14ರಿಂದ ಗಣಿನಾಡಿಗೆ ಎಂಟ್ರಿಯಾದ ಪಾದಯಾತ್ರೆಯು ಅ.18ರಂದು ಬೆಳಗ್ಗೆ 6.41ಕ್ಕೆ ಆಂಧ್ರದತ್ತ ಸಾಗುವ ಮೂಲಕ ಜಿಲ್ಲೆಯಲ್ಲಿ ಯಾತ್ರೆಯು ಯಶಸ್ವಿಯಾಗಿ ಸಾಗಿದಂತಾಗಿದೆ. ಈ ಮಧ್ಯೆ ಜಿಲ್ಲೆಯ ಎಲ್ಲ ಕಡೆ ಪಾದಯಾತ್ರೆಯಲ್ಲಿ ಶಾಸಕರಾದಿಯಾಗಿ ಕಾರ್ಯಕರ್ತರು ಉತ್ಸಾಹದಿಂದ ಭಾಗಿಯಾಗಿದ್ದು, ವಿಶ್ವಾಸವನ್ನು ಇಮ್ಮಡಿಗೊಳಿಸುವಂತೆ ಮಾಡಿದೆ. ಕೆಲವರು ಈ ವೇಳೆ ಬೆಂಗಳೂರಿನಿಂದ ಬಳ್ಳಾರಿಗೆ ಸಾಗಿದ್ದ ಪಾದಯಾತ್ರೆಯನ್ನು ನೆನಪಿಸಿಕೊಂಡಿದ್ದಾರೆ.
ಬಿಗಿ ಬಂದೋಬಸ್ತ್
ಅ.14ರಂದು ಸಂಜೆ ಹೊತ್ತಿಗೆ ಆಂಧ್ರಪ್ರದೇಶ ಓಬಳಾಪುರದಿಂದ ರಾಜ್ಯಕ್ಕೆ ಎಂಟ್ರಿಯಾದಾಗ ಪೂರ್ಣಕುಂಭ ಮತ್ತು ಮಂಗಳಮುಖಿಯರು, ಕಲಾ ತಂಡಗಳು ಸ್ವಾಗತಿಸಿದವು. ಬಳ್ಳಾರಿ ಗಡಿಯಿಂದಲೇ ವಾಹನದ ಮೂಲಕ ಹಲಕುಂದಿ ದೇವಸ್ಥಾನದ ಪಕ್ಕದ ಖಾಲಿ ಯಾಗದಲ್ಲಿಯೇ 58 ಕಂಟೇನರ್ ಮೂಲಕ ರಾಹುಲ್ ಗಾಂಧಿ ಮತ್ತು ಅವರ ಹಿಂದಿನ ಯಾತ್ರಿಗಳಿಗೆ ವಾಸ್ತವ್ಯ ಮಾಡಿದ್ದ ಕ್ಯಾಂಪ್‌ಗೆ ತೆರಳಿದರು. ರಾಹುಲ್ ಗಾಂಧಿ ವಾಸ್ತವ್ಯದ ಕ್ಯಾಂಪ್‌ಗೆ ಯಾರೊಬ್ಬರೂ ಪ್ರವೇಶಿಸದಂತೆ ಬಿಗಿಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ರಾಹುಲ್ ಗಾಂಧಿ ವಾಸ್ತವ್ಯದ ಸ್ಥಳಕ್ಕೆ ಕಾರಿನಲ್ಲಿ ಬಂದಿರುವುದನ್ನು ತಿಳಿಯದೆ, ಪಾದಯಾತ್ರೆಯಲ್ಲಿ ಬರುತ್ತಾರೆಂದು ಹಲಕುಂದಿ ಬಳಿಯ ರಸ್ತೆಯ ಬದಿಯಲ್ಲಿ ಕಾಯುತ್ತಿದ್ದ ಜನರು ನಿರಾಸೆಯಾಯಿತು.
ಇದನ್ನೂ ಓದಿ | Bharat jodo | ಬಳ್ಳಾರಿಯ ಜೀನ್ಸ್ ಉದ್ಯಮದ ನೋವು ನಲಿವು ಕೇಳಿಸಿಕೊಂಡ ರಾಹುಲ್ ಗಾಂಧಿ, ಸಿಕ್ಕಿತು ಕೆಲವು ಗಿಫ್ಟ್!
