Site icon Vistara News

Bharat Jodo | ಇಂದು ಬಳ್ಳಾರಿಗೆ ಯಾತ್ರೆ ಎಂಟ್ರಿ; ನಾಳೆಯ ಸಮಾವೇಶಕ್ಕೆ 3 ಲಕ್ಷ ಜನ ಭಾಗಿ ನಿರೀಕ್ಷೆ

bellary bharat jodo

ಬಳ್ಳಾರಿ: ರಾಜ್ಯದಲ್ಲಿ ಕಳೆದ ೧೫ ದಿನಗಳಿಂದ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ ಜೋಡೋ ಪಾದಯಾತ್ರೆ (Bharat Jodo) ನಡೆಯುತ್ತಿದ್ದು, ೧೬ನೇ ದಿನ ಬಳ್ಳಾರಿಯಲ್ಲಿ ನಡೆಯಲಿರುವ ಬೃಹತ್ ಸಮಾವೇಶದ ಬಗ್ಗೆ ಕುತೂಹಲ ಮೂಡಿದೆ. ಇದಕ್ಕಾಗಿ ಭರ್ಜರಿ ಸಿದ್ಧತೆಗಳು ನಡೆದಿದ್ದು, ಶನಿವಾರ ನಡೆಯಲಿರುವ ಸಮಾವೇಶದಲ್ಲಿ ೩ ಲಕ್ಷ ಮಂದಿ ಭಾಗಿಯಾಗುವ ನಿರೀಕ್ಷೆ ಇದೆ. ಬಳ್ಳಾರಿ ಜಿಲ್ಲೆಗೆ ರಾಹುಲ್ ಗಾಂಧಿ ಆಗಮನ ಹಿನ್ನೆಲೆಯಲ್ಲಿ ೧೦೮ ಮಹಿಳೆಯರ ಪೂರ್ಣಕುಂಭ ಮತ್ತು ಮಂಗಳಮುಖಿಯರಿಂದ ಸ್ವಾಗತಕ್ಕೆ ವ್ಯವಸ್ಥೆ ಮಾಡಲಾಗಿದೆ.

ಯಾತ್ರೆ ಸಮಯ ನಿರ್ವಹಣೆ ಪಟ್ಟಿಯಲ್ಲಿ ಕೇವಲ ಒಂದೂವರೆ ತಾಸು ಮಾತ್ರ ವೇದಿಕೆ ಕಾರ್ಯಕ್ರಮಕ್ಕೆ ಸೀಮಿತಗೊಳಿಸಿದ್ದಾರೆ. ಮಧ್ಯಾಹ್ನ ೧.೩೦ರಿಂದ ೩ ಗಂಟೆವರೆಗೆ ಸಮಯ ನಿಗದಿಯಾಗಿದೆ. ಸಮಾವೇಶಕ್ಕೆ ಬಳ್ಳಾರಿ ಮುನ್ಸಿಪಾಲ್ ಕಾಲೇಜ್ ಮೈದಾನದಲ್ಲಿ ಅದ್ಧೂರಿಯಾದ ಬೃಹತ್ ವೇದಿಕೆ ಸಿದ್ಧವಾಗುತ್ತಿದೆ.

