ಮೊಳಕಾಲ್ಮುರು: ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಬಿ.ಜಿ.ಕೆರೆ ಗ್ರಾಮದಿಂದ ಗುರುವಾರ ಬೆಳಗ್ಗೆ ಆರಂಭಗೊಂಡಿದ್ದ ಭಾರತ್ ಜೋಡೋ ಪಾದಯಾತ್ರೆ ಸಂಜೆ ಮೊಳಕಾಲ್ಮೂರು ಪಟ್ಟಣವನ್ನು ಪ್ರವೇಶಿಸಿತು. ಇಲ್ಲಿ ಭಾರಿ ಜನಸಂದಣಿಯನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದರು. ಕರ್ನಾಟಕದ ಮಕ್ಕಳಿಗೆ ಕನ್ನಡದಲ್ಲೇ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದರು. ಇದೇ ವೇಳೆ ಬಿಜೆಪಿ ವತಿಯಿಂದ ಮೊಳಕಾಲ್ಮುರು ಕ್ಷೇತ್ರದಲ್ಲಿ ಪಿಎಫ್ಐ ಭಾಗ್ಯ ಪೋಸ್ಟರ್ ಹಾಕಿ ಸ್ವಾಗತಿಸಲಾಗಿದೆ!
ಸಚಿವ ಶ್ರೀರಾಮುಲು ಕ್ಷೇತ್ರವಾದ ಮೊಳಕಾಲ್ಮುರುವಿನಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ ಮಾಡಿದ್ದು, ಸರ್ಕಲ್‌ನಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ರಾಹುಲ್ ಮಾತನಾಡಿದರು.
ಬಿಜೆಪಿ ಮತ್ತು ಆರೆಸ್ಸೆಸ್ ಸಿದ್ಧಾಂತಗಳು ಕೆಟ್ಟದು ಎಂದ ರಾಹುಲ್, ಅವರಿಗೆ ಕನ್ನಡ ಎನ್ನುವುದು ಎರಡನೇ ದರ್ಜೆ ಭಾಷೆಯಾಗಿದೆ ಎಂದು ಹೇಳಿದರು. ಕರ್ನಾಟಕದಲ್ಲಿ ಕನ್ನಡವೇ ಪ್ರಥಮ ಭಾಷೆ. ಅದೇ ಭಾಷೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅವಕಾಶವಿರಬೇಕು ಎಂದು ಅವರು ಪ್ರತಿಪಾದಿಸಿದರು.
ಕರ್ನಾಟಕದಲ್ಲಿ ಕನ್ನಡ ಭಾಷೆ, ಕೇರಳದಲ್ಲಿ ಮಲೆಯಾಳಂ, ತಮಿಳುನಾಡಿನಲ್ಲಿ ತಮಿಳು ಭಾಷೆ ಮಾತನಾಡ್ತಾರೆ, ಆಯಾ ಭಾಷೆಗಳ ಸ್ವಾತಂತ್ರ್ಯ ಇದೆ, ಬಿಟ್ಟುಬಿಡಿ. ಹಿಂದಿ ಹೇರಿಕೆ ಮಾಡಲು ಹೋಗಬೇಡಿ ಎಂದರು ಹೇಳಿದರು ರಾಹುಲ್.
ರೈತರು, ಮಕ್ಕಳ ಭೇಟಿ, ಸಂಭ್ರಮ
ಗುರುವಾರ ಬಿ.ಜಿ.ಕೆರೆ ಗ್ರಾಮದಿಂದ ಮೊಳಕಾಲ್ಮೂರುವರೆಗೆ ಯಾತ್ರೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ೧೫೦ಎ ಬದಲು ಸ್ಥಳೀಯ ರಸ್ತೆಗಳ ಮೂಲಕ ಯಾತ್ರೆ ಸಾಗಿತು. ಹೀಗಾಗಿ ಹೆದ್ದಾರಿಯಲ್ಲಿ ಸಂಚಾರಕ್ಕೆ ತಡೆ ಇರಲಿಲ್ಲ. ಶುಕ್ರವಾರ ಮತ್ತೆ ರಾಂಪುರದ ಮೂಲಕ ಬಳ್ಳಾರಿಯತ್ತ ಭಾರತ್ ಜೋಡೋ ಯಾತ್ರೆ ನಡೆಯಲಿದೆ.
