Site icon Vistara News

Bhavani Reavanna : ಭವಾನಿ ರೇವಣ್ಣಗೆ ಬಂಧನ ಭೀತಿ; ಜಾಮೀನು ಅರ್ಜಿ ತೀರ್ಪು ಮುಂದಕ್ಕೆ

Bhavani Reavanna

ಬೆಂಗಳೂರು: ಲೈಂಗಿಕ ಹಗರಣದಲ್ಲಿನ ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣದ ಆರೋಪಿಯಾಗಿರುವ ಭವಾನಿ ರೇವಣ್ಣ (Bhavani Reavanna) ಅವರಿಗೆ ಬಂಧನ ಭೀತಿ ಶುರುವಾಗಿದೆ. ತಮ್ಮನ್ನು ಬಂಧಿಸದಂತೆ ನಿರೀಕ್ಷಣಾ ಜಾಮೀನಿಗಾಗಿ ಭವಾನಿ ಅವರ ವಕೀಲರು ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ನ್ಯಾಯಾಲಯ ಮಧ್ಯಾಹ್ನ 2.30ಕ್ಕೆ ಮುಂದೂಡಿಕೆ ಮಾಡಿದೆ. ಹೀಗಾಗಿ ಅವರಿಗೆ ಬಂಧನ ಭೀತಿ ಶುರುವಾಗಿದೆ. ಏತನ್ಮಧ್ಯೆ ಲೈಂಗಿಕ ಹಗರಣದಲ್ಲಿನ ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣದ ಆರೋಪಿಯಾಗಿರುವ ಭವಾನಿ ರೇವಣ್ಣ ಅವರಿಗೆ ಎಸ್​ಐಟಿ ಅಧಿಕಾರಿಗಳು ಮತ್ತೊಂದು ನೋಟಿಸ್​ ನೀಡಿದ್ದಾರೆ.

ಇದು ಅವರಿಗೆ ವಿಚಾರಣೆಗೆ ಹಾಜರಾಲು ನೀಡುತ್ತಿರುವ ಎರಡನೇ ನೋಟಿಸ್ ಆಗಿದೆ. ಪ್ರಜ್ವಲ್ ರೇವಣ್ಣ ಅವರಿಂದ ಅನ್ಯಾಯಕ್ಕೆ ಒಳಗಾಗಿದ್ದ ಸಂತ್ರಸ್ತ ಮಹಿಳೆಯೊಬ್ಬಳನ್ನು ಅಪಹರಿಸಿರುವ ಪ್ರಕರಣದಲ್ಲಿ ಭವಾನಿ ರೇವಣ್ಣ ಎಸ್​ಐಟಿ ಪೊಲೀಸರ ತನಿಖೆಗೆ ಒಳಪಡಬೇಕಾಗಿತ್ತು. ಆದರೆ, ಯಾವುದೇ ಕಾರಣಕ್ಕೆ ಯಾರಿಗೂ ಕಾಣಿಸದೇ, ಪೊಲೀಸರ ವಿಚಾರಣೆಗೂ ಹಾಜರಾಗದೇ ತಲೆ ಮರಿಸಿಕೊಂಡ ರೀತಿಯಲ್ಲಿ ವರ್ತಿಸುತ್ತಿದ್ದಾರೆ.

ಒಂದೆಡೆ ಮಗ ಪ್ರಜ್ವಲ್‌ ರೇವಣ್ಣ (prajwal revanna case) ನಿನ್ನೆ ರಾತ್ರಿ ಬಂಧನವಾಗಿದ್ದು, ಇಂದು ಮೆಡಿಕಲ್‌ ಟೆಸ್ಟ್‌ ನಡೆಸಲಾಗುತ್ತಿದೆ. ಇಂದೇ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಪೊಲೀಸ್‌ ಕಸ್ಟಡಿಗೆ ಪಡೆಯಲು ಸಿದ್ಧತೆ ನಡೆಸಲಾಗಿದೆ. ಇಂದು ಭವಾನಿ ರೇವಣ್ಣ ಅವರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ಕೂಡ ತೀರ್ಪಿಗೆ ಬರುತ್ತಿದೆ. ಅದರ ಬೆನ್ನಲ್ಲೇ ಎಸ್‌ಐಟಿ ಮತ್ತೊಂದು ನೋಟೀಸ್ ನೀಡಿದೆ. ಕೆ.ಆರ್ ನಗರ ಠಾಣೆಯಲ್ಲಿ ದಾಖಲಾಗಿದ್ದ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ನೊಟೀಸ್ ನೀಡಿದೆ. “ಪ್ರಕರಣಕ್ಕೆ ಸಂಬಂಧಿಸಿ 01/06/2024ರಂದು ತನಿಖೆಗೆ ತನಿಖಾಧಿಕಾರಿಗಳು ಬರಲಿದ್ದು, ತಾವು ನೀಡಿದ ಈ ವಿಳಾಸದಲ್ಲಿ ತಮ್ಮನ್ನು ತನಿಖೆಗೆ ಒಳಪಡಿಸಲಾಗುವುದು. ಅಗತ್ಯ ಸಹಕಾರ ನೀಡಬೇಕು” ಎಂದು ನೊಟೀಸ್ ನೀಡಿದ್ದಾರೆ.

