ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಲ (Karnataka Milk Federation-KMF)ದ ನೂತನ ಅಧ್ಯಕ್ಷರಾಗಿ ಭೀಮಾ ನಾಯ್ಕ್ (Bheema Naik) ಆಯ್ಕೆಯಾಗಿದ್ದಾರೆ. ರಾಜ್ಯದಲ್ಲಿ ಸರ್ಕಾರ ಬದಲಾವಣೆಯ ಜತೆಗೆ ಬಾಲಚಂದ್ರ ಜಾರಕಿಹೊಳಿ (Balachandra Jarakiholi) ಅವರ ಅಧ್ಯಕ್ಷ ಸ್ಥಾನವೂ ತೆರವಾದ ಹಿನ್ನೆಲೆಯಲ್ಲಿ ಹೊಸ ಆಯ್ಕೆಗೆ ಬುಧವಾರ ಚುನಾವಣೆ ಆಯೋಜಿಸಲಾಗಿತ್ತು. ಆದರೆ, ಭೀಮಾ ನಾಯ್ಕ್ ಅವರನ್ನು ಹೊರತುಪಡಿಸಿ ಬೇರೆ ಯಾರೂ ಕಣಕ್ಕೆ ಇಳಿಯದೆ ಇರುವುದರಿಂದ ಅವಿರೋಧ ಆಯ್ಕೆ ನಡೆಯಿತು. ಭೀಮಾ ನಾಯ್ಕ್ ಅವರು ಹಗರಿಬೊಮ್ಮನಹಳ್ಳಿಯ ಕಾಂಗ್ರೆಸ್ ಶಾಸಕರಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿದ್ದಾರೆ. ಭೀಮಾ ನಾಯ್ಕ್ ಹಲವು ವರ್ಷಗಳಿಂದ ಈ ಹುದ್ದೆ ಮೇಲೆ ಕಣ್ಣಿಟ್ಟಿದ್ದರು.
ಏರುವುದೇ ಹಾಲಿನ ದರ?
ಈ ನಡುವೆ, ಹೊಸ ಸರ್ಕಾರದ ಅಡಿಯಲ್ಲಿ ಕೆಎಂಎಫ್‌ಗೆ ಹೊಸ ಅಧ್ಯಕ್ಷರ ಆಯ್ಕೆ ಆಗುತ್ತಿದ್ದಂತೆಯೇ ಹಾಲಿನ ದರ ಏರಿಕೆಯ (Milk Price Hike) ಪ್ರಸ್ತಾಪವನ್ನೂ ಮುಂದಿಡಲಾಗಿದೆ. ಹೊಸ ಅಧ್ಯಕ್ಷ ಭೀಮಾ ನಾಯ್ಕ್, ಸಹಕಾರ ಸಚಿವ ಕೆ.ಎನ್. ರಾಜಣ್ಣ ಮತ್ತು ಪಶು ಸಂಗೋಪನಾ ಖಾತೆ ಸಚಿವ ಕೆ. ವೆಂಕಟೇಶ್ ಎಲ್ಲರೂ ದರ ಏರಿಕೆ ಪರ ತಮ್ಮ ವಾದ ಮಂಡಿಸಿದ್ದಾರೆ.
ಹಾಲು ನೀಡುವ ರೈತರಿಗೆ ಈಗ ಹೆಚ್ಚು ಲಾಭ ಸಿಗುತ್ತಿಲ್ಲ. ಕೆಎಂಎಫ್ ರೈತರ ಹಿತ ಕಾಯುವ ನಿಟ್ಟಿನಲ್ಲಿ ಮುಂದಾಗಲಿದೆ. ಏನು ಮಾಡಬಹುದು ಎನ್ನುವ ಬಗ್ಗೆ ಮುಂದಿನ ದಿನಗಳಲ್ಲಿ ಸಿಎಂ ಜತೆ ಸಭೆ ನಡೆಲಾಗುತ್ತದೆ. ಆ ಸಭೆಯಲ್ಲಿ ರೈತರ ಹಿತ ಕಾಯುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ರೈತರಿಂದ ಹಾಲು ಖರೀದಿ ದರ ಹೆಚ್ಚಳ ಮಾಡಬೇಕಾಗಿದೆ. ಹೀಗಾಗಿ ಹಾಲಿನ ದರದಲ್ಲೂ ಹೆಚ್ಚಳ ಮಾಡಬೇಕಾಗಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.
ಖಾಸಗಿ ಸಂಸ್ಥೆಗಳಿಂದ ಹೆಚ್ಚಿನ ದರ ನೀಡಿ ಖರೀದಿ
ರಾಜ್ಯದಲ್ಲಿ ಖಾಸಗಿ ಹಾಲು ಸಂಸ್ಥೆಗಳು ರೈತರಿಂದ ಹೆಚ್ಚು ಹಣ ಕೊಟ್ಟು ಖರೀದಿ ಮಾಡುತ್ತಿವೆ. ಹೀಗಾಗಿ ನಾವು ಕೂಡಾ ಹೈನುಗಾರರಿಗೆ ಹೆಚ್ಚು ಹಣ ನೀಡಲೇಬೇಕಾಗುತ್ತದೆ. ಹಾಗೆ ಮಾಡುವ ಹೊತ್ತಿನಲ್ಲಿ ಗ್ರಾಹಕರಿಗೇ ದರ ಹೆಚ್ಚಳ ಮಾಡಬೇಕಾಗುತ್ತದೆ. ಹೀಗಾಗಿ ಸಿಎಂ ಜತೆಗಿನ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ಕೆ.ಎನ್. ರಾಜಣ್ಣ ತಿಳಿಸಿದರು.
