ಕಲಬುರಗಿ: ಸ್ನೇಹಿತರ ಜತೆ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಯೊಬ್ಬ ನಗರದ ಶ್ರೀ ರಾಮತೀರ್ಥ ದೇವಸ್ಥಾನದ ಹಿಂಭಾಗದಲ್ಲಿರುವ ಕಲ್ಲಿನ ಖಣಿಯಲ್ಲಿ ತುಂಬಿದ್ದ ನೀರಿನಲ್ಲಿ ಈಜಲು ಹೋಗಿ ಮೇಲೆ ಬರಲು ಆಗದೇ ಮುಳುಗಿ (Youth drowned) ಮೃತಪಟ್ಟಿದ್ದಾನೆ.
ಬೀದರ್ ಮೂಲದ ಆಶೀಶ್ ಗುಪ್ತಾ (15) ಮೃತ ವಿದ್ಯಾರ್ಥಿ. ಈತ ಕಲಬುರಗಿಗೆ ಸ್ನೇಹಿತರ ಜತೆಗೆ ಪ್ರವಾಸಕ್ಕೆ ಬಂದಿದ್ದ. ರಾಮತೀರ್ಥ ದೇವಸ್ಥಾನದಲ್ಲಿ ದರ್ಶನ ಪಡೆದ ಸ್ನೇಹಿತರೆಲ್ಲರೂ ಹಿಂಭಾಗದಲ್ಲಿರುವ ಕಲ್ಲಿನ ಖಣಿಯಲ್ಲಿ ತುಂಬಿಕೊಂಡಿದ್ದ ನೀರಿನಲ್ಲಿ ಈಜಲು ತೆರಳಿದ್ದರು. ಈ ವೇಳೆ ಆಶೀಶ್‌ಗೆ ಈಜಲು ಸಾಧ್ಯವಾಗದೆ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಅಗ್ನಿಶಾಮಕ ದಳ ಸಿಬ್ಬಂದಿಯನ್ನು ಕರೆಸಿ ಮೃತದೇಹವನ್ನು ಹೊರಕ್ಕೆ ತೆಗೆಸಿದ್ದಾರೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಕಲಬುರಗಿ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಶೀಶ್ 9ನೇ ತರಗತಿಯಲ್ಲಿ ಓದುತ್ತಿದ್ದ ಎಂದು ತಿಳಿದುಬಂದಿದೆ.
ಸಾರಿಗೆ ಬಸ್ ಡಿಕ್ಕಿಯಾಗಿ ವ್ಯಕ್ತಿ ಸಾವು
ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾದಲ್ಲಿ ಸಾರಿಗೆ ಸಂಸ್ಥೆ ಬಸ್‌ವೊಂದು ಡಿಕ್ಕಿಯಾದ ಪರಿಣಾಮ ಕೆಳಗೆ ಬಿದ್ದ ವ್ಯಕ್ತಿಯ ತಲೆಯ ಮೇಲೆಯೇ ಬಸ್ ಹರಿದಿದ್ದು, ತಲೆ ಅಪ್ಪಚ್ಚಿಯಾಗಿ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ನಾಗಪ್ಪ ತಂದೆ ಹನುಮಪ್ಪ (55) ಎಂಬುವವರು ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಅವರು ಆಯತಪ್ಪಿ ಕೆಳಗೆ ಬಿದ್ದಿದ್ದು, ಡಿಕ್ಕಿ ಹೊಡೆದ ಬಸ್ ಅವರ ತಲೆ ಮೇಲೆ ಹರಿದಿದೆ. ಸ್ಥಳಕ್ಕೆ ತಾವರಗೇರಾ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: CT Ravi: ಮಾಂಸ ತಿಂದು ನಾಗಬನ, ಹನುಮ ದೇಗುಲಕ್ಕೆ ಭೇಟಿ ಕೊಟ್ಟರಾ ಸಿ.ಟಿ ರವಿ?; ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ವೈರಲ್