ಇದನ್ನೂ ಓದಿ ;Prajwal Revanna Case : ಪ್ರಜ್ವಲ್​ನನ್ನು ಮಹಿಳಾ ಪೊಲೀಸ್ ಸಿಬ್ಬಂದಿಯೇ ಬಂಧಿಸಿದ್ದು ಯಾಕೆ?

“ಈ ಹಿಂದೆ ನೀಡಿದ್ದ ನೋಟೀಸ್‌ಗೆ ನೀವು ಉತ್ತರಿಸಿಲ್ಲ. 15-05-24ರಂದು ನೀಡಿದ ನೋಟೀಸ್‌ಗೆ, ಹೊಳೆನರಸೀಪುರದ ಚನ್ನಾಂಭಿಕ ನಿವಾಸದಲ್ಲಿ ಸ್ಪಷ್ಟನೆ ನೀಡುವುದಾಗಿ ತಿಳಿಸಿದ್ದೀರಿ. ಈ ಪ್ರಕರಣದಲ್ಲಿ ನಿಮ್ಮನ್ನು ವಿಚಾರಣೆಗೆ ಒಳಪಡಿಸುವ ಅವಶ್ಯಕತೆ ಇದೆ. ಆದ್ದರಿಂದ ನೀವು ಹೇಳಿರುವಂತೆ ನಾವು ನಿಮ್ಮನ್ನು 01-06-24ರಂದು ವಿಚಾರಣೆಗೆ ಒಳಪಡಿಸಲಿದ್ದು, ಖುದ್ದು ಹಾಜರಿರಬೇಕು. ಮಹಿಳಾ ಅಧಿಕಾರಿಗಳೊಂದಿಗೆ ಜೂನ್ 1ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆ ಒಳಗೆ ವಿಚಾರಣೆಗೆ ಆಗಮಿಸುತ್ತೇವೆ. ಆ ಸಂದರ್ಭ ಖುದ್ದು ಮನೆಯಲ್ಲಿ ಹಾಜರಿರಬೇಕು” ಎಂದು ಎಸ್‌ಐಟಿ ಮುಖ್ಯಸ್ಥ ಹೇಮಂತ್‌ಕುಮಾರ್‌ ಆದೇಶಿಸಿದ್ದಾರೆ.

ಭವಾನಿ ರೇವಣ್ಣ ಅವರಿಗೆ ಇದುವರೆಗೆ ಎರಡು ನೋಟೀಸ್‌ಗಳನ್ನು ನೀಡಲಾಗಿದೆ. ನಂತರ ಎಸ್ಐಟಿಗೆ ಪತ್ರ ಬರೆದಿದ್ದ ಭವಾನಿ, ಅವಶ್ಯವಿದ್ದರೆ ತನಿಖೆಗೆ ತಮ್ಮ ಮನೆಯಲ್ಲಿ ಲಭ್ಯವಿರುವುದಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ತಾವು ವಿಚಾರಣೆಗೆ ಬರುತ್ತಿರುವುದಾಗಿ ಎಸ್ಐಟಿಯಿಂದ ನೊಟೀಸ್‌ ಹೋಗಿದೆ. ಹಾಸನ ಹೊಳೆನರಸೀಪುರದ ಹೆಚ್.ಡಿ ರೇವಣ್ಣ ಹಾಗೂ ಭವಾನಿ ನಿವಾಸದ ಬಾಗಿಲಿಗೆ SIT ಟೀಂ ನೋಟೀಸ್ ಅಂಟಿಸಿದೆ. ಹೀಗಾಗಿ ನಾಳೆ ಹೊಳೆನರಸೀಪುರದಲ್ಲಿ ಭವಾನಿ ರೇವಣ್ಣ ಅವರ ಮೊದಲ ಸುತ್ತಿನ ವಿಚಾರಣೆ ನಡೆಯಲಿದೆ.

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ (Prajwal Revanna Case) ಕೆ.ಆರ್.ನಗರ ಸಂತ್ರಸ್ತ ಮಹಿಳೆಯನ್ನು ಅಪಹರಣ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಭವಾನಿ ರೇವಣ್ಣ (Bhavani Revanna) ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯ ಕುರಿತು ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಮೇ 31ರಂದೇ ಆದೇಶವನ್ನು ಹೊರಡಿಸುವುದಾಗಿ ತಿಳಿಸಿದೆ. ಅತ್ತ, ತಮ್ಮ ವಿರುದ್ಧ ದಾಖಲಾದ ಎರಡೂ ಎಫ್‌ಐಆರ್‌ ರದ್ದುಗೊಳಿಸುವಂತೆ ಕೋರಿ ಎಚ್‌.ಡಿ.ರೇವಣ್ಣ ಕೂಡ ಅರ್ಜಿ ಸಲ್ಲಿಸಿದ್ದಾರೆ.

Exit mobile version