ಬೀದರ್: ಕರ್ನಾಟಕದ ಅಭಿವೃದ್ಧಿಯನ್ನು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾಡಬಹುದೇ ಹೊರತು ತುಷ್ಟೀಕರಣ ಮಾಡುತ್ತಲೇ ಇರುವ ಕಾಂಗ್ರೆಸ್‌ನಿಂದ ಅಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ( Amit Shah) ತಿಳಿಸಿದರು. ಬೀದರ್ ಜಿಲ್ಲೆಯ ಗೊರಟಾದಲ್ಲಿ ಹುತಾತ್ಮ ಸ್ಮಾರಕ ಹಾಗೂ ಸರ್ದಾರ್ ಪಟೇಲ್ ಸ್ಮಾರಕ ಲೋಕಾರ್ಪಣೆ ನಂತರ ಮಾತನಾಡಿದರು.
ಇಡೀ ದೇಶ ಮರೆಯಲಾಗದಂತಹ ಅದ್ಭುತ ಸ್ಮಾರಕವನ್ನು ನಿರ್ಮಾಣ ಮಾಡಬೇಕೆಂದು ಯುವ ಮೋರ್ಚಾ ಕಾರ್ಯಕರ್ತರಿಗೆ ವಹಿಸಲಾಗಿತ್ತು. ಈ ಬಾರಿ ಬಿಜೆಪಿ ಸರ್ಕಾರಕ್ಕೆ ಪೂರ್ಣ ಬಹುಮತ ನೀಡಿದರೆ 50 ಕೋಟಿ ರೂ. ವೆಚ್ಚದಲ್ಲಿ ಇಲ್ಲಿ ಬಹುದೊಡ್ಡ ಸ್ಮೃತಿ ಸ್ಥಾನ ಹಾಗೂ ಪ್ರದರ್ಶನ ಏರ್ಪಡಿಸಲಾಗುತ್ತದೆ. ಕರ್ನಾಟಕ ಮಾತ್ರವಲ್ಲದೆ ದೇಶಕ್ಕೆ ಒಂದು ಯಾತ್ರಾ ಸ್ಥಳವಾಗಿ ನಿರ್ಮಾಣ ಮಾಡುತ್ತೇವೆ.
ಇಡೀ ದೇಶ ಸ್ವಾತಂತ್ರ್ಯವಾದರೂ ಕ್ರೂರ ನಿಜಾಮನ ಕಾರಣಕ್ಕೆ ಈ ಬೀದರ್ ಭಾಗ ಸ್ವಾತಂತ್ರ್ಯಗೊಂಡಿರಲಿಲ್ಲ. ಈ ತೆಲಂಗಾಣದ ಸರ್ಕಾರ ಇಂದಿಗೂ ಹೈದರಾಬಾದ್ ವಿಮೋಚನಾ ದಿನವನ್ನು ಆಚರಿಸಲು ಸಂಕೋಚಪಡುತ್ತಿದೆ. ಆದರೆ ಪ್ರತಿ ಹೈದರಾಬಾದ್ ವಿಮೋಚನಾ ದಿನದಂದು ಸರ್ಕಾರಿ ಕಾರ್ಯಕ್ರಮ ಆಚರಿಸುತ್ತೇವೆ ಎಂದು ಮೋದಿ ಸರ್ಕಾರ ನಿರ್ಧಿರಿಸಿದೆ. ಮುಂದಿನ ವರ್ಷ 50 ಕೋಟಿ ರೂ. ಸ್ಮಾರಕ ನಿರ್ಮಾಣವಾದಾಗ ಇಲ್ಲಿಯೇ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನ ಆಚರಿಸುತ್ತೇವೆ.
ಕಾಂಗ್ರೆಸ್‌ನ ತುಷ್ಟೀಕರಣ ರಾಜನೀತಿಯ ಕಾರಣಕ್ಕೆ ಅವರು ಎಂದಿಗೂ ಹೈದರಾಬಾದ್ ಮುಕ್ತಿಗೆ ಹೋರಾಡಿದವರನ್ನು ನೆನೆಸಿಕೊಂಡಿಲ್ಲ. ಸರ್ದಾರ್ ಪಟೇಲ್ ಇಲ್ಲದಿದ್ದರೆ ಹೈದರಾಬಾದ್ ಸ್ವಾತಂತ್ರ್ಯವಾಗುತ್ತಿರಲಿಲ್ಲ, ಬೀದರ್ ಸಹ. ಮೀಸಲಾತಿಯಲ್ಲಿ ಬಿಜೆಪಿ ಸರ್ಕಾರ ಬದಲಾವಣೆ ಮಾಡಿದೆ. ಓಟ್ ಬ್ಯಾಂಕ್‌ಗಾಗಿ ಕಾಂಗ್ರೆಸ್ ಸರ್ಕಾರ ಶೇ.4 ಮುಸ್ಲಿಂ ಮೀಸಲಾತಿ ನೀಡಿತ್ತು. ಇದರಲ್ಲಿ ಶೇ. 2 ಹಾಗೂ ವೀರಶೈವ ಲಿಂಗಾಯತರಿಗೆ ಶೇ.2 ಮೀಸಲಾತಿ ನೀಡಿದ್ದೇವೆ. ಎಸ್‌ಸಿಎಸ್‌ಟಿ ಮೀಸಲಾತಿಯಲ್ಲೂ ಬದಲಾವಣೆ ಮಾಡಿ ಅನ್ಯಾಯ ಸರಿಪಡಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ.
ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುವುದು ಸಂವಿಧಾನಬದ್ಧವಲ್ಲ. ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶವಿಲ್ಲ. ಇದೀಗ ಆ ಮೀಸಲಾತಿಯನ್ನು ತೆಗೆದು ಸಂವಿಧಾನದ ಆಶಯ ಅನುಷ್ಠಾನ ಮಾಡುತ್ತಿದೆ. ಕಾಂಗ್ರೆಸ್ ಪಕ್ಷವು ಕರ್ನಾಟಕಕ್ಕೆ ಎಂದಿಗೂ ಅನುಕೂಲ ಮಾಡುವುದಿಲ್ಲ. ಕಾಂಗ್ರೆಸ್‌ಗೆ ಕರ್ನಾಟಕ ಒಂದು ಎಟಿಎಂ ಆಗಿ ಬೇಕಾಗಿದೆ. ಕರ್ನಾಟಕದ ವಿಕಾಸ ಕೇವಲ ನರೇಂದ್ರ ಮೋದಿ ನೇತೃತ್ವದಲ್ಲಿ ಆಗುತ್ತದೆ. ಬಿಜೆಪಿ ಸರ್ಕಾರ ಮಾತ್ರ ಈ ಅಭಿವೃದ್ಧಿ ಆಗುತ್ತದೆ.
ಕಳೆದ ಚುನಾವಣೆಯಲ್ಲಿ 104 ಸ್ಥಾನ ನೀಡಿದಿರಿ. ತಕ್ಷಣವೇ ಜೆಡಿಎಸ್‌ನವರು ಕಾಂಗ್ರೆಸ್ ಮಡಿಲಲ್ಲಿ ಕುಳಿತರು. ಹೆಚ್ಚು ಸ್ಥಾನಗಳನ್ನು ಪಡೆದಿದ್ದು ಬಿಜೆಪಿಯ ಯಡಿಯೂರಪ್ಪ, ಆದರೆ ಸಿಎಂ ಆಗಿದ್ದು ಕುಮಾರಸ್ವಾಮಿ. ಇಂಥವರು ಕರ್ನಾಟಕಕ್ಕೆ ಒಳ್ಳೆಯದು ಮಾಡುವುದಿಲ್ಲ. ಕೇವಲ ಮೋದಿ ನೇತೃತ್ವ ಮಾತ್ರ ಕರ್ನಾಟಕಕ್ಕೆ ಒಳಿತು ಮಾಡಲು ಸಾಧ್ಯ. ಈ ಭಾಗವನ್ನು ಹೈದರಾಬಾದ್ ಕರ್ನಾಟಕ ಎಂದು ಕರೆಯಲಾಗುತ್ತಿತ್ತು. ಈ ಗುಲಾಮಿತನದ ಗುರುತಿನ ಹೆಸರನ್ನು ಯಡಿಯೂರಪ್ಪ ಬದಲಾಯಿಸಿ ಈ ಪ್ರದೇಶದ ವಿಕಾಸಕ್ಕೆ 300 ಕೋಟಿ ರೂ. ನೀಡಿದರು. ಇದೀಗ ಬಸವರಾಜ ಬೊಮ್ಮಾಯಿ ಸರ್ಕಾರ 5 ಸಾವಿರ ಕೋಟಿ ರೂ. ನೀಡಿದೆ.
ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಬಿಜೆಪಿಗೆ ಮತ ನೀಡಿ. ಎಲ್ಲರೂ ಮೋದಿಯವರಿಗಾಗಿ ಮತ ನೀಡಿ. ಕಮಲದ ಗುರುತಿಗೆ ಮತ ನೀಡಿ ಎಂದು ಅಮಿತ್ ಶಾ ಕರೆ ನೀಡಿದರು.
ಇದಕ್ಕೂ ಮುನ್ನ ಗೊರಟಾ ಗ್ರಾಮದ ಲಕ್ಷ್ಮೀ ದೇವಸ್ಥಾಕ್ಕೆ ಅಮಿತ್ ಶಾ ಭೇಟಿ ನೀಡಿ ದರ್ಶನ ಪಡೆದರು. ಈ ಸ್ಥಳದಲ್ಲಿಯೂ ರಜಾಕಾರರ ದಾಳಿ ಹಾಗೂ ಹತ್ಯಾಕಾಂಡ ನಡೆದಿತ್ತು. ಅಮೀತ್ ಶಾ ಜತೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಉಪಸ್ಥಿತರಿದ್ದರು.