ಮಧ್ಯಾಹ್ನ ಕೋನಸಂದ್ರದಲ್ಲಿ ಭೋಜನ ವಿರಾಮದ ಬಳಿಕ ಮತ್ತೆ ನಡೆಯಲು ಶುರು ಮಾಡಿದ ರಾಹುಲ್ ಮತ್ತು ನಾಯಕರಿಗೆ ಸ್ಥಳೀಯ ನಾಯಕರು ಸಾಥ್ ನೀಡಿದರು. ಈ ನಡುವೆ, ಮರಳಹಳ್ಳಿಯಲ್ಲಿ ವಾಟರ್ ಟ್ಯಾಂಕ್ ಕಂಡ ರಾಹುಲ್ ಕೆಲವರು ಅದರಲ್ಲಿ ಕುಳಿತು ಯಾತ್ರೆ ನೋಡುತ್ತಿರುವುದನ್ನು ಗಮನಿಸಿದರು. ಕೂಡಲೇ ತಾನೂ ಹತ್ತುವ ಆಸೆ ವ್ಯಕ್ತಪಡಿಸಿದರು. ರಾಹುಲ್ ಗಾಂಧಿ ನೀರಿನ ಟ್ಯಾಂಕ್ ಹತ್ತಿದ್ದಕ್ಕೆ ಗ್ರಾಮಸ್ಥರು ಹಾಗೂ ಕಾರ್ಯಕರ್ತರು ಫುಲ್ ಖುಷಿಯಾದರು. ಟ್ಯಾಂಕ್ ಮೇಲೆ ಏರಿ ಕಾಂಗ್ರೆಸ್ ಬಾವುಟ ಹಾರಿಸಿ ರಾಹುಲ್ ಸಂಭ್ರಮಿಸಿದರು. ರಾಹುಲ್ ಗಾಂಧಿ ಜೊತೆ ಸಿದ್ದರಾಮಯ್ಯ ಕೂಡಾ ಟ್ಯಾಂಕರ್ ಹತ್ತಿದ್ದರು.
ಸೀರೆಯುಟ್ಟ ಪುಟಾಣಿಗಳ ಸ್ವಾಗತ
ಈ ನಡುವೆ, ಮೊಳಕಾಲ್ಮೂರಿನಲ್ಲಿರುವ ಮರನಹಳ್ಳಿ ಗ್ರಾಮದಲ್ಲಿ ಸೀರೆಯುಟ್ಟ ಚಿಕ್ಕಮಕ್ಕಳು ರಾಹುಲ್ ಗೆ ಸ್ವಾಗತ ಕೋರಿದರು. ಅವರು ಬೆಲ್ಲದ ಆರತಿ ಮಾಡಿ ಸ್ವಾಗತ ಕೋರಿದ್ದು ವಿಶೇಷವಾಗಿತ್ತು. ಪುಟಾಣಿಗಳ ಸ್ವಾಗತ ನೋಡಿ ರಾಹುಲ್ ಕೂಡಾ ಖುಷಿಯಾದರು.
ಇತ್ತ ಮಾಜಿ ಸಚಿವ ಸಂತೋಷ್ ಲಾಡ್ ಅವರನ್ನು ಹತ್ತಿರ ಕರೆದು ಮಾತನಾಡಿದ ರಾಹುಲ್ ಕೆಲವು ಹೊತ್ತು ಅವರ ಕೈ ಹಿಡಿದು ನಡೆದರು.