Site icon Vistara News

ಉತ್ತರ ಪ್ರದೇಶ ಅಪಘಾತದಲ್ಲಿ ಏಳು ಕನ್ನಡಿಗರ ಸಾವು: ಯೋಗಿ ಆದಿತ್ಯನಾಥ ಜತೆ CM ಬೊಮ್ಮಾಯಿ ಮಾತು

accident up

ಬೆಂಗಳೂರು: ಆಯೋಧ್ಯೆಗೆ ತೆರಳುತ್ತಿದ್ದ ಬಸ್‌ ಉತ್ತರ ಪ್ರದೇಶದಲ್ಲಿ ಅಪಘಾತಕ್ಕೀಡಾಗಿ ಕರ್ನಾಟಕದ ಏಳು ಜನರು ಮೃತಪಟ್ಟ ದಾರುಣ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ಅಯೋಧ್ಯೆಗೆ ತೆರಳುತ್ತಿದ್ದಾಗ ನಡೆದ ಘಟನೆಯಲ್ಲಿ ಒಟ್ಟು 9 ಜನರು ಸಾವನ್ನಪ್ಪಿದ್ದು, ಇವರಲ್ಲಿ ಏಳು ಜನರು ಒಂದೇ ಕುಟುಂಬದವರು. ವಿವರ ತಿಳಿದ ಕೂಡಲೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ಮಾಡಿ ಮಾತನಾಡಿ ಸಹಕಾರ ಕೋರಿದ್ದಾರೆ.

ಅಪಘಾತವು ಬಹ್ರೇಚ್‌-ಲಖೀಮ್‌ಪುರ ಹೈವೇಯಲ್ಲಿ ನಡೆದಿದೆ. ಕರ್ನಾಟಕದ 16 ಪ್ರಯಾಣಿಕರನ್ನು ಹೊಂದಿದ್ದ ಉತ್ತರ ಪ್ರದೇಶ ನೋಂದಣಿಯ ಟಿಟಿ ಬಸ್‌ ಅಯೋಧ್ಯೆಗೆ ಸಾಗುತ್ತಿತ್ತು. ಮೋತಿಪುರ ಪ್ರದೇಶದ ನನೀಹಾ ಮಾರ್ಕೆಟ್‌ ಬಳಿ ಸಾಗುತ್ತಿರುವಾಗ ಬಸ್‌ ವಿರುದ್ಧ ದಿಕ್ಕಿನ ರಸ್ತೆಗೆ ಸಾಗಿದೆ. ಈ ಸಮಯದಲ್ಲಿ ಎದುರಿನಿಂದ ಬರುತ್ತಿದ್ದ ಟ್ರಕ್‌ಗೆ ಬಸ್‌ ಡಿಕ್ಕಿಯಾಗಿದೆ ಎಂದು ಹೆಚ್ಚುವರಿ ಎಸ್‌ಪಿಅಶೋಕ್‌ ಕುಮಾರ್‌ ತಿಳಿಸಿದ್ದಾರೆ.

ಇದನ್ನೂ ಓದಿ | ಬೆಳಗಾವಿಯಲ್ಲಿ ಕಾರು-ಲಾರಿ ಭೀಕರ ಅಪಘಾತದಲ್ಲಿ ನಾಲ್ವರ ಸಾವು

ಘಟನೆಯಲ್ಲಿ ಬಸ್‌ ಚಾಲಕ ಸೇರಿ ಐದು ಜನರು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಇಬ್ಬರು ಆಸ್ಪತ್ರೆ ಮಾರ್ಗದಲ್ಲಿ ಕೊನೆಯುಸಿರೆಳೆದಿದ್ದಾರೆ. ಒಂಭತ್ತು ಜನರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಕಲಬುರಗಿ ಹಾಗೂ ಬೀದರ್‌ನಲ್ಲಿ ವಾಸಿಸುವ ಒಂದೇ ಕುಟುಂಬದ ಶಿವಕುಮಾರ (28), ಜನದಂ ಉರ್ಫ್‌ ದಗದೇವಿ (52), ಮನ್ಮಥ (36), ಅನಿಲ್‌(30), ಸಂತೋಷ್‌, ಶಶಿಕಲಾ(38), ಸರಸ್ವತಿ(47) ಎಂದು ಗುರುತಿಸಲಾಗಿದೆ.

ಯೋಗಿ ಜತೆ ಬೊಮ್ಮಾಯಿ ಮಾತುಕತೆ

ಅಪಘಾತ ಸಂಭವಿಸಿ ಒಂದೇ ಕುಟುಂಬದ 7 ಜನರು ಮೃತಪಟ್ಟು 9 ಜನರು ಗಾಯಗೊಂಡಿರುವ ಘಟನೆ ಅತ್ಯಂತ ದುರದೃಷ್ಟಕರ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪ ತಿಳಿಸಿರುವ ಬೊಮ್ಮಾಯಿ, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ಅಪಘಾತ ಸಂಭವಿಸಿದ ಸ್ಥಳದಲ್ಲಿ ಜಿಲ್ಲಾಡಳಿತ ಭರದಿಂದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ರಾಜ್ಯದ ಪ್ರವಾಸಿಗರ ಸುರಕ್ಷತೆ, ಅವರಿಗೆ ಉತ್ತಮ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವ ಕುರಿತಂತೆ ಈಗಾಗಲೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಲಾಗಿದೆ. ಗಾಯಾಳುಗಳಿಗೆ ಚಿಕಿತ್ಸಾ ಸೌಲಭ್ಯ ಒದಗಿಸುವ ಜತೆಗೆ ಮೃತದೇಹಗಳನ್ನು ರಾಜ್ಯಕ್ಕೆ ತರಲು ಎಲ್ಲ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇದನ್ನೂ ಓದಿ | ಅಯೋಧ್ಯೆಯ ರಾಮ ಮಂದಿರದ ಗರ್ಭ ಗೃಹಕ್ಕೆ ಜೂನ್‌ 1 ರಂದು ಸಿಎಂ ಯೋಗಿ ಆದಿತ್ಯನಾಥ್ ಶಿಲಾನ್ಯಾಸ

Exit mobile version