ಬೆಂಗಳೂರು: ರಾಯಚೂರು ತಲುಪಿದ ಕಾಂಗ್ರೆಸ್‌ನ ಭಾರತ್ ಜೋಡೊ ಯಾತ್ರೆಯಲ್ಲಿ ನಟಿ ರಮ್ಯಾ ಅವರು ಶನಿವಾರ ಅಚ್ಚರಿಯ ಎಂಟ್ರಿ ಕೊಟ್ಟಿದ್ದಾರೆ. ರಮ್ಯಾ ಅವರ ಈ ನಡೆಗೆ ರಾಜ್ಯ ಕಾಂಗ್ರೆಸ್ ಮುಖಂಡರೇ ಬೆಚ್ಚಿ ಬಿದ್ದಿದ್ದಾರೆ.
ಕಳೆದ 17 ದಿನಗಳಿಂದ ರಾಜ್ಯದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ. ಆದರೆ ರಮ್ಯಾ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಯಾತ್ರೆಯ ಬಗ್ಗೆ ಯಾವುದೇ ಹೇಳಿಕೆಯನ್ನೂ ನೀಡಿರಲಿಲ್ಲ. ಆದರೆ ಶನಿವಾರ ರಾಯಚೂರಿನಲ್ಲಿ ರಾಹುಲ್ ಗಾಂಧಿ ಜತೆ ಕಾಣಿಸಿಕೊಂಡು ಬೆರಗು ಮೂಡಿಸಿದರು. ರಮ್ಯಾ ಅವರನ್ನು ಕಾಣುತ್ತಲೇ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ತಮಾಷೆಗೆ ಕೆನ್ನೆ ಸವರಿ ಅಪ್ಪಿಕೊಂಡರು. ಯಾತ್ರೆ ನಾಳೆ ತೆಲಂಗಾಣಕ್ಕೆ ಎಂಟ್ರಿ ಕೊಡಲಿದೆ.
ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಘಟಕದಲ್ಲಿ ಮುಂಚೂಣಿಯಲ್ಲಿದ್ದ ಮಂಡ್ಯದ ಮಾಜಿ ಸಂಸದೆ ರಮ್ಯಾ ಅವರು ಕಳೆದ ಎರಡು ವರ್ಷಗಳಿಂದ ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದರು. ಕಾಂಗ್ರೆಸ್‌ನಿಂದ ದೂರ ಸರಿದಿದ್ದರು. ಕಾಂಗ್ರೆಸ್ ತೊರೆದು ಅವರು ಸದ್ಯವೇ ಬೇರೆ ಪಕ್ಷ ಸೇರುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಇದರ ಬೆನ್ನಿಗೇ ರಮ್ಯಾ ಅವರು ಕಾಂಗ್ರೆಸ್‌ನ ಮಹತ್ವಾಕಾಂಕ್ಷೆಯ ಭಾರತ್ ಜೋಡೊ ಪಾದಯಾತ್ರೆಯಲ್ಲಿ ಭಾಗವಹಿಸಿರುವುದು ರಾಜಕೀಯ ವಲಯದಲ್ಲಿ ಆಶ್ಚರ್ಯಕ್ಕೆ ಕಾರಣವಾಗಿದೆ.
ಇತ್ತೀಚೆಗಷ್ಟೆ ರಮ್ಯಾ ಅವರು ತಮ್ಮ ಸಿನಿಮಾ ಪ್ರೊಡಕ್ಷನ್ ಹೌಸ್ ಬಗ್ಗೆ ಪ್ರಕಟಿಸಿದ್ದರು. ರಮ್ಯಾ ಅವರು ಸೌಜನ್ಯಕ್ಕಾಗಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೋ ಅಥವಾ ಮುಂದೆ ಮತ್ತೆ ಕಾಂಗ್ರೆಸ್‌ನಲ್ಲಿ ಸಕ್ರಿಯವಾಗುತ್ತಾರೋ ಎಂಬ ಬಗ್ಗೆ ಈಗ ಕುತೂಹಲ ಮೂಡಿದೆ.
ತಾವು ರಾಯಚೂರಿಗೆ ಬರುವ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಯಾವುದೇ ಸೂಚನೆ ನೀಡಿರಲಿಲ್ಲ. ಹಾಗಾಗಿ ಅವರೆಲ್ಲ ಈಗ ತಬ್ಬಿಬ್ಬಾಗುವಂತಾಗಿದೆ!
ಇದನ್ನೂ ಓದಿ | Bharat Jodo Yatra | ಕಾಂಗ್ರೆಸ್ ಪುನರುಜ್ಜೀವನಕ್ಕೆ ಭಾರತ್ ಜೋಡೋ ಯಾತ್ರೆ ಅತ್ಯವಶ್ಯ: ಸೋನಿಯಾ ಗಾಂಧಿ