ʻʻಅಮೂಲ್ ಜತೆ ನಂದಿನಿ ವಿಲೀನ ಎಂಬ ಸುದ್ದಿ ತಲೆ ಬುಡ ಇಲ್ಲದ್ದು. ಈ ರೀತಿ ಹೇಳಿಕೆ ಕೊಡುವವರು ಹುಚ್ಚರಿದ್ದಂತೆ. ಮುಕ್ತ ಮಾರುಕಟ್ಟೆಯಲ್ಲಿ ಯಾರು ಎಲ್ಲಿ ಬೇಕಾದರೂ ಹೋಗಿ ಮಾರಾಟ ಮಾಡಬಹುದು. ಅದೇ ರೀತಿ ನಂದಿನಿ ಬೇರೆ ಬೇರೆ ರಾಜ್ಯದಲ್ಲೂ ಮಾರಾಟ ಮಾಡಲಾಗುತ್ತಿದೆ. ಗುಣಮಟ್ಟ ಇದ್ದರೆ ಮಾತ್ರ ಗ್ರಾಹಕರು ಖರೀದಿ ಮಾಡುತ್ತಿದ್ದಾರೆʼʼ ಎಂದು ಹೇಳಿದರು ಕೆ.ಎನ್. ರಾಜಣ್ಣ.
ಪಶುಸಂಗೋಪನಾ ಸಚಿವ ವೆಂಕಟೇಶ್ ಅವರು ಕೂಡಾ ದರ ಏರಿಕೆ ಮಾಡುವುದು ಅನಿವಾರ್ಯ ಎಂದರು.
ಐದು ರೂ. ಹೆಚ್ಚಳ ಮಾಡುವಂತೆ ಕೆಎಂಎಫ್ ಮನವಿ
ಕೆಎಂಎಫ್ ಅಧ್ಯಕ್ಷರಾಗಿ ತಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸಿದ ಭೀಮಾ ನಾಯ್ಕ್ ಅವರು, ಹಿರಿಯರ ಶ್ರಮದಿಂದಾಗಿ ಕೆ.ಎಂಎಫ್ ಈ ಮಟ್ಟಕ್ಕೆ ಬಂದು ನಿಂತಿದೆ. ಸರ್ಕಾರದ ಮಾರ್ಗದರ್ಶನದ ಜತೆಗೆ ರೈತರು, ಗ್ರಾಹಕರ ಸಹಕಾರ ಬೇಕಾಗಿದೆ ಎಂದು ಹೇಳಿದರು.
ʻʻನಂದಿನಿ ಎನ್ನುವುದು ರಾಷ್ಟ್ರಮಟ್ಟದ ಬ್ರಾಂಡ್. ಖಾಸಗಿಯವರಿಗೆ ಸ್ಪರ್ಧೆ ನೀಡುವ ಕೆಲಸವನ್ನು ಕೆಎಂಎಫ್ ಮಾಡಲಿದೆʼʼ ಎಂದು ಭೀಮಾ ನಾಯ್ಕ್ ಹೇಳಿದರು. ʻʻಚರ್ಮ ಗಂಟು ರೋಗದಿಂದ ಹಾಲು ಕಡಿಮೆಯಾಗಿತ್ತು
ಹೀಗಾಗಿ ತುಪ್ಪದ ಕೊರತೆ ಉಂಟಾಗಿತ್ತುʼʼ ಎಂದು ವಿವರಿಸಿದರು.
ರೈತರಿಗೆ 5 ರೂ ಪ್ರೋತ್ಸಾಹ ಧನ ನೀಡಲಾಗ್ತಿದೆ. ಇನ್ನು ಎರಡು ರೂ ಹೆಚ್ಚಳ ಮಾಡುವ ಬಗ್ಗೆ ತೀರ್ಮಾನ ಇದೆ. ಹೀಗಾಗಿ ಕೆಎಂಎಫ್ ಪ್ರತಿ ಲೀಟರ್ ಗೆ 5 ರೂ ಹೆಚ್ಚಳ ಮಾಡುವಂತೆ ಮನವಿ ಮಾಡಿದೆ ಎಂದು ಭೀಮಾ ನಾಯ್ಕ್ ತಿಳಿಸಿದರು.
ಹಾಗಿದ್ದರೆ ಈಗ ಯಾವ ಹಾಲಿನ ದರ ಎಷ್ಟಿದೆ?
(ಕೆಎಂಎಫ್ ವಿವಿಧ ಮಾದರಿ ಹಾಲಿನ ದರ ಪ್ರತಿ ಲೀಟರ್‌ಗೆ)
ಟೋನ್ಡ್ ಹಾಲು – 39 ರೂ.
ಹೋಮೋಜಿನೈಸ್ಡ್ ಟೋನ್ಡ್ ಹಾಲು- 40 ರೂ.
ಸ್ಪೆಷಲ್ ಹಾಲು- 45 ರೂ.
ಶುಭಂ ಹಾಲು- 45 ರೂ.
ಸಮೃದ್ದಿ ಹಾಲು- 50 ರೂ.
ಸಂತೃಪ್ತಿ ಹಾಲು- 52 ರೂ.
ಡಬ್ಬಲ್ ಟೋನ್ಡ್ ಹಾಲು- 38 ರೂ.
ಮೊಸರು ಪ್ರತಿ ಲೀ 47- ರೂ.
ಇದನ್ನೂ ಓದಿ: Brand Bengaluru: ವಿದ್ಯುತ್ ಜತೆಗೆ ಕಸದ ಶುಲ್ಕವೂ ಸೇರ್ಪಡೆಗೆ ಸಲಹೆ: ಖಚಿತಪಡಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್