ಮೂರು ವೇದಿಕೆಗಳ ನಿರ್ಮಾಣ
ಕಾಂಗ್ರೆಸ್‌ ಸಮಾವೇಶಕ್ಕೆ ಮೂರು ವೇದಿಕೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಮಧ್ಯದ ವೇದಿಕೆಯಲ್ಲಿ ರಾಹುಲ್ ಗಾಂಧಿ ಮತ್ತು ೬೦ ಜನ ಪ್ರಮುಖ ಮುಖಂಡರು ಕುಳಿತುಕೊಳ್ಳಲು, ಎರಡು ಬದಿಯ ವೇದಿಕೆಯಲ್ಲಿ ರಾಜ್ಯದ ನಾಯಕರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಒಂದೊಂದು ಬದಿಯಲ್ಲಿ ೧೫೦ ಮುಖಂಡರು ಕೂರಬಹುದಾಗಿದೆ. ವೇದಿಕೆಯ ಮೇಲೆ ಸುಮಾರು ೩೬೦ ಮುಖಂಡರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಸುಮಾರು ೮೦ ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ವೇದಿಕೆಯ ಮುಂದಕ್ಕೆ ಪಕ್ಷದ ಪದಾಧಿಕಾರಿಗಳು ಇನ್ನಿತರ ಮುಖಂಡರು ಕೂರಲು ಅವಕಾಶ ಕಲ್ಪಿಸಲಾಗಿದೆ. ಸುಮಾರು ೩ ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ | Bharath jodo | ಕನ್ನಡ ಪರೀಕ್ಷೆ ವಿಷಯ ಪ್ರಸ್ತಾಪಿಸಿದ ರಾಹುಲ್‌, ಸಚಿವ ಶ್ರೀ ರಾಮುಲು ಕ್ಷೇತ್ರದಲ್ಲಿ ಕಮಾಲ್‌

ಯಾತ್ರೆ ಸ್ವಾಗತಕ್ಕೆ ಅದ್ಧೂರಿ ಸಿದ್ಧತೆ
ಶುಕ್ರವಾರ ಸಂಜೆ ಬಳ್ಳಾರಿ ಜಿಲ್ಲೆಗೆ ಎಂಟ್ರಿ ಕೊಡಲಿರುವ ರಾಹುಲ್‌ ಗಾಂಧಿ ನೇತೃತ್ವದ ಭಾರತ ಐಕ್ಯತಾ ಯಾತ್ರೆಯ ಸ್ವಾಗತಕ್ಕೆ ಭರ್ಜರಿ ತಯಾರಿ ಮಾಡಿಕೊಳ್ಳಲಾಗಿದೆ. ೧೫೦ ಮಂಗಳಮುಖಿಯರು ಒಂದೇ ಬಣ್ಣದ ಸೀರೆಯಲ್ಲಿ ಮತ್ತು ೧೦೮ ಮಹಿಳೆಯರು ಪೂರ್ಣಕುಂಭದಿಂದ ಸ್ವಾಗತ ಕೋರಲಿದ್ದಾರೆ. ಡೊಳ್ಳು, ತಮಟೆ, ರಾಜಸ್ಥಾನ ಮಾದರಿ ಕಲೆಯ ಕಲಾತಂಡಗಳು ಸೇರಿದಂತೆ ೩೫ಕ್ಕೂ ಹೆಚ್ಚು ಕಲಾತಂಡಗಳೊಂದಿಗೆ ರಾಹುಲ್‌ ಗಾಂಧಿಯನ್ನು ಸ್ವಾಗತಿಸಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ರಾಜ್ಯದ ವಿವಿಧ ಭಾಗದಿಂದ ಕಲಾತಂಡಗಳು ಬಳ್ಳಾರಿಗೆ ಆಗಮಿಸಿವೆ. ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರಖಂಡ್ರೆ ಸೇರಿದಂತೆ ಕೆಲ ಮುಖಂಡರು ಕಳೆದ ಕೆಲ ದಿನಗಳಿಂದ ಬಳ್ಳಾರಿಯಲ್ಲಿ ಬೀಡುಬಿಟ್ಟು ಸಿದ್ಧತೆ ಕಾರ್ಯವನ್ನು ನೋಡಿಕೊಳ್ಳುತ್ತಿದ್ದಾರೆ.

