Site icon Vistara News

Bharath jodo| ಭಾರತ್‌ ಜೋಡೋ ಒಳ್ಳೆಯ ಕಾರ್ಯಕ್ರಮ: ಪಾಕಿಸ್ತಾನ, ಬಾಂಗ್ಲಾವನ್ನೂ ಜೋಡಿಸಲಿ ಎಂದ ಈಶ್ವರಪ್ಪ

K.S. Eshwarappa

ಶಿವಮೊಗ್ಗ: ಕಾಂಗ್ರೆಸ್‌ ನಾಯಕರು ಭಾರತ್‌ ಜೋಡೋ ಯಾತ್ರೆ ಶುರು ಮಾಡಿರುವುದು ಬಹಳ ಸಂತೋಷದ ವಿಚಾರ. ಯಾಕೆಂದರೆ, ದೇಶವನ್ನು ತುಂಡು ಮಾಡಿದವರೇ ಅವರು: ಹೀಗೆಂದು ಗೇಲಿ ಮಾಡಿದ್ದಾರೆ ಬಿಜೆಪಿ ನಾಯಕ, ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ.

ʻʻಸ್ವಾತಂತ್ರ್ಯಕ್ಕೋಸ್ಕರ ಬಲಿದಾನ ಮಾಡಿದ ಸಾವಿರಾರು ಜೀವಗಳಿಗೆ ಬೆಲೆಯೇ ಇಲ್ಲ ಎನ್ನುವ ಹಾಗೆ ಅಖಂಡ ಭಾರತವನ್ನು ಮೂರು ತುಂಡು ಮಾಡುವ ಪಾಪದ ಕೆಲಸ ಮಾಡಿದ್ದು ಕಾಂಗ್ರೆಸ್‌. ಅವರು ಭಾರತಾಂಬೆಯನ್ನೇ ಸೀಳಿದ್ದರುʼʼ ಎಂದು ಶಿವಮೊಗ್ಗದಲ್ಲಿ ಮಾಧ್ಯಮದ ಜತೆ ಮಾತನಾಡುತ್ತಾ ಹೇಳಿದರು.

ʻʻಹೀಗೆ ದೇಶವನ್ನು ತುಂಡು ಮಾಡಿದ ಆ ಪಾಪದ ಪ್ರಾಯಶ್ಚಿತ್ತವಾಗಿ ಭಾರತ್ ಜೋಡೋ ಹೆಸರಿನಲ್ಲಿ ಪಾದಯಾತ್ರೆ ಮಾಡುತ್ತಿರುವುದು ನಿಜಕ್ಕೂ ಸಂತೋಷ.ʼʼ ಎಂದು ಹೇಳಿದ ಅವರು, ʻʻಈ ದೇಶಕ್ಕಾಗಿ ಬಲಿದಾನ ಮಾಡಿದವರಿಗೆ ಕಾಂಗ್ರೆಸ್ ಮೇಲೆ ಸಿಟ್ಟಿದೆ. ಕಾಂಗ್ರೆಸ್ ಪಕ್ಷ ನಾಶ ಆಗಬೇಕು ಎಂದು ಅವರು ಶಾಪ ಹಾಕಿದ್ದಾರೆ. ಅವರ ಶಾಪದಂತೆ ನಾಶವೂ ಆಗುತ್ತಿದೆ. ಆದರೂ ಅಲ್ಲೊಂದು ಚೂರು ಇಲ್ಲೊಂದು ಚೂರು ಎಂಬಂತೆ ಉಳಿದಿರುವ ಕಾಂಗ್ರೆಸ್‌ ಭಾರತವನ್ನು ಮತ್ತೆ ಜೋಡಿಸಲು ಹೊರಟಿದ್ದು ಒಳ್ಳೆಯದೆʼʼ ಎಂದರು.

ʻʻರಾಹುಲ್‌ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಹೆಸರಿನಲ್ಲಿ ಅಖಂಡ ಭಾರತ ನಿರ್ಮಾಣಕ್ಕೆ ಹೊರಟಿದ್ದೇವೆ ಎಂದು ಅವರು ಹೇಳಬೇಕು. ಪಾಕಿಸ್ತಾನವನ್ನು ವಾಪಸ್ ತರುತ್ತೇವೆ, ಬಾಂಗ್ಲಾದೇಶವನ್ನು ವಾಪಸ್ ತೆಗೆದುಕೊಳ್ಳುತ್ತೇವೆ ಎಂದು ರಾಹುಲ್ ತಿಳಿಸಬೇಕು. ಆಗ ಮಾತ್ರ ಇದು ನಿಜವಾದ ಭಾರತ್‌ ಜೋಡೋ ಯಾತ್ರೆಯಾಗುತ್ತದೆʼʼ ಎಂದು ಈಶ್ವರಪ್ಪ ಹೇಳಿದರು.

