Site icon Vistara News

Bhatkal Election Results: ಭಟ್ಕಳದಲ್ಲಿ ಮಂಕಾಳು ವೈದ್ಯ ಅಬ್ಬರಕ್ಕೆ ಮಂಕಾದ ಸುನೀಲ್‌ ನಾಯ್ಕ; ಕಾಂಗ್ರೆಸ್‌ ದಿಗ್ವಿಜಯ

Bhatkal Election results Mankalu vaidya

ಭಟ್ಕಳ: ಭಟ್ಕಳ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ (Bhatkal Election Results) ಹೊರಬಿದ್ದಿದ್ದು, ಈ ಬಾರಿ ಕಾಂಗ್ರೆಸ್‌ ಪಕ್ಷದಿಂದ ಮಂಕಾಳು ವೈದ್ಯ ಅವರು ಜಯಗಳಿಸಿದ್ದಾರೆ. ಈ ಹಿಂದೆ ಶಾಸಕರಾಗಿದ್ದ ಸುನೀಲ್‌ ನಾಯ್ಕ ಅವರಿಗೆ ಪಕ್ಷದಲ್ಲಿ ಆಂತರಿಕ ಜಗಳಗಳು ಮುಳುವಾಯಿತು.

ಗೆದ್ದು ಬೀಗಿದ ಮಂಕಾಳು ವೈದ್ಯ

ಭಟ್ಕಳ ಕ್ಷೇತ್ರದಲ್ಲಿ ನಾಮಧಾರಿ ಸಮುದಾಯದ ಮತದಾರರು ನಿರ್ಣಾಯಕವಾಗಿದ್ದು, ಮುಸ್ಲಿಂ ಮತಗಳೂ ಸಹ ಗಣನೀಯ ಸಂಖ್ಯೆಯಲ್ಲಿವೆ. ಇದು ಕಾಂಗ್ರೆಸ್‌ ಅಭ್ಯರ್ಥಿ ಮಂಕಾಳು ವೈದ್ಯ ಗೆಲುವಿಗೆ ಸಹಕಾರಿಯಾಗಿದೆ. ಕಳೆದ ಬಾರಿ ತಾವು ಎಡವಿದ್ದ ಅಂಶಗಳನ್ನ ಗಮನದಲ್ಲಿಟ್ಟುಕೊಂಡು ಮಂಕಾಳು ವೈದ್ಯ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ, ಕಾಂಗ್ರೆಸ್‌ನ ಗ್ಯಾರಂಟಿ ಘೋಷಣೆಗಳು ಇಲ್ಲಿ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಆಂತರಿಕ ಜಗಳವೇ ಸುನೀಲ್‌ ನಾಯ್ಕಗೆ ಮುಳುವಾಯ್ತು

ಈ ಬಾರಿ ಕ್ಷೇತ್ರದಲ್ಲಿ ಹಿಂದುತ್ವದ ಅಲೆ ಇಲ್ಲ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಶಿವಾಜಿ ಜಯಂತಿಯಂದು ಭಟ್ಕಳಕ್ಕೆ ಆಗಮಿಸಿದ್ದ ವೇಳೆ ಮಾಂಸದೂಟ ಮಾಡಿಸಿ ದೇವಸ್ಥಾನಕ್ಕೆ ಕರೆದೊಯ್ದಿದ್ದ ವಿಚಾರ ಬಿಜೆಪಿ ಪಾಳಯದಲ್ಲಿ ಸುನೀಲ್ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿತ್ತು. ಪರಿಣಾಮವಾಗಿ ಕಾರ್ಯಕರ್ತರು ಅಭ್ಯರ್ಥಿಯನ್ನು ಬದಲಾಯಿಸುವಂತೆಯೂ ಪಕ್ಷದ ಮುಖಂಡರ ಮೇಲೆ ಒತ್ತಡ ಹೇರಿದ್ದರು. ಆದರೆ, ಅವರಿಗೆ ಟಿಕೆಟ್‌ ನೀಡಿದ್ದರಿಂದ ಒಂದು ಹಂತದ ವಿರೋಧ ವ್ಯಕ್ತವಾಗಿದ್ದೇ ಸೋಲಿಗೆ ಕಾರಣ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: Karnataka Election Results Live Updates: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಬೆಳವಣಿಗೆ

ಮತ ವಿಭಜನೆ ಮಾಡಿದ ಜೆಡಿಎಸ್‌ ಅಭ್ಯರ್ಥಿ

ಜೆಡಿಎಸ್‌ನಿಂದ ಈ ಬಾರಿ ಹೈಕೋರ್ಟ್ ವಕೀಲ ನಾಗೇಂದ್ರ ನಾಯ್ಕ ಕಣದಲ್ಲಿದ್ದು, ಪ್ರಬಲ ನಾಮಧಾರಿ ಸಮುದಾಯದ ಅಭ್ಯರ್ಥಿಯೇ ಆಗಿದ್ದರು. ಹೀಗಾಗಿ ಸುನೀಲ್ ನಾಯ್ಕಗೆ ಇದೂ ಸಹ ಹೊಡೆತ ಕೊಟ್ಟಿದೆ. ದೊಡ್ಡ ಸಂಖ್ಯೆಯ ಮುಸ್ಲಿಂ ಮತಗಳು ಸಹಜವಾಗಿಯೇ ಕಾಂಗ್ರೆಸ್‌ಗೆ ಸಿಕ್ಕಿರುವುದು ಮಂಕಾಳು ವೈದ್ಯ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಕಳೆದ ಬಾರಿಯ ಫಲಿತಾಂಶ ಏನು?
ಸುನೀಲ್ ಬಿ ನಾಯ್ಕ (ಬಿಜೆಪಿ): 83,172 | ಮಂಕಾಳು ಎಸ್ ವೈದ್ಯ (ಕಾಂಗ್ರೆಸ್‌): 77,242 | ಗೆಲುವಿನ ಅಂತರ: 5,930

ಈ ಬಾರಿಯ ಚುನಾವಣಾ ಫಲಿತಾಂಶ
ಮಂಕಾಳು ಎಸ್ ವೈದ್ಯ (ಕಾಂಗ್ರೆಸ್‌): 1,00442 | ಸುನೀಲ್ ಬಿ ನಾಯ್ಕ (ಬಿಜೆಪಿ): 67,771 | ಗೆಲುವಿನ ಅಂತರ: 32,671

ಕರ್ನಾಟಕ ಚುನಾವಣೆಯ ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Exit mobile version