ಎರಡು ದಿನ ಜಿಲ್ಲೆಯಲ್ಲಿ ವಾಸ್ತವ್ಯ
ಶುಕ್ರವಾರ ಸಂಜೆ ಬಳ್ಳಾರಿ ಜಿಲ್ಲೆಯ ಹಲಕುಂದಿ ಭಾಗದಿಂದ ಪ್ರವೇಶ ಪಡೆಯಲಿರುವ ಯಾತ್ರೆಯು ಹಲಕುಂದಿ ಮಠದಲ್ಲಿಯೇ ಶುಕ್ರವಾರ (ಅ.೧೪) ವಾಸ್ತವ್ಯ ಹೂಡಲಿದ್ದಾರೆ. ಅ.೧೫ರಂದು ಬೆಳಗ್ಗೆ ೬.೩೦ಕ್ಕೆ ಹಲಕುಂದಿಯಿಂದ ಪಾದಯಾತ್ರೆ ಆರಂಭವಾಗಿ ಬಳ್ಳಾರಿಗೆ ಆಗಮಿಸಲಿದೆ. ಬೆಳಗ್ಗೆ ೧೧ ಗಂಟೆಗೆ ಕಮ್ಮಾ ಭವನದಲ್ಲಿ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ ೧.೩೦ಕ್ಕೆ ಬಳ್ಳಾರಿ ಮುನ್ಸಿಪಾಲ್ ಕಾಲೇಜ್ ಮೈದಾನದಲ್ಲಿ ಸಮಾವೇಶಕ್ಕೆ ತೆರಳಲಿದ್ದಾರೆ. ೩ ಗಂಟೆಯವರೆಗೆ ಸಮಾವೇಶ ಪೂರ್ಣಗೊಳ್ಳಲಿದೆ. ನಂತರದಲ್ಲಿ ಸಂಗನಕಲ್ ಗ್ರಾಮಕ್ಕೆ ತೆರಳಿ ಅಲ್ಲಿಯೇ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.

ಅ.೧೬ರಂದು ಬೆಳಗ್ಗೆ ೬.೩೦ಕ್ಕೆ ಪಾದಯಾತ್ರೆ ಆರಂಭವಾಗಲಿದೆ. ೧೧ ಗಂಟೆಗೆ ಮೋಕಾ ಸಮೀಪದ ಹನಿ ಫಂಕ್ಷನ್ ಹಾಲ್‌ನಲ್ಲಿ ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ನಂತರ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ ೫ ಗಂಟೆಗೆ ಪಾದಯಾತ್ರೆ ಹನಿ ಫಂಕ್ಷನ್‌ ಹಾಲ್‌ನಿಂದ ಆರಂಭವಾಗಿ ಸಂಜೆ ೭ ಗಂಟೆಗೆ ಅಂದಿನ ಪಾದಯಾತ್ರೆ ಪೂರ್ಣಗೊಳ್ಳಲಿದೆ. ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಆಲೂರು ತಾಲೂಕಿನ ಚರ್ತುಗುಡಿ ಆಂಜಿನೇಯ ಸ್ವಾಮಿ ದೇವಸ್ಥಾನದಲ್ಲಿ ರಾತ್ರಿ ವಾಸ್ತವ್ಯ ಹೂಡಲಿದ್ದು, ಅ.೧೭ರಂದು ಪಾದಯಾತ್ರೆಗೆ ಬ್ರೇಕ್ ಇದೆ ಎಂದು ಕಾಂಗ್ರೆಸ್ ಪಕ್ಷದ ಭಾರತ್‌ ಜೋಡೋ ಯಾತ್ರೆಯ ವೇಳಾಪಟ್ಟಿಯಲ್ಲಿ ನಮೂದಿಸಲಾಗಿದೆ.