ʻʻಭಾರತ್‌ ಜೋಡೋ ಯಾತ್ರೆಯಲ್ಲಿ ಪ್ರಿಯಾಂಕ ಗಾಂಧಿ, ರಾಬರ್ಟ್‌ ವಾಧ್ರಾ ಅವರದ್ದೆಲ್ಲ ಫೋಟೊ ಹಾಕಿಕೊಂಡಿದ್ದಾರೆ. ಪಾಪ ಅವರೂ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು. ರಾಬರ್ಟ್‌ ವಾಧ್ರಾ ಅಂತೂ ದೇಶಕ್ಕಾಗಿ ಎಷ್ಟು ಬಲಿದಾನ ಮಾಡಿದ್ದಾನೆ ಎಂದು ದೇಶಕ್ಕೆ ಗೊತ್ತಾಗಿದೆ. ಆ ಕುಟುಂಬದ ಬಗ್ಗೆ ಮಾತನಾಡಿ ಸಾಕಾಗಿದೆʼʼ ಎಂದು ಹೇಳಿದರು ಈಶ್ವರಪ್ಪ.

ʻʻದೇಶದ ಸ್ವಾತಂತ್ರ್ಯಕ್ಕಾಗಿ ಆ ಬಲಿದಾನ ಮಾಡಿದ್ದಾರಲ್ಲ ಅವರ ಪ್ರಾಣಕ್ಕೆ ಬೆಲೆ ಇಲ್ವ? ಅಧಿಕಾರಕ್ಕಾಗಿ ದೇಶವನ್ನು ಮೂರು ತುಂಡು ಮಾಡಿದರಲ್ಲ ಕಾಂಗ್ರೆಸ್‌ನವರು. ಅವರೆಲ್ಲರ ಪ್ರಶ್ನೆಗಳಿಗೆ ರಾಹುಲ್ ಗಾಂಧಿ ಉತ್ತರ ಕೊಡುತ್ತಾರೆಯೇ?ʼʼ ಎಂದು ಈಶ್ವರಪ್ಪ ಪ್ರಶ್ನಿಸಿದರು.

ಜನೋತ್ಸವ ಬದಲು ಜನಸ್ಪಂದನ ಯಾಕೆ?
ಬಿಜೆಪಿ ಜನೋತ್ಸವ ಕಾರ್ಯಕ್ರಮ ಮುಂದೂಡಿಕೆ ಮತ್ತು ಹೆಸರು ಬದಲಾವಣೆ ವಿಷಯದ ಬಗ್ಗೆ ಉತ್ತರಿಸಿದ ಅವರು, ʻʻಮೊದಲು ಪ್ಲ್ಯಾನ್‌ ಮಾಡಿದಾಗ ವರ್ಷದ ಕಾರ್ಯಕ್ರಮ ಆಗಿತ್ತು. ಅದಕ್ಕಾಗಿ ಜನೋತ್ಸವ ಅಂತ ಹೆಸರಿಟ್ಟಿದ್ದೆವು. ಈಗ ಒಂದು ವರ್ಷ ಕಳೆದು ಮುಂದೆ ಹೋಗುತ್ತಿರುವುದರಿಂದ ಅದೇ ಹೆಸರು ಇಟ್ಟರೆ ಸರಿಹೊಂದುವುದಿಲ್ಲ. ಹೀಗಾಗಿ ಜನ ಸ್ಪಂದನ ಕಾರ್ಯಕ್ರಮ ಎಂದು ಹೆಸರಿಟ್ಟಿದೇವೆʼʼ ಎಂದು ಹೇಳಿದರು.

ಇದನ್ನೂ ಓದಿ | Bharat Jodo Yatra | ಪಾದಯಾತ್ರೆ ಶುರು ಮಾಡಿದ ಕಾಂಗ್ರೆಸ್​ ನಾಯಕರು; ಬಿಜೆಪಿ ವಿರುದ್ಧ ವಾಗ್ದಾಳಿ

Exit mobile version