ಯಾತ್ರೆಯ ಮೂರು ದಿನದ ಚಿತ್ರಣ
ಅ.15ರಂದು ಬೆಳಗ್ಗೆ 6.40ಕ್ಕೆ ಹಲಕುಂದಿಯಿಂದ ಆರಂಭವಾದ ಪಾದಯಾತ್ರೆಯು ಬೆಳಗ್ಗೆ 8.45ಕ್ಕೆ ಬಳ್ಳಾರಿಯ ಕಮ್ಮಾ ಭವನಕ್ಕೆ ಆಗಮಿಸಿ, ಉಪಾಹಾರ ಸೇವಿಸಿ, ವಿಶ್ರಾಂತಿ ಪಡೆದ ನಂತರ ಸುಮಾರು 1.20ಕ್ಕೆ ಮುನ್ಸಿಪಾಲ್ ಕಾಲೇಜು ಮೈದಾನದಲ್ಲಿ ಏರ್ಪಡಿಸಿರುವ ಸಮಾವೇಶಕ್ಕೆ ರಾಹುಲ್ ಗಾಂಧಿ ಆಗಮಿಸಿದರು. ನಂತರ ಅಲ್ಲಿಂದ ಬಳ್ಳಾರಿಯ ತಾಲೂಕಿನ ಸಂಗನಕಲ್ ಗ್ರಾಮದಲ್ಲಿ ವಾಸ್ತವ್ಯ ಮಾಡಿರುವ ಕ್ಯಾಂಪ್‌ಗೆ ವಾಹನದಲ್ಲಿ ಹೋಗಿ ವಾಸ್ತವ್ಯ ಹೂಡಿದರು. ಅ.16ರಂದು ಬೆಳಗ್ಗೆ 6.30ಕ್ಕೆ ಪಾದಯಾತ್ರೆ ಆರಂಭಿಸಿ, ಮೋಕಾ ಗ್ರಾಮದಲ್ಲಿರುವ ಹನಿ ಫಂಕ್ಷನ್ ಹಾಲ್‌ನಲ್ಲಿ ಉಪಾಹಾರ ಮತ್ತು ವಿಶ್ರಾಂತಿ ಪಡೆದರು. ಅಲ್ಲಿ ಜೀನ್ಸ್ ಉದ್ಯಮದ ಮಾಲೀಕರು ಮತ್ತು ಕಾರ್ಮಿಕರೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸಿದರು. ಅಂದು ಸಂಜೆ 4.30ರಿಂದ ಆರಂಭವಾದ ಪಾದಯಾತ್ರೆಯು ಕರ್ನಾಟಕ ಗಡಿಭಾಗವಾದ ಸಿಂಧುವಾಳ್ ಕ್ರಾಸ್‌ವರೆಗೆ ಸಾಗಿ ಸಂಜೆ 6.30ಕ್ಕೆ ಸಂಗನಕಲ್ ಗ್ರಾಮದ ಸಮೀಪ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿರುವ ಪ್ರದೇಶಕ್ಕೆ ತೆರಳಿದರು.
ಸಮಾವೇಶದ ಮೂಲಕ ಚುನಾವಣೆಯ ರಣಕಹಳೆ
ಅ.15ರಂದು ಮಧ್ಯಾಹ್ನ ಮುನ್ಸಿಪಾಲ್ ಕಾಲೇಜು ಮೈದಾನದಲ್ಲಿ ನಡೆದ ಸಮಾವೇಶಕ್ಕೆ ಲಕ್ಷಾಂತರ ಜನರು ಸಾಕ್ಷಿಯಾದರು. ಸಮಾವೇಶದಲ್ಲಿ ರಾಜಸ್ಥಾನ ಮತ್ತು ಛತ್ತಿಸ್‌ಗಡ ರಾಜ್ಯಗಳ ಮುಖ್ಯಮಂತ್ರಿಗಳು, ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ದಿಗ್ವಜಯ ಸಿಂಗ್, ಜೈರಾಮ್ ರಮೇಶ್, ರಣದೀಪ್ ಸಿಂಗ್ ಸುರ್ಜೇವಾಲ, ಶೇಖರ್ ಬಾಬು ಸೇರಿದಂತೆ ಸುಮಾರು 360ಕ್ಕೂ ಹೆಚ್ಚು ಪ್ರಮುಖ ಮುಖಂಡರು ಭಾಗವಹಿಸಿದ್ದರು. ಈ ವೇಳೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ವಿರುದ್ಧ ಬಹುತೇಕ ಎಲ್ಲ ನಾಯಕರೂ ಗುಡುಗಿದರು.
