Site icon Vistara News

ಭಾರತ್‌ ಜೋಡೋ ಯಾತ್ರೆ | ಕೇರಳ, ಊಟಿ ಕಡೆಗೆ ಹೋಗುವವರು ಗಮನಿಸಿ, ಸಂಚಾರ ಮಾರ್ಗ ಬದಲಾಗಲಿದೆ

Chamaraj nagar

ಚಾಮರಾಜನಗರ: ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಸೆ. ೩೦ರಂದು ಕರ್ನಾಟಕ ಪ್ರವೇಶಿಸುತ್ತಿರುವ ಹಿನ್ನೆಲೆಯಲ್ಲಿ ಚಾಮರಾಜ ನಗರ ಜಿಲ್ಲಾಡಳಿತ ಹಲವು ಸಿದ್ಧತೆಗಳನ್ನು ನಡೆಸಿದೆ. ಯಾತ್ರೆ ಶುಕ್ರವಾರ ಗುಂಡ್ಲುಪೇಟೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಸಂಚಾರ ಮಾರ್ಗ ಬದಲಾವಣೆಯಾಗಿದೆ.

ಮೆರವಣಿಗೆಯಲ್ಲಿ ಲಕ್ಷಕ್ಕೂ ಅಧಿಕ ಜನ ಪಾಲ್ಗೊಳ್ಳುವ ಸಾಧ್ಯತೆ ಇರುವುದರಿಂದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರ ಮುಂಜಾಗ್ರತಾ ಕ್ರಮವಾಗಿ ಸಂಚಾರ ಮಾರ್ಗ ಬದಲಿಸಿ ಆದೇಶ ಹೊರಡಿಸಿದ್ದಾರೆ.

ಬದಲಾದ ಮಾರ್ಗ ೧
ಕೇರಳದ ಸುಲ್ತಾನ್ ಬತ್ತೇರಿಯಿಂದ ಮೂಲೆಹೊಳೆ ಮಾರ್ಗವಾಗಿ ಮೈಸೂರಿಗೆ ಹೋಗಲಿರುವ ವಾಹನಗಳು ಕಗ್ಗಳದಹುಂಡಿ ಕ್ರಾಸ್ ನಿಂದ ಚನ್ನಮಲ್ಲಿಪುರ – ಹೊಂಗಡಹಳ್ಳಿ – ಮೂಕಹಳ್ಳಿ – ಮುಂಟಿಪುರ – ಬರಗಿ ಮಾರ್ಗವಾಗಿ ಚಲಿಸಿ ಬೇಗೂರು ಠಾಣಾ ವ್ಯಾಪ್ತಿಯ ದೇಶಿಪುರ ಕಾಲೋನಿ ಕ್ರಾಸ್ ನಿಂದ ದೇಶಿಪುರ – ಆಲತ್ತೂರು – ಹಸಗೂಲಿ ಮಾರ್ಗವಾಗಿ ಗರಗನಹಳ್ಳಿ ಗೇಟ್ ಮೂಲಕ ಮೈಸೂರು ತಲುಪಬೇಕು.

ಬದಲಾದ ಮಾರ್ಗ ೨
ಸುಲ್ತಾನ್ ಬತ್ತೇರಿಯಿಂದ ಮೂಲೆಹೊಳೆ ಮಾರ್ಗವಾಗಿ ಊಟಿ ಕಡೆಗೆ ಹೋಗುವ ಹಾಗೂ ಊಟಿಯಿಂದ ಸುಲ್ತಾನ್ ಬತ್ತೇರಿಗೆ ಹೋಗುವ ವಾಹನಗಳು ಕಗ್ಗಳದ ಹುಂಡಿ ಕ್ರಾಸ್ ನಿಂದ ಬೇರಂಬಾಡಿ – ಬೀಚನಹಳ್ಳಿ – ಲಕ್ಕಿಪುರ – ಗೋಪಲಾಪುರ – ಕಲುಣಗಳ್ಳಿ – ಕಳ್ಳಿಪುರ – ದೇವರಹಳ್ಳಿ – ಹಂಗಳ ಮಾರ್ಗವಾಗಿ ಊಟಿ ತಲುಪಬೇಕು.

