ಹಾಸನ: ಮಾಜಿ ಸಚಿವ ಎಚ್.ಡಿ. ರೇವಣ್ಣ ಪತ್ನಿ ಭವಾಣಿ ರೇವಣ್ಣ (Bhavani Revanna) ಹಾಗೂ ಎಚ್.ಪಿ.ಸ್ವರೂಪ್ ನಡುವೆ ಹಾಸನ ಕ್ಷೇತ್ರದಲ್ಲಿ ಟಿಕೆಟ್ ಫೈಟ್ ಜೋರಾಗಿರುವ ನಡುವೆ ಜಿಲ್ಲಾ ಜೆಡಿಎಸ್‌ನಿಂದ ಬಿಡುಗಡೆ ಮಾಡಿರುವ ಪಕ್ಷದ ಅಭಿವೃದ್ಧಿ ಕಾರ್ಯಗಳ ಕಿರು ಮಾಹಿತಿ ಪುಸ್ತಕದಲ್ಲಿ ಭವಾನಿ ರೇವಣ್ಣ ಅವರ ಫೋಟೊ ಕಂಡುಬಂದಿದೆ. ಪಕ್ಷದ ಪ್ರಮುಖ ನಾಯಕರ ಸಾಲಿನಲ್ಲಿ ಭವಾನಿ ರೇವಣ್ಣ ಭಾವಚಿತ್ರ ಕಂಡುಬಂದಿರುವುದರಿಂದ ಅವರಿಗೆ ಹಾಸನ ಟಿಕೆಟ್ ಖಚಿತವಾಯಿತೇ ಎಂಬ ಮಾತುಗಳು ಕೇಳಿಬರುತ್ತಿವೆ.
ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಸೋಮವಾರ ಬಿಡುಗಡೆ ಮಾಡಿದ ‘ಜಾತ್ಯತೀತ ಜನತಾ ದಳ ಸರ್ಕಾರ ಹಾಸನ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ನೀಡಿದ ಪ್ರಮುಖ ಕೊಡುಗೆಗಳು’ ಎಂಬ ಪುಸ್ತಕದಲ್ಲಿ ಭವಾನಿ ರೇವಣ್ಣ ಭಾವಚಿತ್ರ ಕಂಡುಬಂದಿದೆ. ಜಿಲ್ಲೆಯ ಘೋಷಣೆ ಮಾಡಿರುವ 6 ಜೆಡಿಎಸ್ ಅಭ್ಯರ್ಥಿಗಳ ಜತೆಗೆ ಭವಾನಿ ರೇವಣ್ಣ ಫೋಟೋವನ್ನೂ ಬಳಸಲಾಗಿದೆ. ಇದರಿಂದ ಪರೋಕ್ಷವಾಗಿ ಹಾಸನ ಕ್ಷೇತ್ರದಿಂದ ಭವಾನಿ ಅವರೇ ಅಭ್ಯರ್ಥಿ ಎಂದು ರೇವಣ್ಣ ಸಂದೇಶ ರವಾನೆ ಮಾಡಿದ್ದಾರೆಯೇ ಎಂಬ ವಿಷಯ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ | Basavaraj Bommai: ಬಿಜೆಪಿ ಸರ್ಕಾರ ಬಡವರ ಪರ ಧೈರ್ಯವಾಗಿ ನಿರ್ಧಾರ ಮಾಡುತ್ತದೆ ಎಂದ ಸಿಎಂ ಬೊಮ್ಮಾಯಿ
ಕಿರು ಪುಸ್ತಕದಲ್ಲಿ ಅರಕಲಗೂಡು ಕ್ಷೇತ್ರದ ಅಭ್ಯರ್ಥಿ ಎ.ಮಂಜು, ಅರಸೀಕೆರೆ ಕ್ಷೇತ್ರದ ಅಭ್ಯರ್ಥಿ ಬಾಣಾವರ ಅಶೋಕ್ ಹಾಗೂ ಉಳಿದ ನಾಲ್ವರು ಹಾಲಿ ಶಾಸಕರ ಜತೆ ಭವಾನಿ ರೇವಣ್ಣ ಫೋಟೊ ಬಳಕೆ ಮಾಡಲಾಗಿದೆ. ಪುಸ್ತಕದಲ್ಲಿ ಜೆಡಿಎಸ್ ರಾಜ್ಯ ನಾಯಕರು, ಸಂಸದರು, ವಿಧಾನ ಪರಿಷತ್ ಸದಸ್ಯರ ಫೋಟೊ ಜತೆಗೆ ಘೋಷಿತ ಅಭ್ಯರ್ಥಿಗಳ ಫೋಟೊವನ್ನು ಮುದ್ರಿಸಲಾಗಿದೆ.