ಅ.16ರಂದು ಪಾದಯಾತ್ರೆಯಲ್ಲಿ ವಿದ್ಯುತ್ ಅವಘಡ
ಪಾದಯಾತ್ರೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ, ಅ.16ರಂದು ಬೆಳಗ್ಗೆ ಸಂಗನಕಲ್ ವಾಸ್ತವ್ಯ ಸ್ಥಳದಿಂದ ಪಾದಯಾತ್ರೆ ಮಾಡುತ್ತಾರೆ ಎಂದು ರಾಹುಲ್ ಗಾಂಧಿ ತಂಗಿರುವ ಕ್ಯಾಂಪ್ ನ ಮುಂದೆಯೇ ಜನರು ಕಾಯುತ್ತಿದ್ದರು. ಆದರೆ ಅಲ್ಲಿಂದ ಪಾದಯಾತ್ರೆ ಮಾಡದೆ, 2 ಕಿ.ಮೀ. ದೂರದವರೆಗೆ ವಾಹನದಲ್ಲಿ ಸಾಗಿ ಅಲ್ಲಿಂದ ಪಾದಯಾತ್ರೆ ಮಾಡಿದರು. ಇದರಿಂದಾಗಿ ಕಲಾತಂಡಗಳ ಕಲಾವಿದರೂ, ವಾಹನದ ಹಿಂದೆಯೇ ಓಡುವ ಪರಿಸ್ಥಿತಿ ಇತ್ತು. ದಾರಿಯಲ್ಲಿ ಹೋಗುತ್ತಿರುವಾಗ ಮೋಕಾದಲ್ಲಿ ಕಬ್ಬಿಣ ರಾಡ್‌ವೊಂದಕ್ಕೆ ಕಟ್ಟಿದ್ದ ಕಾಂಗ್ರೆಸ್ ಬಾವುಟಕ್ಕೆ ವಿದ್ಯುತ್ ತಂತಿ ತಾಗಿದ್ದರಿಂದ ಐದು ಜನರು ಗಾಯಗೊಂಡಿದ್ದರು. ಕೂಡಲೇ ಶಾಸಕ ನಾಗೇಂದ್ರ ಮೋಕಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು. ರಾಹುಲ್ ಗಾಂಧಿ ಅವರು ಆಸ್ಪತ್ರೆಗೆ ಭೇಟಿ ನೀಡಿ, ರೋಗಿಗಳು ಆರೋಗ್ಯ ವಿಚಾರಿಸಿ, 1 ಲಕ್ಷ ರೂ.ಗಳ ಪರಿಹಾರ ಘೋಷಣೆ ಮಾಡಿದರು.
ಎಐಸಿಸಿ ಚುನಾವಣೆಗಾಗಿ ಒಂದು ದಿನ ಬ್ರೇಕ್
ಯಾತ್ರೆಯ ದಿನಾಂಕ ನಿಗದಿ ಪ್ರಕಾರ ಅ.16ರಂದು ಯಾತ್ರೆಯು ಆಂಧ್ರ ಪ್ರದೇಶ ಚರ್ತುಗುಡಿಯಲ್ಲಿ ವಾಸ್ತವ್ಯ ಹೂಡಬೇಕಿತ್ತು. ಆಂಧ್ರ ಪ್ರದೇಶದಲ್ಲಿನ ಕಾಂಗ್ರೆಸ್ ಪಕ್ಷವು ಅಷ್ಟು ಪ್ರಬಲವಾಗಿಲ್ಲದಿರುವುದರಿಂದ ಆಂಧ್ರದ ಗಡಿಯಲ್ಲಿ ವಾಸ್ತವ್ಯ ಹೂಡದೇ ಸಂಗನಕಲ್‌ಗೆ ವಾಪಸ್ ಬಂದು 16ರಂದು ವಾಸ್ತವ್ಯ ಹೂಡಲು ಕಾರಣವಾಯಿತೆಂದು ಹೇಳಲಾಗುತ್ತಿದೆ. ಅ.17ರಂದು ಎಐಸಿಸಿ ಚುನಾವಣೆಯ ಮತದಾನಕ್ಕೆ ಸಂಗನಕಲ್ ಕ್ಯಾಂಪಿನಲಿಯೇ ಕಂಟೇನರ್‌ನಲ್ಲಿ ವ್ಯವಸ್ಥೆ ಮಾಡಲಾಗಿತ್ತು.