ಲಾಡ್ಜ್‌ಗಳು ಹೌಸ್‌ಫುಲ್‌
ಕಳೆದ ಕೆಲವು ದಿನಗಳ ಹಿಂದೆಯೇ ಬಳ್ಳಾರಿಯ ಬಹುತೇಕ ಎಲ್ಲ ಲಾಡ್ಜ್‌ಗಳು ಬುಕ್ ಆಗಿವೆ. ಇದರಿಂದಾಗಿ ಬೇರೆ ಕೆಲಸಕ್ಕೆ ಬಳ್ಳಾರಿಗೆ ಬಂದವರು ಲಾಡ್ಜ್‌ಗಳಿಗಾಗಿ ಪರದಾಡುವಂತಾಗಿದೆ. ರಾಹುಲ್ ಗಾಂಧಿ ಯಾತ್ರೆಗೆ ಬಂದವರು ೧೪, ೧೫ ಮತ್ತು ೧೬ರಂದು ಬಳ್ಳಾರಿ ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಮುಖಂಡರು ಮುಂಜಾಗ್ರತಾ ದೃಷ್ಟಿಯಿಂದ ಲಾಡ್ಜ್‌ಗಳ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಹೊರಗಿನಿಂದ ಬರುವ ಕಾಂಗ್ರೆಸ್ ಮುಖಂಡರು ಕೂಡ ಲಾಡ್ಜ್‌ಗಳಿಲ್ಲದೆ ಪರದಾಡುವ ಸ್ಥಿತಿಯೂ ಇದೆ.

ಪೊಲೀಸ್ ಕಣ್ಗಾವಲಿನಲ್ಲಿ ಯಾತ್ರೆ ಮತ್ತು ವಾಸ್ತವ್ಯ
ಪೊಲೀಸ್ ಬಿಗಿ ಭದ್ರತೆಯನ್ನು ಏರ್ಪಡಿಸಿದ್ದು, ಒಟ್ಟು ೨೦೫೫ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅದರಲ್ಲಿ ೩ ಎಎಸ್ಪಿ, ೧೦ ಡಿವೈಎಸ್ಪಿ, ೩೭ ಸಿಪಿಐ, ೧೦೩ ಪಿಎಸ್ಐ ಸೇರಿದಂತೆ ೩೫೧ ಅಧಿಕಾರಿಗಳು, ೧೭೦೪ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದಲ್ಲದೆ ೫ ಕೆಎಸ್ಆರ್‌ಪಿ ಮತ್ತು ೧೦ ಡಿಎಆರ್ ತಂಡವನ್ನು ನಿಯೋಜಿಸಲಾಗಿದೆ. ರಾಹುಲ್‌ ಗಾಂಧಿಗೆ ಜೆಡ್ ಪ್ಲಸ್ ಸೆಕ್ಯೂರಿಟಿ ಇರುವುದರಿಂದ ಪಾದಯಾತ್ರೆ ಹೊರಡುವ ಸ್ಥಳ, ವಾಸ್ತವ್ಯ ಇರುವ ಪ್ರದೇಶ ಮತ್ತು ಸಮಾವೇಶದ ಸ್ಥಳದಲ್ಲಿ ನಿಗಾ ವಹಿಸಲಾಗಿದ್ದು, ಡ್ರೋನ್ ಕ್ಯಾಮರಾ ಬಳಕೆಯನ್ನು ನಿಷೇಧಿಸಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ವಾಹನಗಳಿಗೆ ನಗರದ ಪ್ರತಿ ದಿಕ್ಕಿನಲ್ಲೂ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ೯ ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದು, ವಿವಿಐಪಿಗಳ ವಾಹನಗಳಿಗೆ ಪ್ರತ್ಯೇಕ ನಿಲುಗಡೆ ವ್ಯವಸ್ಥೆಯನ್ನು ಪೊಲೀಸರು ಮಾಡಿದ್ದಾರೆ.

ಇದನ್ನೂ ಓದಿ | Bharath jodo | ಗೊರವರ ಕುಣಿತಕ್ಕೆ ಮನಸೋತು ಹೆಜ್ಜೆ ಹಾಕಿದ ಸಿದ್ದರಾಮಯ್ಯ, ನೋಡಲು ನೂಕುನುಗ್ಗಲು

Exit mobile version