ಈಗಾಗಲೇ ಹಾಸನ ಕ್ಷೇತ್ರಕ್ಕೆ ಅಭ್ಯರ್ಥಿಯಾಗಲು ಭವಾನಿ ರೇವಣ್ಣ ಹಾಗೂ ಎಚ್.ಪಿ. ಸ್ವರೂಪ್ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. ಈ ಹಿಂದೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಪರೋಕ್ಷವಾಗಿ ಪಕ್ಷದ ಕಾರ್ಯಕರ್ತನಿಗೆ ಟಿಕೆಟ್ ನೀಡುವ ಅಭಿಪ್ರಾಯ ಹೊರಹಾಕಿದ್ದರು. ಇದರಿಂದ ಭವಾನಿ ರೇವಣ್ಣ ಫೋಟೊ ಪ್ರಿಂಟ್ ಮಾಡಿ ಅವರೇ ಅಭ್ಯರ್ಥಿ ಎನ್ನುವ ಸಂದೇಶವನ್ನು ರೇವಣ್ಣ ಕೊಟ್ಟಿದ್ದಾರಾ ಎಂಬ ಚರ್ಚೆಗಳು ನಡೆಯುತ್ತಿವೆ.
ಇದನ್ನೂ ಓದಿ | SC ST Reservation: ಕಾಂಗ್ರೆಸ್ ಅಧಿಕಾರಕ್ಕೂ ಬರಲ್ಲ, ಮೀಸಲಾತಿ ಬದಲಾಯಿಸಲೂ ಆಗಲ್ಲ: ಪ್ರಲ್ಹಾದ್ ಜೋಶಿ
ಅಭ್ಯರ್ಥಿಗಳ ಪಟ್ಟಿ ಸಿದ್ಧ ಮಾಡಿ ಇಟ್ಟುಕೊಂಡಿದ್ದೇವೆ ಎಂದ ರೇವಣ್ಣ
ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯ್ಕೆ ವಿಚಾರ ಮಾಜಿ ಸಚಿವ ಎಚ್.ಡಿ.ರೇವಣ್ಣ ಪ್ರತಿಕ್ರಿಯಿಸಿ, ಕಾಂಗ್ರೆಸ್, ಬಿಜೆಪಿಯವರೇ ಇನ್ನೂ ಪಟ್ಟಿ ಅಂತಿಮ ಮಾಡಲು ಆಗುತ್ತಿಲ್ಲ, ನಮ್ಮನ್ನೇನು ಕೇಳುತ್ತೀರಿ ಎಂದು ಮಾಧ್ಯಮದವರಿಗೆ ಹೇಳಿದ ಅವರು, ಎಲ್ಲ ಸಿದ್ಧ ಮಾಡಿ ಇಟ್ಟುಕೊಂಡಿದ್ದೇವೆ ಎಂದು ಹೇಳಿ ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಾರೆಂದು ಗುಟ್ಟು ಬಿಟ್ಟುಕೊಡದೆ ನಿರ್ಗಮಿಸಿದರು.