ಬದಲಾದ ಮಾರ್ಗ ೩
ಊಟಿಯಿಂದ ಮೈಸೂರಿಗೆ ಸಂಚರಿಸಲಿರುವ ವಾಹನಗಳು ಹಂಗಳ – ಹಂಗಳಾಪುರ – ಶಿವಪುರ – ಕೋಡಹಳ್ಳಿ – ಅಣ್ಣೂರು ಕೇರಿ – ಮಾರ್ಗವಾಗಿ ಕೋಡಹಳ್ಳಿ ಸರ್ಕಲ್ ನಿಂದ ಚಾಮರಾಜನಗರ ರಸ್ತೆ ಮಾರ್ಗವಾಗಿ ಮೈಸೂರು ತಲುಪಬಹುದು.

ಮೂರು ದಿನ ಮದ್ಯ ಮಾರಾಟ ನಿಷೇಧ
ಭಾರತ್‌ ಜೋಡೊ ಯಾತ್ರೆಯ ಹಿನ್ನೆಲೆಯಲ್ಲಿ ಸೆ. 29ರ ಮಧ್ಯರಾತ್ರಿಯಿಂದ ಅ‌.1ರ ಮಧ್ಯರಾತ್ರಿಯವರೆಗೆ ಚಾಮರಾಜನಗರ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಶಾಂತಿ ಸುವ್ಯವಸ್ಥೆ ಕಾಪಾಡಲು ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೊದಲ ದಿನದ ಕಾರ್ಯಕ್ರಮ ಹೀಗಿದೆ
ಭಾರತ್‌ ಜೋಡೋ ಯಾತ್ರೆ ಸೆ. 30ರಂದು ಗುಂಡ್ಲುಪೇಟೆ ಮೂಲಕ ರಾಜ್ಯ ಪ್ರವೇಶಿಸಲಿದೆ. ಬೆಳಗ್ಗೆ 9 ಗಂಟೆಗೆ ಮಿಳುನಾಡಿನ ಗೂಡಲೂರಿನಿಂದ ಆಗಮಿಸಲಿರುವ ಯಾತ್ರೆಯನ್ನು ಸ್ವಾಗತಿಸಲು ಗುಂಡ್ಲುಪೇಟೆಯಲ್ಲಿ ಭರದ ಸಿದ್ಧತೆ ನಡೆದಿದೆ. ರಾಜ್ಯದ ನಾಯಕರು ಪಟ್ಟಣದ ಅಂಬೇಡ್ಕರ್ ಭವನದ ಮುಂಭಾಗದಲ್ಲಿ ಸ್ವಾಗತ ಮಾಡಲಿದ್ದು, ವೇದಿಕೆ ಕಾರ್ಯಕ್ರಮ ನಡೆಯಲಿದೆ.

ಗುಂಡ್ಲುಪೇಟೆ ತಾಲ್ಲೂಕು ವೀರನಪುರ ಕ್ರಾಸ್ ಬಳಿ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ. ಊಟದ ಬಳಿಕ ಆದಿವಾಸಿಗಳು ಹಾಗು ಆಕ್ಸಿಜನ್ ದುರಂತದ ಸಂತ್ರಸ್ತರ ಜೊತೆ ಸಂವಾದ ನಡೆಯಲಿದೆ. ಸಂಜೆ 4 ಗಂಟೆಗೆ ಪಾದಯಾತ್ರೆ ಪುನರಾರಂಭ ಆಗಲಿದ್ದು, ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ರಾತ್ರಿ 7 ಗಂಟೆಗೆ ವಾಸ್ತವ್ಯ ಮಾಡಲಿದ್ದಾರೆ.

Exit mobile version