40ಕ್ಕೂ ಹೆಚ್ಚು ಜನರಿಗೆ ಮತದಾನ ವ್ಯವಸ್ಥೆ
ರಾಹುಲ್ ಗಾಂಧಿ ಸೇರಿದಂತೆ 40ಕ್ಕೂ ಹೆಚ್ಚು ಜನ ಯಾತ್ರಾರ್ಥಿಗಳಿಗೆ, ಡಿ.ಕೆ.ಸುರೇಶ್, ಬಿ.ನಾಗೇಂದ್ರ, ಜೆ.ಎಸ್.ಆಂಜಿನೇಯಲು ಅವರಿಗೆ ಮತದಾನದ ವ್ಯವಸ್ಥೆ ಮಾಡಿದ್ದರು. ಮತದಾನ ಮಾಡಿದ ನಂತರದಲ್ಲಿ ಕೌಲ ಬಜಾರ್‌ನ ಜೀನ್ಸ್ ಉದ್ಯಮ ತಯಾರಿಕಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಘಟಕದ ಮಾಲೀಕರು ಮತ್ತು ಕಾರ್ಮಿಕರೊಂದಿಗೆ ಸಾಧಕ-ಬಾಧಕದ ಬಗ್ಗೆ ವಿಚಾರಿಸಿದರು. ನಂತರದಲ್ಲಿ ಸಂಗನಕಲ್ ಸಮೀಪದಲ್ಲಿ ವ್ಯವಸ್ಥೆ ಮಾಡಲಾಗಿದ್ದ ಕ್ಯಾಂಪ್‌ಗೆ ಮರಳಿದ್ದರು.
ಆಂಧ್ರಕ್ಕೆ ಎಂಟ್ರಿ ಕೊಟ್ಟಿರುವ ಯಾತ್ರೆ
ಅ.18ರಂದು ಬೆಳಿಗ್ಗೆ ವಾಹನದಲ್ಲಿ ಕರ್ನಾಟಕದ ಗಡಿಯವರೆಗೆ ಸಾಗಿ, ಆಂಧ್ರ ಪ್ರದೇಶ ಹಾರ್ಲವಿಯಿಂದ ಪಾದಯಾತ್ರೆ ಆರಂಭವಾಗಿದೆ. ಹಾರ್ಲವಿ ಶಾಸಕ ನಾಗೇಂದ್ರ ಅವರ ಸಹೋದರ ಶಾಸಕ ಜಯರಾಂ ಕ್ಷೇತ್ರ. ಇವರು ಆಂಧ್ರದ ವೈಎಸ್‌ಆರ್ ಕಾಂಗ್ರೆಸ್ ಸರ್ಕಾರದ ಸಚಿವರಾಗಿದ್ದಾರೆ. ಇಲ್ಲಿನ ಯಾತ್ರೆ ಜವಾಬ್ದಾರಿಯನ್ನು ಡಿ.ಕೆ.ಶಿವಕುಮಾರ್ ವಹಿಸಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಮೂರು ದಿನಗಳ ಕಾಲ ನಡೆದ ಯಾತ್ರೆಯು ಆಂಧ್ರಪ್ರದೇಶದಲ್ಲಿ ಸಂಚರಿಸಿ ಅ.21ರಂದು ಸಂಜೆ ರಾಯಚೂರು ಜಿಲ್ಲೆಗೆ ಎಂಟ್ರಿಕೊಡಲಿದೆ.
ಒಟ್ಟಾರೆಯಾಗಿ ಈ ಪಾದಯಾತ್ರೆಯು ಸ್ಥಳೀಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಹುಮ್ಮಸ್ಸು ತಂದಿದೆ. ಈ ಮೂಲಕ ಲೋಕಲ್ ಫೈಟ್ ಮತ್ತಷ್ಟು ಹೆಚ್ಚುವ ಲಕ್ಷಣಗಳೂ ಗೋಚರಿಸಿವೆ.
ಇದನ್ನೂ ಓದಿ | Bharat Jodo | ಯಾತ್ರೆ ಮುಗಿದ ಮೇಲೆ ಜೋಡೆತ್ತುಗಳು ಒಂದಾಗಿ ಉಳಿಯಲಿವೆಯೇ?